ಪ್ರಪಂಚದಲ್ಲಿ ನಾನಾ ಕಲೆಗಳಿದ್ದರೂ ಸಂಗೀತದ ಆಕರ್ಷಣೆಯೇ ವಿಭಿನ್ನ. ಇಂತಹ ಸಂಗೀತದ ವಿವಿಧ ಪ್ರಕಾರಗಳನ್ನು ಒಲಿಸಿಕೊಂಡಿರುವ ಸರಸ್ವತೀ ಪುತ್ರ ಹೊನ್ನಾವರದ ಗುರುಕಿರಣ್ ಹೆಗಡೆ. ಮನೆಯಲ್ಲಿ ಈತನ ತಾಯಿ ಹಾಡುತ್ತಿದ್ದರು. ಹಾಗಾಗಿ ಚಿಕ್ಕಂದಿನಿಂದಲೇ ತಾಯಿಯ ಮಾರ್ಗದರ್ಶನದಲ್ಲಿ ಸಂಗೀತ ಶಾರದೆಗೆ ಶರಣೆಂದ ಈತ ಇಂದು ಝೀ ಕನ್ನಡ ಸರಿಗಮಪ ಸ್ಪರ್ಧೆಯಲ್ಲಿ ರನ್ನರ್‌ಅಪ್ ಸ್ಥಾನ ಪಡೆಯುವ ಮೂಲಕ ರಾಜ್ಯಾದ್ಯಂತ ಮನೆಮಾತಾಗಿದ್ದಾನೆ.
ಪ್ರಾರಂಭದಲ್ಲಿ ತಾಯಿಯ ಬಳಿ ಅಧ್ಯಯನ ನಡೆಸಿದ ಈತ ಬಳಿಕ ಕೆಲಕಾಲ ಹಿಂದೂಸ್ತಾನಿ ಶಾಸ್ತ್ರೀಯ ಮತ್ತು ಸುಗಮ ಸಂಗೀತವನ್ನು ಹೊನ್ನಾವರದ ವಿ.ರಾಜೇಶ್ವರಿ ಭಟ್ ಅವರಲ್ಲಿ ಅಭ್ಯಾಸ ನಡೆಸಿ ಪ್ರಸ್ತುತ ಪಂ.ವೆಂಕಟೇಶ ಆಲ್ಕೋಡ್ ಅವರ ಬಳಿಯಲ್ಲಿ ಸಂಗೀತ ಅಭ್ಯಾಸ ಮಾಡುತ್ತಿದ್ದಾನೆ.
ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಸುಬ್ರಾಯ ಹೆಗಡೆ ಮತ್ತು ಪಾರ್ವತಿ ಭಟ್ಟ ದಂಪತಿಯ ಪುತ್ರ ಗುರುಕಿರಣ್. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ.
ಪ್ರತಿಭಾ ಕಾರಂಜಿಯೇ ಮೊದಲ ವೇದಿಕೆ:
ಪ್ರಾರಂಭದಲ್ಲಿ ಶಾಲೆಯಲ್ಲಿ ನಡೆಯುತ್ತಿದ್ದ ಪ್ರತಿಭಾ ಕಾರಂಜಿ, ಕಲಿಕೋತ್ಸವಗಳಷ್ಟೇ ಅಲ್ಲದೇ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಈತನಿಗೆ ಬಾಗೂರು ಕಲಾ ವೇದಿಕೆ ಮತ್ತುಷ್ಟು ಅವಕಾಶಗಳನ್ನು ನೀಡಿತು. ಇದೇ ಸಮಯದಲ್ಲಿ ಉದಯ ಸಿಂಗರ್ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಅವಕಾಶವೂ ಸಿಕ್ಕಿತು. ಉದಯ ಸಿಂಗರ್‌ನಲ್ಲಿ ಈತನೇ ಚಾಂಪಿಯನ್ ಕೂಡ ಆದ! ಇದು ಈತನ ಸಂಗೀತ ಪಯಣಕ್ಕೆ ಹೊಸ ಆಯಾಮವನ್ನೇ ನೀಡಿತು.
