ಗುರುಪರಂಪರಾನುಗತವಾಗಿ ಅರಿವು ಅವಿಚ್ಚಿನ್ನವಾಗಿ ಹೇಗೆ ಹರಿಯಿತು ಎಂದು ಅವಲೋಕಿಸುವಾಗ ಗುರು ಎಂದು, ಜ್ಞಾನಪರಂಪರೆಯ ಹರಿವಿನ ಕೊಂಡಿಗಳಿಗೆ ಬೆಸುಗೆಯೆಂದು ಎನ್ನಿಸಿಕೊಳ್ಳುವ ಪಾತ್ರಗಳ ಪರಿಚಯ ಮಾಡಿಕೊಳ್ಳುವುದು ಅತ್ಯವಶ್ಯ. ಮೊದಲನೆ ಸಂಚಿಕೆಯಲ್ಲೇ ಅವಲೋಕಿಸಿದಂತೆ ಶ್ವೇತಾಶ್ವತರೋಪನಿಷತ್ತಿನ ಅನುಕ್ರಮಣಿಕೆಯ ಪ್ರಕಾರ ಬ್ರಹ್ಮನ ತರುವಾಯು ಬರುವ ಶುದ್ಧಪಾತ್ರ ಬ್ರಹ್ಮರ್ಷಿ ವಸಿಷ್ಠ ಮುನಿಶ್ರೇಷ್ಠ ಕ್ಷಮಾಮೂರ್ತಿ ಎಲ್ಲೂ ಕೊರತೆಯನ್ನೇ ಕಾಣಲಾಗದ ವ್ಯಕ್ತಿತ್ವ. ಇವರ ಜನನವೇ ಒಂದದ್ಭುತ. ಸತ್ಯಯುಗದ ಕಾಲದಲ್ಲಿ ಮಹಾತಪಸ್ವಿ ಮೈತ್ರಾವರುಣರು ತಪವಗೈಯ್ಯುತ್ತಿದ್ದಾಗ ದೇವಲೋಕದ ಅಪ್ಸರೆ ಊರ್ವಶಿ ಆ ಜಾಗದ ಸನಿಹಕ್ಕೆ ಬಂದು ನೃತ್ಯಗೈದಳು. ಅದ್ಯಾವ ಘಳಿಗೆಯೋ ಏನೋ!! ಆ ನೂಪುರದ ನಿನಾದಕ್ಕೆ ಮೈತ್ರಾವರುಣ ಮುನಿ ಆ ಉಗ್ರತಪಸ್ಸಿನ ಸಮಾಧಿಸ್ಥಿತಿಯಿಂದ ಥಟ್ಟನೆ ಹೊರಗೆ ಬಂದಾಗ ಆಂತರ್ಯದ ಚೇತಸ್ಸು ಸ್ಖಲನ ಕ್ರಿಯೆಯಿಂದ ಶುಕ್ರಧಾತುವಿನಲ್ಲಿ ಹೊರಹೊಮ್ಮಿತು. ಆ ಚೈತನ್ಯದ ಸಾರವನ್ನು ದೇವತೆಗಳು ಜಾಗ್ರತೆಯಿಂದ ಕುಂಭಗಳಲ್ಲಿ ಶೇಖರಿಸಿ ಕಾಪಿಟ್ಟರು. ಕಾಲಾನಂತರದಲ್ಲಿ ಈ ಕುಂಭಗಳಿಂದ ಎರಡು ಮಗುವಿನ ಉದಯವಾಯಿತು. ಆ ಎರಡು ಪಾತ್ರವೇ ವಸಿಷ್ಠ ಮತ್ತು ಅಗಸ್ತ್ಯ. ಹೀಗೆ ವಸಿಷ್ಠರು ಅಯೋನಿಜರಾಗಿ ಜನಿಸಿದರು. ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ವಸಿಷ್ಠರ ಹುಟ್ಟಿಗೆ ಕೇವಲ ತಪಸ್ಸೊಂದೇ ಕಾರಣವಾಗಿತ್ತು. ಈ ತಪಸ್ಸಿನ ವ್ಯಕ್ತಿತ್ವಕ್ಕೆ ಅನುರೂಪ ಎಂಬಂತೆ ಅವರಿಗೊದಗಿದ್ದ ಪತ್ನಿ ಮಹಾಸಾಧ್ವಿ, ಪತಿವ್ರತೆ, ದೋಷವನ್ನು ಹುಡುಕಲಾಗದ ಮಹಾರತ್ನ ಅರುಂಧತಿ. ಇವರ ಧರ್ಮದಾಂಪತ್ಯದ ಫಲವಾಗಿ ಜನಿಸಿದ ನೂರು ಮಂದಿ ಮಕ್ಕಳು ಋಷಿಶ್ರೇಷ್ಠರಾದವರು. ಋಷಿ ಶಕ್ತಿ ಮಹೋದಯ ಇವರುಗಳಲ್ಲಿ ಗಣನೀಯರು. ಈ ಋಷಿ ಸಂತತಿಗೆ ಕಿರೀಟಪ್ರಾಯವೆಂಬಂತೆ ಇದ್ದ ಪಾತ್ರ ಬ್ರಹ್ಮರ್ಷಿ ಶಕ್ತಿಗಳದ್ದು.
ವಸಿಷ್ಠರ ಹುಟ್ಟಿನಲ್ಲೂ ಶುದ್ಧತೆಯ ಶುದ್ಧತೆ. ಯಮನಿಯಮಗಳೆಲ್ಲವೂ ಸ್ವಾಭಾವಿಕವಾಗಿಯೇ ಇದ್ದ ಶುದ್ಧತೆಯ ಶುದ್ಧ ವ್ಯಕ್ತಿತ್ವವದು. ಇದಕ್ಕೆ ನಿದರ್ಶನ ಎಂಬಂತೆ, ಸಕಲ ಸಮೃದ್ಧಿಯನ್ನೂ ನೀಡುವ ಕಾಮಧೇನುವಿನಂಥ ಕಾಮಧೇನು ದೇವೇಂದ್ರನ ಸಭೆಯಿಂದ ಬಯಸದೇ ಅವರಿಗೆ ಪ್ರಾಪ್ತವಾಯಿತು. ಅಂತಹ ಬಯಸಿದ ಐಶ್ವರ್ಯವನ್ನೆಲ್ಲವನ್ನೂ ನೀಡುವ ಕಾಮಧೇನುವಿನ ಒಡೆಯತ್ವವನ್ನೇ ಹೊಂದಿದ್ದರೂ ಅದು ಕೇವಲ ಲೋಕಕಲ್ಯಾಣಕ್ಕಾಗಿ ಹಾಗೂ ಜ್ಞಾನಪ್ರಾಪ್ತಿಗಾಗಿ ನಡೆಯುವ ಯಜ್ಞನಿರ್ವಹಣೆಗಷ್ಟೇ ವಿನಿಯೋಗವಾಗುತ್ತಿತ್ತೇ ಹೊರತು ಸ್ವಾರ್ಥೋಪಭೋಗಗಳಿಗೆಂದೂ ಮಾಧ್ಯಮವಾಗಿರಲಿಲ್ಲ.
ಇದೊಂದಾದರೆ ಇದೇ ಕಾಮಧೇನುವು ಕಾಮಕ್ರೋಧಾದಿಗಳ ಹೊರೆಹೊತ್ತಿದ್ದ ಕ್ಷತ್ರಿಯ ರಾಜನು ಬ್ರಹ್ಮರ್ಷಿಯಾಗಲು ಮಾಧ್ಯಮವಾಯಿತು.
