ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೬

ಅರಿವು-ಹರಿವು
ಅರಿವಿನ ನಿರರ್ಗಳ ಹರಿವಿಗಾಗಿ ಅವಶ್ಯವಾಗಿ ಅವಿಚ್ಛಿನ್ನತೆಯಿಂದ ಮುನ್ನಡೆಯಲೇಬೇಕಾದ ಗುರುಪರಂಪರೆ, ದ್ವಿತೀಯ ಚಿದ್ಬೋಧ ಭಾರತೀಯತಿಗಳಿಂದ  ಯೋಗ್ಯ ಅರಿವಿನಮೂರ್ತಿಗೆ ಪಟ್ಟಗೈದು ಶ್ರೀರಾಘವೇಶ್ವರಭಾರತೀ ಎಂಬ ಶುಭಾಭಿಧಾನವಗೈದಿತು. ಇವರೇ ಪರಂಪರೆಯ ಪ್ರಥಮ ಶ್ರೀರಾಘವೇಶ್ವರಯತಿಗಳು. ಶ್ರೀಗಳು ತಪೋಧನರೂ ವಾಗ್ಮಿಗಳೂ ಅಲ್ಲದೇ ಖಗೋಳಶಾಸ್ತ್ರಜ್ಞರೂ ಆಗಿದ್ದರೆಂಬುದು ಇತಿಹಾಸದ ಉಲ್ಲೇಖ. ಪೂಜ್ಯರ ಕಾಲ ಶಾಲಿವಾಹನ ಶಕವರ್ಷ೧೩೮೬(ಕ್ರಿ.ಶ.೧೪೮೬).ಆ ಕಾಲದ ಪ್ರಸಿದ್ಧ ವಿದ್ಯಾಕೇಂದ್ರವಾಗಿದ್ದ ವಾರಣಾಸಿಯಲ್ಲಿ ಸಾಕಷ್ಟು ಕಾಲವುಳಿದು ಅಧ್ಯಯನ ಮಾಡಿದ ಪೂಜ್ಯರು ಬರುವಾಗ ಕಾಶಿಯಿಂದ ಒಂದುಸಹಸ್ರ ಶಾಲಿಗ್ರಾಮಗಳನ್ನು ತಂದು ರಘೂತ್ತಮ ಮಠದಲ್ಲಿ ಸ್ಥಾಪಿಸಿದರು. ಇದನ್ನು ಗುರುಕೃಪಾತರಂಗಿಣಿ ಉಲ್ಲೇಖಿಸುತ್ತದೆ..
“ಬಾಲ್ಯೇ ಯೋಸಾವಲಭತ ಗುರೋಃ ಪಾಣಿನೀಯೇ ಕಣಾದೇ
ವೈಯಾಸಿಕ್ಯಾಮಥ ನಿಪುಣತಾಂ ಜೈಮಿನೀಯೇ ಚ ಕಾಶ್ಯಾಮ್|
ವಿಷ್ಣೋರಕ್ಷ್ಣಾಮಿವ ಸೋ ಜಗತೀಂ ದರ್ಶಯಿಷ್ಯನ್ ಸಹಸ್ರಂ
ಶಾಲಗ್ರಾವ್ಣಾಂ ದಶಶತಮಸಾವಾನಯದ್ವಾರಣಾಸ್ಯಾಃ||”
 ಅರಿವಿಗೆ ಮನ ತುಡಿಯುವಂತಾಗಬೇಕಾದರೆ ಅದರಲ್ಲಿ ಆಸಕ್ತಿ, ಶ್ರದ್ಧೆ ಎರಡೂ ಬೇಕಲ್ಲವೇ??ನಮ್ಮಲ್ಲೇ ಹುದುಗಿರುವ ಆ ಅಮೂರ್ತ ಸ್ವರೂಪದ ಸಾಕ್ಷಾತ್ಕಾರಕ್ಕೆ ಅನುಕೂಲವಾಗುವಂತೆ ಶ್ರದ್ಧಾಕೇಂದ್ರವಾಗಿ ಏನಾದರೊಂದು ಶಕ್ತಿರೂಪ ಬೇಕೇಬೇಕಲ್ಲವೇ.. ಅದಕ್ಕಾಗಿ ನಮ್ಮಂತಹ ಸಾಮಾನ್ಯರಿಗೂ ಆತ್ಮಸಾಧನೆಗಾಗಿ ಆಕರ್ಷಣಾಕೇಂದ್ರವೊಂದನ್ನು