” ಬಾಲ್ಯದಿಂದಲೇ ಶ್ರೀಮಠದ ಸಂಪರ್ಕವಿತ್ತು. ಶ್ರೀ ಗುರುಗಳು ಪೀಠಾರೋಹಣದ ನಂತರ ಮೊದಲ ಬಾರಿಗೆ ನಮ್ಮೂರಿಗೆ ಬಂದಾಗ ನಾನು ಐದನೇ ತರಗತಿಯಲ್ಲಿ ಓದುತ್ತಿದ್ದೆ. ಶ್ರೀಗುರುಗಳ ಆಗಮನದ ಸಂದರ್ಭದಲ್ಲಿ ಕಲಶ ಹಿಡಿಯಲು ಹೋಗಿದ್ದೆ. ಆ ನೆನಪು ಈಗಲೂ ಮನದಲ್ಲಿ ಹಸಿರಾಗಿದೆ. ಈಗ ನನ್ನ ಮಕ್ಕಳಿಗೂ ಶ್ರೀಮಠ, ಶ್ರೀಗುರುಗಳು ಎಂದರೆ ತುಂಬಾ ಶ್ರದ್ಧೆ, ಭಕ್ತಿ ” ಈ ಮಾತುಗಳು ಕುಮಟಾ ಮಂಡಲ,ಕುಮಟಾ ವಲಯದ ವಿಶ್ವೇಶ್ವರ ಬಿ. ಹೆಬ್ಬಾರ್ ಅವರ ಪತ್ನಿ ಪವಿತ್ರಾ ವಿ. ಹೆಬ್ಬಾರ್ ಅವರದ್ದು.
ಹೊನ್ನಾವರ ಗೇರುಸೊಪ್ಪಾದ ಸುಬ್ರಾಯ ಜಿ ಹೆಗಡೆ ,ಗಂಗಾ ಎಸ್ ಹೆಗಡೆಯವರ ಪುತ್ರಿಯಾದ ಪವಿತ್ರಾ ವಿ ಹೆಬ್ಬಾರ್ ಅವರು ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.
” ಶ್ರೀಮಠದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸೇವೆ ಸಲ್ಲಿಸಿದ ಅನುಭವವಿದೆ. ಮದುವೆಯ ನಂತರ ನನ್ನ ಅತ್ತೆಯವರ ಪ್ರೇರಣೆಯಿಂದ ಶ್ರೀಮಠದ ಜೊತೆ ನಿಕಟ ಸಂಪರ್ಕ ಬೆಳೆಯಿತು. ಅವರ ಪ್ರೋತ್ಸಾಹದಿಂದಲೇ ಮಾಸದ ಮಾತೆಯಾದೆ. ಗುರಿ ತಲುಪಲು ಮಾರ್ಗದರ್ಶನ ನೀಡಿದವರು ಸಹಾ ನನ್ನ ಅತ್ತೆ ಲಲಿತಾ ಬಿ ಹೆಬ್ಬಾರ್. ಅವರ ನಿರಂತರ ಸೇವೆ ಮನೆಯವರಿಗೆಲ್ಲ ಸ್ಪೂರ್ತಿ. ಈಗ ನನ್ನ ಪುಟ್ಟ ಮಕ್ಕಳಾದ ಭುವನ್ ಹಾಗೂ ಪ್ರಣವ್ ಸಹಾ ಶ್ರೀಮಠಕ್ಕೆ ಹೋಗುವುದು, ಶ್ರೀಮಠದ ಸೇವೆ ಎಂದರೆ ಖುಷಿಯಿಂದ ಹೊರಡುತ್ತಾರೆ ” ಎನ್ನುವ ಪವಿತ್ರಾ ಅವರಿಗೆ ಶ್ರೀಗುರುಗಳ ವಿವಿಧ ಯೋಜನೆಗಳ ಬಗ್ಗೆ ತುಂಬಾ ಗೌರವವಿದೆ.
” ನಮ್ಮ ಸಮಾಜದ ಒಗ್ಗಟ್ಟು ಹಾಗೂ ಶ್ರೇಯಸ್ಸಿಗಾಗಿ ಶ್ರೀಗುರುಗಳು ಆರಿಸಿದ ಹಾದಿ ನಮ್ಮ ಬದುಕಿಗೆ ಬೆಳಕು ನೀಡುವಂಥದ್ದು. ಮುಂದಿನ ಪೀಳಿಗೆಯೂ ಶ್ರೀಗುರುಗಳು ತೋರಿದ ಬೆಳಕಿನ ಪಥದಲ್ಲಿ ಮುನ್ನಡೆಯಬಹುದು ಎಂಬ ಭರವಸೆ ಇದೆ . ಇಂದಿನ ಮಕ್ಕಳು ಶ್ರೀಮಠ, ಗೋಮಾತೆ ಎಂದರೆ ಪೂಜ್ಯ ಭಾವನೆ ತಾಳುವಂತಾಗಿದ್ದು ನಮ್ಮ ಗುರುಗಳಿಂದ. ಇದು ಸಮಾಜವಿಡೀ ಹಬ್ಬಬೇಕು ಎಂಬುದೇ ನನ್ನ ಸದಾಶಯ ” ಎನ್ನುವ ಪವಿತ್ರಾ ವಿ ಹೆಬ್ಬಾರ್ ಅವರಿಗೆ ಇನ್ನು ಮುಂದೆಯೂ ಶ್ರೀಮಠದ ಸೇವೆಯಲ್ಲಿ ಮುಂದುವರಿಯಬೇಕು ಎಂಬ ಅಭಿಲಾಷೆಯಿದೆ.
ಪ್ರಸನ್ನಾ ವಿ ಚೆಕ್ಕೆಮನೆ