5ರಿಂದ ರಾಘವೇಶ್ವರ ಶ್ರೀ ಚಾತುರ್ಮಾಸ್ಯ: ಭಕ್ತರ ಭೇಟಿಗೆ ಅವಕಾಶ ಇಲ್ಲ

ಮಠ

ಬೆಂಗಳೂರು: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ಯವರ 27ನೇ ಚಾತುರ್ಮಾಸ್ಯ ಈ ತಿಂಗಳ 5ರಿಂದ ಸೆಪ್ಟೆಂಬರ್ 2ರವರೆಗೆ ಗೋಕರ್ಣದ ಅಶೋಕೆಯಲ್ಲಿ ಶ್ರೀಶಂಕರಾಚಾರ್ಯರು ಮೂಲಮಠ ಸ್ಥಾಪಿಸಿದ ಪರಿಸರದಲ್ಲಿ ನಡೆಯಲಿದೆ.
ಅರಿವಿನ ಹಣತೆ ಹಚ್ಚೋಣ- ವಿದ್ಯಾವಿಶ್ವ ಕಟ್ಟೋಣ ಎಂಬ ಧ್ಯೇಯವಾಕ್ಯದೊಂದಿಗೆ ವಿದ್ಯಾ ಚಾತುರ್ಮಾಸ್ಯವಾಗಿ ಈ ಬಾರಿಯ ಚಾತುರ್ಮಾಸ್ಯವನ್ನು ಸರ್ಕಾರದ ನೀತಿ ನಿಯಮಗಳ ಚೌಕಟ್ಟಿನಲ್ಲಿ ಆಚರಿಸಲಾಗುತ್ತಿದೆ.
ಸಮಗ್ರ ಭಾರತೀಯ ವಿದ್ಯೆಗಳ ಅಧ್ಯಯನದ ಸುಸ್ಥಾನವಾಗಲಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಹಾಗೂ ಅದಕ್ಕೆ ಪೀಠಿಕೆಯಾಗಿ ಮೂಡಿ ಬರುತ್ತಿರುವ ಅಪೂರ್ವ ಗುರುಕುಲಗಳ ಕಾರ್ಯ ಈ ಬಾರಿಯ ಚಾತುರ್ಮಾಸ್ಯದ ಜೀವನಾಡಿಯಾಗಲಿದೆ.
ಅಶೋಕಾವನದ ಶ್ರೀ ಮಲ್ಲಿಕಾರ್ಜುನದೇವರ ಸನ್ನಿಧಿಯಲ್ಲಿ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಪ್ರತಿದಿನ ಗಣಹೋಮ, ರಾಮತಾರಕ ಹವನ ಮತ್ತು ರುದ್ರಹವನ ನಡೆಯಲಿದೆ.
ಸುರಕ್ಷೆಗೆ ಕ್ರಮ: ಕೋವಿಡ್-19 ಸಾಂಕ್ರಾಮಿಕದಿಂದ ಇಡೀ ವಿಶ್ವ ತತ್ತರಿಸಿರುವ ಹಿನ್ನೆಲೆಯಲ್ಲಿ ಈ ಬಾರಿಯ ಚಾತುರ್ಮಾಸ್ಯ ವ್ರತಾಚರಣೆಯನ್ನು ಭಿನ್ನವಾಗಿ ಆಯೋಜಿಸಲಾಗಿದ್ದು, ಗುರು- ಶಿಷ್ಯರ ಸುರಕ್ಷೆ ದೃಷ್ಟಿಯಿಂದ ಭಿಕ್ಷಾಸೇವೆ ಹಾಗೂ ಪಾದಪೂಜೆಗಳಲ್ಲಿ ಬದಲಾವಣೆ ಮಾಡಲಾಗಿದೆ. ಸರ್ಕಾರ ಸೂಚಿಸಿದ ಎಲ್ಲ ನಿಯಮಗಳನ್ನು ಪಾಲಿಸಲಾಗುತ್ತದೆ.
ಚಾತುರ್ಮಾಸ್ಯ ವ್ರತಾರಂಭದ ದಿನ ನಡೆಯುವ ವ್ಯಾಸಪೂಜೆಗೆ ಸಮಿತಿಯಿಂದ ಅಧಿಕೃತ ಪತ್ರ ನೀಡಿದವರಿಗೆ ಮಾತ್ರ ಅವಕಾಶವಿದ್ದು, ಪಾದಪೂಜೆ ಸಾಮೂಹಿಕವಾಗಿ ನಡೆಯಲಿದೆ. ಶ್ರೀಸವಾರಿಯ ಸ್ಥಳಕ್ಕೆ ಯಾರಿಗೂ ಪ್ರವೇಶ ಇರುವುದಿಲ್ಲ. ವ್ಯಾಸಪೂಜೆ ಹಾಗೂ ದಿನನಿತ್ಯದ ಶ್ರೀಕರಾರ್ಚಿತ ಪೂಜೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರ ಮಾಡಲಾಗುವುದು.
ಯಾರಿಗೂ ಶ್ರೀಕರಗಳಿಂದ ತೀರ್ಥ, ಮಂತ್ರಾಕ್ಷತೆ ಇರುವುದಿಲ್ಲ. ವೈಯಕ್ತಿಕ ಭೇಟಿ ಹಾಗೂ ನಿವೇದನೆಗೆ ಅವಕಾಶವಿಲ್ಲ. ಭಕ್ತರು ಆನ್‍ಲೈನ್ ಸೇವೆಗಳನ್ನು ಮಾಡಿಸಲು ಅವಕಾಶವಿರುತ್ತದೆ ಎಂದು ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಮತ್ತು ಕಾರ್ಯದರ್ಶಿ ಪಿದಮಲೆ ನಾಗರಾಜ್ ಭಟ್ ಪ್ರಕಟಣೆಯಲ್ಲಿ ಹೇಳಿದ್ದಾರೆ. ವಿವರಗಳಿಗೆ ಮೊಬೈಲ್: 9448007828 ಸಂಪರ್ಕಿಸಬಹುದು.

Author Details


Srimukha

Leave a Reply

Your email address will not be published. Required fields are marked *