ದೈತೋಟದ ಶಂಕರನಾರಾಯಣ ಭಟ್, ವೆಂಕಟೇಶ್ವರಿ ಅಮ್ಮ ಅವರ ಪುತ್ರಿಯಾದ ಶಾರದಾ ಅವರಿಗೆ ಬಾಲ್ಯದಿಂದಲೇ ಹಸುಕರುಗಳೆಂದರೆ ಅತ್ಯಂತ ಪ್ರಿಯ.
ತವರುಮನೆಯಲ್ಲಿ ಏಳೆಂಟು ಹಸುಗಳ ಒಡನಾಟದಲ್ಲಿ ಬೆಳೆದ ಶಾರದಾ ಅವರಿಗೆ ಮದುವೆಯ ನಂತರ ಗೋವುಗಳ ಒಡನಾಟ ಕಡಿಮೆಯಾಗಿತ್ತು. ಮುಂದೆ ಶ್ರೀ ಸಂಸ್ಥಾನದವರ ಪ್ರೇರಣೆಯಿಂದ ಗೋಸೇವೆಗೆ ಮನಮಾಡಿದ ಶಾರದಾ ಅವರಿಗೆ ಶ್ರೀಗುರುಗಳ ವಚನಗಳೇ ಬದುಕಿಗೆ ಸ್ಪೂರ್ತಿ. ಮನದ ದುಗುಡಗಳನ್ನು ಅರಿಕೆ ಮಾಡುವುದಕ್ಕೂ ಮುನ್ನವೇ ಅರಿತು ಸಾಂತ್ವನದ ನುಡಿಗಳ ಮೂಲಕ ಮಂತ್ರಾಕ್ಷತೆ ನೀಡಿ ಹರಸಿದ ಸದ್ಗುರು ಚರಣಗಳಲ್ಲಿ ಅಪಾರ ನಂಬಿಕೆ, ಶ್ರದ್ಧೆ.
” ತಾಯಿಯನ್ನು ಕಳೆದುಕೊಂಡಾಗ ಮನಸ್ಸಿಗೆ ಅತ್ಯಂತ ನೋವಾಗಿತ್ತು. ಆದರೆ ಶ್ರೀ ಗುರುಗಳ ಅಮೃತ ವಚನಗಳನ್ನು ನೆನಪಿಸಿಕೊಂಡಾಗ ಉಕ್ಕಿ ಬಂದ ಕಣ್ಣೀರು ತಡೆಯಿತು. ನನಗೆ ಹಿರಿಯರಂತೆ ದಾರಿದೀಪವಾಗುವವರು ನಮ್ಮ ಗುರುಗಳು ಎಂದು ಹೃದಯ ಹೇಳಿದಾಗ ಆ ಕ್ಷಣದಲ್ಲಿ ಮನಸ್ಸು ಶಾಂತವಾಗಿ, ಶ್ರೀ ಮಠದ ಸೇವೆಯನ್ನು ಇನ್ನಷ್ಟು ಮಾಡಬೇಕೆಂದು ತೀರ್ಮಾನಿಸಿದೆ ” ಎನ್ನುವ ಇವರು ” ಗೋಸೇವೆ ಮಾಡು ” ಎಂದು ಶ್ರೀ ಗುರುಗಳು ಹರಸಿದ್ದನ್ನು ಸ್ಮರಿಸಿಕೊಳ್ಳುತ್ತಾರೆ.
ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಂಡು ಸುಮಾರು ಅರುವತ್ತಕ್ಕೂ ಹೆಚ್ಚು ಮನೆಗಳನ್ನು ಸಂಪರ್ಕ ಮಾಡಿದ ಇವರಿಗೆ ಪ್ರತೀ ಮನೆಯಲ್ಲಿಯೂ ಗೋಸೇವೆಗೆ ಎಂದಾಗ ಮಾತೆಯರೇ ಸ್ವತಃ ಮುಂದೆ ಬಂದು ಸಹಕಾರ ನೀಡಿದ್ದಾರೆ. ದೇಶೀಯ ಹಸುಗಳ ಮಹತ್ವವನ್ನು ತಿಳಿದವರು ಗೋಮಾತೆಯ ಸೇವೆಗಾಗಿ ಕೈ ಜೋಡಿಸಲು ಆಸಕ್ತಿಯಿಂದ ಮುಂದೆ ಬಂದಿದ್ದಾರೆ ಎಂಬ ನೆಮ್ಮದಿಯಿದೆ.
ಪತಿ ಕೃಷ್ಣ ಪರಮೇಶ್ವರ ಭಟ್ ಮುತ್ತಿಗೆ ಹಾಗೂ ಈರ್ವರು ಮಕ್ಕಳ ಸಹಕಾರವೇ ತಮ್ಮ ಗೋಸೇವೆಗೆ ಸ್ಪೂರ್ತಿ ಎನ್ನುವ ಇವರಿಗೆ ತಮ್ಮ ಬಂಧುಗಳೊಬ್ಬರು ಶ್ರೀ ಗುರು ಕಾರುಣ್ಯದಿಂದ ತಮ್ಮ ಅನಾರೋಗ್ಯ ನಿವಾರಣೆಯಾದ ಕಾರಣ ಎರಡು ಹಸುಗಳ ಸಂಪೂರ್ಣ ಮೊತ್ತವನ್ನು ನೀಡಿ
” ಗೋಮಾತೆಯ ಕೃಪೆಯಿಂದ ನಾನು ಬದುಕಿ ಉಳಿದೆ” ಎಂದು ನುಡಿದುದು ಬದುಕಿನಲ್ಲಿ ಮರೆಯಲಾರದ ಅನುಭವ .
ಗೋವು, ಪ್ರಕೃತಿ, ಮಕ್ಕಳಿಗಾಗಿ ಕಥೆ, ಕವನ ಬರೆಯುವ ಹವ್ಯಾಸವಿರುವ ಶಾರದಾ ಕೃಷ್ಣ ಅವರು ಹೊಸತಾಗಿ ಯಾರನ್ನು ಕಂಡರೂ ಗೋಸೇವೆಯ ಅವಕಾಶ ಮತ್ತು ಮಹತ್ವದ ಬಗ್ಗೆ ತಿಳಿಸುವ ಮೂಲಕ ಅವರನ್ನು ಗೋಮಾತೆಯ ಸೇವೆಗೆ ಕೈ ಜೋಡಿಸುವಂತೆ ಪ್ರೇರೇಪಿಸುತ್ತಾರೆ.
ಇತ್ತೀಚೆಗೆ ಕೊರೋನಾ ಹಾವಳಿಯಿಂದ ಹಿಂದಿನಂತೆ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲಾಗುವುದಿಲ್ಲ ಎಂಬ ಬೇಸರವಿದ್ದರೂ ಮುಂದೊಂದು ದಿನ ಈ ವಾತಾವರಣ ಬದಲಾಗಿ ಮತ್ತೊಮ್ಮೆ ಶ್ರೀಮಠದ ಸೇವೆಯಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸಲು ಸಾಧ್ಯವಾಗುವುದು ಎಂಬ ಭರವಸೆಯಿದೆ.