ಗೋಮಾತೆಯ ಸೇವೆಯಲ್ಲಿ ಪೂರ್ಣತೆ ಕಂಡ ಶ್ರೀಮಾತೆ – ದೇವಕಿ ಕೂಡೂರು

ಮಾತೃತ್ವಮ್

ಮನುಕುಲದ ಉಳಿವಿನ ಮೂಲವೆನಿಸಿದ ವಿಶ್ವ ಜನನಿ ಗೋಮಾತೆಯ ಸಂರಕ್ಷಣೆಯ ಹೊಣೆಯನ್ನು ಸ್ವೀಕರಿಸಿ, ತಮ್ಮ ಮನೆಯಲ್ಲೂ ಹತ್ತಾರು ದೇಶಿಯ ಹಸುಗಳನ್ನು ಸಾಕುವ ಜೊತೆಗೆ ಶ್ರೀಮಠದ ಮಾತೃತ್ವಮ್ ಯೋಜನೆಯಲ್ಲಿಯೂ ತೊಡಗಿಸಿಕೊಂಡು, ಎರಡು ಹಸುಗಳ ಗುರಿ ತಲುಪಿದ ಮಾಸದ ಮಾತೆ ದೇವಕಿ ಕೂಡೂರು

ಉಪ್ಪಿನಂಗಡಿ ಮಂಡಲ, ಕಡಬ ವಲಯದ ಬಲ್ಯ ನಿವಾಸಿಗಳಾಗಿರುವ ‘ ಶ್ರೀಪೂರ್ಣ ‘ ಆಯುರ್ವೇದ ಚಿಕಿತ್ಸಾಲಯದ ಡಾಕ್ಟರ್ ಸುರೇಶ್ ಕುಮಾರ್ ಕೂಡೂರು ಅವರ ಪತ್ನಿಯಾದ ದೇವಕಿ ಅವರು, ಕೂಳೂರು ಗಣಪತಿ ಭಟ್ ಮತ್ತು ವೆಂಕಟೇಶ್ವರಿ ದಂಪತಿಗಳ ಪುತ್ರಿ.

” ಅಪ್ಪ ಅಮ್ಮನ ಒಂಭತ್ತು ಮಕ್ಕಳಲ್ಲಿ ಕಿರಿಯವಳು ನಾನು. ಚಿಕ್ಕಂದಿನಲ್ಲಿ ಎಲ್ಲರ ಪ್ರೀತಿ ವಾತ್ಸಲ್ಯ ಸವಿದು ಬೆಳೆದವಳು. ಹಾಗಿದ್ದರೂ ಬಾಲ್ಯದಿಂದಲೇ ಕೃಷಿ ಕೆಲಸಗಳ ಅನುಭವ ದೊರಕಿದೆ. ಗೋಸೇವೆಯ ನೈಜ ಅನುಭೂತಿಯನ್ನು ಪಡೆದು ಬೆಳೆದ ಕಾರಣ ಗೋಮಾತೆಯ ಮೇಲೆ ವಿಶೇಷ ಪ್ರೀತಿಯಿದೆ. ಹಿರಿಯಕ್ಕ ಈಶ್ವರೀ ಶ್ಯಾಮ್ ಭಟ್ ಬೇರ್ಕಡವು ಶ್ರೀಮಠದ ಸೇವೆಯಲ್ಲಿ ನಮಗೆಲ್ಲ ಮಾದರಿಯಾಗಿದ್ದಾರೆ. ಅವರ ಹಾದಿಯಲ್ಲಿ ಮುನ್ನಡೆಯುವವರು ನಾವು ” ಎನ್ನುವ ದೇವಕಿ ಕೂಡೂರು ಸಂಗೀತ ಕಲಾವಿದೆಯು ಹೌದು.

ಶ್ರೀಗುರುಗಳ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾದ ಇವರು ದೇಶೀಯ ಗೋವುಗಳ ಮಹತ್ವವನ್ನು ಇತರ ಸಮಾಜದವರಿಗೂ ತಿಳಿಸಿ, ಅವರಲ್ಲೂ ಗೋವಿನ ಬಗ್ಗೆ ವಿಶೇಷ ಕಾಳಜಿ ಮೂಡಿಸಿದವರು. ಮನೆ ಮನೆಗಳಿಗೆ ತೆರಳಿ ದೇಶೀಯ ಗೋವುಗಳ ಬಗ್ಗೆ ಅರಿವು ಮೂಡಿಸಿದ ಇವರು ತಮ್ಮ ಗಾಯನದ ಮೂಲಕ ದೊರಕಿದ ಸಂಭಾವನೆಯನ್ನೂ ಮಾತೃತ್ವಮ್ ಯೋಜನೆಗೆ ಸಮರ್ಪಣೆ ಮಾಡಿದ್ದಾರೆ.

