” ಮನದ ಭಾವನೆಗಳನ್ನು ಅರಿತು ಅನುಗ್ರಹಿಸುವವರು ಶ್ರೀಗುರುಗಳು ” : ಲಲಿತಾ ವಿ. ಹೆಗಡೆ

ಮಾತೃತ್ವಮ್

 

” ಬದುಕಿನ ಪ್ರತೀ ಹೆಜ್ಜೆಯಲ್ಲಿಯೂ ಶ್ರೀಗುರು ಕಾರುಣ್ಯದ ಅನುಭವವನ್ನು ಪಡೆದವರು ನಾವು. ಜೀವನದ ಏರುಪೇರುಗಳಲ್ಲಿ ಕಂಗೆಟ್ಟು ಕುಸಿದು ಹೋಗುವಾಗಲೂ ಭರವಸೆಯ ದೀವಿಗೆಯಾಗಿ ಬಾಳಿಗೆ ಬೆಳಕು ತೋರಿದವರು ನಮ್ಮ ಗುರುಗಳು. ಜೀವನದ ಕೊನೆ ತನಕವೂ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ದೊರಕಬೇಕೆಂಬುದೇ ನನ್ನ‌ ನಿತ್ಯ ಪ್ರಾರ್ಥನೆ ” ಎಂಬ ಭಾವಪೂರ್ಣ ನುಡಿಗಳು ಕುಮಟಾ ಮಂಡಲ , ಗುಡೇಅಂಗಡಿ ವಲಯದ ವಿಶ್ವನಾಥ ಹೆಗಡೆಯವರ ಪತ್ನಿ ಲಲಿತಾ ವಿ.ಹೆಗಡೆ ಅವರದ್ದು.

 

ಕಲ್ಲಬ್ಬೆಯ ಸತ್ಯನಾರಾಯಣ ಹೆಗಡೆ,ಕಮಲ ದಂಪತಿಗಳ ಪುತ್ರಿಯಾದ ಇವರು ಕುಮಟಾ ಮಂಡಲದ ಮಾತೃ ಪ್ರಧಾನೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 

ಈ ಹಿಂದೆ ವಲಯ ಮುಷ್ಟಿ ಭಿಕ್ಷಾಪ್ರಧಾನೆಯಾಗಿಯೂ ಸೇವೆ ಸಲ್ಲಿಸಿದ ಇವರು ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷಭಾಗಿನಿಯಾಗಿ ಶ್ರೀಗುರುಗಳಿಂದ ಬಾಗಿನವನ್ನು ಸ್ವೀಕರಿಸಿದ್ದಾರೆ.

 

” ಶ್ರೀಮಠದ ವಿವಿಧ ಯೋಜನೆಗಳಲ್ಲಿ ನಮ್ಮಿಂದ ಸಾಧ್ಯವಾದಷ್ಟು ಸೇವೆ ಮಾಡುತ್ತಿದ್ದೇವೆ. ಶ್ರೀರಾಮಾಯಣ ಮಹಾಸತ್ರ, ವಿಶ್ವ ಮಂಗಲ ಗೋಯಾತ್ರೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಅನುಭವವಿದೆ. ಸ್ವಯಂ ಇಚ್ಛೆಯಿಂದ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾಗಿ ಒಂದು ವರ್ಷದ ಗುರಿ ತಲುಪಿದ್ದೇನೆ. ಈಗಲೂ ಗೋಮಾತೆಯ ಸೇವೆಯನ್ನು ಮುಂದುವರಿಸುತ್ತಿದ್ದೇನೆ ” ಎನ್ನುವ ಇವರು ತಮ್ಮ ಮನೆಯಲ್ಲೂ ಎರಡು ದೇಶೀಯ ತಳಿಯ ಹಸುಗಳನ್ನು ಸಾಕುತ್ತಿದ್ದಾರೆ. ಮಾತ್ರವಲ್ಲ ಪ್ರತೀ ವರ್ಷವೂ ತಮ್ಮ ಗದ್ದೆಯಲ್ಲಿ ಬೆಳೆದ ಮೇವನ್ನು ಹೊಸಾಡ ಗೋಶಾಲೆಗೂ ನೀಡುತ್ತಿದ್ದಾರೆ.

