” ಶ್ರೀ ಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಆಶೀರ್ವಚನಗಳೇ ಪ್ರೇರಣೆ ” : ಮಾಲಿನಿ ಕೆ. ಭಟ್ಟ

ಮಾತೃತ್ವಮ್

ಹೊನ್ನಾವರ ಮಂಡಲದ ಭಟ್ಕಳ ವಲಯದ ಗುರಿ ತಲುಪಿದ ಮಾಸದ ಮಾತೆಯಾಗಿರುವ  ಮಾಲಿನಿ ಕೆ. ಭಟ್ ಬಲಸೆಯ ಕೃಷ್ಣಾನಂದ ಶಿವರಾಮ ಭಟ್ಟರ ಪತ್ನಿಯಾಗಿದ್ದಾರೆ.

ಹಲವಾರು ವರ್ಷಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ಭಟ್ಕಳದ ಕಾರಗದ್ದೆಯ ವಾಸುದೇವ ವೆಂಕಟರಮಣ ಭಟ್ಟ ಹಾಗೂ ಸರಸ್ವತಿ ವಾಸುದೇವ ಭಟ್ಟ ಇವರ ಪುತ್ರಿ.

ಶ್ರೀ ರಾಮಚಂದ್ರಾಪುರ ಮಠ ಹೊಸನಗರದಲ್ಲಿ ನಡೆದ ಶ್ರೀ ರಾಮಾಯಣ ಮಹಾಸತ್ರ, ವಿಶ್ವ ಗೋಸಮ್ಮೇಳನಗಳಲ್ಲಿ ಕಾರ್ಯಕರ್ತೆಯಾಗಿ ಭಾಗವಹಿಸಿದ ಅನುಭವ ಇವರಿಗಿದೆ.

” ಬಾಲ್ಯದಿಂದಲೇ ಗೋವುಗಳ ಮೇಲೆ ತುಂಬಾ ಪ್ರೀತಿಯಿತ್ತು. ಶ್ರೀಗುರುಗಳ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಅವರ ಆಶೀರ್ವಚನ ಮನದ ಮೇಲೆ ತುಂಬಾ ಪ್ರಭಾವ ಬೀರಿತು. ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಹಂಬಲ ಮೂಡಿತು ” ಎನ್ನುವ ಮಾಲಿನಿ ಭಟ್ ಗೆ ಗೋಸೇವೆ ಮಾಡಲು ಪ್ರೇರಣೆ ನೀಡಿದ್ದು ಶ್ರೀ ಗುರುಗಳು ದೇಶೀ ಗೋವುಗಳ ಮೇಲೆ ತೋರುವ ವಿಶೇಷ ಕಾಳಜಿ, ಅವುಗಳ ರಕ್ಷಣೆಗಾಗಿ ಕೈಗೊಂಡಿರುವ ವಿವಿಧ ಯೋಜನೆಗಳು ಹಾಗೂ ಗೋಮಾತೆಯ ಕುರಿತಾದ ಪ್ರವಚನಗಳು ಎಂಬುದನ್ನು ಸ್ಮರಿಸಿಕೊಳ್ಳುತ್ತಾರೆ.

” ಶ್ರೀಗುರುಗಳ ನುಡಿಗಳಿಂದ ಗೋವಿನ ಮಹತ್ವದ ಅರಿವಾಯಿತು. ಇದರಿಂದಾಗಿ ಮಾತೃತ್ವಮ್ ಯೋಜನೆ ಮೂಲಕ ಮಾಸದ ಮಾತೆಯಾಗಿ ಸೇರಿಕೊಂಡೆ. ನನ್ನ ಪರಿಚಿತರು, ಬಂಧುಗಳು, ಸ್ನೇಹಿತರು, ಆತ್ಮೀಯರ ಬಳಿ ಗೋಸೇವೆಯ ವಿಚಾರ ತಿಳಿಸಿ ಅದರ ಮಹತ್ವದ ಬಗ್ಗೆ ವಿವರಿಸಿದೆ. ಅವರೆಲ್ಲರೂ ಸಹಕರಿಸಿದರು. ಹನಿ ಹನಿ ಕೂಡಿ ಹಳ್ಳ ಎಂಬಂತೆ ಶ್ರೀಗುರುಗಳ ಕೃಪೆ ಹಾಗೂ ಗೋಮಾತೆಯ ಅನುಗ್ರಹದಿಂದ ಒಂದು ವರ್ಷಗಳ ಕಾಲ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಭರಿಸುವಷ್ಟು ಸಂಗ್ರಹವಾಗಿದೆ ” ಎನ್ನುವ ಮಾಲಿನಿ ಅವರಿಗೆ ಗೋಸೇವೆಯನ್ನು ನಿರಂತರವಾಗಿ ಮುಂದುವರಿಸಬೇಕೆಂಬ ಹಂಬಲವಿದೆ.

ಭಟ್ಕಳ ಸೀಮಾ ಪರಿಷತ್ ನಲ್ಲಿ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಹಾಗೂ ಉತ್ತರ ಕನ್ನಡ ಪ್ರಾಂತ್ಯ ಪರಿಷತ್ ನ ಉಪಾಸನಾ ವಿಭಾಗದ ಸಂಚಾಲಕಿಯಾಗಿಯೂ ಸೇವೆಗೈದ ಮಾಲಿನಿ ಭಟ್ ಮನೆಯಲ್ಲೂ ಗೋವುಗಳ ಪೋಷಣೆ ಮಾಡುತ್ತಾ ಗೋಸೇವೆಯ ಪುಣ್ಯ ಕಾರ್ಯ ಮಾಡುತ್ತಿದ್ದಾರೆ ಮಾತ್ರವಲ್ಲದೆ ಬಾನ್ಕುಳಿಯ ಗೋಸ್ವರ್ಗಕ್ಕೂ ಸಮರ್ಪಣೆ ಮಾಡಿದ್ದಾರೆ.

ಸಮಾಜದಲ್ಲಿ ದೇಶೀಯ ಗೋವುಗಳ ಮೇಲಿನ ಸ್ಪಂದನೆ ಆಶಾದಾಯಕವಾಗಿದೆ , ಇದು ಇನ್ನಷ್ಟು ಗೋಸೇವೆಗೆ ಉತ್ಸಾಹ ಮೂಡಿಸುತ್ತಿದೆ ಎನ್ನುವ ಮಾಲಿನಿ ಕೆ. ಭಟ್ ಇವರಿಗೆ ಆದಷ್ಟು ಶೀಘ್ರವಾಗಿ ಗೋಮಾತೆಯ ಸೇವೆಯಲ್ಲಿ ಇನ್ನೊಂದು ವರ್ಷದ ಗುರಿ ತಲುಪುವೆನೆಂಬ ಭರವಸೆಯಿದೆ.

Author Details


ಪ್ರಸನ್ನಾ ವಿ ಚೆಕ್ಕೆಮನೆ

Leave a Reply

Your email address will not be published. Required fields are marked *