ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೪

ಅರಿವು-ಹರಿವು
ಅರಿವಿನ ಮೂರ್ತಿಗಳೆಲ್ಲರೂ ಈ ಅರಿವು ಇಂತೆಯೇ ನಿರರ್ಗಳವಾಗಿ ಮತ್ತೊಂದು ಮೂರ್ತಿವೆತ್ತು ತಲೆತಲಾಂತರಗಳವರೆಗೂ ಉಳಿದು ಗುರುಪರಂಪರೆಯನ್ನು ಮುಂದುವರೆಸಲು ಶ್ರಮಿಸಿದುದನ್ನು ಈ ಹಿಂದಿನಿಂದಲೂ ನೋಡುತ್ತಾ ಬಂದೆವು.  ಈಗ ಮಠವೆಂಬ ವ್ಯವಸ್ಥೆಯಲ್ಲಿ ಪೂಜ್ಯ ಚಿದ್ಬೋಧ ಭಾರತಿಗಳು ಸಹ ತಮ್ಮ ಅಂತ್ಯಕಾಲದಲ್ಲಿ ಶ್ರೀ ಶ್ರೀ ನಿತ್ಯಾನಂದರೆಂಬ ಯತಿಶ್ರೇಷ್ಠರಿಗೆ ಧರ್ಮಾಚಾರ್ಯ ಸ್ಥಾನವನ್ನಿತ್ತು ಪಾರಂಪರಿಕವಾದ ಎಲ್ಲ ಮಠೀಯವಾದ ಪದ್ಧತಿಗಳು, ನಡಾವಳಿಗಳ ಬಗ್ಗೆ ಸೂಕ್ತವಾದ ತಿಳುವಳಿಕೆ ನೀಡಿ, ಪರಂಪರೆಯ ಮುಂದುವರಿಕೆಗೆ ಸಾಧನರಾಗಿ ತಾವು ಬ್ರಹ್ಮೀಭೂತರಾದರು.
ಅರಿವಿನ ತೋರ್ಪಡಿಕೆಯ ಸುಲಲಿತ ಮಾರ್ಗಕ್ಕಾಗಿ ಆದಿಶಂಕರರು ತಮ್ಮ ಪ್ರಧಾನ ಶಿಷ್ಯರಿಗೆ ಜ್ಞಾನ ಪ್ರಸಾರದ ಚುಕ್ಕಾಣಿ ಕೊಟ್ಟು ಅದಕ್ಕೆ ಮರ್ಯಾದಾ ವ್ಯವಸ್ಥೆಯಾಗಿ ಮಠ ಎಂಬುದನ್ನು ದೇಶದ ನಾನಾ ಕಡೆ ಸ್ಥಾಪಿಸಿದುದನ್ನು ನಾವೆಲ್ಲಾ ಅರಿತಿದ್ದೆವು. ಅರಿವು ಮತ್ತು ಅದನ್ನು ಹೊತ್ತ ಈ ಗುರುಪರಂಪರೆ ಸಮ್ಮಿಳಿತಗೊಂಡ ನಮ್ಮ ಈ ಮಠ ಭೋಗವರ್ಧನವಾಲ ಸಂಪ್ರದಾಯಕ್ಕೆ ಸೇರಿದುದು. ಈ ಮಠದ ಎಲ್ಲ ಯತಿಗಳ ಹೆಸರು ಭಾರತೀ ಎಂಬ ಪದದಿಂದ ಸಮಲಂಕೃತ. ( ವಿದ್ಯಾಭಾರದಿಂದ ತುಂಬಿದವರು ಬಾಹ್ಯ ಭಾರವನ್ನು ಬಿಟ್ಟವರು, ದುಃಖ ಭಾರವನ್ನು ಗಣಿಸದವರು ಭಾರತೀ ವಾಚ್ಯರು ಎಂಬುದು ಈ ಪದಕ್ಕಿರುವ ನಿರ್ವಚನ – ಶ್ರೀ ಮಠಾಮ್ನಾಯ) ಆದ್ದರಿಂದ ಚಿದ್ಬೋಧರಿಗೂ ಭಾರತೀ ಎಂಬ ಅಭಿನಾಮಸಂಧಾನ. ಚಿದ್ಬೋಧರಿಂದ ಆಯ್ಕೆಗೊಂಡ ನಿತ್ಯಾನಂದರಿಗೂ ಮತ್ತೆ ಮುಂದೆ ಬರುವ ಪರಂಪರೆಯ ಎಲ್ಲ ಜ್ಯೋತಕರಿಗೂ ಭಾರತೀ ಎಂಬ ಅಭಿದಾನ. ಶ್ರೀ ಶ್ರೀ ನಿತ್ಯಾನಂದ ಭಾರತಿಗಳು ತಮ್ಮ ಗುರುಪರಂಪರೆಯ ನೆರಳಿನಲ್ಲಿಯೇ ಸಾಗಿದರು. ಸುಜ್ಞಾನದ ಪ್ರಕಾಶವನ್ನು ಸಮಾಜದೆಲ್ಲೆಡೆ ಪಸರಿಸಿದರು. ಆದಿಗುರುವಿನ ಆದೇಶವನ್ನು ಚಾಚೂ ತಪ್ಪದೆ ನಿಯಮನಿಷ್ಠರಾಗಿ ಆಚರಿಸಿ ಧರ್ಮಾಚಾರ್ಯ ಸ್ಥಾನಕ್ಕೆ ಅಲಂಕಾರ ಸ್ವರೂಪರಾಗಿದ್ದರಲ್ಲದೇ ಲೋಕನಿಯಮಕ್ಕನುಗುಣವಾಗಿ ತಮ್ಮ ಇಹದ ಕಾರ್ಯವು ಸಮಾಪ್ತಿಗೊಂಡಿದೆ ಎನ್ನಿಸಿದಾಗ ಯುಕ್ತ ವ್ಯಕ್ತಿಗೆ ಯೋಗಪಟ್ಟವನ್ನು ಅನುಗ್ರಹಿಸಿ ಶ್ರೀ ನಿತ್ಯಬೋಧಘನೇಂದ್ರ ಭಾರತೀ ಎಂದು ನಾಮಕರಣ ಮಾಡಿ ತಮ್ಮ ಸ್ಥಾನದಲ್ಲಿ ನಿಯೋಜಿಸಿದರು. ಹಾಗೂ ಪರತತ್ವ ಪ್ರಣಯಿಗಳೆಲ್ಲರೂ ಎಂದೂ ಅಳಿಯದ ವಿಕಾರವಿಲ್ಲದ ಯಾವ ಆನಂದಕ್ಕಾಗಿ ಸದಾ ಪರಿತಪಿಸುವರೋ ಅಂತಹ ನಿತ್ಯಾನಂದ ಸಾಗರದಲ್ಲಿ ಲೀನರಾದರು.
ಮುಂದುವರಿಯುವುದು…

Author Details


Srimukha

Leave a Reply

Your email address will not be published. Required fields are marked *