 

ಮನದಲ್ಲಿರುವ ಭಾವಗಳನ್ನು ಅರಿತು ಅದು ಕೈಗೂಡುವಂತೆ ಅನುಗ್ರಹಿಸುವ ಶ್ರೀಗುರುಗಳ ಮೇಲೆ ಅತ್ಯಂತ ಶ್ರದ್ಧಾಭಕ್ತಿಗಳನ್ನು ಹೊಂದಿರುವ ಲಲಿತಾ ವಿ ಹೆಗಡೆಯವರು ಗುರಿಕ್ಕಾರರೂ ಆಗಿರುವ ತಮ್ಮ ಪತಿ ವಿಶ್ವನಾಥ ಹೆಗಡೆಯವರ ಅನಾರೋಗ್ಯದ ಸಂದರ್ಭದಲ್ಲಿ ಶ್ರೀಗುರುಗಳ ಕೃಪೆ ಯಾವ ರೀತಿಯಲ್ಲಿ ಅವರನ್ನು ಕಷ್ಟದಿಂದ ಪಾರು ಮಾಡಿತು ಎಂಬುದನ್ನು ಸ್ಮರಿಸಿಕೊಳ್ಳುತ್ತಾರೆ.

 

” ಕೆಲವು ವರ್ಷಗಳ ಹಿಂದೆ ನಮ್ಮವರಿಗೆ ಹೃದಯದ ಸಮಸ್ಯೆ ತೀವ್ರವಾಗಿ ವೈದ್ಯರೂ ಸಂಪೂರ್ಣ ಭರವಸೆ ನೀಡುವಲ್ಲಿ ವಿಫಲರಾಗಿದ್ದರು. ಆ ಕ್ಷಣದಲ್ಲಿ ಕಣ್ಮುಚ್ಚಿ ಪ್ರಾರ್ಥಿಸಿದ್ದು ಶ್ರೀಗುರು ಚರಣಗಳನ್ನು ಮಾತ್ರ. ಹೃದಯದಲ್ಲಿ ಶ್ರೀಗುರುಗಳ ಮೂರ್ತಿಯನ್ನು ಸಂಕಲ್ಪಿಸಿ ಮನಸಾರೆ ಮಾಡಿದ ಪ್ರಾರ್ಥನೆ ವ್ಯರ್ಥವಾಗಲಿಲ್ಲ. ಶ್ರೀಗುರುಗಳ ಮಂತ್ರಾಕ್ಷತೆಯ ಪ್ರಭಾವದಿಂದಾಗಿ ನಮ್ಮವರಿಗೆ ವೈದ್ಯರ ಚಿಕಿತ್ಸೆ ಫಲಿಸಿ ಅವರು ಬಹಳ ಬೇಗನೆ ಚೇತರಿಸಿಕೊಂಡರು. ಜೀವನದ ಸಂಕಷ್ಟದ ಸಮಯದಲ್ಲಿ ನಾವು ಶ್ರದ್ಧೆಯಿಂದ ಸ್ಮರಿಸಿದರೆ ಶ್ರೀಗುರುಗಳ ಅನುಗ್ರಹ ಖಂಡಿತ ದೊರಕುತ್ತದೆ ” ಎನ್ನುವ ಲಲಿತಾ ವಿ .ಹೆಗಡೆಯವರ ಶ್ರೀಮಠದ ಸೇವೆ ಹಾಗೂ ಗೋಮಾತೆಯ ಸೇವೆಗೆ ಮನೆಯವರ ಸಂಪೂರ್ಣ ಸಹಕಾರ ದೊರಕಿದೆ. ಮೂವರು ಮಕ್ಕಳು ಶ್ರೀಮಠದ ಬಗ್ಗೆ ಶ್ರದ್ಧಾಭಾವನೆ ತಳೆದಿದ್ದಾರೆ.

 

 

ಪ್ರಸನ್ನಾ ವಿ ಚೆಕ್ಕೆಮನೆ

Author Details


Srimukha

Leave a Reply

Your email address will not be published. Required fields are marked *