ಶ್ರೀಗುರು ಕಾರುಣ್ಯದಿಂದ ದೊರಕಿದ ಮರುಜನ್ಮವಿದು ” : ಲಕ್ಷ್ಮೀ ಮಂಜುನಾಥ, ತುಮಕೂರು

ಮಾತೃತ್ವಮ್

” ಪೂರ್ವ ಜನ್ಮದ ಸುಕೃತದಿಂದ ಶ್ರೀಮಠದ ಸಂಪರ್ಕಕ್ಕೆ ಬಂದೆವು, ಶ್ರೀಗುರುಗಳ ಚರಣ ಸೇವಾ ಸೌಭಾಗ್ಯವೂ ಒದಗಿಬಂತು. ಇತ್ತೀಚೆಗಂತೂ ಕೊರೋನಾ ಬಂದಾಗ ಶ್ರೀಗುರುಗಳ ಚರಣಕ್ಕೆ ಶರಣಾಗಿ ಗೋಸೇವೆ, ಶ್ರೀಮಠದ ಸೇವೆಗಾಗಿಯೇ ಮರುಜನ್ಮ ಪಡೆದಂತೆ ಬದುಕಿ ಬಂದೆ, ನನ್ನ ಮನದ ಭಾವನೆಗಳನ್ನೆಲ್ಲ ಹೇಳಲು ಪದಗಳೇ ಸಾಲದು, ಅಕ್ಷರ ರೂಪ ನೀಡಲೂ ಅಸಾಧ್ಯ, ಏನಿದ್ದರೂ ಶ್ರೀಗುರುಗಳ ಕರುಣೆ, ಆಶೀರ್ವಾದ ,ಅದುವೇ ನಮ್ಮ ಬದುಕಿನ ಶ್ರೀರಕ್ಷೆ ” ಎಂದು ಭಾವಪೂರ್ಣವಾಗಿ ನುಡಿಯುವವರು ತುಮಕೂರಿನ ಲಕ್ಷ್ಮೀ ಮಂಜುನಾಥ .

ಶೃಂಗೇರಿಯ ನಾಗಭೂಷಣ ಭಟ್ ಹಾಗೂ ಶಾರದಮ್ಮ ಅವರ ಪುತ್ರಿಯಾದ ಲಕ್ಷ್ಮೀ ತುಮಕೂರಿನ ಮಂಜುನಾಥ ಅವರ ಪತ್ನಿ. ಮೂಲತಃ ಶ್ರೀಮಠದ ಶಿಷ್ಯರಲ್ಲದ ಇವರು ಶ್ರೀಮಠದ ಸಂಪರ್ಕಕ್ಕೆ ಬರಲು ಕಾರಣವಾದ ಘಟನೆಯನ್ನು ಹೀಗೆ ನೆನಪಿಸಿಕೊಳ್ಳುತ್ತಾರೆ.

