ಪ್ರಕೃತಿ ಸಂಸ್ಕೃತಿ ವಿಕೃತಿ ಮೂರು ಅರ್ಥ ಮಾಡಿಕೊಂಡಾಗ ಬದುಕು ಯಶಸ್ವಿಯಾಗುತ್ತದೆ. ಪ್ರಕೃತಿಯಿಂದ ಸಂಸ್ಕೃತಿಗೆ ಏರೋಣ, ವಿಕೃತಿಗೆ ಇಳಿಯದಿರೋಣ ಎಂದು ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಗಳವರು ಹೇಳಿದರು.
ಶ್ರೀರಾಮಚಂದ್ರಾಪುರಮಠದ ಸೇವಾ ಖಂಡದ ಕಾರ್ಯವೇಕ್ಷಣೆ ಮತ್ತು ತರಬೇತಿ ಉಪಖಂಡದ ವತಿಯಿಂದ ವೆಬಿನಾರ್ ಮೂಲಕ ನಡೆಯುವ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದ ಸಮಾರೋಪದಲ್ಲಿ ಆಶೀರ್ವಚನ ನೀಡಿದರು.
ಪರಿಷ್ಕಾರಗಳಿಗೆ ಅಂತ್ಯ ಎಂಬುದಿಲ್ಲ. ಪ್ರತಿಯೊಬ್ಬರು ಪರಿಷ್ಕಾರಕ್ಕೆ ಒಳಗಾಗುವುದರಿಂದ ತರಬೇತಿಯ ಉದ್ದೇಶ ಪರಿಪೂರ್ಣವಾಗುತ್ತದೆ. ತರಬೇತಿಯಲ್ಲಿ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಕೆ. ಎನ್. ಭಟ್, ಸೌಂದರ್ಯ ಕೊಲ್ಲಂಪಾರೆ, ಮಧು ಗೋಮತಿ ಶಿಬಿರದ ಬಗ್ಗೆ ಅಭಿಪ್ರಾಯ ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಕಾರ್ಯವೇಕ್ಷಣೆ ಉಪಖಂಡ ಶ್ರೀಸಂಯೋಜಕ ಬಾಲಸುಬ್ರಹ್ಮಣ್ಯ ಭಟ್, ಸಂಪನ್ಮೂಲ ವ್ಯಕ್ತಿಗಳಾದ ನಿವೃತ್ತ ವಾಯುಸೇನಾ ಅಧಿಕಾರಿಗಳಾದ ಶ್ರೀಪ್ರಕಾಶ ಭಟ್ ಕುಕ್ಕಿಲ ಉಪಸ್ಥಿತರಿದ್ದರು.
ಆದಿತ್ಯ ಕಲಗಾರು ಸ್ವಾಗತಿಸಿದರು. ಸೇವಾ ಖಂಡದ ಸಂಯೋಜಕಿ ವಿದ್ಯಾಲಕ್ಷ್ಮಿ ಕೈಲಂಕಜೆ ಪ್ರಸ್ತಾವನೆಗೈದರು. ಸೇವಾಖಂಡದ ಶ್ರೀಸಂಯೋಜಕ ಮಹೇಶ್ ಚಟ್ನಳ್ಳಿ ವಂದಿಸಿದರು. ಗಣೇಶ ಜೋಶಿ ಕಾರ್ಯಕ್ರಮ ನಿರೂಪಿಸಿದರು.