ಸಿದ್ದಾಪುರ: ಜಗತ್ತಿನಲ್ಲಿ ಬಹಳಷ್ಟು ತತ್ವಜ್ಞಾನಿಗಳು ಆಗಿಹೋಗಿದ್ದಾರೆ. ಆದರೆ ಶಂಕರರ ಜನ್ಮದಿನವನ್ನು ತತ್ವಜ್ಞಾನಿಗಳ ದಿನ ಎಂದು ಕರೆಯುವುದು ವಿಶೇಷವಾಗಿದೆ ಎಂದು ಶ್ರೀ ರಾಜಾರಾಮ ಕ್ಷೇತ್ರದ ಸ್ವಾಮೀಜಿಗಳಾದ ಬ್ರಹ್ಮಾನಂದ ಭಾರತಿ ಸ್ವಾಮಿಗಳು ಹೇಳಿದರು.
ಅವರು ಶುಕ್ರವಾರ ತಾಲೂಕಿನ ಭಾನ್ಕುಳಿಯ ಗೋಸ್ವರ್ಗದಲ್ಲಿ ನಡೆದ ಶಂಕರ ಪಂಚಮಿಯ ಧರ್ಮಸಭೆ ಮತ್ತು ಪುರುಷೋತ್ತಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಜಾತಿ, ಮತ ಭೇದವಿಲ್ಲದೆ ಸಾರ್ವಕಾಲಿಕವಾದ, ಸಾರ್ವದೇಶಿಕವಾದ ಉಪದೇಶ ನೀಡಿದಂತಹ ಶಂಕರರನ್ನು ಜಗದ್ಗುರು ಎಂದು ಕರೆಯಲಾಗಿದೆ. ಕರ್ಮ ಮತ್ತು ಚಿತ್ತ ಶುದ್ಧಿಯ ಮೂಲಕ ಮೋಕ್ಷಪ್ರಾಪ್ತಿ ಸಾಧ್ಯವಾಗುತ್ತದೆ. ಅದಕ್ಕೆ ಅನುಭವ ಪ್ರಧಾನ ಕಲ್ಪನೆಯನ್ನು ಶಂಕರರು ಜಗತ್ತಿಗೆ ನೀಡಿದರು ಎಂದರು.
ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದ ಕರ್ಣಾಟಕ ಬ್ಯಾಂಕ್ ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಓ ಆದ ಎಂ.ಎಸ್ ಮಹಾಬಲೇಶ್ವರ ಮಾತನಾಡಿ ಭಾನ್ಕುಳಿಯಲ್ಲಿರುವಂತಹ ಗೋಸ್ವರ್ಗ ದೇಶದಲ್ಲಿ ಎಲ್ಲೂ ನೋಡಲು ಸಾಧ್ಯವಿಲ್ಲ. ಮಹಾಸಂಕಲ್ಪಗಳಿಗೆ ದೇವರ ಪ್ರೇರಣೆ ಅಗತ್ಯವಿದೆ. ಅಂತಹ ಮಹಾಸಂಕಲ್ಪವನ್ನು ಶ್ರೀಗಳವರು ಮಾಡಿದ್ದಾರೆ. ಈ ಭಾಗದ ಜನರ ಒತ್ತಾಸೆಯಂತೆ ಸದ್ಯದಲ್ಲಿಯೇ ಸಿದ್ದಾಪುರದಲ್ಲಿ ಕರ್ನಾಟಕ ಬ್ಯಾಂಕ್ ಶಾಖೆ ಆರಂಭವಾಗಲಿದೆ. ಕೇವಲ 32 ವರ್ಷಗಳಲ್ಲಿ ಊಹೆಗೂ ನಿಲುಕದ ಸಾಧನೆ ಮಾಡಿದ ಶಂಕರಾಚಾರ್ಯರು ಪವಾಡ ಪುರುಷರು. ಅವರು ತೋರಿದ ಮಾರ್ಗದಲ್ಲಿ, ಅವರ ಪರಂಪರೆಯಲ್ಲಿ ನಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಸಭೆಯ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀರಾಘವೇಶ್ವರಭಾರತೀ ಸ್ವಾಮಿಗಳು ಮಾತನಾಡಿ ಅನೇಕ ಮಹಾಪುರುಷರು ಈ ಭೂಮಿಯಲ್ಲಿ ಜನಿಸಿದ್ದಾರೆ. ಆದರೆ ಶಂಕರರು ಜಗತ್ತಿಗೆ ಬೆಳಕು ನೀಡುವಂತಹ ಸೂರ್ಯನಾಗಿ ಈ ಭೂಮಿಯಲ್ಲಿ ಅವತರಿಸಿದ್ದಾರೆ. ಶಂಕರರು ಈ ದೇಶವನ್ನು ಒಗ್ಗೂಡಿಸಿದ ರೀತಿ ಅನನ್ಯವಾದದ್ದು. ಶಂಕರರಿಗೆ ಪರಿಪೂರ್ಣ ಭಾರತದ ಕಲ್ಪನೆ ಇತ್ತು. ಕರ್ನಾಟಕ ಬ್ಯಾಂಕ್ ನ ಮುಖ್ಯಸ್ಥರಾದ ಎಂ.ಎಸ್ ಮಹಾಬಲೇಶ್ವರ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ನಮಗೆ ಸಂತಸ ತಂದಿದೆ. ಯಾವುದೇ ಹುದ್ದೆಯಲ್ಲಿದ್ದರೂ ನಮ್ಮ ಸಂಸ್ಕೃತಿ ಮತ್ತು ಸಭ್ಯತೆಯನ್ನು ಮರೆಯಬಾರದು. ಇದಕ್ಕೆ ಮಹಾಬಲೇಶ್ವರರು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದರು.
ಸಭೆಯಲ್ಲಿ ಶಂಕರ ಕಿಂಕರ ಪ್ರಶಸ್ತಿಗೆ ಆಯ್ಕೆಯಾದ ಮಹಾಮಹೋಪಾಧ್ಯಾಯರು, ಶ್ರೇಷ್ಠ ವಿದ್ವಾಂಸರೂ ಆದ ಮಣಿ ದ್ರವಿಡ ಶಾಸ್ತ್ರಿಗಳ ಹೆಸರನ್ನು ಘೋಷಿಸಲಾಯಿತು.
ಇದೇ ಸಂದರ್ಭದಲ್ಲಿ ಪರಿಸರವನ್ನು ಹಸಿರಾಗಿಸುವ ಹಸಿರು ಬುತ್ತಿ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಸಭೆಯಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಆರ್ ಎಂ ಹೆಗಡೆ ಬಾಳೇಸರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾದ ಶಶಿಭೂಷಣ ಹೆಗಡೆ ಉಪಸ್ಥಿತರಿದ್ದರು.