” ತುಮಕೂರಿನ ಅಂಗಡಿಯೊಂದಕ್ಕೆ ಹೋಗಿದ್ದಾಗ ಅಲ್ಲಿ ಇರಿಸಿದ ಹಸುವಿನ ಚಿತ್ರದ ಕ್ಯಾಲೆಂಡರ್ ನೋಡಿ ಅದು ಬೇಕೆಂದು ತುಂಬಾ ಆಸೆಯಾಯಿತು. ಅಂಗಡಿಯವರಲ್ಲಿ ಕೇಳಿದಾಗ
‘ ಇದು ನಮಗೆ ಬೇಕು, ಇನ್ನೊಂದು ಕ್ಯಾಲೆಂಡರ್ ನಮ್ಮಲ್ಲಿ ಇಲ್ಲ ‘ ಎಂದರು. ಯಾಕೋ ಆ ಕ್ಯಾಲೆಂಡರ್ ಪಡೆಯಬೇಕೆಂಬ ಆಸೆ ತೀವ್ರವಾಗಿತ್ತು. ನನ್ನ ಮನದ ಇಚ್ಛೆ ಅರಿತವನಂತೆ ಅಲ್ಲಿ ಕೆಲಸ ಮಾಡುವ ಹುಡುಗನೊಬ್ಬ ತಾನು ತೆಗೆದಿರಿಸಿದ ಕ್ಯಾಲೆಂಡರನ್ನು ಕೊಟ್ಟಾಗ ನಿಜಕ್ಕೂ ಸಾಮ್ರಾಜ್ಯ ಗೆದ್ದಷ್ಟು ಖುಷಿ ಆಗಿತ್ತು. ಆ ಹಸುವಿನ ಚಿತ್ರ ಅಷ್ಟು ಸುಂದರವಾಗಿತ್ತು.‌ ಆ ಕ್ಯಾಲೆಂಡರ್ ನಲ್ಲಿ ಶ್ರೀಗುರುಗಳ ಸಣ್ಣ ಭಾವಚಿತ್ರವೂ ಇತ್ತು. ಅದನ್ನು ಮನೆಗೆ ತಂದು ನಮ್ಮ ಬಾಗಿಲಿಗೆ ಅಂಟಿಸಿದೆ. ಮನಸ್ಸು ಯಾವುದೋ ಒಂದು ಒಳಿತಿನ ಅನ್ವೇಷಣೆಯಲ್ಲಿರುವಾಗಲೇ ಅದೊಂದು ದಿನ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳು ನಡೆಸಿಕೊಡುವ ಶ್ರೀರಾಮ ಕಥಾ ಕಾರ್ಯಕ್ರಮ ಶ್ರೀ ಶಂಕರ ಟಿವಿಯಲ್ಲಿ ಪ್ರಸಾರವಾಗುತ್ತಿರುವುದನ್ನು ಕಂಡೆ. ಅವರನ್ನು ಕಂಡಾಗ ಇವರೇ ಕ್ಯಾಲೆಂಡರ್ ನಲ್ಲಿ ಇರುವ ಸ್ವಾಮೀಜಿಗಳು ಎಂದು ಗುರುತಿಸಿ ಕೂಡಲೇ ಕ್ಯಾಲೆಂಡರ್ ನಲ್ಲಿರುವ ಪೋನ್ ನಂಬರ್ ಗೆ ಕಾಲ್ ಮಾಡಿದೆ. ಶ್ರೀಗಳವರು ಬೆಂಗಳೂರಿನಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಯಿತು. ಮರುದಿನವೇ ಮನೆಯವರ ಜೊತೆ ಬೆಂಗಳೂರಿಗೆ ತೆರಳಿದೆ. ಮಂತ್ರಾಕ್ಷತೆ ಸ್ವೀಕರಿಸುವ ಸಂದರ್ಭದಲ್ಲಿ ಸ್ವಾಮೀಜಿಯವರು ಆತ್ಮೀಯತೆಯಿಂದ ಮಾತನಾಡಿಸಿದರು.‌ ನಾನು ಜನ್ಮಾಂತರಗಳಿಂದ ಅರಸುವ ಗುರುಗಳು ಇವರೇ ಎಂದು ಮನಸ್ಸು ಹೇಳಿತು. ಅಂದಿನಿಂದ ಇಂದಿನವರೆಗೂ ಹವ್ಯಕ ಸಮಾಜದವರು ನೀಡುವಂತೆ ದೀಪ ಕಾಣಿಕೆ ನೀಡುತ್ತಿದ್ದೇವೆ. ಮುಷ್ಟಿ ಭಿಕ್ಷೆ, ಬಿಂದು ಸಿಂಧು ಸೇರಿದಂತೆ ಶ್ರೀಮಠದ ಎಲ್ಲಾ ಯೋಜನೆಗಳಲ್ಲೂ ಸಾಧ್ಯವಾದಷ್ಟು ರೀತಿಯಲ್ಲಿ ಕೈ ಜೋಡಿಸುತ್ತಿದ್ದೇವೆ ” ಎನ್ನುವ ಲಕ್ಷ್ಮೀ ಮಂಜುನಾಥ ಅವರಿಗೆ ಶ್ರೀಗುರು ಭಿಕ್ಷಾ ಸೇವೆಯ ಅವಕಾಶವೂ ಒದಗಿಬಂದಿದೆ. ಒಂದು ದಿನದ ಶ್ರೀರಾಮಕಥೆಯ ಪ್ರಾಯೋಜಕತ್ವವನ್ನು ವಹಿಸಿದ ಇವರು ಅಭಯಾಕ್ಷರ ಅಭಿಯಾನದಲ್ಲಿ ಪಾಲ್ಗೊಂಡವರು. ಗೋಮಾತೆಯ ರಕ್ಷಣೆಗಾಗಿ ರಕ್ತಾಕ್ಷರ ಸಹಿಯನ್ನು ನೀಡಿದವರು.

