ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ -೭

ಅರಿವು-ಹರಿವು
ಬ್ರಹ್ಮರ್ಷಿಗಳಲ್ಲಿ ಶ್ರೇಷ್ಠರಾದ ವಸಿಷ್ಠರ ಮರಿಮಗ, ಶಕ್ತಿ ಮಹರ್ಷಿಯ ಮೊಮ್ಮಗ, ಪರಾಶರರ ಪುತ್ರ ಮತ್ತು ಶುಕಬ್ರಹ್ಮರ್ಷಿಯ ತಂದೆಯಾದ ಅಕಲ್ಮಷರೂ, ತಪೋನಿಧಿಯೂ ಆದ ವ್ಯಾಸಮಹರ್ಷಿಗಳಿಗೆ ನಮಿಸುತ್ತಾ ಮುಂದುವರೆಯೋಣ. ತಾಯಿ ದೇವಿ ಸತ್ಯವತಿಯ ಆಜ್ಞಾನುಸಾರ ಸಂತತಿಯ ಭಾಗ್ಯವನ್ನು ಕರುಣಿಸಿ ನಶಿಸುತ್ತಿದ್ದ ಆ ಕುರುಕುಲವನ್ನು ಉಳಿಸಿದ ಮಹಾಮಹಿಮರು.
ಸಮಾಜಕ್ಕೆ ಅವರ ಅರಿವಿನ ಹರಿವು ಯಾವ ಯಾವ ರೂಪದಿಂದ ಹರಿಯಿತೆಂದು ತಿಳಿಯಲು ಅವರ ರಚನೆಗಳನ್ನು ಅವಲೋಕಿಸೋಣ.
 ಮಹಾಕಾವ್ಯ ಮಹಾಭಾರತ, ವೇದರಾಶಿಯ ವಿಂಗಡಣೆಯಷ್ಟೇ ಅಲ್ಲದೆ ವೇದಾಂತನ್ಯಾಯವನ್ನು ಸಮರ್ಥಿಸುವ ಬ್ರಹ್ಮಸೂತ್ರ, ವೇದಾರ್ಥವನ್ನು ವಿವರಿಸುವ ಹದಿನೆಂಟು ಪುರಾಣಗಳನ್ನು ರಚಿಸಿದರೆಂದು ಸಂಪ್ರದಾಯವು ಹೇಳುತ್ತದೆ. ( सम्यड़्न्यायकलापेन महता भारतेन च।
उपबृंहितवेदाय नमो व्यासाय विष्णवे ।।
 अष्टादश पुराणानां कर्ता सत्यवती सुतः ) ಈ ಎಲ್ಲಾ ರಚನೆಗಳಿಗೆ ಕರ್ತೃ ಇದೇ ವೇದವ್ಯಾಸರೆ ಹೌದೋ ಅಲ್ಲವೋ ಎಂಬ ವಿಚಾರಕ್ಕೆ ಹಲವರಲ್ಲಿ ಬೇರೆಬೇರೆ ಅಭಿಪ್ರಾಯಗಳಿದ್ದರೂ ಶ್ರೀಶಂಕರ ಭಗವತ್ಪಾದರ ಭಾಷ್ಯದಲ್ಲಿ ಉಲ್ಲೇಖಿಸಿರುವ ಆಧಾರದ ಮೇಲೆ ನಾವು ಇದೇ ವ್ಯಾಸರೇ ಅವರೆಂದೊಪ್ಪಿಕೊಂಡು ಆ ಬೆಳಕಿನ ಬೆಳಗು ನಮ್ಮಲ್ಲೂ ಮಿಂಚಲಿ ಎಂದು ಆಶಿಸೋಣ. ಕೆಲವರು ‘ಪುರಾಣ ಸಂಹಿತಾ’, ‘ವ್ಯಾಸ ಸ್ಮೃತಿ’ ಇವರದ್ದೆಂದು ಹೇಳುವುದುಂಟು.
 ಪ್ರಭುಗಳಾದ ವರದರಾದ ವೇದವ್ಯಾಸರು ತಾವು ವಿಭಾಗಿಸಿದ ವೇದಗಳನ್ನು ಮತ್ತು ತಾವೇ ರಚಿಸಿದ ಪಂಚಮವೇದವೆಂದೇ ಕರೆಸಿಕೊಳ್ಳುವ ಮಹಾಭಾರತವನ್ನು ತಮ್ಮ ಶಿಷ್ಯರಾದ ಸುಮಂತು, ಜೈಮಿನಿ, ಪೈಲ, ವೈಶಂಪಾಯನ ಮತ್ತು ತಮ್ಮ ಮಗ ಶುಕನಿಗು ಉಪದೇಶಿಸಿ  ಬೆಳಕಿನ ( ಜ್ಞಾನ ), ಪ್ರಸಾರ ಎಲ್ಲೆಡೆ ಆಗುವಂತೆ ಮಾಡಿದರು. ಇಂತಹ ಶ್ರೇಷ್ಠ ರಚನೆಗಳನ್ನು ರಚಿಸಿ ಶಿಷ್ಯ ಪರಂಪರೆಯನ್ನೂ ಮುಂದುವರೆಸಿ ಸಂಕಲ್ಪಿತ ಬ್ರಹ್ಮರ್ಷಿ ಮಗ ಶುಕನನ್ನು ಗುರುಪರಂಪರೆಯ ಅವಿಚ್ಛಿನ್ನ ಅರಿವಿನ ಹರಿವಿಗೆ ಸೇತುವೆಯಾಗಿಸಿ ವೈದಿಕ ಧರ್ಮದ ರಕ್ಷಣೆಗೆ ಮೂಲಭೂತವಾಗಿರುವ ಧರ್ಮಸೇತುವನ್ನು ಸಂರಕ್ಷಿಸಿದ ವೇದವ್ಯಾಸರಿಗೆ ಭಾರತೀಯ ಸಂಸ್ಕೃತಿಯ ಉಪಾಸಕರು ಎಷ್ಟು ಕೃತಜ್ಞರಾಗಿದ್ದರೂ ಸಾಲದು.

Author Details


Srimukha

Leave a Reply

Your email address will not be published. Required fields are marked *