ಅರಿವಿನ ಪರಂಪರೆಯು ಪ್ರಥಮ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮುಂದುವರಿಕೆಯಾಗಿ ಶ್ರೀಮದ್ರಾಮಚಂದ್ರಭಾರತೀ ಮಹಾಸ್ವಾಮಿಗಳ ರೂಪದಿಂದ ಸಾಗಿತು. ರಘೂತ್ತಮ ಮಠದ ಹನ್ನೆರಡನೆಯ ಪೀಠಾಧೀಶರಾದ ಶ್ರೀಮದ್ರಾಮಚಂದ್ರ ಭಾರತೀ ಮಹಾಸ್ವಾಮಿಗಳು ಹಿಂದಿನ ಎಲ್ಲಾ ಗುರುಗಳಂತೆಯೇ ಪರಮ ತಪಸ್ವಿಗಳೂ ಮತ್ತು ಶ್ರೇಷ್ಠ ಧಾರ್ಮಿಕ ನೇತಾರರಾಗಿದ್ದರು. ಇವರ ಅದ್ವೈತಾಮೃತ ಸವಿಯು ಕರ್ಣಾಕರ್ಣಿಕೆಯಾಗಿ ಹೊನ್ನೆಕಂಬಳಿ ಅರಸರ ಕಿವಿಗೂ ತಲುಪಿತು. ಆಗಿನ ಕಾಲದ ಅರಸರು ಸ್ವಯಂ ಶಾಸ್ತ್ರಜ್ಞರಾಗಿದ್ದರಲ್ಲದೇ ಧರ್ಮರಾಜ್ಯಕ್ಕಾಗಿಯೇ ರಾಜತ್ವದ ಅನಿವಾರ್ಯತೆ ಎಂಬುದನ್ನು ಅರಿತಿದ್ದವರಾಗಿದ್ದರು. ಧರ್ಮಸಮಾಜದ ಮೂಲ ಮತ್ತು ಅಂತಿಮ ಗುರಿಯೇ ಅರಿವಿನ ಪ್ರಾಪ್ತತೆ ಎಂಬುದು ಜನ್ಮತಃ ಅವರಿಗೆ ತಿಳಿದಿರುತ್ತಿತ್ತು. ಹಾಗಾಗಿಯೇ ಹೊನ್ನೆಕಂಬಳಿ ಅರಸರ ಮಾಂಡಲಿಕ ಶಂಕರನಾರಾಯಣ ಭಟ್ಟ ತನ್ನ ಆಳ್ವಿಕೆಯ ಪ್ರದೇಶದಲ್ಲಿ ಇಂತಹ ಅದ್ವೈತಾಮೃತವ ಉಣಬಡಿಸುವ ಅರಿವೇ ತಾನಾಗಿ ಬಂದ ರೂಪ ಶ್ರೀ ಶ್ರೀ ರಾಮಚಂದ್ರ ಭಾರತೀ ಮಹಾಸ್ವಾಮಿಗಳನ್ನು ಸಂಧಿಸಿ ಅತ್ಯಂತ ವಿನೀತನಾಗಿ ಪ್ರಾರ್ಥಿಸಿ ಧರ್ಮಮಾರ್ಗವನ್ನು ಬೋಧಿಸಲೊಪ್ಪಿಸಿ ತನ್ನ ಪ್ರಾಂತ್ಯಕ್ಕೆ ಬರಮಾಡಿಕೊಂಡನು. ಪೂರ್ಣಮನಸ್ಸಿನಿಂದ ಬಂದ ಶ್ರೀಗಳು ತಮ್ಮ ಗುರುವರ್ಯರ ( ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು-೧) ಅನುಜ್ಞೆಯನ್ನು ಪಡೆದು ಹೊಸನಗರ ಸಮೀಪದ ಶರಾವತಿ ನದಿ ತೀರದ ಅಗಸ್ತ್ಯತೀರ್ಥದ ಬಳಿ ಮಠವನ್ನು ಸ್ಥಾಪಿಸಿದರು. ನೂತನವಾಗಿ ನಿರ್ಮಾಣಗೊಂಡ ಈ ಮಠಕ್ಕೆ, ಆ ಗ್ರಾಮಕ್ಕೆ ಸಹಜವಾಗಿಯೇ ಆರಾಧ್ಯದೇವತೆಯಾದ ಪ್ರಭು ಶ್ರೀರಾಮಚಂದ್ರನ ಹೆಸರೇ ರೂಢವಾಯಿತು. ಶ್ರೀ ಶ್ರೀಗಳು ಕೆಲಕಾಲ ಅಲ್ಲೇ ನೆಲೆಸಿದ್ದರು. ಕೆಲಕಾಲದ ನಂತರ ತಮ್ಮ ದೀಕ್ಷಾಗುರುಗಳಾದ ಶ್ರೀಮದ್ರಾಘವೇಶ್ವರ ಭಾರತೀ (೧) ಶ್ರೀಗಳು ತಮ್ಮ ಅಂತ್ಯ ಸಮಯವನ್ನು ಪ್ರತೀಕ್ಷಿಸುತ್ತಿದ್ದಾರೆಂಬ ವಾರ್ತೆಯನ್ನು ಕೇಳಿದ ರಾಮಚಂದ್ರಭಾರತೀ ಶ್ರೀಗಳು ಗೋಕರ್ಣದ ರಘೂತ್ತಮ ಮಠಕ್ಕೆ ಬಂದು ತಮ್ಮ ಗುರುವರ್ಯರನ್ನು ಸಂದರ್ಶಿಸಿ ಭಕ್ತಿಶ್ರದ್ಧೆಗಳಿಂದ ಅವರ ಸೇವೆಗೈದರು. ತಮ್ಮ ಐಹಿಕ ಕಾರ್ಯವನ್ನು ಮುಗಿಸಿದ್ದ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು(೧) ಕೆಲಸಮಯದಲ್ಲಿಯೇ ಬ್ರಹ್ಮಲೀನರಾದರು. ಮೊದಲನೇ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಶ್ರೀ ಶ್ರೀ ರಾಮಚಂದ್ರ ಭಾರತೀ ಶ್ರೀಗಳೋರ್ವರಿಗೇ ಅಲ್ಲದೇ ಇನ್ನೋರ್ವ ಶಿಷ್ಯನಿಗೂ ಸಂನ್ಯಾಸದೀಕ್ಷೆ ನೀಡಿದ್ದರು. ಅವರೇ ಶ್ರೀ ಶ್ರೀ ರಘೂತ್ತಮ ಭಾರತಿಗಳು. ಇವರು ಹೊನ್ನಾವರ ಸಮೀಪದ ಕೆಕ್ಕಾರಿನ ರಘೂತ್ತಮ ಮಠಕ್ಕೆ ವಾಸ್ತವ್ಯ ಬದಲಿಸಿದರು. ರಾಮಚಂದ್ರ ಭಾರತಿಗಳು ಹೊಸನಗರದ ಶ್ರೀರಾಮಚಂದ್ರಾಪುರ ಮಠಕ್ಕೆ ಹೋಗಿ ನೆಲೆಸಿ ಆಡಳಿತ ವ್ಯವಸ್ಥೆಯನ್ನು ವರ್ಗಾವಣೆಗೊಳಿಸಿದರು. ಇದುವೇ ಪ್ರಧಾನ ಮಠವಾಗಿ ಪರಿವರ್ತಿತವಾಗಿ ರಘೂತ್ತಮ ಮಠ ಎಂಬ ಶುಭನಾಮವು ಶ್ರೀರಾಮಚಂದ್ರಾಪುರ ಮಠವೆಂದು ನೂತನ ಅಭಿಧಾನವನ್ನು ಪಡೆಯಿತು. ಹೀಗೆ ಹೊಸನಗರದ ರಾಮಚಂದ್ರಾಪುರ ಮಠವು ಪ್ರಧಾನಮಠವಾಯಿತು. ಜಗದೇಳ್ಗೆಗಾಗಿ ಜೀವನದುದ್ದಕ್ಕೂ ಅರಿವಿನ ಪ್ರಸಾರವನ್ನೇ ಕೈಗೊಂಡ ಶ್ರೀ ಶ್ರೀ ರಾಮಚಂದ್ರ ಭಾರತೀ ಮಹಾಸ್ವಾಮಿಗಳು ಆ ಶರೀರಘಟದ ವಾಯ್ದೆಯು ಮುಗಿಯಿತೆನಿಸಿದಾಗ ಯೋಗ್ಯ ವಟುವೋರ್ವನಿಗೆ ಯೋಗಪಟ್ಟವನ್ನು ಅನುಗ್ರಹಿಸಿ ನೂತನ ಯತಿಗಳಾದ ಆ ಒಬ್ಬ ಶ್ರೇಷ್ಠರೊಳಗೆ ಅರಿವಾಗಿ ಸೇರಿ ಪಾಂಚಭೌತಿಕ ರೂಪವನ್ನು ಪಂಚಮಹಾಭೂತಗಳಲ್ಲಿಯೇ ಲೀನಗೊಳಿಸಿದರು.