” ಗೋಮಾತೆಯ ಸೇವೆಗೈದು ಶ್ರೀ ಗುರುಗಳಿಂದ ಬಾಗಿನ ಸ್ವೀಕರಿಸಿದ್ದು ಬಾಳಿನ ಸೌಭಾಗ್ಯ, ಶ್ರೀ ಗುರುಗಳ ಪೀಠಾರೋಹಣದ ನಂತರ ಶ್ರೀಮಠದ ವಿವಿಧ ಯೋಜನೆಗಳಲ್ಲಿ ತೊಡಗಿಸಿಕೊಂಡು, ಸದಾ ಸೇವೆಯಲ್ಲಿ ನಿರತರಾಗಿರುವ ಕುಟುಂಬ ನಮ್ಮದು. ಸ್ವಭಾಷಾ ಚಾತುರ್ಮಾಸ್ಯದ ಸಂದರ್ಭದಲ್ಲಿ, ನಡೆದ ಲಕ್ಷ ತುಳಸೀ ಅರ್ಚನೆಯಲ್ಲೂ ಭಾಗಿಯಾಗುವ ಸುಯೋಗ ನಮಗೆ ಲಭಿಸಿದೆ. ಈ ಹಿಂದೆ ಕಡಬ ವಲಯದ ಮಾತೃ ಪ್ರಧಾನೆಯಾಗಿ ಸೇವೆ ಮಾಡುವ ಅವಕಾಶ ದೊರಕಿತ್ತು. ಅಂದು ಶ್ರೀಮಠದ ವಿವಿಧ ಯೋಜನೆಗಳ ಬಗ್ಗೆ ಮಾತೆಯರಿಗೆ ಮನವರಿಕೆ ಮಾಡಿಸಿದ್ದೇನೆ. ಸಾಮೂಹಿಕ ಕುಂಕುಮಾರ್ಚನೆಗಳನ್ನು ನಡೆಸುವ ಮೂಲಕ ಸಮಾಜದ ಸಂಘಟನೆ ಸಾಧ್ಯವಾಗಿದೆ “ಎನ್ನುವ ಇವರು ತಮ್ಮ ನೇತೃತ್ವದಲ್ಲಿ ಭಜನಾ ತಂಡವನ್ನು ಕಟ್ಟಿ ಮುನ್ನಡೆಸುತ್ತಿದ್ದಾರೆ.

ಅಪ್ಪನ ಹಾದಿಯಲ್ಲಿ ಮುಂದುವರಿಯುವ ಇಚ್ಚೆಯಿಂದ ಇವರ ಪುತ್ರರಾದ ಸುಧನ್ವ ಹಾಗೂ ಸುಧಾಂಶು ಅವರು ಆಯುರ್ವೇದ ವೈದ್ಯಕೀಯ ಕ್ಷೇತ್ರವನ್ನು ಆಯ್ಕೆ ಮಾಡಿದ್ದಾರೆ. ತಮ್ಮಲ್ಲಿಗೆ ಚಿಕಿತ್ಸೆಗಾಗಿ ಬಂದವರಿಗೆ ಪಂಚಕರ್ಮ ಚಿಕಿತ್ಸೆಯ ಜೊತೆಗೆ ಭಾರತೀಯ ತಳಿಯ ಹಸುಗಳ ಒಡನಾಟವನ್ನು ಒದಗಿಸುವ ಇವರು ವಿವಿಧ ಗವ್ಯೋತ್ಪನ್ನಗಳನ್ನು ತಯಾರಿಸುವ ಶ್ರಿಪೂರ್ಣ ಹರ್ಬಲ್ಸ್ ಎಂಬ ಗೋ ಉತ್ಪನ್ನಗಳ ತಯಾರಿಕಾ ಘಟಕವನ್ನು ಸ್ಥಾಪಿಸಿದ್ದಾರೆ. ಅಡಿಕೆ, ಕಾಳುಮೆಣಸು ಮೊದಲಾದ ಬೆಳೆಗಳಿಗೆ ಬರುವ ಸುಳಿ ಕೊಳೆರೋಗ, ಎಲೆಚುಕ್ಕಿ ರೋಗಗಳ ನಿವಾರಣೆಗೆ ಇವರು ತಯಾರಿಸುವ ಪಂಚಗವ್ಯ ಮಿಶ್ರಿತವಾದ ಜೈವಿಕ ದ್ರಾವಣವು ತುಂಬಾ ಪರಿಣಾಮಕಾರಿಯಾದ ಔಷಧಿಯಾಗಿ ಬಳಕೆಯಾಗುತ್ತಿದೆ.

ಶ್ರೀಮಠದ ಸೇವೆ, ಗೋಸೇವೆ, ಗವ್ಯೋತ್ಪನ್ನಗಳ ತಯಾರಿಯ ಜೊತೆಗೆ ಸಮಾಜ ಸೇವೆಯಲ್ಲೂ ಮುಂಚೂಣಿಯಲ್ಲಿರುವ ಡಾ.ಸುರೇಶ್ ಕುಮಾರ್, ದೇವಕಿ ದಂಪತಿಗಳು ಹಾಗೂ ಮಕ್ಕಳೆಲ್ಲರೂ ಒಗ್ಗೂಡಿ ಮಾಡುವ ಈ ಸೇವೆಗಳಿಗೆ ಶ್ರೀಗುರುಗಳ ಅನುಗ್ರಹ ಹಾಗೂ ಗೋಮಾತೆಯ ಕೃಪೆಯಿಂದ ಇನ್ನಷ್ಟು ಪರಿಪೂರ್ಣತೆ ಒದಗಿಬರಲಿ ಎಂಬ ಸದಾಶಯ.

 

ಪ್ರಸನ್ನಾ. ವಿ ಚೆಕ್ಕೆಮನೆ

Leave a Reply

Your email address will not be published. Required fields are marked *