” ನಮ್ಮ ಜೀವನದ ಯಾವುದೇ ಮಹತ್ವದ ತೀರ್ಮಾನವನ್ನು ಶ್ರೀಗುರುಗಳ ಆಶೀರ್ವಾದ ಪಡೆದೇ ಮುಂದುವರಿಸುವ ನಮಗೆ ಶ್ರೀಗಳು ಒಂದು ಬಾರಿ ನಮ್ಮ ನಿವಾಸಕ್ಕೆ ಬಂದಿದ್ದು ಜೀವನದಲ್ಲಿ ಮರೆಯಲಾರದ ಕ್ಷಣ.‌ ಪ್ರತಿ ದಿನವು ಶ್ರೀಗುರುಗಳ ಪ್ರವಚನ ಕೇಳುತ್ತಿರುತ್ತೇನೆ.‌ ಪ್ರತೀ ಬಾರಿ ಶ್ರೀಮಠಕ್ಕೆ ಬಂದಾಗಲೂ ನಮ್ಮ ನಂಬಿಕೆ, ಶ್ರದ್ಧೆ ಇನ್ನಷ್ಟು ಹೆಚ್ಚುವಂತಹ ಅನುಭವಗಳೇ ಆಗುತ್ತಿವೆ. ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳುವುದೇ ವಿಶೇಷ ಅನುಭವ ” ಎಂದು ಹೇಳುವ ಇವರು ಸಾವಿರದ ಸುರಭಿಯ ಮೂಲಕ ಲಕ್ಷ ಭಾಗಿನಿಯಾಗಿ ಶ್ರೀಗಳಿಂದ ಬಾಗಿನ ಸ್ವೀಕರಿಸಿದ್ದಾರೆ. ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿ ಸೇವೆ ಮುಂದುವರಿಸುತ್ತಿರುವ ಲಕ್ಷ್ಮೀ ಮಂಜುನಾಥ ಅವರ ಕುಟುಂಬದ ಎಲ್ಲಾ ಸದಸ್ಯರು ಶ್ರೀಮಠದ ವಿವಿಧ ಯೋಜನೆಗಳಿಗೆ ಸಹಕಾರ ನೀಡುತ್ತಿದ್ದಾರೆ.

” ನನಗೆ ಸಿಕ್ಕಿದ ಅರಶಿನ ಕುಂಕುಮದ ಹಣವನ್ನೂ ನಾನು ಗೋಮಾತೆಯ ಸೇವೆಗಾಗಿ ಮೀಸಲಿಡುತ್ತಿದ್ದೇನೆ. ಮಗಳು, ಅಳಿಯ,ಮಗ, ನಮ್ಮವರು ಎಲ್ಲರೂ ಗೋಸ್ವರ್ಗಕ್ಕೆ, ವಿ ವಿ ವಿ.ಗೆ ಸಮರ್ಪಣೆ ಮಾಡಿದ್ದಾರೆ. ಶ್ರೀಚರಣ ಸೇವೆಯೇ ನಮ್ಮ ಗುರಿ ” ಎನ್ನುವ ಇವರು ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಗುರುಗಳ ಬಗ್ಗೆ, ಶ್ರೀಮಠದ ವಿವಿಧ ಯೋಜನೆಗಳ ಬಗ್ಗೆ ಸಮಾಜಕ್ಕೆ ಮಾಹಿತಿ ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಶ್ರೀಮಠದ ಬಗ್ಗೆ, ಶ್ರೀಗುರುಗಳ ಬಗ್ಗೆ ತುಂಬಾ ಭಕ್ತಿ ಶ್ರದ್ಧೆ ಹೊಂದಿರುವ ಇವರಿಗೆ ಶ್ರೀಮಠದ ಶಿಷ್ಯಬಂಧುಗಳ ಮೇಲೆಯೂ ತುಂಬಾ ಮಮತೆ,ಗೌರವ.

” ಕೊರೋನಾದಿಂದ ಗುಣಮುಖಳಾಗಿ ಬಂದ ನನಗಿದು ಶ್ರೀಗುರು ಕಾರುಣ್ಯದಿಂದ ದೊರಕಿದ ಮರು ಜನ್ಮ.‌ ಕೋಟಿ ಜನುಮವಿದ್ದರೂ ಶ್ರೀಮಠದ ಶಿಷ್ಯೆಯಾಗಿ ಜನಿಸಿದರೆ ಸಾಕು ಎಂಬುದೇ ನನ್ನ ಮನದಾಳದ ಆಸೆ ” ಎನ್ನುವ ಲಕ್ಷ್ಮೀ ಮಂಜುನಾಥ ಅವರಿಗೆ ಶ್ರೀಮಠದ ಸೇವೆ, ಗೋಸೇವೆ ನಿತ್ಯ ನಿರಂತರವಾಗಿ ಮುಂದುವರಿಸುವ ಹಂಬಲ.

 

Leave a Reply

Your email address will not be published. Required fields are marked *