ಲವ್ ಮಿ ಇಂಡಿಯಾ ಶೋನಲ್ಲೂ ವಿಜೇತ:
ಈಗಾಗಲೇ ಹಿಂದಿಯ ಪ್ರಸಿದ್ಧ ‘ಲವ್ ಮಿ ಇಂಡಿಯಾ ರಿಯಾಲಿಟಿ ಶೋನಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಗುರುಕಿರಣ್, ಸಂಬಂಧಿಕರು ಹಾಗೂ ಬಂಧುಗಳ ಸಲಹೆ ಮೇರೆಗೆ ಝೀ ಕನ್ನಡ ವಾಹಿನಿ ನಡೆಸುವ ದಕ್ಷಿಣ ಭಾರತದ ಹೆಮ್ಮೆಯ ಸಂಗೀತ ಕಾರ್ಯಕ್ರಮ ಸರಿಗಮಪ ಆಡಿಷನ್‌ನಲ್ಲಿ ಪಾಲ್ಗೊಂಡನು. ನೂರಾರು ಸ್ಪರ್ಧಿಗಳನ್ನು ಹಿಂದಿಕ್ಕಿ ಮೆಗಾ ಆಡಿಷನ್‌ಗೆ ಆಯ್ಕೆಯಾದನು. ಪ್ರತಿವಾರವೂ ಅದ್ಭುತವಾಗಿ ಹಾಡುವ ಮೂಲಕ ಗ್ರ್ಯಾಂಡ್ ಫಿನಾಲೆ ಪ್ರವೇಶಿಸಿ ರನ್ನರ್‌ಅಪ್ ಪಟ್ಟವನ್ನೇ ಮುಡಿಗೇರಿಸಿಕೊಂಡಿದ್ದಾನೆ.
ಮರೆಯಲಾಗದ ಅವಿಸ್ಮರಣೀಯ ಕ್ಷಣಗಳು:
ಹಿಂದಿಯ ‘ಲವ್ ಮಿ ಇಂಡಿಯಾ ಶೋನಲ್ಲಿ ಭಾಗವಹಿಸಿದ್ದ ಸಮಯದಲ್ಲಿ ಗುರುಕಿರಣ್ ತನ್ನ ತಂದೆಯನ್ನು ನೋಡದೆ ೬ ತಿಂಗಳಾಗಿತ್ತು. ಇದೇ ವೇಳೆ ಒಂದು ಎಪಿಸೋಡ್‌ನಲ್ಲಿ ನನಗೆ ಗೊತ್ತಿಲ್ಲದಂತೆ ತಂದೆಯನ್ನು ಕಾರ್ಯಕ್ರಮಕ್ಕೆ ಕರೆಸಿದ್ದರು. ನಂತರ ಝೀ ಕನ್ನಡ ಸರಿಗಮಪ ಶೋನಲ್ಲಿ ರಾಜೇಕೃಷ್ಣನ್ ಅವರು ಒಂದು ಹಾಡಿಗೆ ನನ್ನನ್ನು ಹೆಗಲ ಮೇಲೆ ಕೂರಿಸಿಕೊಂಡಿದ್ದರು. ಇದೆರಡೂ ನನ್ನ ಸಂಗೀತ ಪಯಣದಲ್ಲಿನ ಮರೆಯಲಾಗದ ಅವಿಸ್ಮರಣೀಯ ಕ್ಷಣಗಳು ಎನ್ನುತ್ತಾನೆ ಗುರುಕಿರಣ್.
ಓದಿನಲ್ಲೂ ಮುಂದು:
ಇಷ್ಟೆಲ್ಲಾ ಸಂಗೀತ ಸಾಧಕನಾದರೂ ಶೈಕ್ಷಣಿಕ ಕ್ಷೇತ್ರದಲ್ಲೂ ಹಿಂದೆ ಬಿದ್ದಿಲ್ಲ. ಓದಿನ ಜೊತೆಗೆ ಶಾಲೆಯ ವಿವಿಧ ಚಟುವಟಿಕೆಗಳಲ್ಲೂ ಬಹುಮಾನ ಪಡೆದಿದ್ದಾನೆ. ಕೇವಲ ಸಂಗೀತ ಮಾತ್ರವಲ್ಲದೇ ತಬಲಾ, ಚಿತ್ರಕಲೆ, ಸೈಕ್ಲಿಂಗ್, ಆರ್ಚರಿ, ಪುರಾಣ ಓದು ಮುಂತಾದ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾನೆ.
