” ಗೋಸೇವೆಗೆ ಪ್ರೇರಣೆ ನನ್ನ ಅತ್ತೆ ” : ಶ್ವೇತಾ ಗಿರೀಶ್, ಕಲ್ಲಕಟ್ಟ

ಮಾತೃತ್ವಮ್

” ನಮ್ಮ ಮನೆಯಲ್ಲಿ ಅನೇಕ ಗೋವುಗಳಿವೆ. ದೇಶೀ ಗೋತಳಿಗಳ ಮಹತ್ವವನ್ನು ಸರಿಯಾಗಿ ತಿಳಿಸಿದವರು ನಮ್ಮ ಅತ್ತೆ. ಗೋಜನ್ಯ ಉತ್ಪನ್ನಗಳ ಮಹತ್ವವನ್ನು ತಿಳಿಸಿ , ಕಾಮಧೇನುವಿನ ರಕ್ಷಣೆಯ ಕಾರ್ಯಕ್ಕೆ ಕೈ ಜೋಡಿಸುವ ಮಾತೃತ್ವಮ್ ಯೋಜನೆಯಲ್ಲಿ ಮಾಸದ ಮಾತೆಯಾಗಿ ಸೇವೆ ಸಲ್ಲಿಸಲು ನನ್ನ ಅತ್ತೆಯವರೇ ಪ್ರೇರಣೆ ” ಎಂದವರು ಮಂಗಳೂರು ಮಂಡಲ ಉಡುಪಿ ವಲಯ ನಿವಾಸಿಗಳಾಗಿರುವ ಶ್ವೇತಾ ಗಿರೀಶ್ ಕಲ್ಲಕಟ್ಟ.

ಮೂಲತಃ ಮುಳ್ಳೇರಿಯ ಮಂಡಲದ ಪೆರಡಾಲ ವಲಯದ ಕಲ್ಲಕಟ್ಟ ನಿವಾಸಿಗಳಾಗಿರುವ ಗೋಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ವಿಜಯಲಕ್ಷ್ಮಿ ಕಲ್ಲಕಟ್ಟ ಹಾಗೂ ನಾರಾಯಣ ಭಟ್ ಅವರ ಪುತ್ರ ಗಿರೀಶರ ಪತ್ನಿಯಾದ ಶ್ವೇತಾ ಇಂಜಿನಿಯರಿಂಗ್ ಪದವೀಧರೆ ಹಾಗೂ ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

ಕುಳಮರ್ವ ಕೇಶವ ಭಟ್, ಶೈಲಾ ದಂಪತಿಗಳ ಪುತ್ರಿಯಾದ ಇವರು ಕೆಲವು ವರ್ಷಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡವರು. ಈ ಹಿಂದೆ ಉಡುಪಿ ವಲಯದ ಬಿಂದು ಸಿಂಧು ವಿಭಾಗದಲ್ಲಿ ಸೇವೆ ಸಲ್ಲಿಸಿದ ಶ್ವೇತಾ ಪ್ರಸ್ತುತ ಎರಡನೇ ಅವಧಿಗೆ ಉಡುಪಿ ವಲಯದ ಕೋಶಾಧ್ಯಕ್ಷೆಯಾಗಿದ್ದಾರೆ.

” ಮಕ್ಕಳಾದ ಆದ್ಯಾ , ಆರಾಧ್ಯಾ ಇಬ್ಬರಿಗೂ ಗೋಮಾತೆಯ ಮೇಲೆ ತುಂಬಾ ಪ್ರೀತಿ. ಆದರೆ ನಮಗೆ ಇಲ್ಲಿ ಹಸುಗಳನ್ನು ಸಾಕುವುದು ಕಷ್ಟ. ಊರಿಗೆ ಹೋದಾಗಲೆಲ್ಲ‌ ಹಟ್ಟಿಯಲ್ಲಿ ಹಸುಕರುಗಳೊಡನೆ ಓಡಾಡುವ ಮಕ್ಕಳ ಗೋಪ್ರೀತಿ ಕಂಡು ಖುಷಿಯಾಗುತ್ತಿದೆ. ನಮಗೆ ಪೇಟೆಯಲ್ಲಿ ಗೋಸಾಕಣಿಗೆ ಕಷ್ಟ ಎಂಬ ಕಾರಣಕ್ಕಾಗಿ ಒಂದು ವರ್ಷದ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ನಾವೇ ಭರಿಸಿದ್ದೇವೆ. ಇನ್ನೊಂದು ವರ್ಷದ ಮೊತ್ತವು ಆತ್ಮೀಯರು ಹಾಗೂ ಗೋಪ್ರೇಮಿಗಳ ಸಹಕಾರದಿಂದ ಸಂಗ್ರಹವಾಗಿದೆ. ಈಗಲೂ ಪ್ರತೀ ತಿಂಗಳು ಗೋಮಾತೆಗಾಗಿ ಕಾಣಿಕೆ ತೆಗೆದಿರಿಸುತ್ತೇವೆ ” ಎನ್ನುವ ಶ್ವೇತಾಗೆ ಕೃಷಿ ಹಾಗೂ ಓದಿನಲ್ಲಿ ಆಸಕ್ತಿಯಿದೆ.

ಶ್ರೀಮಠದ ಸೇವೆ ಹಾಗೂ ಗೋಸೇವೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವ ಹಂಬಲವಿರುವ ಶ್ವೇತಾಗೆ ಈ ಕಾರ್ಯಕ್ಕೆ ಮನೆಯವರೆಲ್ಲರ ಸಂಪೂರ್ಣ ಸಹಕಾರವಿದೆ.

ಪ್ರಸನ್ನಾ ವಿ ಚೆಕ್ಕೆಮನೆ

Leave a Reply

Your email address will not be published. Required fields are marked *