“ಶ್ರೀರಾಮನ ಅನುಗ್ರಹ ಶ್ರೀ ಗುರುಗಳ ಕೃಪೆಯಿದ್ದರೆ ಬದುಕಿನಲ್ಲಿ ಎಲ್ಲವನ್ನೂ ಪಡೆದಂತೆ” : ಗಂಗಾಮಹೇಶ್ ಚೂಂತಾರು

ಮಾತೃತ್ವಮ್

“ಶ್ರೀರಾಮನ ಅನುಗ್ರಹ ಹಾಗೂ ಶ್ರೀಗುರುಗಳ ಆಶೀರ್ವಾದವಿದ್ದರೆ ಬದುಕಿನಲ್ಲಿ ಎಲ್ಲವನ್ನೂ ಪಡೆದಂತೆ. ಹೇಳಲಾರದೆ ಮನದಲ್ಲಿರಿಸಿದ ಕನಸುಗಳು ಸಹಾ ನನಸಾಗುವಂತಾಗುವುದು ಗುರುಕೃಪೆ ದೊರೆತಾಗ” ಎನ್ನುತ್ತಾರೆ ಚೂಂತಾರಿನ ಗಂಗಾಮಹೇಶ್

ಉಪ್ಪಿನಂಗಡಿ ಮಂಡಲದ ಚೊಕ್ಕಾಡಿ ವಲಯದ ಮಾತೃಪ್ರಧಾನೆಯಾಗಿರುವ ಗಂಗಾಲಕ್ಷ್ಮೀ ಮಹೇಶ್ ಅವರು ಪಳ್ಳ ಗೋವಿಂದ ಭಟ್ ಮತ್ತು ವೆಂಕಟೇಶ್ವರಿ ಅವರ ಪುತ್ರಿ. ಚೂಂತಾರು ವೇ.ಮೂ.ಲಕ್ಷ್ಮೀ ನಾರಾಯಣ ಭಟ್,ಸರೋಜಿನಿ ದಂಪತಿಯ ಪುತ್ರ ವೇ.ಮೂ.ಮಹೇಶ್ ಪ್ರಸಾದರ  ಪತ್ನಿ.

೨೦೦೨ರಿಂದ ಶ್ರೀಮಠದ ಸೇವೆಯಲ್ಲಿ  ಪಾಲ್ಗೊಳ್ಳುತ್ತಿರುವ ಗಂಗಾ ಅಭಯಾಕ್ಷರ ಅಭಿಯಾನ,ಹಾಲುಹಬ್ಬ, ಮಂಗಲಗೋಯಾತ್ರೆ ಮೊದಲಾದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರು.

“ಹಿರಿಯರ ಕಾಲದಿಂದಲೂ ನಮ್ಮಲ್ಲಿ ಹಸುಗಳನ್ನು ಸಾಕುತ್ತಿದ್ದೆವು. ಹಟ್ಟಿ ತುಂಬ ಹಸುಗಳಿದ್ದರೆ ಮನೆಗೊಂದು ವಿಶೇಷ ಕಳೆ” ಎನ್ನುವ ಗಂಗಾಗೆ ಇತ್ತೀಚಿನ ಕೆಲವು ವರ್ಷಗಳಿಂದ ಅನಿವಾರ್ಯವಾಗಿ ಹಸು ಸಾಕಣೆಯನ್ನು ಕೈ ಬಿಡಬೇಕಾಗಿ ಬಂದ ಬಗ್ಗೆ ವಿಷಾದವಿದೆ. ಆದರೂ ಮುಂದಿನ ದಿನಗಳಲ್ಲಿ ಹೋರಿ ಕರುವನ್ನಾದರೂ ತಂದು ಸಾಕುವೆನು. ದೈವೇಚ್ಛೆಯಿದ್ದರೆ ಹಸುವೊಂದನ್ನು ಸಾಕುವ ಕನಸು ನನಸಾಗಲು ಕಷ್ಟವಲ್ಲ ಎಂಬ ಭರವಸೆಯೂ ಮನಸ್ಸಿನಲ್ಲಿದೆ.

ಗೋವುಗಳ ಮೇಲಿನ ಪ್ರೀತಿಯಿಂದ ,ಶ್ರೀಗುರುಗಳ ಮಾತುಗಳಿಂದ ಪ್ರೇರಣೆ ಹೊಂದಿ ಮಾಸದ ಮಾತೆಯಾದ ಗಂಗಾ ಕೇವಲ ಒಂದು ದಿನದಲ್ಲೇ ಪೋನ್ ಮೂಲಕ ಜನರ ಸಂಪರ್ಕ ಮಾಡಿ ಗುರಿ ತಲುಪಿದವರು.

