ರಂಗೋಲಿ ಕಲೆಯ ಏಕಲವ್ಯ!

ಅಂಕುರ

ಆತ ಡಿಪ್ಲೋಮಾ ಅಧ್ಯಯನ ಮಾಡುತ್ತಿರುವ ಕಿಶೋರ. ಈತ ರಂಗೋಲಿ ಪುಡಿಯನ್ನು ಹಿಡಿದರೆ ಸರಾಗವಾಗಿ ವಿವಿಧ ಕಲಾಕೃತಿಗಳನ್ನು ಚಿತ್ರಿಸಬಲ್ಲ. ಕ್ಲೇ ಮಾಡೆಲಿಂಗ್‌ನಲ್ಲೂ ಹಲವಾರು ಕಲಾಕೃತಿ ಮತ್ತು ಎಕ್ರೆಲಿಕ್ ಪೇಂಟ್ ಮೂಲಕ ಚಿತ್ರ ಬಿಡಿಸುವ ವಿಶಿಷ್ಟ ಕಲೆಯನ್ನು ಒಲಿಸಿಕೊಂಡಿದ್ದಾನೆ. ಕಲಾ ಲೋಕದಲ್ಲಿ ಅಸಾಧಾರಣ ಸಾಧನೆ ಮಾಡುತ್ತಿರುವ ವಿನಾಯಕ ಹೆಬ್ಬಾರ್ ಈ ಕಲಾ ಸಾಧಕ. ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಮಣಕಿ ಗ್ರಾಮದ ರಾಮಚಂದ್ರ ಹೆಬ್ಬಾರ್ ಮತ್ತು ವಿನೋದಿನಿ ಹೆಬ್ಬಾರ ದಂಪತಿಗಳ ಪುತ್ರ ವಿನಾಯಕ ತನ್ನ ಅವಿರತ ಶ್ರಮದ ಮೂಲಕ ಕಲಾ ಮಾಧ್ಯಮದಲ್ಲಿ ಸಾಧನೆಗೈಯ್ಯುತ್ತಿದ್ದಾನೆ.

ಬಾಲ್ಯದಿಂದಲೇ ಕಲೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದಲ್ಲದೇ, ಕಲೆಯಲ್ಲಿ ಶ್ರಮವಹಿಸಿ ಅದರಲ್ಲಿ ಪಾರಂಗತನಾಗಬೇಕೆಂಬ ಕಸಸು ಮೊದಲಿನಿಂದಲೂ ಇತ್ತು. ರಂಗೋಲಿ ಮತ್ತು ಎಕ್ರೆಲಿಕ್ ಪೇಂಟಿಂಗ್ ಪ್ರಾರಂಭಿಸುವ ಪೂರ್ವದಲ್ಲಿ ಸ್ಕೆಚ್ ಪೆನ್‌ನಿಂದ ಚಿತ್ರ ರಚನೆ, ವಾಟರ್ ಕಲರ್ ಪೇಂಟಿಂಗ್ ಮಾಡುತ್ತಿದೆ. ಆದರೆ ಅದರ ಗುಣಮಟ್ಟ ಮನಸ್ಸಿಗೆ ಮುದ ನೀಡುತ್ತಿರಲಿಲ್ಲ. ನಂತರದ ದಿನಗಳಲ್ಲಿ ಅಂತರ್ಜಾಲಗಳಲ್ಲಿ ಎಕ್ರೆಲಿಕ್ ಪೇಂಟ್‌ಗಳ ಕುರಿತು ತಿಳಿದುಕೊಂಡು ಪೇಂಟಿಂಗ್ ಮಾಡಿದಾಗ ತುಂಬಾ ಸಂತೋಷ ನೀಡಿತು. ಹೀಗೆ ಎಲ್ಲಾ ರೀತಿಯ ಟೆಕ್ಚರ್, ಶೇಡಿಂಗ್ ಪ್ರಯೋಗ ಮಾಡಿ ಕರಗತ ಮಾಡಿಕೊಂಡೆ ಎನ್ನುತ್ತಾರೆ ವಿನಾಯಕ.

ಆಸಕ್ತಿಯೇ ಮೊದಲ ಮಾರ್ಗದರ್ಶಕ!
ಈವರೆಗೆ ಯಾವುದೇ ಚಿತ್ರಕಲಾ ಶಿಕ್ಷಕರ ಮಾರ್ಗದರ್ಶನ ಪಡೆಯದೇ ಸ್ವಪರಿಶ್ರಮದಿಂದ ತನ್ನೊಳಗೆ ಹುದುಗಿರುವ ಕಲೆಯನ್ನು ಪೋಷಿಸುತ್ತಾ ‘ರಂಗೋಲಿ ಕಲೆಯ ಏಕಲವ್ಯ’ನಾಗಿ ಗುರುತಿಸಿಕೊಂಡಿದ್ದಾನೆ. ಈ ಕಲೆಗೆ ನನ್ನಲ್ಲಿರುವ ಆಸಕ್ತಿಯೇ ಮೊದಲ ಮಾರ್ಗದರ್ಶಕ ಎನ್ನುವ ಈತ, ಗಣೇಶ ಚತುರ್ಥಿಯ ಸಂದರ್ಭದಲ್ಲಿ ತಂದೆಯ ಮಾರ್ಗದರ್ಶನದಲ್ಲಿ ಗಣೇಶನ ಮೂರ್ತಿಯನ್ನೂ ತಯಾರಿಸಿದ್ದಾನೆ! ಕೇವಲ ಚಿತ್ರಕಲೆ ಮತ್ತು ರಂಗೋಲಿ ಮಾತ್ರವಲ್ಲದೇ, ಇತರ ಕಲೆ, ಕ್ರೀಡೆ, ಸ್ಪರ್ಧೆಗಳಲ್ಲಿಯೂ ಭಾಗವಹಿಸಿ ಬಹುಮುಖ ಪ್ರತಿಭೆಯಾಗಿ ಜನಮನ್ನಣೆ ಗಳಿಸಿದ್ದಾನೆ.

