ಯಶಸ್ಸಿನ ಹಾದಿಯತ್ತ ಯುವ ಟೆಕ್ ಉದ್ಯಮಿ ಶ್ರೀನಿಧಿ

ಅಂಕುರ

 

ವಿಜ್ಞಾನ ತಂತ್ರಜ್ಞಾನವೆಂದರೆ ಇವರಿಗೆ ಪ್ರಾಥಮಿಕ ಶಾಲಾ ದಿನಗಳಲ್ಲೇ ಅಚ್ಚುಮೆಚ್ಚು. ಅಂದಿನಿಂದಲೇ ತಂತ್ರಜ್ಞಾನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ತವಕದಿಂದ ಅಂತರ್ಜಾಲದ ಮೂಲಕ ಮಾಹಿತಿಯನ್ನು ಅನ್ವೇಷಿಸಲು ಆರಂಭಿಸಿದರು. ನಿರಂತರ ಪ್ರಯತ್ನ, ತಾಳ್ಮೆ, ಪರಿಶ್ರಮದಿಂದಾಗಿ 8ನೇ ತರಗತಿಯಲ್ಲಿರುವಾಗಲೇ ಯುವ ಟೆಕ್ ಉದ್ಯಮಿ ಎಂದು ಗುರುತಿಸಿಕೊಂಡರು!

ಹೌದು. ದಕ್ಷಿಣಕನ್ನಡ ಜಿಲ್ಲೆಯ ಕಲ್ಲಡ್ಕಡ ರವಿಶಂಕರ್ ಭಟ್ ಮತ್ತು ಸರಸ್ವತಿ ದಂಪತಿಗಳ ಪುತ್ರ ಶ್ರೀನಿಧಿ ಆರ್.ಎಸ್. ಇಂದು ಯುವ ಟೆಕ್ ಉದ್ಯಮಿಯಾಗಿ ಗುರುತಿಸಿಕೊಂಡು ಗಮನಸೆಳೆಯುತ್ತಿದ್ದಾರೆ.

8ನೇ ತರಗತಿಯಲ್ಲಿರುವಾಗ ಸ್ನೇಹಿತರೊಂದಿಗೆ ವಿವಿಧ ಮಾಹಿತಿಯನ್ನು ಕಲೆ ಹಾಕುತ್ತಿದ್ದ ಶ್ರೀನಿಧಿ ಅವರು, ಆ ದಿನಗಳಲ್ಲೇ Bhat India Tech ಎಂಬ ಇ-ಕಾಮರ್ಸ್ ಸೇವೆಯನ್ನು ಪ್ರಾರಂಭಿಸಿದರು. ಒಂದು ವರ್ಷದ ಬಳಿಕ ಸ್ನೇಹಿತರನ್ನು ಸೇರಿಸಿಕೊಂಡು ಇದೀಗ ಮುನ್ನಡೆಸಿದರು. 10ನೇ ತರಗತಿ ಪೂರ್ಣಗೊಂಡ ಬಳಿಕ Bhat India ಎಂಬ ಸೇವೆಯನ್ನು ಪ್ರಾರಂಭಿಸಿದರು. “Bhat Indai ಕಂಪನಿಯಡಿಯಲ್ಲಿ ಬೇರೆ ಬೇರೆ ಸಂಘ ಸಂಸ್ಥೆಗಳ ಲೋಗೋ ಡಿಸೈನ್, ವೆಬ್ ಡೆವೆಲಪ್ಮೆಂಟ್, ಸೋಷಿಯಲ್ ಮೀಡಿಯಾ ಹ್ಯಾಂಡಲ್, ಮಾರ್ಕೆಟಿಂಗ್ ಸ್ಟ್ಯಾಟರ್ಜಿ…. ಹೀಗೆ ವಿವಿಧ ಸೇವೆಯನ್ನು ಒದಗಿಸುತ್ತಿದ್ದೇವೆ” ಎನ್ನುತ್ತಾರೆ Bhat India ಕಂಪನಿಯ ಸ್ಥಾಪಕ ಮತ್ತು ಸಿ‌ಇಓ ಆದ ಶ್ರೀನಿಧಿ ಎಸ್.ಆರ್.

ವೆಬ್ ಪೋರ್ಟಲ್:
Bhat India ಕಂಪನಿಯ ಜೊತೆಗೆ BIMN ಎಂಬ ಆನ್‌ಲೈನ್ ನ್ಯೂಸ್ ಪೋರ್ಟಲ್ ಕೂಡಾ ಇವರು ನಡೆಸುತ್ತಿದ್ದು, ವಿನೂತನ ಸುದ್ದಿ ಮತ್ತು ವಿಷಯಗಳನ್ನು ಓದುಗರಿಗೆ ನೀಡುವ ಮೂಲಕ ಜನಪ್ರಿಯತೆ ಗಳಿಸಿದೆ.‌ ಕನ್ನಡ ಮತ್ತು ಇಂಗ್ಲಿಷ್ ಎರಡೂ ಆವೃತ್ತಿಯಲ್ಲಿ ಪ್ರತಿನಿತ್ಯ ಓದುಗರಿಗೆ ಸುದ್ದಿ ತಲುಪಿಸುವ ಕಾರ್ಯವನ್ನೂ ಶ್ರೀನಿಧಿ ಅವರ ತಂಡ ಮಾಡುತ್ತಿದೆ.