“ಕೇವಲ ಎರಡು ಗಂಟೆಗಳಲ್ಲಿ ನಾನು ಗುರಿ ತಲುಪುವಷ್ಟು ಹಣ ಸಂಗ್ರಹವಾಗುವ ಭರವಸೆ ಸಿಕ್ಕಿದ್ದು ತುಂಬಾ ಖುಷಿಯೆನಿಸಿತು. ಈ ಹಿಂದೆ ಸಾವಿರದ ಸುರಭಿಯಲ್ಲಿ ಲಕ್ಷ ಭಾಗಿನಿಯಾಗಿ ಶ್ರೀ ಸಂಸ್ಥಾನದವರಿಂದ ಬಾಗಿನ ಸ್ವೀಕರಿಸುವ ಸೌಭಾಗ್ಯ ದೊರಕಿತ್ತು. ಪೋನ್ ಮೂಲಕ ಕೇಳಿದರೂ ಕೇಳಿದವರೆಲ್ಲ ಬಹಳ ಖುಷಿಯಿಂದಲೇ ದೇಶೀ ಹಸುಗಳ ರಕ್ಷಣೆಯ ಕಾರ್ಯಕ್ಕೆ ಸ್ಪಂದಿಸಿದ್ದಾರೆ. ಗೋವುಗಳ ಮೇಲೆ ಇಷ್ಟವಿರುವವರೆಲ್ಲ ಬಹಳ ಸಂತೋಷದಿಂದ ನನ್ನ ಕಾರ್ಯಕ್ಕೆ ಕೈ ಜೋಡಿಸಿದ ಕಾರಣ ಬಹಳ ಬೇಗನೆ ಗುರಿ ತಲುಪಲು ಸಾಧ್ಯವಾಯಿತು. ಶ್ರೀರಾಮ ದೇವರ ಅನುಗ್ರಹ ಮತ್ತು ಶ್ರೀಗುರುಗಳ ಕೃಪೆಯಿಂದ  ನಮ್ಮ ಬದುಕಿನಲ್ಲಿ ಸುಖ,ಶಾಂತಿ,ನೆಮ್ಮದಿ ದೊರಕಿದೆ ಎಂದು ತುಂಬು ಹೃದಯದಿಂದ ನುಡಿಯುತ್ತಾರೆ ಗಂಗಾ ಮಹೇಶ್.

೨೦೧೬ ರಿಂದ ಚೊಕ್ಕಾಡಿ ವಲಯದ ಮಾತೃಪ್ರಧಾನೆಯಾಗಿರುವ ಗಂಗಾ ಚೊಕ್ಕಾಡಿ ಶ್ರೀರಾಮ ದೇವರ ಅನನ್ಯ ಭಕ್ತೆಯೂ ಹೌದು. ತಮ್ಮ ವಲಯದ ಸುಮಾರು ಮೂವತ್ತು ಮಂದಿ ಹವ್ಯಕ ಮಹಿಳೆಯರ ಭಜನಾ ತಂಡವನ್ನು ಮುನ್ನಡೆಸುವ ಇವರು ಪ್ರತೀ ತಿಂಗಳು ಚೊಕ್ಕಾಡಿ ದೇಗುಲದಲ್ಲಿ ಭಜನಾ ಸೇವೆ,ಕುಂಕುಮಾರ್ಚನೆಯಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಸುವಲ್ಲಿ ಆಸಕ್ತಿ ಹೊಂದಿದ್ದಾರೆ.

“ನಮ್ಮ ವಲಯದ ಪ್ರತಿಯೊಬ್ಬ ಮಾತೆಯೂ ಶ್ರೀಗುರುಗಳ ಸೇವಾ ಕಾರ್ಯದಲ್ಲಿ ಭಾಗಿಯಾಗ ಬೇಕೆಂಬ ಅಭಿಲಾಷೆ ನನ್ನದು. ಇದಕ್ಕಾಗಿ ಅವರ ಮನವೊಲಿಸಿ ಅವರು ಶ್ರೀ ಗುರುಸೇವೆಯಲ್ಲಿ ಕೈ ಜೋಡಿಸುವಂತಾದಾಗ ಮನಸ್ಸಿಗೆ ಸಿಗುವ ಆನಂದ ಅಪರಿಮಿತ” ಎಂದು ನುಡಿಯುವ ಗಂಗಾ ಅವರು ಬದುಕಿನಲ್ಲಿ ಶಿಸ್ತಿಗೆ ಆದ್ಯತೆ ಕೊಡುವವರು.

ಎಲ್ಲವೂ ಅಚ್ಚುಕಟ್ಟಾಗಿದ್ದರೆ ಚೆನ್ನ ಎನ್ನುವ ಇವರ ಮನೆ, ಹೂದೋಟ,ತರಕಾರಿ ಗಿಡಗಳು ಅವರ ಸೌಂದರ್ಯ ಪ್ರಜ್ಞೆಯ ಪ್ರತೀಕಗಳಾಗಿ ನೋಡುಗರ ಕಣ್ಸೆಳೆಯುವಂತಿರುವುದು ಗಂಗಾ ಅವರ ಶಿಸ್ತುಬದ್ದ, ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ.

