” ನಮ್ಮ ಸಂಸ್ಕೃತಿಯಲ್ಲಿ ಗೋಮಾತೆಗೆ ವಿಶಿಷ್ಟ ಸ್ಥಾನವಿದೆ. ಗೋಗ್ರಾಸ, ಗೋದಾನಗಳು ನಮ್ಮ ಧಾರ್ಮಿಕ ಆಚರಣೆಗಳಲ್ಲಿ ಒಳಗೊಂಡವುಗಳು. ಹಟ್ಟಿ ತುಂಬ ಹಸುಗಳಿದ್ದ ಕಾಲವೊಂದಿತ್ತು. ಗೋ ಆಧಾರಿತ ಕೃಷಿಯಿಂದ ಜೀವನ ಸಾಗಿಸುತ್ತಿದ್ದವರಿಗೂ ಕಾಲ ಬದಲಾದಂತೆ ಜೀವನ ಕ್ರಮವನ್ನು ಬದಲಾಯಿಸಬೇಕಾದ ಅನಿವಾರ್ಯತೆ ಉಂಟಾಯಿತು. ನಮ್ಮ ಹಟ್ಟಿಯ ಹಸುಗಳನ್ನು ಇನ್ನೊಬ್ಬರಿಗೆ ಕೊಡುವಾಗ ಉಂಟಾಗುವ ಸಂಕಟ ಅಸಹನೀಯ. ಆದರೆ ಈಗ ಹಿಂದಿನಂತೆ ಹಟ್ಟಿ ತುಂಬ ಹಸುಗಳನ್ನು ಸಾಕುವುದು ಸುಲಭವಲ್ಲ ” ಎಂದು ಗೋವುಗಳ ಬಗ್ಗೆ ಮನತುಂಬಿ ನುಡಿದವರು ಉಪ್ಪಿನಂಗಡಿ ಮಂಡಲ ಚೊಕ್ಕಾಡಿ ವಲಯದ ಕುಕ್ಕುಜಡ್ಕ ಆನೆಕಾರ್ ಮನೆಯ ರಾಮಚಂದ್ರ ಭಟ್ ಕಡಪ್ಪು ಅವರ ಪತ್ನಿ ಶಾರದಾ.
ಕಲ್ಮಡ್ಕ ಮೇಲಿನಮನೆ ಶಿವರಾಮಯ್ಯ , ಪರಮೇಶ್ವರಿ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.
ಶ್ರೀರಾಮಾಯಣ ಮಹಾಸತ್ರ, ವಿಶ್ವ ಗೋ ಸಮ್ಮೇಳನ, ಅಭಯಾಕ್ಷರ ಅಭಿಯಾನವೇ ಮೊದಲಾದ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತೆಯಾಗಿ ಭಾಗವಹಿಸಿದ ಶಾರದಾ ಅವರು ತಮ್ಮ ಮನೆಯಲ್ಲಿಯೂ ದೇಶೀಯ ಗೋವುಗಳನ್ನು ಸಾಕುತ್ತಿದ್ದಾರೆ.
” ಹಸುಗಳಿಗೂ ಭಾವನೆಗಳಿವೆ. ಮನೆಯವರಿಗೆ ಏನಾದರು ಸಮಸ್ಯೆಯಾದರೆ ಅವರಿಗೂ ಮರುಕವಾಗುತ್ತದೆ ” ಎನ್ನುವ ಶಾರದಾ ಹಿಂದೊಮ್ಮೆ ಪತಿ ರಾಮಚಂದ್ರ ಭಟ್ ಹಟ್ಟಿಯ ಸಮೀಪ ಪ್ರಜ್ಞೆ ತಪ್ಪಿ ಬಿದ್ದಾಗ ಹಸುಗಳು ತಮ್ಮದೇ ಭಾಷೆಯಲ್ಲಿ ಕೂಗಿ ಕರೆದು ಈ ವಿಚಾರವನ್ನು ಮನೆಯವರಿಗೆ ಮನವರಿಕೆ ಮಾಡಿದ ಘಟನೆಯ ಬಗ್ಗೆ ಹೇಳುತ್ತಾ ಭಾವುಕರಾಗುತ್ತಾರೆ.
ಹಸುಗಳನ್ನು ತುಂಬಾ ಪ್ರೀತಿಸುವ ಶಾರದಾ ಕರುಗಳಿಗೆ ಮನೆಯೊಳಗೂ ಸ್ವಚ್ಛಂದವಾಗಿ ಓಡಾಡುವ ಮುಕ್ತ ಅವಕಾಶವನ್ನು ಒದಗಿಸಿಕೊಟ್ಟಿದ್ದಾರೆ. ಅನೇಕ ದಾನಿಗಳ ಸಹಕಾರದಿಂದ ಒಂದು ವರ್ಷದ ಗುರಿ ತಲುಪಿದ ಇವರಿಗೆ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡ ಮೇಲೆ ಬದುಕಿನಲ್ಲಿ ಶ್ರೇಯಸ್ಸಾಗಿದೆ ಎಂಬ ನಂಬಿಕೆಯಿದೆ.
ಪತಿ ರಾಮಚಂದ್ರ ಭಟ್ ಗುರಿಕ್ಕಾರರಾಗಿ ಸೇವೆ ಸಲ್ಲಿಸುತ್ತಿದ್ದರೆ ಹಿರಿಯ ಮಗ ಚೊಕ್ಕಾಡಿ ವಲಯ ಶಿಷ್ಯ ಮಾಧ್ಯಮ ಪ್ರಧಾನರಾಗಿದ್ದಾರೆ. ಬೆಂಗಳೂರು ನಿವಾಸಿಯಾಗಿರುವ ಕಿರಿಯ ಪುತ್ರನೂ ಗುರಿಕ್ಕಾರರಾಗಿ ಸೇವೆ ಸಲ್ಲಿಸುವುದರಿಂದ ಶಾರದಾ ಅವರ ಕುಟುಂಬ ಸಂಪೂರ್ಣವಾಗಿ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಬಹುದು.
” ಶ್ರೀಗುರುಗಳನ್ನು ನಂಬಿದರೆ ಬದುಕಿನಲ್ಲಿ ಒಳಿತಾಗುತ್ತದೆ. ಕಷ್ಟಗಳು ಕರಗಿ ಹೋಗುತ್ತವೆ ಎಂಬುದಕ್ಕೆ ನಾವೇ ಸಾಕ್ಷಿ. ತೀವ್ರ ಅನಾರೋಗ್ಯ ಪೀಡಿತರಾಗಿದ್ದ ನಮ್ಮವರು ಇಂದು ಆರೋಗ್ಯವಂತರಾಗಿ ಓಡಾಡುವಂತಾಗಿದ್ದು ಶ್ರೀಗುರುಗಳ, ಗೋಮಾತೆಯ ಅನುಗ್ರಹದಿಂದ ಎನ್ನುವ ಶಾರದಾ ಅವರಿಗೆ ಅನವರತವೂ ಶ್ರೀಚರಣ ಸೇವೆಯ ಅವಕಾಶ ದೊರಕುವಂತಾಗ ಬೇಕೆಂಬುದೇ ಅಭಿಲಾಷೆ.
ಪ್ರಸನ್ನಾ ವಿ ಚೆಕ್ಕೆಮನೆ