ಹೈನುಗಾರರಿಗಾಗಿ ವಿಶೇಷ ಆ್ಯಪ್ ಬಿಡುಗಡೆ:
ಹೈನುಗಾರಿಕೆಯಲ್ಲಿ ಕರ್ನಾಟಕದ ಕರಾವಳಿ ಹೆಸರು ಮಾಡಿದೆ. ಆದರೆ ಪ್ರತಿನಿತ್ಯ ಹಾಲು ಹಾಕುವ ರೈತರಿಗೆ ತಮ್ಮ ಹಾಲಿನ ಪ್ರಮಾಣವನ್ನು ಲೆಕ್ಕಾಚಾರ ಮಾಡಿಕೊಳ್ಳುವುದು ಒಂದು ಸವಾಲೇ ಸರಿ. ಆದರೆ ಈ ಸಮಸ್ಯೆಗೆ ಪರಿಹಾರವಾಗಿ ಶ್ರೀನಿಧಿ ಅವರು ಕೇಶವ ಪ್ರಸಾದ್ ಸೂರ್ಡೇಲು ಅವರ ಜೊತೆಗೂಡಿ ‘ಮೈ ಎಂಪಿಸಿಎಸ್’ ಎಂಬ ಆ್ಯಪ್ ಸಿದ್ಧಪಡಿಸಿದ್ದಾರೆ. ಈ ಆ್ಯಪ್‌ನಲ್ಲಿ ರೈತರು ಪ್ರತಿದಿನ ಡೈರಿಗೆ ಪೂರೈಸಿದ ಹಾಲಿನ ಪ್ರಮಾಣ, ಸಮಯ, ಫ್ಯಾಟ್… ಹೀಗೆ ಸಮಗ್ರ ಮಾಹಿತಿ ದೊರೆಯಲಿದೆ. ಈಗಾಗಲೇ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸರಿಸುಮಾರು 3500 ಹೈನುಗಾರರ ಈ ಆ್ಯಪ್ ಬಳಸುತ್ತಿದ್ದಾರೆ ಎಂದು ಮಾಹಿತಿ ನೀಡುತ್ತಾರೆ ಶ್ರೀನಿಧಿ ಎಸ್.ಆರ್.

ಸರ್ವಜ್ಞ ಅಕಾಡೆಮಿ ಪ್ರಾರಂಭ: ಇವೆಲ್ಲವುಗಳ ಜೊತೆ ಸರ್ವಜ್ಞ ಅಕಾಡೆಮಿ ಸ್ಥಾಪಿಸಿದ್ದು, ಈಗಾಗಲೇ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್ ಅವರಿಂದ ಉದ್ಘಾಟನೆಗೊಂಡಿದೆ. ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಉತ್ತಮ ತರಬೇತಿ ನೀಡುವ, ಸಿ‌ಇಟಿ-ಜೆಇ‌ಇ, ನೀಟ್ ಮುಂತಾದ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡುವ ಗುರಿಯನ್ನು ಸರ್ವಜ್ಞ ಅಕಾಡೆಮಿ ಹೊಂದಿದೆ. ಡಾ.ಕೃಷ್ಣ ಪ್ರಸಾದ್, ಪ್ರೊ.ಕೆ. ಕಿಶೋರ್, ಶರಾವತಿ ರವಿನಾರಾಯಣ ಹೀಗೆ ಉತ್ತಮ ಬೋಧಕ ಸಿಬ್ಬಂದಿಗಳು ತರಬೇತಿ ನೀಡಲಿದ್ದಾರೆ.

ದಕ್ಷಿಣಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ಮಂಗಳೂರು ಮತ್ತು ರೋಟರಿ ವಿದ್ಯಾಸಂಸ್ಥೆ ಮೂಡುಬಿದಿರೆ ಇವರ ಸಹಯೋಗದಲ್ಲಿ 2019 ರಲ್ಲಿ ಮೂಡುಬಿದಿರೆಯಲ್ಲಿ ನಡೆದ 26ನೇ ವರ್ಷದ “ಮಕ್ಕಳ ಧ್ವನಿ- 2019” ಸಾಹಿತ್ಯಿಕ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾಗಿ ಗಮನಸೆಳೆದ ಹೆಗ್ಗಳಿಕೆ ಇವರದ್ದು.

ಸದ್ಯ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿ.ಎಸ್ಸಿ. ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ಬಿಡುವಿನ ಸಮಯದಲ್ಲಿ ಟೆಕ್ ಕೆಲಸಗಳನ್ನು ನಿಭಾಯಿಸುತ್ತಿದ್ದಾರೆ.

Author Details


Srimukha

Leave a Reply

Your email address will not be published. Required fields are marked *