ಕಲೆ ಎನ್ನುವುದು ಭಾವನೆಗಳು ಅಥವಾ ಅರಿವಿನ ಮೇಲೆ ಪರಿಣಾಮವಾಗುವಂತೆ ಬುದ್ದಿ ಪೂರ್ವಕವಾಗಿ ಜೋಡಿಸಲಾದ ಅಂಶಗಳ ರೂಪ. ಹೀಗೆ ಕಲೆಯಲ್ಲಿ ಬಂಧಿಯಾಗಿ ಕಲಾ ಲೋಕದಲ್ಲಿ ಹೆಜ್ಜೆ ಮೂಡಿಸುತ್ತಿರುವ ಪ್ರತಿಭೆ ಹರ್ಷ ಭಟ್ಟ ಕುಂಠಿಕಾನ.
ಶಿಕಾರಿಪುರದಲ್ಲಿ ವಾಸವಾಗಿರುವ ಹರ್ಷ ಭಟ್ಟ, ಗಣಪತಿ ಭಟ್ ಮತ್ತು ಶಾಲಿನಿ ಭಟ್ ದಂಪತಿಗಳ ಪುತ್ರ.
ಚಿಕ್ಕಂದಿನಿಂದಲೂ ಚಿತ್ರಕಲೆಯ ಕುರಿತು ವ್ಯಾಮೋಹ ಹೊಂದಿದ್ದ ಈ ಪ್ರತಿಭೆ ಇಂದು ತನ್ನ ಸತತ ಪ್ರಯತ್ನದ ಮೂಲಕ ಗಮನ ಸೆಳೆದಿದ್ದಾನೆ.
ಪ್ರಾರಂಭದಲ್ಲಿ ಸ್ವ ಅಧ್ಯಯನದ ಮೂಲಕ ಚಿತ್ರಕಲೆಯನ್ನು ಸಿದ್ಧಿಸಿಕೊಂಡಾ ಈತ ಬಳಿಕ ಕಲಾವಿದ ಚಂದ್ರಶೇಖರ ಅವರ ಮಾರ್ಗದರ್ಶನದಲ್ಲಿ ಇನ್ನಷ್ಟು ಪಳಗಿದರು.
ಅಕ್ರೇಲಿಕ್ ಪೇಂಟ್, ಪೋರ್ಟ್ರೇಟ್, ಪೆನ್ಸಿಲ್ ಆರ್ಟ್, ವಾಟರ್ ಪೇಂಟ್ ಸೇರಿದಂತೆ ವಿವಿಧ ಮಾದರಿಯ ಚಿತ್ರಗಳನ್ನು ರಚಿಸುವಲ್ಲಿ ಹರ್ಷ ಭಟ್ಟ ನಿಸ್ಸೀಮ. ಜೊತೆಗೆ ಕಾಲೇಜಿನ ಕಾರ್ಯಕ್ರಮದಲ್ಲಿ ವೇಗದ ಚಿತ್ರಕಲೆ (ಸ್ಪೀಡ್ ಪೇಂಟಿಂಗ್) ರಚಿಸುವ ಮೂಲಕವೂ ಜನಮನ್ನಣೆ ಪಡೆದಿದ್ದಾರೆ.
ಚಿತ್ರಕಲೆ ಇದೊಂದು ನನ್ನ ಹವ್ಯಾಸ. ಓದಿನ ಜೊತೆಗೆ ಸಮಯ ಮಾಡಿಕೊಂಡು ಚಿತ್ರ ಬಿಡಿಸುವುದೇ ಒಂದು ಖುಷಿ ಎನ್ನುವ ಹರ್ಷ, ತಂದೆ ತಾಯಿಯ ಪ್ರೋತ್ಸಾಹ ನನ್ನನ್ನು ಕಲಾವಿದನನ್ನಾಗಿ ಮಾಡಿದೆ ಎನ್ನುತ್ತಾರೆ.
ಸದ್ಯ ಶಿವಮೊಗ್ಗದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 3ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಒಳ್ಳೆಯ ವೈದ್ಯನಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದಾರೆ.