‘ ಶ್ರದ್ಧೆ ಮತ್ತು ಭಕ್ತಿಯಿಂದ ಗೋಸೇವೆ, ಗುರುಸೇವೆ ಮಾಡಿದರೆ ಗುರುಕೃಪೆ ತಾನಾಗಿ ಒಲಿದು ಬರುತ್ತದೆ ‘ ಎನ್ನುತ್ತಾ ಶ್ರೀಮಠದ ಸೇವೆ ಹಾಗೂ ಗೋಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಉಪ್ಪಿನಂಗಡಿ ಮಂಡಲ ಬೆಳ್ಳಾರೆ ವಲಯದ ಭಾಗ್ಯಲಕ್ಷ್ಮಿ ವಿ. ಭಟ್ ಅವರ ಗುರುಸೇವೆ ಎಲ್ಲರಿಗೂ ಸ್ಫೂರ್ತಿಯ ಸೆಲೆ.
ಮೂಲತಃ ಉಳುವಾನದ ವಿಟ್ಲ ನಿವಾಸಿಗಳಾದ ಈಶ್ವರ ಭಟ್ ಮತ್ತು ಹೈಮಾವತಿ ದಂಪತಿಗಳ ಪುತ್ರಿಯಾದ ಇವರಿಗೆ ಬಾಲ್ಯದಿಂದಲೇ ಮನೆಯಲ್ಲಿನ ಧಾರ್ಮಿಕ ವಾತಾವರಣ, ಹಿರಿಯರ ಮಾರ್ಗದರ್ಶನ ಸಂಸ್ಕಾರದ ಮೂಲ ಮಂತ್ರವನ್ನು ಕಲಿಸಿತು. ಮುಂದೆ ಮೂಲತಃ ಕೂಳಕೋಡ್ಲಿನವರಾದ ಮಾಪಲಮಜಲು ವೆಂಕಟ್ರಮಣ ಭಟ್ಟರನ್ನು ವಿವಾಹವಾದ ನಂತರವೂ ಈ ಸಂಸ್ಕಾರದ ಹಾದಿ ಮತ್ತಷ್ಟು ಸ್ಥಿರವಾಯಿತು.
ಕಳೆದ ಎರಡೂವರೆ ದಶಕಗಳಿಂದ ಶ್ರೀಮಠದೊಂದಿಗೆ ಭಾಗ್ಯಲಕ್ಷ್ಮಿ ಅವರ ನಂಟು ಬೆಸೆದುಕೊಂಡಿದೆ. ಪಂಜ ಸೀಮಾ ಪರಿಷತ್ತು ಸಕ್ರಿಯವಾಗಿದ್ದ ಕಾಲದಲ್ಲಿ ಇವರು ಪಂಜ ಸೀಮಾ ಮಹಿಳಾ ಪರಿಷತ್ತಿನ ಕಾರ್ಯದರ್ಶಿಯಾಗಿ ಜವಾಬ್ದಾರಿ ಹೊತ್ತವರು. ಇದು ಅವರ ಶ್ರೀಮಠದ ಸೇವೆಯ ಮೊದಲ ಹೆಜ್ಜೆ.
“ಆ ದಿನಗಳಲ್ಲಿ ಮಹಿಳೆಯರನ್ನು ಒಗ್ಗೂಡಿಸುವುದು, ಶ್ರೀಮಠದ ವಿವಿಧ ಸೇವಾಯೋಜನೆಗಳನ್ನು ಮನೆಮನೆಗೆ ತೆರಳಿ ತಿಳಿಸುವುದು ಸೇವೆಯ ಭಾಗವಾಗಿತ್ತು. ಗುರುಸೇವೆಯ ಸಂತೋಷ ಎಲ್ಲ ಶ್ರಮವನ್ನೂ ಮರೆಸುತ್ತಿತ್ತು” ಎಂದು ಅವರು ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.