ರಾಘವೇಶ್ವರ ಶ್ರೀಗಳಿಂದ ವಿಶೇಷ ಪುರಸ್ಕಾರ:
ಹಿಂದಿಯ ‘ಲವ್ ಮಿ ಇಂಡಿಯಾ ಶೋ ಮುಕ್ತಾಯಗೊಂಡ ಬಳಿಕ ಶ್ರೀರಾಮಚಂದ್ರಾಪುರ ಮಠದ ಶಾಖಾ ಮಠ ಗಿರಿನಗರದಲ್ಲಿ ಪ.ಪೂ.ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ವಿಶೇಷ ಪುರಸ್ಕಾರ ನೀಡಿ ಅನುಗ್ರಹಿಸಿದ್ದಾರೆ. ಅಲ್ಲದೇ ಕೆಲವು ಸಂಘ-ಸಂಸ್ಥೆಗಳು ಹಾಗೂ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಹಲವು ಪ್ರಶಸ್ತಿ-ಪುರಸ್ಕಾರಗಳು ಸಂದಿವೆ.
ಸಾಧಿಸುವುದು ಇನ್ನೂ ಇದೆ:
ಮೂರು ಪ್ರಸಿದ್ಧ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಚಾಂಪಿಯನ್ ಮತ್ತು ರನ್ನರ್‌ಅಪ್ ಪಟ್ಟ ಪಡೆದಿರುವುದಕ್ಕೆ ಖುಷಿ ಇದೆ. ಆದರೆ ಇದು ಏನೂ ಅಲ್ಲ. ಸಾಧಿಸುವುದು ತುಂಬಾ ಇದೆ. ಮುಂದೆ ಸಂಗೀತ ಕ್ಷೇತ್ರದಲ್ಲೇ ತೊಡಗಿಸಿಕೊಳ್ಳುವ ಗುರಿ ಇದೆ. ನನ್ನ ಪ್ರತಿಯೊಂದು ಯಶಸ್ಸಿನ ಹಿಂದೆ ತಂದೆ-ತಾಯಿಯ ಜೊತೆಗೆ ಅಕ್ಕ ಕೀರ್ತಿ ಹೆಗಡೆಯ ಶ್ರಮವೂ ಇದೆ. ನಾನು ಅವಳನ್ನು ಮರೆಯುವಂತಿಲ್ಲ ಎನ್ನುವ ಗುರುಕಿರಣ್, ಸರಿಗಮಪ ಶೋನ ಮೆಂಟರ್ ಆಗಿದ್ದ ಸುಚೇತನ್ ರಂಗಸ್ವಾಮಿ ಅವರು ಪ್ರತಿ ಹಾಡು ಆಯ್ಕೆ ಮಾಡಿಕೊಂಡಾಗಲೂ ಧ್ವನಿ ಏರಿಳಿತ ಹೇಗಿರಬೇಕೆಂಬುದನ್ನು ಮನದಟ್ಟು ಮಾಡಿಸಿ ಮನಮುಟ್ಟುವಂತೆ ಹಾಡಿಸುತ್ತಿದ್ದರು. ನಮ್ಮ ತಪ್ಪುಗಳನ್ನು ತಿದ್ದಿ ತೀಡಿ ನಮ್ಮ ಸಂಗೀತಕ್ಕೆ ಮತ್ತಷ್ಟು ಮೆರಗು ನೀಡಿದ್ದಾರೆ. ಇವರ ಜತೆಗೆ ಮಹಾಗುರು ಹಂಸಲೇಖ, ರಾಜೇಶ್ ಕೃಷ್ಣನ್, ವಿಜಯ್‌ಪ್ರಕಾಶ್, ಅರ್ಜುನ್ ಜನ್ಯ, ಅನುಶ್ರೀ ಹಾಗೂ ಜ್ಯೂರಿ ಪ್ಯಾನೆಲ್‌ನ ಸದಸ್ಯರಿಗೆ ಮಾತಿನ ಕೊನೆಯಲ್ಲಿ ಸ್ಪೆಷಲ್ ಥ್ಯಾಂಕ್ಸ್ ಹೇಳೋದನ್ನು ಮರೆಯಲಿಲ್ಲ.