ಮಗನಿಂದಲೇ ಮೊದಲ ದೇಣಿಗೆ: ಶ್ವೇತಾ ಕಾಡೂರು

ಮಾತೃತ್ವಮ್

“ಶ್ರೀ ಗುರುಗಳ ಗೋ ಸಂರಕ್ಷಣಾ ಕಾರ್ಯದ ಪ್ರೇರಣೆಯಿಂದ ಮಾಸದ ಮಾತೆಯಾಗಿ ಸೇವೆ ಸಲ್ಲಿಸಲು ಮುಂದಾದರೂ ನನ್ನ ಕಾರ್ಯ ಕೈಗೂಡುವ ಬಗ್ಗೆ ಯಾವುದೋ ಆತಂಕ ಮನದಲ್ಲಿ ಮೂಡಿತ್ತು. ಈ ವಿಚಾರವಾಗಿ ಯೋಚಿಸುತ್ತಿರುವಾಗ ಪುಟ್ಟ ಮಗ ಪ್ರಣವ ತನ್ನ ‘ಪ್ಯಾಕೆಟ್ ಮನಿ’ ಯಿಂದ ತನ್ನ ಸಂಗ್ರಹವನ್ನು ನೀಡಿ ‘ ಅಮ್ಮಾ ಗೋ ಸೇವೆಗೆ ಇದು ನನ್ನ ಕಾಣಿಕೆ’ ಎಂದು ನೀಡಿದಾಗ ಸಂತಸದಿಂದ ಕಣ್ತುಂಬಿ ಬಂತು” ಎನ್ನುತ್ತಾರೆ ಶ್ವೇತಾ ಕಾಡೂರು.

ಸಂಗೀತ, ನೃತ್ಯ, ಈಜು, ಪೈಂಟಿಂಗ್,ಚಿತ್ರಕಲೆಗಳಲ್ಲಿ ಅತೀವ ಆಸಕ್ತಿ ಇರುವ ಶ್ವೇತಾ, ಮರಕ್ಕೂರು ಕೃಷ್ಣ ಭಟ್, ಪರಮೇಶ್ವರಿ ಅಮ್ಮ ದಂಪತಿಗಳ ಪುತ್ರಿ. ಕಾಡೂರು ಶಿವರಾಮ ಭಟ್, ಸರೋಜಾ ದಂಪತಿಗಳ ಪುತ್ರ ರಾಜಾರಾಮ ಕಾಡೂರು ಅವರ ಪತ್ನಿಯಾಗಿರುವ ಶ್ವೇತಾಗೆ ಸಮಾಜ ಸೇವೆಯಲ್ಲಿಯೂ ಆಸಕ್ತಿಯಿದೆ.

ಹೂದೋಟ, ಹಸಿರು, ಹಸುಗಳನ್ನು ಇಷ್ಟ ಪಡುವ ಶ್ವೇತಾ ಅವರಿಗೆ ವಿವಾಹದ ನಂತರ ಶ್ರೀ ಮಠದ ಸಂಪರ್ಕ ನಿಕಟವಾಯಿತು. ಹಿಂದಿನ ಗುರುಗಳ ಕಾಲದಿಂದಲೂ ಕಾಡೂರು ಮನೆಯವರು ಶ್ರೀ ಮಠದ ಜೊತೆಗೆ ನಿಕಟವಾಗಿದ್ದ ಕಾರಣ ಶ್ವೇತಾ ಕೂಡ ಮನೆಯವರೊಂದಿಗೆ ಆಗಾಗ ಶ್ರೀ ಮಠಕ್ಕೆ ಭೇಟಿ ಇತ್ತು ಶ್ರೀ ಗುರುಗಳ ಸಮಜೋನ್ಮುಖಿ ಕಾರ್ಯಗಳ ಬಗ್ಗೆ ಆಸಕ್ತಿ ಹೊಂದಿದರು.
“ಹಿಂದೆ ಮನೆಯಲ್ಲಿ ಗೋ ಸಾಕಣೆ ಇದ್ದರೂ ಇತ್ತೀಚೆಗೆ ಕೆಲವು ಅನಿವಾರ್ಯ ಕಾರಣಗಳಿಂದಾಗಿ ಗೋ ಸಾಕಣೆಯನ್ನು ಕೈ ಬಿಡ ಬೇಕಾಯಿತು. ಈಗ ಮಾಸದ ಮಾತೆಯಾಗಿ ಈ ಮೂಲಕ ಗೋ ಸೇವೆ ಮಾಡುವುದು ಮನಸ್ಸಿಗೆ ಖುಷಿ ನೀಡಿದೆ” ಎನ್ನುತ್ತಾರೆ ಒಂದು ಹಸುವಿನ ಒಂದು ವರ್ಷಗಳ ಕಾಲದ ನಿರ್ವಹಣಾ ವೆಚ್ಚ ಭರಿಸುವ ಮೂಲಕ ಮಾಸದ ಮಾತೆಯ ಗುರಿ ತಲುಪಿದ ಶ್ವೇತಾ.