ಊರಿನ ದೇವಸ್ಥಾನಗಳಲ್ಲಿ ವರ್ಷಂಪ್ರತಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಂಗೋಲಿ ಬಿಡಿಸುತ್ತಿದ್ದೆ. ಇದರಿಂದ ದೇವಸ್ಥಾನಕ್ಕೆ ಆಗಮಿಸುವ ಊರಿನ ಜನರಲ್ಲಿ ನನ್ನ ಕಲೆಯ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿತು. ಅಕ್ಕಪಕ್ಕದ ಊರುಗಳ ದೇವಸ್ಥಾನಗಳಲ್ಲಿಯೂ ರಂಗೋಲಿ ರಚಿಸಲು ಅವಕಾಶ ದೊರೆಯಿತು. ಶಾಲಾ-ಕಾಲೇಜುಗಳಲ್ಲಿ ಏರ್ಪಡಿಸುವ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ರಂಗೋಲಿ ಕಲೆಗೆ ಹೆಚ್ಚು ಪ್ರಚಾರ ದೊರೆಯಿತು ಎನ್ನುತ್ತಾರೆ ವಿನಾಯಕ.

ಸಾಧನೆಗೆ ಸಂದ ಪ್ರಶಸ್ತಿ-ಪುರಸ್ಕಾರಗಳು:
ವಿನಾಯಕ ಹೆಬ್ಬಾರ ಅವರ ಚಿತ್ರಗಳು ಹಲವಾರು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿವೆ. ಧರ್ಮಸ್ಥಳದ ಶಾಂತಿವನ ಟ್ರಸ್ಟ್ ನಡೆಸಿದ್ದ ರಾಜ್ಯಮಟ್ಟದ ಅಂಚೆಕುಂಚ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಎರಡನೇ ವಿಶ್ವ ಹವ್ಯಕ ಸಮ್ಮೇಳನದ ಚಿತ್ರಕಲಾ ಪ್ರದರ್ಶನದಲ್ಲಿ ತೃತೀಯ ಸ್ಥಾನ, ಉತ್ತರಕನ್ನಡ ಜಿಲ್ಲಾಮಟ್ಟದ ರಂಗೋಲಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ೨೦೧೭-೧೮ ನೇ ಸಾಲಿನ ಉತ್ತಮ ಚಿತ್ರಕಲಾವಿದ ಪುರಸ್ಕಾರ ಹೀಗೆ ಹಲವಾರು ಪುರಸ್ಕಾರಗಳು ದೊರೆತಿವೆ.

ಕುಮಟಾದ ಶ್ರೀವಿದ್ಯಾಧಿರಾಜ ಪಾಲಿಟೆಕ್ನಿಕ್‌ನಲ್ಲಿ ಎರಡನೇ ವರ್ಷದ ಮೆಕಾನಿಕಲ್ ವ್ಯಾಸಂಗ ಮಾಡುತ್ತಿರುವ ಈತ, ಬೇರೆ ಕಲೆಗೆ ಸಿಗುವಷ್ಟು ಪ್ರಚಾರ ಹಾಗು ಪ್ರಾಶಸ್ತ್ಯ ರಂಗೋಲಿ ಕಲೆಗೆ ಸಿಗುತ್ತಿಲ್ಲ. ರಂಗೋಲಿ ಕಲೆಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಗುವಷ್ಟು ಎತ್ತರಕ್ಕೆ ಕೊಂಡೊಯ್ಯಬೇಕೆಂಬ ಮಹದಾಸೆ ಹೊಂದಿದ್ದಾನೆ. ಉದಯೋನ್ಮುಖ ಕಲಾವಿದನಾಗಿ ಗುರುತಿಸಿಕೊಂಡಿರುವ ಈತನಿಗೆ ಉತ್ತಮ ಗುರುವಿನ ಮಾರ್ಗದರ್ಶನ ದೊರೆತದ್ದೇ ಆದಲ್ಲಿ ಈ ಪ್ರತಿಭೆ ಸಮಾಜಕ್ಕೆ ದೊಡ್ಡ ಆಸ್ತಿಯಾಗಲಿದ್ದಾನೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

Leave a Reply

Your email address will not be published. Required fields are marked *