ಗುರು ಯಾರೆಂದರೆ “ಥೈ ಥೈ ಎಂದು ಕುಣಿಸಿ ತನ್ನಂತೇ ತಾ ಮಾಡುವನು”. ತಮ್ಮ ಶಿಷ್ಯನಿಗೆ ತಮ್ಮದೇ ಶ್ರೇಷ್ಠತೆ ಬರಬೇಕೆಂದು ತಮ್ಮನ್ನೇ ವಿರುದ್ಧ ಪಕ್ಷದಿಂದ ಸ್ಪರ್ಧೆಗೆ ಒಡ್ಡಿಕೊಂಡು ಶಿಷ್ಯನಿಗೆ *धिड़्बलं क्षत्रिय बलं ब्रह्मतेजो बलं बलं* ಎಂಬ ಪರಮಸತ್ಯವನ್ನು ಅರಿವಾಗಿಸಿ ಅಂತ್ಯದಲ್ಲಿ ಶಿಷ್ಯ ಬ್ರಹ್ಮಾಂಡವನ್ನೇ ಗೆಲ್ಲುವಂತೆ ಮಾಡಿ ಶಿಷ್ಯನನ್ನು ಗುರುವಾಗಿಸಿ, ವಿಶ್ವಕ್ಕೇ ಮಿತ್ರನಾಗಿಸಿ ವಿಶ್ವಾಮಿತ್ರರನ್ನು ಪ್ರಪಂಚಕ್ಕೆ ನೀಡಿದ ಕೀರ್ತಿ ಬ್ರಹ್ಮರ್ಷಿ ವಸಿಷ್ಠರದ್ದು. ಶಿಷ್ಯನನ್ನು ಬ್ರಹ್ಮರ್ಷಿಯಾಗಿಸುವ ಪ್ರಕ್ರಿಯೆಯಲ್ಲಿ ನೂರು ಮಂದಿ ತಮ್ಮದೇ ಪ್ರತಿರೂಪದಂತಿದ್ದ ಪ್ರೇಮಪುತ್ರರನ್ನು ಕಳೆದುಕೊಂಡರೂ ಸಹ ಇದಕ್ಕೆ ನಿಮಿತ್ತನಾದ ಶಿಷ್ಯನನ್ನು ಶಪಿಸದ ಪರಮಸಾತ್ವಿಕ ಚೈತನ್ಯವದು. ಆದರೆ ಪ್ರಕೃತಿಧರ್ಮದಂತೆ ಪುತ್ರವಿರಹದಿಂದ ನೊಂದ ವಸಿಷ್ಠರು ಸರಸ್ವತಿ ನದಿಗೆ ಆತ್ಮಾಹುತಿ ಗೈಯ್ಯಲು ಹೋದಾಗ ಈ ಪ್ರಪಂಚಕ್ಕೆ ವಸಿಷ್ಠರಂಥ ಪರಮಜ್ಞಾನಿ, ಮಹಾಗುರು ಬೇಕೆಂಬಂತೆ ನದಿಯೇ ನೂರಾಗಿ ಹರಿದು ಹೋಯಿತೇ ವಿನಃ ತನ್ನೊಳಗೆ ಜೀರ್ಣವಾಗುವಂತೆ ಮಾಡಲಿಲ್ಲ.
ಇಹ ಜೀವನದ ಸಂದಿಗ್ಧತೆಗಳಿಗೆ ಉತ್ತರ ಎಂಬಂತೆ ಪರಕ್ಕೆ ಏರುವ ಗೌಪ್ಯ ಸಾಧನಸೂತ್ರಗಳೆಂಬಂತೆ ಅವರು ದರ್ಶಿಸಿಕೊಂಡ ಜ್ಞಾನೌನ್ನತ್ಯ ಈ ಕೆಳಗಿನ ಹೆಸರಿನ ರಚನೆಗಳಲ್ಲಿ ಕಂಡುಬರುತ್ತದೆ.
