ಮೆಕಾಲೆ ಪ್ರಣೀತವಲ್ಲದ, ಶುದ್ಧ ಭಾರತೀಯ ಪಾರಂಪರಿಕ ಶಿಕ್ಷಣ ನೀಡುವ ಪರಂಪರಾ ಗುರುಕುಲ ಈ ವರ್ಷದ ಜೂನ್‍ನಿಂದ ಗೋಕರ್ಣ ಸಮೀಪದ ಅಶೋಕೆಯಲ್ಲಿ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ಆರಂಭವಾಗಲಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರಕಟಿಸಿದರು.
ಜಾಲ್ಸೂರು ಸಮೀಪದ ಮುರೂರು ಮೀನಗದ್ದೆಯಲ್ಲಿ ನಡೆದ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸಂವಾದ ಕಾರ್ಯದಲ್ಲಿ ಪರಮಪೂಜ್ಯರು ಆಶೀರ್ವಚನ ನೀಡಿದರು.
ದೇಶದ ಶಿಕ್ಷಣ ವ್ಯವಸ್ಥೆಗಿಂತ ಭಿನ್ನವಾದ ಹೆಜ್ಜೆ ಇದಾಗಿರುತ್ತದೆ. ಮೆಕಾಲೆ ಶಿಕ್ಷಣ ಜಾರಿಗೆ ಬರುವ ಮುನ್ನ ಇದ್ದ ಶಿಕ್ಷಣವನ್ನು ಮರಳಿ ತರುವ ಪ್ರಯತ್ನ ಇದಾಗಿದ್ದು, ಆರು ವರ್ಷಗಳಲ್ಲಿ ಹನ್ನೆರಡು ವಿದ್ಯೆಗಳ ಪೂರ್ವಶಿಕ್ಷಣ, ಪೂರಕವಾಗಿ ಆರು ವಿದ್ಯೆಯ ಕಲಿಕೆ ಹೀಗೆ ಹದಿನೆಂಟು ವಿದ್ಯೆಗಳನ್ನು ಇಲ್ಲಿ ಶಿಕ್ಷಣಾರ್ಥಿಗಳು ಪಡೆಯಲಿದ್ದಾರೆ. ಪಾಕಶಾಸ್ತ್ರದಿಂದ ಹಿಡಿದು ವೇದಾಂತದವರೆಗೆ ಮಾತ್ರವಲ್ಲದೇ ವ್ಯಾವಹಾರಿಕವಾಗಿ ಅಗತ್ಯವಾದ ಆಧುನಿಕ ಶಿಕ್ಷಣವೂ ಇಲ್ಲಿ ಇರುತ್ತದೆ ಎಂದು ವಿವರಿಸಿದರು.
ಆದರೆ ಆಧುನಿಕತೆ ಎಂದಿಗೂ ಪುರಾತನ ವ್ಯವಸ್ಥೆಯನ್ನು ನುಂಗುವಂತಿರಬಾರದು. ಹದವರಿತ ನವೀನ ಶಿಕ್ಷಣ, ಪಾರಂಪರಿಕ ಶಿಕ್ಷಣ ಪ್ರಧಾನವಾಗಿ ಇರುವ ಗುರುಕುಲ ಇದಾಗಿರುತ್ತದೆ. ಒಂದೆರಡು ವಿದ್ಯೆಗಳಲ್ಲಿ ಪ್ರಕಾಂಡ ಪಾಂಡಿತ್ಯಕ್ಕೆ ಇಲ್ಲಿ ವ್ಯವಸ್ಥೆ ಇರುತ್ತದೆ. ಪ್ರಾಚೀನ ಗುರುಕುಲಗಳ ಮಾದರಿಯಲ್ಲಿ ನೀಡುವ ಶಿಕ್ಷಣ ಪದ್ಧತಿಯನ್ನು ಮುಂದೆ ಇಡೀ ದೇಶ, ಇಡೀ ವಿಶ್ವವೇ ಅನುಸರಸಲಿದೆ ಎಂದು ಹೇಳಿದರು.