ಮುಂದೆ ಇವರು ಬೆಳ್ಳಾರೆ ವಲಯದ ಮಾತೃ ಪ್ರಧಾನೆಯಾದರು. ನಂತರ ಉಪ್ಪಿನಂಗಡಿ ಮಂಡಲದ ಮಾತೃ ಪ್ರಧಾನೆಯಾಗಿ ಮಾತ್ರವಲ್ಲದೆ, ಮಂಡಲ ಮುಷ್ಟಿಭಿಕ್ಷಾ ಮತ್ತು ಬಿಂದುಸಿಂಧು ಯೋಜನೆಯ ಪ್ರಧಾನೆಯಾಗಿಯೂ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು. ಪ್ರತಿಯೊಂದು ಜವಾಬ್ದಾರಿಯನ್ನೂ ಅವರು ಹೊರೆ ಎಂದು ಭಾವಿಸದೆ ಶ್ರೀ ಗುರುಸೇವೆಯ ಅವಕಾಶವೆಂದು ಶ್ರದ್ಧಾ ಭಕ್ತಿಗಳಿಂದ ಸ್ವೀಕರಿಸಿದ್ದಾರೆ.
ಭಾಗ್ಯಲಕ್ಷ್ಮಿ ಭಟ್ ಅವರ ಬದುಕಿನ ಅವಿಭಾಜ್ಯ ಅಂಗವೆಂದರೆ ಗೋಸೇವೆ. ಇವರಿಗೆ ಗೋವುಗಳೆಂದರೆ ದೈವಸ್ವರೂಪಿಗಳು. ಶ್ರೀಮಠದ ‘ಸಾವಿರದ ಸುರಭಿ’ ಯೋಜನೆಯ ಮೂಲಕ ಮೊದಲ ಬಾರಿ ಗೋಸೇವೆಗೆ ಕೈಜೋಡಿಸಿದ ಇವರು, ನಂತರ ‘ಮಾತೃತ್ವಮ್’ ಯೋಜನೆ ಆರಂಭವಾದ ಮೇಲೆ ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡವರು.
, “ಗೋಸೇವೆ ಎಂದರೆ ಕೇವಲ ಹಣದ ಸಂಗ್ರಹ ಕಾರ್ಯ ಮಾತ್ರವಲ್ಲ, ಅದು ಗೋಮಾತೆಯ ಜೊತೆಗಿನ ಭಾವನಾತ್ಮಕ ಸಂಬಂಧ” ಎನ್ನುವ ಇವರು ಐದು ಹಸುಗಳ ಸಂಪೂರ್ಣ ನಿರ್ವಹಣಾ ವೆಚ್ಚವನ್ನು ಸಂಗ್ರಹಿಸಿ, ನಿರಂತರವಾಗಿ ಗೋಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಚಿಕ್ಕಂದಿನಿಂದಲೇ ಗೋವುಗಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಭಾಗ್ಯಲಕ್ಷ್ಮಿ, ಶ್ರೀಮಠದ ಗೋಸೇವಾ ಯೋಜನೆಗಳ ಮೂಲಕ ದೇಶೀಯ ಹಸುಗಳ ಮಹತ್ವವನ್ನು ಸಮಾಜದ ಜನರಿಗೆ ತಿಳಿಸುವ ಪ್ರಯತ್ನದಲ್ಲಿ ಸದಾ ತೊಡಗಿಸಿಕೊಂಡಿದ್ದಾರೆ.
“ಗೋಮಾತೆಯ ಸೇವೆಗೆ ಎಲ್ಲರೂ ಕೈಜೋಡಿಸಬೇಕು ಎಂಬ ಭಾವನೆ ಮೂಡಿಸಿದರೆ, ಅದೇ ದೊಡ್ಡ ಸಾಧನೆ” ಎಂಬುದು ಅವರ ಅಚಲ ನಂಬಿಕೆ.
