ಶ್ರೀ ಗುರುಗಳ ಪ್ರೇರಣಾ ನುಡಿಗಳೇ ಮಾಸದ ಮಾತೆಯಾಗಲು ದಾರಿದೀಪ : ಸಂಧ್ಯಾ ಕಾನತ್ತೂರು

ಮಾತೃತ್ವಮ್

“ಸಾವಿರದ ಸುರಭಿ ಯೋಜನೆಯಲ್ಲಿ ಭಾಗವಹಿಸಿದ್ದೆ. ಆದರೆ ಮಾಸದ ಮಾತೆಯಾಗಲು ಮಾತ್ರ ಯಾಕೋ ಧೈರ್ಯ ಮೂಡಲಿಲ್ಲ. ಸುರಭಿ ಸೇವಿಕೆಯಾಗಿ ಇತರ ಮಾಸದ ಮಾತೆಯರ ಜೊತೆ ಸಹಕರಿಸೋಣ ಎಂದು ಯೋಚಿಸಿದ್ದೆ. ಆದರೆ ಶ್ರೀ ಸಂಸ್ಥಾನದವರು
‘ ಅಸಾಧ್ಯ ಎನ್ನುವುದು ಯಾವುದೂ ಇಲ್ಲ ಸಂಧ್ಯಾ’ ಎಂದು ಭರವಸೆಯ ಆಶೀರ್ವಾದ ನೀಡಿದಾಗ ಅವರ ನುಡಿಗಳೇ ಗೋ ಸೇವಾ ಕಾರ್ಯಕ್ಕೆ ಶ್ರೀ ರಕ್ಷೆ ಎಂದು ಭಾವಿಸಿ ಮಾಸದ ಮಾತೆಯಾಗಿ ಸೇರಿ ಕೊಂಡೆ ” ಎಂದು ತುಂಬು ಹೃದಯದಿಂದ ನುಡಿಯುತ್ತಾರೆ ಸಂಧ್ಯಾ ಕಾನತ್ತೂರು .

ಮುಳಿಯಾಲದ ಲಕ್ಷ್ಮೀ ನಾರಾಯಣ ಭಟ್, ಪಾರ್ವತಿ ದಂಪತಿಗಳ ಪುತ್ರಿಯಾದ ಸಂಧ್ಯಾ, ಕಾನತ್ತೂರು ಉದಯ ಅವರ ಪತ್ನಿ. ಮಗಳು ಸಿಂಚನಾ ಮೈತ್ರೇಯಿ ಗುರುಕುಲದಲ್ಲಿ ಅದ್ವೈತ ವೇದಾಂತ ವಿದ್ವತ್ ಪದವಿಯ ದ್ವಿತೀಯ ವರ್ಷ ವಿದ್ಯಾರ್ಥಿನಿಯಾದರೆ, ಮಗ ಸ್ಕಂದ ಎಂಟನೇ ತರಗತಿಯ ವಿದ್ಯಾರ್ಥಿ.

ಬಾಲ್ಯದಿಂದಲೂ ಸಂಧ್ಯಾ ಅವರಿಗೆ ಶ್ರೀ ಮಠದ ಸಂಪರ್ಕವಿತ್ತು. ಶ್ರೀ ಶ್ರೀ ರಾಘವೇಂದ್ರ ಭಾರತೀ ಸ್ವಾಮೀಜಿಯವರ ಷಷ್ಠಿ ಪೂರ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಧ್ಯಾ ಅವರ ಬಾಲ್ಯದ ಬದುಕಿನ ಅನುಭವಗಳ ಪುಟ ತೆರೆಯುವಾಗ ಅಲ್ಲೆಲ್ಲ ಶ್ರೀ ಮಠದ ಬಗ್ಗೆ ಹಲವಾರು ವಿಚಾರಗಳು ದೊರಕುತ್ತವೆ. ‘ತಮ್ಮನ ಉಪನಯನವನ್ನು ಸಹಾ ಮಾಣಿ ಮಠದ ಸೂತ್ರ ಸಂಗಮ ಕಾರ್ಯಕ್ರಮದಲ್ಲಿ ನಡೆಸಿದ್ದು’ ಎಂದು ಹಳೆಯ ನೆನಪುಗಳನ್ನು ಬಿಚ್ಚಿಡುತ್ತಾರೆ ಅವರು.

೨೦೧೩ರಿಂದ ಶ್ರೀ ಕಾರ್ಯಕರ್ತೆಯಾಗಿ, ಮುಷ್ಟಿ ಭಿಕ್ಷಾ ಸಂಚಾಲಕಿಯಾಗಿ, ಬೆಂಗಳೂರು ಮಂಡಲ ವಿದ್ಯಾರ್ಥಿ ವಾಹಿನಿ ಪ್ರಧಾನೆಯಾಗಿ ,ಸಮಾಜ ಮಾಧ್ಯಮ ವಿಭಾಗ, ಪ್ರಸ್ತುತಿ ವಿಭಾಗ, ಸಾಹಿತ್ಯ ನಿರೂಪಣಾ ಬಳಗಳಲ್ಲಿ ಸೇವೆ ಗೈದು ಪ್ರಸ್ತುತ ಮಹಾಮಂಡಲ ವಿದ್ಯಾರ್ಥಿ ವಾಹಿನಿ ಪ್ರಧಾನೆಯಾಗಿ ಸೇವೆ ಸಲ್ಲಿಸುತ್ತಿರುವ ಸಂಧ್ಯಾ ಕಾನತ್ತೂರು ಒಂದು ವರ್ಷದ ಅವಧಿಗೆ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಭರಿಸಲು ಹೊಣೆ ಹೊತ್ತು ಮಾಸದ ಮಾತೆಯ ಗುರಿ ತಲುಪಿದವರು.

ಗೋ ಜಾಗೃತಿಯ ಬಗ್ಗೆ ಸಮಾಜವನ್ನು ಎಚ್ಚರಿಸುವ ನಿಟ್ಟಿನಲ್ಲಿ ಸಂಧ್ಯಾ ಅವರು ಹಮ್ಮಿಕೊಂಡ ಕಾರ್ಯ ವಿಧಾನಗಳು ಹಲವಾರು. ತಾವು ಅತಿಥಿಯಾಗಿ ಭಾಗವಹಿಸುವ ಕಾರ್ಯಕ್ರಮಗಳಲ್ಲೆಲ್ಲ ಗೋ ಜಾಗೃತಿ ಮೂಡಿಸುವ ಸಂದೇಶಗಳನ್ನೇ ಇತರರಿಗೆ ಹಂಚುವ ಇವರಿಗೆ ಪ್ರತೀ ಮನೆಯ ಮಾತೆಯರೂ ಗೋವಿನ ಮಹತ್ವವನ್ನು ಅರಿತಾಗಲೇ ಗೋವಿನ ಉಪಯುಕ್ತತೆಯ ಬಗ್ಗೆ ಸಮಾಜ ಜಾಗೃತವಾಗುತ್ತದೆ ಎಂಬ ಭರವಸೆ.

ಭಾರತೀಯ ಗೋವಂಶದ ಮಹತ್ವದ ಬಗ್ಗೆ, ಗೋಹತ್ಯೆ ನಿಷೇಧದ ಅಗತ್ಯತೆಯ ಬಗ್ಗೆ, ಗೋ ಉತ್ಪನ್ನಗಳ ನಿರಂತರ ಬಳಕೆಯ ಸತ್ಪರಿಣಾಮಗಳ ಬಗ್ಗೆ ಸಂಧ್ಯಾ ಅವರು ಹಲವಾರು ವರ್ಷಗಳಿಂದಲೇ ಜನರಲ್ಲಿ ಅರಿವು ಮೂಡಿಸುತ್ತಾ ಹಗಲಿರುಳು ಗೋವಿನ ಶ್ರೇಷ್ಠತೆಯನ್ನು ಸಾರುವ ಮಾತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮಾಸದ ಮಾತೆಯಾಗಿ ಅವರು ಒಂದು ವರ್ಷದ ಗುರಿ ತಲುಪಿರುವುದಾದರೂ ಗೋವಿನ ಪೋಷಣೆಯ ವಿಚಾರದಲ್ಲಿ ಅವರು ವರ್ಷಗಳ ಹಿಂದೆಯೇ ಕಾಳಜಿ ವಹಿಸಿದ್ದಾರೆ. ಗೋಶಾಲೆಗಳಿಗೆ ಸಹಕಾರ ನೀಡುವಂತೆ ಆಪ್ತರ,ಮಿತ್ರರ ಮನವೊಲಿಸುವ ಕಾರ್ಯದಲ್ಲಿ ತೊಡಗಿಸಿಕೊಂಡವರು. ಜಾತಿ,ಕುಲಗಳನ್ನು ಮೀರಿ ಗೋವಿನ ಪೋಷಣೆಗೆ ಕೈ ಜೋಡಿಸಲು ಹಲವಾರು ಮಂದಿಯನ್ನು ಸಂಪರ್ಕಿಸುವ ಸಂಧ್ಯಾ ಅವರ ಗೋ ಸೇವೆ ನಿರಂತರ.

