ಗೋಮಾತೆಯ ಶ್ರೀಮಾತೆಯಾಗಿ ಪುಟಾಣಿ ಶ್ರೀರಕ್ಷಾ

ಮಾತೃತ್ವಮ್

ಈಕೆ ಇನ್ನೂ ಆರನೇ ತರಗತಿಯಲ್ಲಿ ಕಲಿಯುತ್ತಿರುವ ಪುಟಾಣಿ. ಗೆಳೆಯ ಗೆಳತಿಯರೊಡನೆ ಸ್ವಚ್ಛಂದವಾಗಿ ಆಟವಾಡುವ ಮುಗ್ಧ ಬಾಲ್ಯ. ಮನೆಯವರ ಜೊತೆಗೆ, ಮುದ್ದು ತಂಗಿಯ ಜೊತೆಗೆ ಬಾಲ್ಯ ಸಹಜವಾದ ತುಂಟಾಟವಾಡುವ ಸಮಯ. ಆದರೂ ಆಕೆ ಇಂದು ಹೊತ್ತುಕೊಂಡಿರುವ ಮಹತ್ತರ ಜವಾಬ್ದಾರಿ ನಿಜಕ್ಕೂ ಅದ್ಬುತ, ಅನುಕರಣೀಯ. ಮಾಸದ ಮಾತೆಯಾಗಿ ಸೇವೆ ಸಲ್ಲಿಸಿ ಸ್ವಯಂ ಒಂದು ಲಕ್ಷಕ್ಕೂ ಅಧಿಕ ಮೊತ್ತ ಸಂಗ್ರಹಿಸಿ ಎರಡು ವರ್ಷಗಳಿಗೆ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಭರಿಸುವ ಮೂಲಕ ಸಮಾಜದ ಎಲ್ಲರಿಗೂ ಮಾದರಿಯಾಗಿದ್ದಾಳೆ ಈ ಬಾಲೆ.

ಮುಳ್ಳೇರಿಯ ಮಂಡಲದ ಕುಳೂರು ಮುಗುಳ್ತಿಮೂಲೆ ಮೂಲದವರಾದ ಗಣೇಶ್ ಪ್ರಸಾದ್ ವಿಜಯಲಕ್ಷ್ಮಿ ದಂಪತಿಗಳ ಹಿರಿಯ ಪುತ್ರಿ ಕುಮಾರಿ ಶ್ರೀ ರಕ್ಷಾ ಎಂಬ ಪುಟ್ಟ ಬಾಲಕಿಯೇ ಈ ಮಹತ್ವದ ಕಾರ್ಯ ನಿರ್ವಹಿಸುವ ಮೂಲಕ ಜನ ಮೆಚ್ಚುಗೆಯ ಜೊತೆಗೆ ಶ್ರೀ ಸಂಸ್ಥಾನದವರ ವಿಶೇಷ ಅನುಗ್ರಹಕ್ಕೂ ಪಾತ್ರಳಾದವಳು‌.

ಮಂಗಳೂರಿನಲ್ಲಿ ಉದ್ಯಮಿಯಾಗಿರುವ ಗಣೇಶ್ ಪ್ರಸಾದ್ ಅವರು ಪ್ರಸ್ತುತ ಮಂಗಳೂರು ಮಂಡಲದ ಬಿಕರ್ನಕಟ್ಟೆ ನಿವಾಸಿಗಳು . ಶ್ರೀ ಮಠದ ನಿರಂತರ ಸಂಪರ್ಕವಿರುವುದರಿಂದ ಮನೆಯವರೆಲ್ಲರೂ ಶ್ರೀ ಮಠದ ವಿವಿಧ ಯೋಜನೆಗಳಲ್ಲಿ ಕೈ ಜೋಡಿಸುತ್ತಿರುವವರು. ಗಣೇಶ್ ಪ್ರಸಾದ್ ಮಂಗಳೂರು ಮಂಡಲದ ಸೇವಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರೆ ,ಪತ್ನಿ ವಿಜಯಲಕ್ಷ್ಮಿ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾಗಿ ಸೇವೆ ಸಲ್ಲಿಸಿ ಲಕ್ಷ ಭಾಗಿನಿಯಾಗಿ ಎರಡು ವರ್ಷಗಳ ಗುರಿ ಮುಟ್ಟಿರುವವರು. ಮಾತ್ರವಲ್ಲ ಮಂಗಳೂರು ನಗರ ಸಭಾ ಮಾತೃತ್ವಮ್ ನ ಕೋಶಾಧಿಕಾರಿ ಕೂಡ ಆಗಿದ್ದಾರೆ. ಈ ಹಿಂದೆ ಇವರ ಮನೆಯಲ್ಲಿ ಶ್ರೀ ಗುರುಗಳ ಭಿಕ್ಷಾಸೇವೆಯೂ ನಡೆದಿತ್ತು.