ಹೂವು, ಓದು,ನೃತ್ಯ, ಭಜನೆಗಳನ್ನು ಇಷ್ಟ ಪಡುವ ಇವರ ಬದುಕಿನಲ್ಲಿ ಗೋಸೇವೆ, ಶ್ರೀ ಗುರುಸೇವೆಗಳು ಅವಿಭಾಜ್ಯ ಅಂಗ. ಶ್ರೀಮಠದ ಸಂಪರ್ಕ ನಿರಂತರವಾಗಿ ಇರ ಬೇಕೆಂಬುದೇ ಇವರ ಹಂಬಲಿಕೆ.
ಯಾವುದೇ ಕಾರ್ಯಕ್ಕೆ ಹೊರಡುವಾಗಲೂ ಶ್ರೀಗುರುಗಳ ಚರಣಗಳನ್ನು ಸ್ಮರಿಸಿ ಹೊರಟರೆ ಕಾರ್ಯ ಕೈ ಗೂಡಬಹುದೇ ಎಂಬ ಅನುಮಾನವೇ ಬೇಡ . ಅಸಾಧ್ಯ ಎಂದು ಭಾವಿಸಿದ ಕಾರ್ಯಗಳು ಹೂವೆತ್ತಿದಷ್ಟು ಸುಲಲಿತವಾಗಿ ನೆರವೇರುತ್ತವೆ. ನಮ್ಮ ಬದುಕಿನಲ್ಲಿ ನಡೆದ ಅನೇಕ ಘಟನೆಗಳು ಇದಕ್ಕೆ ಸಾಕ್ಷಿ ಎನ್ನುತ್ತಾರೆ ಗಂಗಾ.

ಮನೆಯಲ್ಲಿ ಸಾಧ್ಯವಾದಷ್ಟು ಗವ್ಯೋತ್ಪನ್ನಗಳ ಬಳಕೆಯನ್ನು ಮಾಡುತ್ತಿರುವ ಗಂಗಾ ತಾವು ಮಾತ್ರವಲ್ಲದೆ ತಮಗೆ ನಿಕಟವಾಗಿರುವವರಿಗೂ ಗವ್ಯೋತ್ಪನ್ನದ ಬಳಕೆಯ ಉಪಯುಕ್ತತೆಯನ್ನು ಮನವರಿಕೆ ಮಾಡಿಸಿ, ಅದನ್ನೇ ಉಪಯೋಗಿಸುವಂತೆ ಪ್ರೋತ್ಸಾಹ ನೀಡುವ ಕಾರ್ಯವನ್ನೂ ಮಾಡುತ್ತಿದ್ದಾರೆ.

ತಮ್ಮ ಮಹಿಳಾ ತಂಡದ ಸಹಕಾರದೊಂದಿಗೆ ತಿಂಡಿ ತಿನಿಸುಗಳನ್ನು ತಯಾರಿಸಿ,ಅವುಗಳ ವಿಕ್ರಯದಿಂದ ದೊರೆತ ಲಾಭಾಂಶವನ್ನು ಗೋಶಾಲೆಗಳಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ತಮಗೆ ಸಹಕಾರ ನೀಡುವ ಮಾತೆಯರ ಕಾರ್ಯಗಳೇ ತಮಗೆ ಸ್ಪೂರ್ತಿ, ಅವರ ಸಹಕಾರವನ್ನು ಎಂದಿಗೂ ಮರೆಯುವಂತಿಲ್ಲ’. ತಮ್ಮ ವಲಯದ ಮಾತೆಯರ ಸಹಾಯದಿಂದಲೇ ಈ ರೀತಿಯಲ್ಲಿ ಸೇವೆ ಮಾಡಲು ಸಾಧ್ಯವಾಗುತ್ತಿದೆ ‘ ಎನ್ನುತ್ತಾರೆ ಗಂಗಾ ಮಹೇಶ್.

ಧಾರ್ಮಿಕ ಕಾರ್ಯಗಳಲ್ಲಿ ಅತೀವ ಭಕ್ತಿ ಶ್ರದ್ಧೆ ಹೊಂದಿರುವ ಇವರು ತಮ್ಮ ಚೊಕ್ಕಾಡಿಯ ಶ್ರೀರಾಮ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ, ಗುರುಪೂರ್ಣಿಮೆ, ವಟಸಾವಿತ್ರೀ ವ್ರತವೇ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಮುಂದಾಳತ್ವ ವಹಿಸಿದ್ದಾರೆ.