ತೋರಿಸಲು ಅರಿವೇ ತಾವಾಗಿದ್ದ ಗುರುವು ಶ್ರಮಿಸಿಸಿದನ್ನು ಎಲ್ಲೆಲ್ಲೂ ಮನಗಾಣಬಹುದು. ಶಾಂಕರತತ್ವದ ಪ್ರಸಾರವನ್ನು ಮಾಡುತ್ತಾ ಜನರನ್ನು ಧರ್ಮಾವಲಂಬಿಗಳನ್ನಾಗಿ ರೂಪಿಸುತ್ತಿದ್ದ ಪೂಜ್ಯ ಶ್ರೀಗಳವರ ತಪಃಪ್ರಭಾವವನ್ನು, ಶರಣಾಗತ ಪರಾಯಣತೆಯನ್ನು ತಿಳಿದ ಆಪತ್ಕಾಲದಲ್ಲಿ ಸಿಲುಕಿದ್ದ ಇಮ್ಮಡಿ ದೇವರಾಯನು ಶ್ರೀಗಳನ್ನು ವಿಜಯನಗರಕ್ಕೆ ಬರಮಾಡಿಕೊಂಡು ಹಿಂದಿನಿಂದಲೂ ಇದ್ದ ರಾಜಲಾಂಛನಗಳ ಬಗ್ಗೆ ಕೊಟ್ಟ ತಾಮ್ರಶಾಸನವನ್ನು ಸ್ಥಿರೀಕರಿಸಿದ್ದಲ್ಲದೇ ಸ್ವತಃ ಹಂಪೆಯ ವಿರೂಪಾಕ್ಷ ದೇವರ ಸನ್ನಿಧಿಯಲ್ಲಿ ಪಂಚದೀವಟಿಕದ್ವಯ ರಜತಾಂದೋಳಿಕೋಪರಿ ಪಂಚಕಲಶಗಳ ರಾಜಮರ್ಯಾದೆಯನ್ನು ಸಮರ್ಪಿಸಿದನು. ಪೂಜ್ಯ ಶ್ರೀಗಳ ಅನುಗ್ರಹದಿಂದ ಕಷ್ಟದ ಸನ್ನಿವೇಶದಿಂದ ಪಾರಾಗಿದ್ದುದಕ್ಕೆ ಸದಾ ಕೃತಜ್ಞಿಯಾಗಿದ್ದ ರಾಜಾ ಇಮ್ಮಡಿ ದೇವರಾಯನು ತನ್ನ ಧರ್ಮಶಾಸನದಲ್ಲಿಯೇ ಮಹಾಬಲೇಶ್ವರನ ಸನ್ನಿಧಾನಕ್ಕೆ ಸಿಂಹಾಸನ ಕಿರೀಟ ಆಂದೋಳಿಕ ಶ್ವೇತಚ್ಛತ್ರ ಉಭಯಚಾಮರ ಮ(ಕ)ರತೋರಣವ್ಯಜನ ಪತಾಕಾದಿ ಚಿಹ್ನೆ ತಾಳಶಂಖಚಕ್ರಾದಿ ವಾದ್ಯ ಮೊದಲಾದವುಗಳನ್ನು ಕೊಟ್ಟಿದುದನ್ನು ಉಲ್ಲೇಖಿಸಿದ್ದಾನೆ…ಇವೆಲ್ಲವೂ ಜ್ಞಾನದ ಮಹತಿಯನ್ನು ಮತ್ತು ಅರಿವಿಗೇ ಎಲ್ಲೆಲ್ಲೂ ಮನ್ನಣೆಯೆಂಬುದನ್ನು ಹಿಡಿದೆತ್ತಿ ತೋರಿಸುತ್ತದೆ. ವೀರಾದಿವೀರಶೂರರೂ ದೇಶ ಮುನ್ನಡೆಸುವ ರಾಜರಾದರೂ ಅರಿವಿನ ಪೂರ್ಣಾನಂದಕ್ಕಾಗಿಯೇ ತುಡಿದು ಧರ್ಮಮಾರ್ಗದಲ್ಲಿ ನಡೆಯಲೋಸ್ಕರ ಅದನ್ನು ತೋರುವ ಗುರುವಿಗೆ ಶರಣಾಗತಿಯನ್ನು ಹೊಂದಿ ಅವರ ನಿಯಮಾವಳಿಯ ಜ್ಞಾನಪ್ರೇಮದ ಚೌಕಟ್ಟಿನೊಳಗೆ ಬಂಧಿಯಾಗಲೇಬೇಕು..!