‘ಬಾಲ್ಯದಲ್ಲಿಯೇ ಹಸುಗಳ ಮೇಲೆ ,ಪುಟ್ಟ ಕರುಗಳ ಮೇಲೆ ವಿಪರೀತ ಪ್ರೀತಿ ಬೆಳೆಸಿಕೊಂಡಿರುವ ಶ್ರೀರಕ್ಷಾಳಿಗೆ ಹಟ್ಟಿ, ಗೋಶಾಲೆಗಳಿಗೆ ಹೋದರೆ ಅಲ್ಲಿಂದ ಹಿಂತಿರುಗಿ ಬರಲು ಮನಸ್ಸೇ ಇಲ್ಲ’ ಎಂದು ಮಗಳ ಗೋಪ್ರೇಮದ ಬಗ್ಗೆ ಅಮ್ಮ ವಿಜಯಲಕ್ಷ್ಮಿ ನುಡಿಯುತ್ತಾರೆ.

“ನಾನು ಮಾಸದ ಮಾತೆಯಾಗಿ ಸೇವೆ ಸಲ್ಲಿಸಲು ಆರಂಭಿಸಿದಾಗ ಅವಳಿಗೂ ಅದರಲ್ಲಿ ವಿಪರೀತ ಆಸಕ್ತಿ ಮೂಡಿತು. ನಾವೂ ಅದಕ್ಕೆ ಪ್ರೋತ್ಸಾಹ ನೀಡಿದೆವು. ಯಾವುದೇ ಅಳುಕು ಅಂಜಿಕೆ ಇಲ್ಲದೆ ಎಲ್ಲರೊಡನೆಯೂ ಮುಕ್ತವಾಗಿ ಬೆರೆಯುವ ಪುಟ್ಟ ಹುಡುಗಿ ಗೋಸೇವೆ ಮಾಡುತ್ತೇನೆ ಎಂದಾಗ ಸಂತಸದಿಂದಲೇ ಎಲ್ಲರೂ ಕೈ ಜೋಡಿಸಿದರು. ಬಂಧುಬಳಗದವರಿಗೂ, ಆತ್ಮೀಯರಿಗೂ ಇವಳ ಗೋ ಸೇವಾ ಕಾರ್ಯದ ಬಗ್ಗೆ ತುಂಬಾ ಕುತೂಹಲ, ಅಚ್ಚರಿ ಹಾಗೂ ಸಂತಸ ಮೂಡಿಸಿದೆ. ಆದುದರಿಂದಲೇ ಬಹಳ ಶೀಘ್ರವಾಗಿ ಅವಳು ಗುರಿ ತಲುಪಲು ಸಾಧ್ಯವಾಯಿತು. ಎಲ್ಲವೂ ಶ್ರೀಗುರುಗಳ ಕೃಪೆ” ಎಂಬುದು ಅವರ ನಂಬಿಕೆ.
ಮಂಗಳೂರು ಶಕ್ತಿನಗರದ ಹೀರಾ ಇಂಟರ್ ನ್ಯಾಶನಲ್ ಸ್ಕೂಲ್ ನ ಆರನೇ ತರಗತಿಯ ವಿದ್ಯಾರ್ಥಿನಿ ಶ್ರೀರಕ್ಷಾ ಈ ಹಿಂದೆ ಮಂಗಲ ಗೋಯಾತ್ರೆಯ ಸಂದರ್ಭದಲ್ಲಿ ತಾಯಿಯ ಜೊತೆಗೆ ಮನೆಮನೆಗಳಿಗೆ ಭೇಟಿ ನೀಡಿದ ಪುಟಾಣಿ. ಅಭಯಾಕ್ಷರ ಅಭಿಯಾನ, ಹಲಸಿನ ಮೇಳಗಳಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿ ಜನರ ಪ್ರಶಂಸೆಗೆ ಪಾತ್ರಳಾದವಳು.

ಎಳವೆಯಲ್ಲಿಯೇ ದೇವರು, ಶ್ರೀ ಗುರುಗಳು ಎಂದರೆ ಭಕ್ತಿ ಶ್ರದ್ಧೆ ತೋರುವ ಈ ಬಾಲಕಿ ಕನ್ಯಾ ಸಂಸ್ಕಾರದ ಉಪದೇಶವನ್ನು ಪಡೆದವಳು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಹಜವಾಗಿಯೇ ಒಲವು ತೋರುವ ಈಕೆ ಶಾಸ್ತ್ರೀಯ ಸಂಗೀತವನ್ನೂ ಅಭ್ಯಸಿಸುತ್ತಿದ್ದಾಳೆ. ಶ್ರೀ ಮಠದ ವತಿಯಿಂದ ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ ನಡೆಸುತ್ತಿರುವ ಬೇಸಿಗೆ ಶಿಬಿರದಲ್ಲಿ ಕಳೆದ ಮೂರು ವರ್ಷಗಳಿಂದ ಸಕ್ರಿಯವಾಗಿ ಪಾಲ್ಗೊಂಡವಳು ಶ್ರೀರಕ್ಷಾ.
ತಾಯಿ ವಿಜಯಲಕ್ಷ್ಮಿಯೊಡನೆ ತಾನೂ ಕೂಡ ಮಾಸದ ಮಾತೆಯಾಗಿ ಸೇವೆ ಸಲ್ಲಿಸಿ ಎರಡು ವರ್ಷದ ಗುರಿ ತಲುಪಿ ಲಕ್ಷಭಾಗಿನಿಯಾಗಿರುವ ಶ್ರೀರಕ್ಷಾಳಿಗೆ ಮುಂದೆಯೂ ಗೋಮಾತೆಯ ಸೇವೆಯನ್ನು ಮುಂದುವರಿಸುವ ಇಚ್ಛೆಯಿದೆ.
ತಾನು ಮಾಸದ ಮಾತೆಯಾಗಿ ಗುರಿ ತಲುಪಿದ ಬೆನ್ನಲ್ಲೇ ಮಗಳ ಗೋಸೇವಾ ಆಸಕ್ತಿಯನ್ನು ಗಮನಿಸಿ ಅವಳಿಗೂ ಮಾರ್ಗದರ್ಶನ ನೀಡಿ ಗುರಿ ತಲುಪುವಂತೆ ಮಾಡಿದ ವಿಜಯಲಕ್ಷ್ಮಿ ಇತರ ಮಾಸದ ಮಾತೆಯರಿಗೆ ಮಾದರಿಯಾಗಿದ್ದಾರೆ. ಮಕ್ಕಳಲ್ಲಿರುವ ಗೋಪ್ರೇಮವನ್ನು ಗುರುತಿಸಿ ,ಅವರಿಗೆ ಪ್ರೋತ್ಸಾಹ ನೀಡುವ ಮೂಲಕ ಮನೆಮನೆಯಲ್ಲೂ ಮಾತೃತ್ವಮ್ ನ ಜ್ಯೋತಿ ಬೆಳಗುವಂತಾಗಲಿ. ಇದು ಎಲ್ಲಾ ಮಾಸದ ಮಾತೆಯರಿಗೂ ಪ್ರೇರಣೆಯಾಗಲಿ. ಗೋಮಾತೆಯ ಶ್ರೀಮಾತೆಯಾಗಿರುವ ಶ್ರೀರಕ್ಷಾಳ ಸೇವೆ ಇತರ ಪುಟಾಣಿಗಳಿಗೂ ಮಾದರಿಯಾಗಲಿ.

Author Details


Srimukha

Leave a Reply

Your email address will not be published. Required fields are marked *