ಮನೆಯವರ ಸಂಪೂರ್ಣ ಸಹಕಾರದಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿದೆ ಎನ್ನುವ ಗಂಗಾ ಅವರ ಮಕ್ಕಳು ಸಹಾ ಶ್ರೀ ಮಠದ ಸೇವೆಯಲ್ಲಿ ಕೈ ಜೋಡಿಸುತ್ತಿದ್ದಾರೆ.

ಮಗಳು ಸ್ನೇಹಾ ಭರತನಾಟ್ಯ ಕಲಾವಿದೆಯೂ,ಎಲ್.ಎಲ್.ಬಿ.ವಿದ್ಯಾರ್ಥಿನಿಯೂ ಆಗಿದ್ದರೆ ಪುತ್ರ ಸಾರ್ಥಕ ಪಿಯುಸಿ ವಿದ್ಯಾರ್ಥಿ.

ಧಾರಾ ರಾಮಾಯಣದ ಶ್ರೀರಾಮ ಪಟ್ಟಾಭಿಷೇಕದ ಸಂದರ್ಭದಲ್ಲಿ ಅಷ್ಟಾವಧಾನ ಸೇವೆಯಲ್ಲಿ ಭರತನಾಟ್ಯ ಮಾಡಿದ ಕಲಾವಿದೆಯನ್ನು ನೋಡಿ ಮಗಳು ಸ್ನೇಹಾ
“ಅಮ್ಮಾ ನನಗೂ ಇಂತಹ ಪುಣ್ಯ ಸಿಗುವಂತಿದ್ದರೆ….” ಎಂದು ಭಾವತುಂಬಿ ಹೇಳಿದ ಕ್ಷಣಗಳನ್ನು ನೆನಪಿಸುವ ಗಂಗಾ ಮುಂದೆ ಒಂದೇ ವಾರದಲ್ಲಿ ಪೆರಾಜೆಯ ಮಾಣಿ ಮಠದಲ್ಲಿ ನಡೆಯುವ ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ನೃತ್ಯ ಸೇವೆ ಸಲ್ಲಿಸುವ ಅವಕಾಶಕ್ಕೆ ಕರೆ ಬಂದಾಗ ಆಶ್ಚರ್ಯ ಚಕಿತರಾದರಂತೆ. ಇಂತಹ ಸೌಭಾಗ್ಯ  ಒದಗಿ ಬಂದಿದ್ದು ಶ್ರೀರಾಮ ದೇವರ ಅನುಗ್ರಹದಿಂದ. ಇದು ನಮ್ಮ ಬದುಕಿನಲ್ಲಿ ಮರೆಯಲಾರದ ಘಟನೆ ಎಂದು ಹೃದಯ ತುಂಬಿ ನುಡಿಯುತ್ತಾರೆ.

ಶ್ರೀಮಠದ ಸೇವೆಗಳಲ್ಲಿ ಭಾಗಿಯಾಗಿ ಧನ್ಯತೆ ಪಡೆಯಬೇಕೆಂಬ ಅಭಿಲಾಷೆ ಹೊಂದಿರುವ ಗಂಗಾ ಮಹೇಶ್ ಗೆ ಇನ್ನಷ್ಟು ಸೇವೆ ಮಾಡುವ ಅವಕಾಶವನ್ನು ಶ್ರೀರಾಮ ದೇವರು,ಗೋಮಾತೆ ಒದಗಿಸಿ ಕೊಡಲಿ ಎಂಬುದೇ ಹಾರೈಕೆ. ಆದಷ್ಟು ಶೀಘ್ರವಾಗಿ ಮನೆಯ ಹಟ್ಟಿಯಲ್ಲಿ ಹಸುವಿನ ಅಂಬಾ…ದನಿ ಕೇಳಿಬರಬೇಕೆಂದು ಬಯಸುತ್ತಿರುವ ಈ ಮಾಸದ ಮಾತೆಯ ಸ್ನೇಹಮಯ ಮಾತುಗಳು ಎಲ್ಲರ ಮನ ಸೆಳೆಯುತ್ತದೆ.

ವೈವಿಧ್ಯಮಯ ಹವ್ಯಾಸಗಳಲ್ಲಿ ತೊಡಗಿಸಿಕೊಂಡು,ತಾನು ಗುರುಸೇವೆ,ಗೋಸೇವೆ ಮಾಡುವ ಜೊತೆಗೆ ತನ್ನ ವಲಯದ ಮಾತೆಯರನ್ನೂ ಶ್ರೀಮಠದ ಸೇವೆಯಲ್ಲಿ  ತನ್ನೊಂದಿಗೆ ಕೈಜೋಡಿಸುವಂತೆ ಮಾಡಿದ ಗಂಗಾ ಮಹೇಶ್ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ.

Author Details


Srimukha

Leave a Reply

Your email address will not be published. Required fields are marked *