ಗೋಪ್ರೇಮ ಉಸಿರಿನಷ್ಟೇ ಸಹಜ : ಕಿರಣಾ ಮೂರ್ತಿ , ಯೇತಡ್ಕ

ಮಾತೃತ್ವಮ್

 

” ನಮ್ಮವರು ಗೋ ಡಾಕ್ಟರ್ ಆದ ಕಾರಣ ಸಹಜವಾಗಿಯೇ ಗೋವುಗಳ ಮೇಲೆ ಪ್ರೀತಿ ಮೂಡಿತು. ಆದರೆ ಶ್ರೀಮಠದ ಸಂಪರ್ಕಕ್ಕೆ ಬರುವ ವರೆಗೂ ನನಗೆ ದೇಶೀಯ ತಳಿ ಹಾಗೂ ವಿದೇಶೀ ತಳಿಗಳ ನಡುವಿನ ವ್ಯತ್ಯಾಸ ತಿಳಿದಿರಲಿಲ್ಲ. ನಂತರ ದೇಶೀಯ ತಳಿಯ ಹಸುಗಳ ಉಪಯುಕ್ತತೆ, ಅವುಗಳ ಮೌಲ್ಯ ಅರಿವಾಯಿತು, ಈಗ ಪೇಟೆಯಲ್ಲಿದ್ದರೂ ಮೂರು ಹಸುಗಳು ಹಾಗೂ ನಾಲ್ಕು ಕರುಗಳನ್ನು ಸಾಕುತ್ತಿದ್ದೇವೆ. ಗೋಮಾತೆ ಬದುಕಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದ್ದಾಳೆ ” ಈ ಮಾತುಗಳು ‘ ಗೋವಿಲ್ಲದೆ ನಾವಿಲ್ಲ ‘ ಎಂಬ ಮಾತಿಗೆ ಪ್ರತ್ಯಕ್ಷ ಉದಾಹರಣೆಯಾದ ಮುಳ್ಳೇರಿಯ ಮಂಡಲ ,ಪಳ್ಳತ್ತಡ್ಕ ವಲಯದ ಪ್ರಸ್ತುತ ಬದಿಯಡ್ಕ ನಿವಾಸಿಗಳಾಗಿರುವ ಯೇತಡ್ಕದ ಕಿರಣಾ ಮೂರ್ತಿ ಅವರದ್ದು.

ಪುತ್ತೂರು ದರ್ಭೆಯ ಕೇಶವ ಭಟ್ , ಭಾರತಿ ದಂಪತಿಗಳ ಪುತ್ರಿಯಾದ ಇವರು ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳವರು ಪೀಠಾರೋಹಣ ಮಾಡಿದ ಸಂದರ್ಭದಲ್ಲಿ ಪತಿಯೊಡನೆ ಶ್ರೀಮಠದ ಸಂಪರ್ಕಕ್ಕೆ ಬಂದವರು.

ಪತಿ ಡಾ. ಕೃಷ್ಣಮೂರ್ತಿ ಪಶು ವೈದ್ಯರಾದ ಕಾರಣ ಕಿರಣ ಮೂರ್ತಿಯವರಿಗೂ ಹಸುಗಳ ಮೇಲೆ ವಿಶೇಷ ಪ್ರೀತಿ. ಹೊಸನಗರದ ಶ್ರೀರಾಮಚಂದ್ರಾಪುರ ಮಠದಲ್ಲಿ ಗೋವುಗಳ ಮೇಲ್ವಿಚಾರಣೆ ನಡೆಸಲು ಸುಮಾರು ಹದಿನೈದು ವರ್ಷಗಳ ಕಾಲ ಅಲ್ಲೇ ವಾಸಿಸಿದ ಇವರ ಗೋಸೇವೆಯನ್ನು ವಿವರಿಸಲು ಪದಗಳಿಲ್ಲ.

ಆರಂಭದಲ್ಲಿ ಕುಂಬಳೆ ಸೀಮೆಯ ಮಾತೃ ವಿಭಾಗದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಇವರು ಮುಂದೆ ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಹಕಾರ ನೀಡಲು ಬದಿಯಡ್ಕ ಪೇಟೆಯಲ್ಲಿ ‘ಮಹಿಳೋದಯ ‘ ಎಂಬ ಗೃಹ ಉದ್ಯಮದ ಮಳಿಗೆ ಸ್ಥಾಪಿಸುವಲ್ಲಿ ಬೇರ್ಕಡವು ಈಶ್ವರಿ ಅಕ್ಕನ ಜೊತೆಯಲ್ಲೇ ನಿಂತು ಸಹಕಾರ ನೀಡಿದವರು.

” ಬದಿಯಡ್ಕ ಸುತ್ತಮುತ್ತಲಿನ ಮಾತೆಯರು ಗೃಹ ಉದ್ಯಮದಲ್ಲಿ ಆಸಕ್ತಿ ವಹಿಸಿ ‘ ಮಹಿಳೋದಯ ಮಳಿಗೆಯ ಮೂಲಕ ತಮ್ಮ ಜೀವನದಲ್ಲಿ ಸ್ವಾವಲಂಬನೆಯ ಹಾದಿ ಕಂಡುಕೊಂಡಿದ್ದು ನಿಜಕ್ಕೂ ಖುಷಿಯೆನಿಸಿದೆ ” ಎನ್ನುವ ಕಿರಣಾ ಮೂರ್ತಿಯವರು ಹೊಸನಗರದಲ್ಲಿ ಜರಗಿದ ಶ್ರೀ ರಾಮಾಯಣ ಮಹಾಸತ್ರ, ವಿಶ್ವ ಗೋಸಮ್ಮೇಳನಗಳಲ್ಲಿ ಭಾಗವಹಿಸಿದವರು.‌ ಶ್ರೀಗುರುಗಳ ಚಾತುರ್ಮಾಸ್ಯದ ಸಂದರ್ಭಗಳಲ್ಲೂ ಶ್ರೀಮಠಕ್ಕೆ ಹೋಗಿ ಸೇವೆ ಸಲ್ಲಿಸಿದವರು.

” ನನ್ನ ಎಲ್ಲಾ ಕೆಲಸಗಳಿಗೂ ಶ್ರೀಗುರುಗಳೇ ಪ್ರೇರಣೆ, ಅಭಯಾಕ್ಷರ ಅಭಿಯಾನದ ಸಂದರ್ಭದಲ್ಲಿ ಅನೇಕ ಸಿಹಿ ಕಹಿ ಅನುಭವಗಳಾಗಿವೆ. ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾಗಿ, ಅನೇಕ ಮಂದಿ ಗೋಪ್ರೇಮಿಗಳ ಸಹಕಾರದಿಂದ ಒಂದು ವರ್ಷದ ಗುರಿ ತಲುಪಿದ್ದೇನೆ. ಮಲೆನಾಡು ಗಿಡ್ಡ ತಳಿಯ ಮೂರು ಹಸುಗಳು ನಮ್ಮ ಮನೆಯಲ್ಲಿ ಇವೆ. ಹಸುಗಳ ಒಡನಾಟವೇ ಮನಸ್ಸಿಗೆ ಸಂತಸ ನೀಡುತ್ತದೆ ” ಎನ್ನುವ ಕಿರಣಾ ಮೂರ್ತಿಯವರ ಗೋಪ್ರೇಮ ಅನನ್ಯ, ಅನುಪಮ.

 

 

Author Details


Srimukha

Leave a Reply

Your email address will not be published. Required fields are marked *