ಧರ್ಮ ಜಾಗೃತಿ, ಮಂಗಲ ಗೋಯಾತ್ರೆಯಂತಹ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಶ್ವೇತಾ ಮಾಸದ ಮಾತೆಯ ಸೇವೆ ನಿರ್ವಹಿಸುವ ಸಂದರ್ಭದಲ್ಲಿ ಉಂಟಾದ ಒಂದು ಮರೆಯಲಾರದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಮಗನಿಂದ ಮೊದಲ ಸೇವಾ ಕಾಣಿಕೆ ಪಡೆದ ದಿನ ಮುಂದೇನು?’ ಎಂದು ಯೋಚಿಸುತ್ತಿರುವಾಗ ಮರುದಿನವೇ ಮೈಸೂರಿನಲ್ಲಿರುವ ತಂಗಿಯ ಮೂಲಕ ಹೆಸರು ಪ್ರಕಟಿಸಲು ಇಚ್ಛಿಸದ ಒಬ್ಬ ಹಿರಿಯರು ಒಂದು ದೊಡ್ಡ ಮೊತ್ತವನ್ನೇ ಗೋ ಮಾತೆಯ ಸೇವೆಗಾಗಿ ನೀಡಿದರು. ಮಠದ ಶಿಷ್ಯರಲ್ಲದ ಆ ಹಿರಿಯರು ತಂಗಿ ಕೇಳಿದ ತಕ್ಷಣವೇ ಗೋಮಾತೆಯ ಸೇವೆಗೆ ಕೈ ಜೋಡಿಸಿದ್ದು ಶ್ರೀ ಗುರುಗಳ ಕೃಪೆಯಿಂದ ಎಂಬುದು ಅವರ ನಂಬಿಕೆ.
ಉಪ್ಪಿನಂಗಡಿ ಮಂಡಲದ ಶಿಷ್ಯ ಮಾಧ್ಯಮದಲ್ಲಿಯೂ ಸೇವೆ ನಿರ್ವಹಿಸಿದ ಶ್ವೇತಾ ಸಾವಿರದ ಸುರಭಿಯ ಮೂಲಕ ಲಕ್ಷ ಭಾಗಿನಿಯಾಗಿ ಬಾಗಿನ ಸ್ವೀಕಾರವನ್ನೂ ಮಾಡಿದ್ದಾರೆ.

ಪತಿ ರಾಜಾರಾಮ ಅವರೂ ಸಹಾ ಶ್ರೀ ಮಠದ ಕಾರ್ಯಗಳಲ್ಲಿ ಕೈ ಜೋಡಿಸುವುದರಿಂದ ತನಗೂ ಶ್ರೀ ಮಠದ ಸಂಪರ್ಕ ಮತ್ತಷ್ಟು ಹತ್ತಿರವಾಯಿತು ,ಮಠದಲ್ಲಿ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಯಿತು ಎಂಬ ಸಾರ್ಥಕ ಭಾವನೆ ಶ್ವೇತಾ ಅವರಿಗೆ ಇದೆ.
ಬಹುಮುಖ ಪ್ರತಿಭೆಯಾದ ಶ್ವೇತಾ ಗೆ ಇನ್ನು ಮುಂದೆಯೂ ಗೋ ಸೇವಾ ಕಾರ್ಯಗಳಲ್ಲಿ ಸಾಧ್ಯವಾದಷ್ಟು ತೊಡಗಿಸಿಕೊಂಡು, ಸಮಾಜದಲ್ಲಿ ಗೋವಿನ ಮಹತ್ವವನ್ನು ಸಾರುವ ಮೂಲಕ ಸಮಾಜ ಸೇವೆ ಮಾಡುವ ಹಂಬಲ.

Author Details


Srimukha

Leave a Reply

Your email address will not be published. Required fields are marked *