ಸಾಮಾನ್ಯವಾಗಿ ಒಳ್ಳೆಯ ಹೋರಾಟಗಳಿಗೆ ಆರಂಭದಲ್ಲಿ ಅಂಥ ಬೆಂಬಲ ಸಿಗದು; ಆದರೆ ಕ್ರಮೇಣ ಅದಕ್ಕೆ ಜನ ಸೇರುತ್ತಾ ಹೋಗುತ್ತಾರೆ. ಇದು ಗಂಗಾನದಿಯಂತೆ. ಪ್ರಯತ್ನದಲ್ಲಿ ತಪ್ಪುಗಳು ಸಹಜ; ಕಗ್ಗದಲ್ಲಿ ಹೇಳಿದಂತೆ ಧೀರ ಮಾರ್ಗವನ್ನು ಅನುಸರಿಸಬೇಕೇ ವಿನಃ ಕೈಚೆಲ್ಲಿ ಕುಳಿತುಕೊಳ್ಳುವಂತಿಲ್ಲ. ವ್ಯವಸ್ಥೆ, ಧರ್ಮ, ದೇಶದ ಬಗ್ಗೆ ಗೊಣಗುತ್ತಾ ಇರುವುದರಲ್ಲಿ ಯಾವುದೇ ಅರ್ಥವಿಲ್ಲ. ಅದಕ್ಕೆ ಕೈಲಾದ್ದನ್ನು ಮಾಡುವ ಜವಾಬ್ದಾರಿ ಎಲ್ಲರ ಮೇಲೆ ಇದೆ ಎಂದು ಸೂಚಿಸಿದರು.
ದೇಶದ ಮೇಲೆ ಬಾಹ್ಯ ಮತ್ತು ಆಂತರಿಕವಾಗಿಯೂ ಆಕ್ರಮಣಗಳು ನಡೆದಿವೆ. ಈ ಅವಧಿಯಲ್ಲಿ ದೇಶವನ್ನು ಹಾಳು ಮಾಡುವ ಪ್ರಯತ್ನಗಳು ನಡೆದಿವೆ. ಆಂತರಿಕವಾಗಿ ಜನಮಾನಸವನ್ನು ಹಾಳು ಮಾಡುವ ಪ್ರಯತ್ನಗಳು ಕೂಡಾ ನಿರಂತರವಾಗಿ ನಡೆಯುತ್ತಿವೆ. ನಮ್ಮತನವನ್ನೇ ಮರೆಸುವ ಪ್ರಯತ್ನಗಳು ನಡೆದಿದ್ದು, ಇಂದು ಭಾರತೀಯರು ಬಾಹ್ಯವಾಗಿ ಕಂದುಬಣ್ಣದವರಾಗಿದ್ದರೂ, ಅಂತರ್ಯದಲ್ಲಿ ನಾವು ಬಿಳಿಯರೇ (ಬ್ರಿಟಿಷರು) ಆಗಿದ್ದೇವೆ ಎಂದು ಮಾರ್ಮಿಕವಾಗಿ ನುಡಿದರು.
ನಮ್ಮ ಜೀವನಪದ್ಧತಿ ಇಂದು ಪರಕೀಯವಾಗಿದೆ. ನಮ್ಮ ಸಹಜ ಸಂಸ್ಕøತಿ ವಿಚಿತ್ರ ಎನಿಸುವ ಸ್ಥಿತಿ ಇದೆ. ನಮ್ಮ ಆಹಾರ ವಿಹಾರ, ಉಡುಗೆ- ತೊಡುಗೆ ಅನುಷ್ಠಾನ ಹೀಗೆ ನಮ್ಮ ದಿನಚರಿಯನ್ನು ಅವಲೋಕಿಸಿದರೆ ನಾವು ನಾವಾಗಿ ಉಳಿದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅದನ್ನು ಸ್ವಸ್ಥ ರೂಪಕ್ಕೆ ತರುವ ಉದ್ದೇಶದಿಂದಲೇ ವಿವಿವಿ ಆವೀರ್ಭವಿಸಿದೆ ಎಂದು ಸ್ಪಷ್ಟಪಡಿಸಿದರು.