ಪರಮಪೂಜ್ಯ ಶ್ರೀಗಳ ವಿದ್ಯಾವೈಭವ ಹಾಗೂ ಮಹಾತಪಸ್ಸಂಪನ್ನತೆಯ ಬಗ್ಗೆ ಹಲವಾರು ಶಾಸನಗಳಲ್ಲಿ ಉಲ್ಲೇಖವಿದ್ದು ಅವರ ಬಗೆಗೆ ಸಕಲಕಲಾವಿದ, ಮಹಾಭಾಷ್ಯಾದಿಸಚ್ಛಾಸ್ತ್ರಸಂಪನ್ನ, ಶ್ರೀಮದ್ರಾಮಮಹಾಮಂತ್ರಮನನಾಸಕ್ತಚೇತಃ, ಶ್ರೀರಾಮಚಂದ್ರದೇವಾಂಘ್ರಿಪದ್ಮಪೂಜಾಪರ ಮೊದಲಾದ ಅನೇಕ ವಿಶೇಷತೆಗಳಿಂದ ಪೂಜ್ಯರು ಪ್ರಶಂಸಿತರಾಗಿರುವುದನ್ನು ನಾವು ಕಾಣಬಹುದಾಗಿದೆ. ಇದಲ್ಲದೇ ಇಮ್ಮಡಿ ಪ್ರೌಢ ದೇವರಾಯನು ಪೂಜ್ಯ ಶ್ರೀಗಳಿಗೆ ರಾಮದೇವರ ಅಮೃತಪಡಿ ಹಾಗೂ ಸರ್ವಮಾನ್ಯದ ಅಗ್ರಹಾರಕ್ಕಾಗಿ ದಕ್ಷಿಣ ಕನ್ನಡದ ಹಾಲಾಡಿ, ಉಪ್ಪುಂದ, ದೀವರ ಹೊಸೂರು ಮೊದಲಾದ ಅನೇಕ ಗ್ರಾಮಗಳ ಹುಟ್ಟುವಳಿಯನ್ನು ಉಂಬಳಿ ನೀಡಿ ಧರ್ಮಶಾಸನ ಮಾಡಿದ್ದನ್ನು ಶಾಸನವು ಉಲ್ಲೇಖಿಸಿದ್ದು ಈ ವಿಶೇಷ ಘಟನೆಯನ್ನು ಗುರುಕೃಪಾತರಂಗಿಣಿ ಕಾವ್ಯವು ಅದ್ಭುತವಾಗಿ ದಾಖಲಿಸಿದೆ –
“ಭೂಪಃ ಸೋಯಂ ಕನಕಕಲಶೀಪಂಚಕೈಃ ಶೋಭಮಾನಂ
ಭವ್ಯಂ ಹ್ಯಾಂದೋಲನಮಥಸಮಂ ಪಂಚಕೈರ್ದೀಪಿಕಾನಾಮ್|
ಪ್ರಾದಾದ್ಭಕ್ತ್ಯಾ ಕಿಮು ನಿಜಮಹೌದಾರ್ಯಸಾಮ್ರಾಜ್ಯಲಕ್ಷ್ಮೀಂ
ತಸ್ಮೈ ದೇವದ್ವಿಜಗುರುಸಮಾರಾಧಕಃ ಸ್ವಾಗತಾರ್ಥಮ್||”
 ರಘೂತ್ತಮ ಪೀಠದ ಹನ್ನೊಂದನೆಯ ಪೀಠಾಧಿಪತಿಗಳಾದ ಮೊದಲನೆಯ ಪೂಜ್ಯ ರಾಘವೇಶ್ವರ ಶ್ರೀಗಳ ಹೆಸರಿನಲ್ಲಿರುವ ಒಂದು ವೈಶಿಷ್ಟ್ಯವೆಂದರೆ ರಘೂತ್ತಮ ಮಠದ ಆರಾಧ್ಯ ದೇವರಾದ ಶ್ರೀರಾಮಚಂದ್ರ ಮತ್ತು ಶ್ರೀ ಚಂದ್ರಮೌಳೀಶ್ವರ ಇವರ ಮಹಿಮಾನಾಮಗಳು ಸುಸಮ್ಮಿಲನಗೊಂಡು ಪ್ರಥಮವಾಗಿ ಇವರಿಗೆ ಅಭಿಧಾನಗೊಂಡಿದುದು. ಇಂತಹ ಮೈದಳೆದು ಬಂದ ಜ್ಞಾನಮೂರ್ತಿ ಈ  ಕಾಯದ ಅಂತ್ಯಕಾಲದಲ್ಲಿ ತಮ್ಮ ಆತ್ಮವಿಸ್ತಾರವನ್ನು ಕೈಗೊಂಡು ಶ್ರೀ ಶ್ರೀ ರಾಮಚಂದ್ರ ಭಾರತೀ ಮಹಾಸ್ವಾಮಿಗಳ ರೂಪದಲ್ಲಿ ಜ್ಞಾನ ಪರಂಪರೆಯನ್ನು ಮುಂದುವರೆಸಿದರು… ಇಂತಹ ಮಹಾಮಹಿಮರಿಗೆ ನಮ್ಮ ನಮನಗಳನ್ನರ್ಪಿಸುತ್ತಾ ಈ ಸಂಚಿಕೆಯನ್ನು ಸಮಾಪ್ತಿಗೊಳಿಸುತ್ತಿದ್ದೇವೆ.
Note: ಶಾಸನಗಳ ಉಲ್ಲೇಖ ಶ್ರೀರಾಮಚಂದ್ರಾಪುರ ಮಠದ ರಾಜಮಾನ್ಯ ಇತಿಹಾಸ ವೈಭವ ಸಂಪುಟ ೧

Leave a Reply

Your email address will not be published. Required fields are marked *