ಹೆಸರು, ಕೀರ್ತಿಗಳ ಹಿಂದೆ ಹೋಗದೆ ಎಲ್ಲವೂ ಶ್ರೀ ಗುರುಸೇವೆ, ಶ್ರೀಮಠದ ಸೇವೆ, ಗೋಮಾತೆಯ ಸೇವೆ ಎಂದು ಭಾವಿಸುವ ಇವರಿಗೆ ಹತ್ತು ಹಲವು ಹವ್ಯಾಸಗಳು ಸಹಾ ಇವೆ. ಕಥೆ,ಕವನ,ಲೇಖನಗಳನ್ನು ಬರೆಯುವ ಸಂಧ್ಯಾ ಫೋಟೋಗ್ರಫಿಯನ್ನೂ ಇಷ್ಟ ಪಡುತ್ತಾರೆ.

“ಒಬ್ಬಳೇ ಡ್ರೈವಿಂಗ್ ಮಾಡುತ್ತಾ ಪ್ರಯಾಣ ಮಾಡುವುದು ನನ್ನ ಅಚ್ಚುಮೆಚ್ಚಿನ ಹವ್ಯಾಸ” ಎನ್ನುವ ಇವರಿಗೆ ಸಂಗೀತ, ಕೊಳಲು ಎಲ್ಲವೂ ಪ್ರಿಯ. ಕೆಲವು ವರ್ಷಗಳಿಂದ ಬೇಸಿಗೆ ಶಿಬಿರಗಳನ್ನು ಸಂಯೋಜಿಸುವಲ್ಲಿ ಅತ್ಯಂತ ಮುತುವರ್ಜಿ ವಹಿಸುವ ಸಂಧ್ಯಾ ಕಾನತ್ತೂರು ಇಂತಹ ಶಿಬಿರಗಳ ಮೂಲಕ ಗೋವಿನ ಹಿರಿಮೆಯನ್ನು ಮಕ್ಕಳಿಗೆ ಮನದಟ್ಟಾಗಿಸುವ ಮೂಲಕ ಅತ್ಯುತ್ತಮ ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ.

“ಮನೆಯವರ ಸಂಪೂರ್ಣ ಸಹಕಾರದಿಂದ ನನಗೆ ಸೇವೆ ಮಾಡಲು ಸಾಧ್ಯವಾಗುತ್ತಿದೆ. ಗೋ ಸೇವೆ, ಶ್ರೀ ಮಠದ ಸೇವೆಯಲ್ಲಿ ತೊಡಗಿದಾಗ ದೊರಕುವ ಸಂತೃಪ್ತಿ ಅವರ್ಣನೀಯ. ಮುಂದೊಂದು ದಿನ ನಗರದ ಜೀವನದಿಂದ ಹಳ್ಳಿಯ ಕಡೆ ಮುಖ ಮಾಡುವ ಉದ್ಧೇಶವಿದೆ. ಎಲ್ಲಿದ್ದರೂ ,ಹೇಗಿದ್ದರೂ ಗೋಮಾತೆಯ ಸೇವೆ ನಿರಂತರ. ಭಾರತೀಯ ಗೋತಳಿಗಳ ಸಂರಕ್ಷಣೆಗಾಗಿ ಹೋರಾಟಕ್ಕೂ ಸಿದ್ಧ” ಎನ್ನುವ ಸಂಧ್ಯಾ ಕಾನತ್ತೂರು ಅವರ ಸೇವೆ ಇತರರಿಗೆ ಮಾದರಿಯಾಗಿದೆ. ಮಾಡುವ ಸೇವೆಗಳ ಪ್ರಚಾರ ಬಯಸದ ಸಂಧ್ಯಾ ಕಾನತ್ತೂರು ಅವರು ಸದ್ದಿಲ್ಲದೆ ಗೈದ ಸಾಧನೆಗಳು ಬಹಳಷ್ಟು ಇರಬಹುದು ಎಂದೆನಿಸುತ್ತಿದೆ. ಅವರ ನಡೆನುಡಿಗಳು ಎಲ್ಲಾ ಮಾಸದ ಮಾತೆಯರಿಗೂ ಪ್ರೇರಣೆಯಾಗಬಹುದು.

Author Details


Srimukha

Leave a Reply

Your email address will not be published. Required fields are marked *