ಜಗತ್ತಿನ ಅಮಾವಾಸ್ಯೆ ಪೂರ್ಣಿಮೆಯಾಗಿ ಪರಿವರ್ತನೆಯಾಗಲಿ – ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ

ಮಠ

ಅಶೋಕೆ: ಜಗತ್ತನ್ನು ವ್ಯಾಧಿ ಪೀಡಿಸುತ್ತಿದ್ದು, ಇಡೀ ಜಗತ್ತೇ ಕಂಗಾಲಾಗಿದೆ. ನಿಜಕ್ಕೂ ಜಗತ್ತು ಕತ್ತಲಲ್ಲಿದೆ, ಕಷ್ಟದಲ್ಲಿದೆ, ಬೆಳಕನ್ನು ಹುಡುಕುತ್ತಿದೆಯಾದರೂ, ಸಿಗುತ್ತಿಲ್ಲ. ಈ ಜಗತ್ತಿನ ಅಮಾವಾಸ್ಯೆ ಪೂರ್ಣಿಮೆಯಾಗಿ ಪರಿವರ್ತನೆಯಾಗಲಿ ಎಂಬ ಹಾರೈಕೆ ಎಲ್ಲರದ್ದಾಗಬೇಕಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ಅವರು ಹೇಳಿದರು.

ಅವರು ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿದ್ಯಾಪೀಠದ ಪರಿಸರದಲ್ಲಿ ೨೭ನೇ ಚಾತುರ್ಮಾಸ್ಯದ ವ್ಯಾಸಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.

ಅಂತರಂಗದಲ್ಲಿ ಜ್ಞಾನದ ಬೆಳಕು ಹಾಗೂ ಚೈತನ್ಯದ ತಂಪನ್ನು ಉಂಟುಮಾಡುವಂತಹದ್ದು ಗುರುಪೂರ್ಣಿಮಾ. ಶಾರ್ವರಿ ಎಂದರೆ ಕತ್ತಲು, ಪೂರ್ಣಿಮಾ ಎಂದರೆ ಬೆಳಕು. ಕತ್ತಲೆಯ ಮಧ್ಯೆ ಬೆಳಗುವಂತಹ ಬೆಳಕು. ಸೂರ್ಯನ ಬೆಳಕು ತಾಪವನ್ನು, ಧಂಗೆಯನ್ನು ಉಂಟು ಮಾಡುತ್ತದೆ. ಆದರೆ ಪೂರ್ಣವಿಯ ಬೆಳಕು ತಂಪುಕೊಡುವಂತಹದ್ದಾಗಿದೆ. ಶಾರ್ವರಿ ಗುರುಪೂರ್ಣಿಮಾ ಎಂದರೆ ಗುರು ತಂದ ಬೆಳಕಾಗಿದೆ ಎಂದರು.

ಭಾರತದಲ್ಲಿ ಉಂಟಾದ ಜ್ಞಾನ ಪ್ರಕಾಶ ಪ್ರಪಂಚದಲ್ಲೆಲ್ಲೂ ಆಗಿಲ್ಲ. ಇಂತಹ ದೊಡ್ಡ ಜ್ಞಾನಧನದ ವಾರಸುದಾರರು ನಾವಾಗಿದ್ದು, ಎಲ್ಲವನ್ನೂ ಇವತ್ತು ಕಳೆದುಕೊಂಡಿದ್ದೇವೆ. ದೇಶ ಜ್ಞಾನವನ್ನೆಲ್ಲಾ ಕಳೆದುಕೊಂಡ ಕಾರಣ ಕತ್ತಲು ದೇಶಕ್ಕೆ ಆವರಿಸಿದೆ. ಈ ಕತ್ತಲೆಯನ್ನು ನಿವಾರಿಸಲು ಗುರುಪೂರ್ಣಿಮೆಯೇ ಬೇಕಾಗಿದೆ ಎಂದು ಹೇಳಿದರು.

ಒಂದು ವಿದ್ಯಾ ಪೀಠ ಬೇಕಾಗಿದೆ. ಈ ಚಾತುರ್ಮಾಸ್ಯದ ಉದ್ದೇಶವೇ ವಿದ್ಯೆ. ವಿದ್ಯೆ ಉಳಿಯಬೇಕು, ವಿದ್ಯೆ ಬೆಳೆಯಬೇಕು, ವಿದ್ಯೆ ಬೆಳಗಬೇಕು, ಮತ್ತೊಮ್ಮೆ ವಿದ್ಯೆಯ ಪುನಪ್ರತಿಷ್ಠಾಪನೆ ಆಗಬೇಕಾಗಿದೆ ಎಂಬ ಕಾರಣಕ್ಕೆ ಒಂದು ವಿಶ್ವ ವಿದ್ಯಾ ಪೀಠ, ಐದು ಗುರುಕುಲಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಈಮೂಲಕ ದೇಶದ ಕತ್ತಲನ್ನು ದೂರ ಮಾಡುವ ಕಾರ್ಯ ಮಾಡಲಾಗುತ್ತಿದೆ ಎಂದರು.

ವ್ಯಾಧಿ ತಂದ ಕಷ್ಟ, ವ್ಯಾಧಿ ತಂದ ನಷ್ಟ, ಯುದ್ಧ ಭೀತಿ ಈ ಮುಬ್ಬಗೆಯ ಕಷ್ಟದಲ್ಲಿ ಕತ್ತಲೆಯಲ್ಲಿ ದೇಶ ಇರುವ ಹೊತ್ತು. ದೇಶಕ್ಕೆ ಬಂದ ಕತ್ತಲೆ ನಿವಾರಣೆಯಾಗಲಿ, ದೇಶ ಬೆಳಕಾಗಲಿ, ದೇಶಕ್ಕೆ ಒಳಿತಾಗಲಿ ಎಂದು ಶಂಕರಾಚಾರ್ಯ ಪರಂಪರೆಯ ಪೀಠ ಹಾರೈಸುತ್ತದೆ ಎಂದರು.

ಶನಿವಾರ ಸಾಯಂಕಾಲ ಶ್ರೀಗಳವರ ಪುರಪ್ರವೇಶ ಕಾರ್ಯಕ್ರಮ ನಡೆಯಿತು. ಭಾನುವಾರ ಬೆಳಗ್ಗೆ ಶ್ರೀಕರಾರ್ಚಿತ ಪೂಜೆ, ವ್ಯಾಸಪೂಜೆ, ಭಿಕ್ಷಾ ಸೇವೆ ನಡೆಯಿತು.

Author Details


Srimukha

Leave a Reply

Your email address will not be published. Required fields are marked *