ಯೋಗವಾಸಿಷ್ಠ :
ಇಪ್ಪತ್ತೊಂಭತ್ತು ಸಾವಿರ ಸೂತ್ರಗಳುಳ್ಳ ಈ ರಚನೆ, ಸಂಭಾಷಣೆ ಹಾಗೂ ಕಥೆಗಳ ರೂಪದಲ್ಲಿದ್ದು ವಸಿಷ್ಠರು ಹಾಗೂ ರಾಮನೊಡನೆ ಚರ್ಚಿಸಿದ ಜೀವ-ಜೀವರುಗಳ ಸಂಬಂಧ, ಜೀವ-ಮಾಯೆ-ಈಶ್ವರ, ಮಾಯೆಯನ್ನು ದಾಟಲು ಮೋಕ್ಷೋಪಾಯ ಹೀಗೆ ಬ್ರಹ್ಮಾಂಡದ ಪರಮಸತ್ಯವೂ ಅದ್ವೈತವೇದಾಂತವೂ ಪ್ರತಿಪಾದಿತವಾಗಿದೆ. ಇದು ಮಹಾರಾಮಾಯಣ, ಜ್ಞಾನವಾಸಿಷ್ಠ ಹೀಗೆ ಹಲವು ಹೆಸರುಗಳಿಂದಲೂ ಗುರುತಿಸಲ್ಪಡುತ್ತದೆ. ಋಗ್ವೇದದ 8/83/9 ರಲ್ಲಿ ಅಗ್ನಿ ಹಾಗೂ ವರುಣನ ಸ್ತುತಿಗಳು ಇವರು ದರ್ಶಿಸಿಕೊಂಡಿದ್ದಾಗಿದೆ.
ಇವರ ಜೀವನದ ಅಂಶಗಳನ್ನು ಋಗ್ವೇದದ 10/167/4 ರಲ್ಲಿ ಕಾಣಬಹುದಾಗಿದೆ. ವಸಿಷ್ಠರ ಜೀವನಘಟ್ಟವು ಪರಮಪಾವನಿ ಸಿಂಧೂನದಿಯ ದಂಡೆಯಲ್ಲಿ ಸಾಗಿತು ಎನ್ನುವುದಕ್ಕೆ ಋಗ್ವೇದದ 7/33/9 ಸಾಕ್ಷಿ.
ಈ ಅವಿಚ್ಛಿನ್ನಗುರುಪರಂಪರೆಯ ಅರಿವು-ಹರಿವು ಶೀರ್ಷಿಕೆಯ ಅಡಿಯಲ್ಲಿ ಬ್ರಹ್ಮರ್ಷಿ ವಸಿಷ್ಠರ ಜೀವನಚರಿತ್ರೆಯನ್ನು ಏಕೆ ಅವಲೋಕಿಸಿದೆವು ಅತ್ಯಾವಶ್ಯಕತೆ ಏನಿತ್ತೆಂದರೆ ವಸಿಷ್ಠರಿಂದ ಆರಂಭವಾದ ಋಷಿಗಳಲ್ಲಿನ ಜ್ಞಾನಪರಂಪರೆ ಇಂದಿಗೂ ಜೀವಂತವಾಗಿ ಪ್ರಸ್ತುತವಾಗುವುದಕ್ಕೆ ಕಾರಣ ವಸಿಷ್ಠರ ಪರಮಪವಿತ್ರ ಜೀವನವೇ. ಈ ದೋಷವಿಲ್ಲದ ಅಪ್ಪಟ ಅಪರಂಜಿ ಪಾತ್ರದ ಮಹಾಗುರು ವಸಿಷ್ಠರಿಂದ ಅವರದೇ ಪ್ರತಿರೂಪವಾದ ರಸರಕ್ತ ಮಾಂಸಾದಿಗಳನ್ನು ಹಂಚಿಕೊಂಡು ಉದಯಿಸಿದ ಶಕ್ತಿಮಹರ್ಷಿಗಳ ಮೂಲಕ ಜ್ಞಾನವು ಅವಿಚ್ಛಿನ್ನವಾಗಿ ಹರಿದು ಪರಂಪರೆಯನ್ನು ಮುಂದುವರೆಸಿತು.