ಭಾಗ್ಯಲಕ್ಷ್ಮಿ ವಿ. ಭಟ್ ಅವರ ಜೀವನದ ಅತ್ಯಂತ ಸ್ಮರಣೀಯ ಹಾಗೂ ಭಾವುಕ ಘಟನೆಯೆಂದರೆ ಅವರ ಕಳೆದು ಹೋದ ಮಾಂಗಲ್ಯದ ತಾಳಿ ಅಚ್ಚರಿಯ ರೀತಿಯಲ್ಲಿ ಮರಳಿ ಸಿಕ್ಕಿದ್ದು. ಇದು “ಶ್ರೀಗುರುಗಳನ್ನು ಅಚಲವಾಗಿ ನಂಬಿದರೆ ಎಂತಹ ಕಷ್ಟವೂ ಪರಿಹಾರವಾಗುತ್ತದೆ” ಎಂಬ ನಂಬಿಕೆಗೆ ಜೀವಂತ ಸಾಕ್ಷಿಯಾಗಿದೆ.
ಒಂದು ದಿನ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಅವರು, ಅಲ್ಲಿಗೆ ತಲುಪಿದ ನಂತರ ತಮ್ಮ ಮಾಂಗಲ್ಯದಲ್ಲಿ ತಾಳಿ ಇಲ್ಲದಿರುವುದನ್ನು ಗಮನಿಸುತ್ತಾರೆ. ಕ್ಷಣಾರ್ಧದಲ್ಲಿ ಆತಂಕವಾದರೂ, ಶಾಂತಚಿತ್ತರಾಗಿ ಅಲ್ಲಿ ಗೊಂದಲ ಸೃಷ್ಟಿಸದೆ ಮನೆಗೆ ಮರಳುತ್ತಾರೆ. ಎಲ್ಲೂ ಪತ್ತೆಯಾಗದಿದ್ದಾಗ ಅವರು ಆತಂಕಕ್ಕೊಳಗಾದರೂ ಶರಣಾಗಿದ್ದು ಶ್ರೀಗುರು ಚರಣಗಳಿಗೆ. ಶ್ರೀಗುರುಗಳ ಸೂಚನೆಯಂತೆ ಲಲಿತಾ ಸಹಸ್ರನಾಮದ ಶತಾವರ್ತಿ ಪಠಣವನ್ನು ಪವಿತ್ರ ವ್ರತವನ್ನಾಗಿ ಸ್ವೀಕರಿಸಿದರು. ಪ್ರತಿದಿನ ಗುರುಸೇವೆ, ಗೋಸೇವೆಯ ಜೊತೆಗೆ ಅಷ್ಟೇ ನಿಷ್ಠೆಯಿಂದ ಪಾರಾಯಣವನ್ನೂ ಮಾಡುತ್ತಾ, ದಿನದ ಲೆಕ್ಕವನ್ನು ಬರೆದಿಡುತ್ತಾ ಹುಡುಕಾಟ ಮುಂದುವರಿಸುತ್ತಾರೆ. ಆದರೆ ಸರಿಯಾಗಿ ಲಲಿತಾ ಸಹಸ್ರನಾಮದ ೧೦೧ನೇ ಆವೃತ್ತಿ ಪೂರ್ಣಗೊಂಡ ದಿನ, ಅನಿರೀಕ್ಷಿತವಾಗಿ ಮನೆಯಲ್ಲಿಯೇ ಕುರ್ಚಿಯೊಂದರ ಮೇಲಿದ್ದ ದಿಂಬಿನ ಅಡಿಯಲ್ಲಿ ಆ ತಾಳಿ ಸಿಗುತ್ತದೆ!
‘ ಆ ಕ್ಷಣ ನಿಜಕ್ಕೂ ಆನಂದ, ಭಕ್ತಿ ಹಾಗೂ ಗುರು ಕೃಪೆಯ ಸ್ಪಷ್ಟ ಸಂದೇಶದ ಅನುಭೂತಿಯನ್ನು ಅನುಭವಿಸಿದೆ’ ಎಂದು ಭಾವಪೂರ್ಣವಾಗಿ ಹೇಳುತ್ತಾರೆ ಭಾಗ್ಯಲಕ್ಷ್ಮಿ ವಿ ಭಟ್
” ಯಾವುದೇ ಸಾಮಾಜಿಕ ಸೇವೆಯಲ್ಲಿ ತೊಡಗಬೇಕಾದರೂ ಕುಟುಂಬದ ಬೆಂಬಲ ಅತೀ ಮುಖ್ಯ ” ಎನ್ನುವ ಭಾಗ್ಯಲಕ್ಷ್ಮಿ ಅವರಿಗೆ, ಅವರ ಪತಿ ಮತ್ತು ಮಕ್ಕಳು ನೀಡುವ ಸಹಕಾರ ಅತ್ಯಂತ ಶ್ಲಾಘನೀಯ. ವಿಶೇಷವಾಗಿ ಅವರ ಮೂವರು ಮಕ್ಕಳು ಶ್ರೀಮಠದ ಸೇವೆಯಲ್ಲಿ ಶ್ರದ್ಧಾ ಭಕ್ತಿಯಿಂದ ತೊಡಗಿಸಿಕೊಂಡಿರುವುದು ಅವರಿಗೆ ಅಪಾರ ಸಂತೋಷದ ವಿಚಾರ.
ಹಿರಿಯ ಮಗಳು ವಿನಯ ಈಗಾಗಲೇ ‘ಮಾಸದ ಮಾತೆ’ಯಾಗಿ ಗೋಸೇವೆ ಮಾಡುತ್ತಿದ್ದಾಳೆ. ಮಗನೂ ಕೂಡ ಶ್ರೀಮಠದ ವಿವಿಧ ಯೋಜನೆಗಳಿಗೆ ಸಮರ್ಪಣೆ ಮಾಡುತ್ತಿದ್ದಾನೆ.
‘ ಜೀವನದ ನೋವು, ತಲ್ಲಣ, ಗೊಂದಲಗಳ ಸಮಯದಲ್ಲಿ ಗುರುಸ್ಮರಣೆ ತಮಗೆ ಅತ್ಯುತ್ತಮ ಉಪಶಮನ ಮಾರ್ಗ ಎಂದು ಭಾಗ್ಯಲಕ್ಷ್ಮಿ ವಿ. ಭಟ್ ನಂಬುತ್ತಾರೆ
“ಮನಸ್ಸಿಗೆ ನೆಮ್ಮದಿ, ಬದುಕಿಗೆ ಶಾಂತಿ ಬೇಕಿದ್ದರೆ ಶ್ರೀಮಠದ ಸಂಪರ್ಕಕ್ಕೆ ಬರಬೇಕು. ಒಳಿತಿನ ದಾರಿಯಲ್ಲಿ ಮುನ್ನಡೆಯುವ ಶಕ್ತಿ ಶ್ರೀಮಠದ ಸಂಪರ್ಕದಿಂದ ದೊರಕುತ್ತದೆ” ಎನ್ನುವುದು ಇವರ ಅನುಭವದ ಮಾತು. ಪ್ರಸ್ತುತ ಪೆರುವಾಜೆ ‘ ಮಾನಸ ‘ ನಿವಾಸಿಗಳಾಗಿರುವ ಇವರು ಬೆಳ್ಳಾರೆ ವಲಯದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಗುರುಗಳ ಮೇಲಿನ ಅಚಲ ನಂಬಿಕೆ ಮತ್ತು ಗೋಮಾತೆಯ ಮೇಲಿನ ಅಪಾರ ಪ್ರೀತಿಯೊಂದಿಗೆ ಈ ಸೇವೆಯಲ್ಲಿ ಇನ್ನಷ್ಟು ಮುಂದುವರಿಯುವ ಹಂಬಲ ಅವರಿಗಿದೆ. ಅವರ ಈ ಪವಿತ್ರ ಸೇವಾ ಹಾದಿ ಎಲ್ಲರಿಗೂ ಮಾದರಿಯಾಗಲಿ.
ಪ್ರಸನ್ನಾ ವಿ. ಚೆಕ್ಕೆಮನೆ