ಆಯಾ ಕಾಲದ ಸವಾಲುಗಳಿಗೆ ಉತ್ತರ ನೀಡಬೇಕು ಎನ್ನುವುದೇ ಶ್ರೀಶಂಕರರ ಆಶಯ. ಅವರ ಹಾದಿಯಲ್ಲಿ ನಡೆಯುವುದೇ ಈ ವಿಶಿಷ್ಟ ಪ್ರಯತ್ನ. ದೇಶ- ಧರ್ಮವನ್ನು ಉಳಿಸುವ ಧರ್ಮಯೋಧರನ್ನು ಸಾವಿರಾರು ಸಂಖ್ಯೆಯಲ್ಲಿ ಸೃಷ್ಟಿಸಿ ಸಮಾಜಕ್ಕೆ ಅರ್ಪಿಸುವ ಪ್ರಯತ್ನ ನಮ್ಮ ವಿಶ್ವವಿದ್ಯಾಪೀಠದ್ದು. ಬೇರೆ ಯಾರೂ ಮಾಡಲಾಗದ್ದನ್ನು ಮಾಡುವುದು ಶ್ರೀಪೀಠದ ಸಂಕಲ್ಪ. ಇದರ ಫಲ ದೇಶಕ್ಕೆ ವಿಶ್ವಕ್ಕೆ ದೊರಕಿಸುವ ಮಹಾಯಜ್ಞದಲ್ಲಿ ನಿಮ್ಮ ಪಾತ್ರವೂ ಇರಬೇಕು ಎಂದು ನೆನಪಿಸುವುದೇ ವಿವಿವಿ ಸಂವಾದದ ಉದ್ದೇಶ. ಭವ್ಯ ಸೌಧದಲ್ಲಿ ನೀವು ಇಟ್ಟಿಗೆಯಾಗಿ. ಭವ್ಯ ಯಜ್ಞದಲ್ಲಿ ಕಟ್ಟಿಗೆಗಳಾಗಿ. ಮಠದ ಶಿಷ್ಯರಲ್ಲಿ ಅಪಾರ ಶಕ್ತಿ ಇದೆ. ಇಂಥ ಇತಿಹಾಸ ಸೃಷ್ಟಿಸಲು ನಿಮ್ಮ ಶಕ್ತಿ ವಿನಿಯೋಗಿಸಿ ಎಂದು ಕರೆ ನೀಡಿದರು.
ವಿವಿವಿ ವಿದ್ಯಾಪರಿಷತ್ ಕಾರ್ಯದರ್ಶಿ ಎಸ್‍ಎಸ್ ಹೆಗಡೆ ಮತ್ತು ವಿಶ್ವೇಶ್ವರ ಭಟ್ ಉಂಡೇಮನೆ ಪ್ರಾಸ್ತಾವಿಕ ಮಾತನಾಡಿದರು. ಆರೆಸ್ಸೆಸ್ ಮುಖಂಡ ನಾ. ಸೀತಾರಾಮ, ಅರ್ಥಶಾಸ್ತ್ರ ಉಪನ್ಯಾಸಕಿ ಯಶೋಧಾ ರಾಮಚಂದ್ರ, ಉದ್ಯಮಿ ಗಿರಿಧರ ಹೆಗಡೆ, ಗೇರು ಉದ್ಯಮಿ ಸುಧಾಕರ ಕಾಮತ್, ವರ್ತಕ ಸಮುದಾಯದ ಆನಂದ ಪೂಜಾರಿ, ಪದ್ಮಶ್ರೀ ಡಾ.ಗಿರೀಶ್ ಭಾರಧ್ವಾಜ್, ಪ್ರೊ.ಶ್ರೀಕೃಷ್ಣ ಭಟ್, ಪದ್ಮನಾಭ ಭಟ್, ಶ್ರೀಧರ ಭಟ್ ಕುದ್ಕುಳಿ, ಜಗನ್ನಿವಾಸ ರಾವ್, ಸುರೇಶ್ ಕನೆಮರಡ್ಕ, ಗೋಪಾಲ ರಾವ್, ಶಿವಪ್ರಸಾದ್, ಶ್ರೀಕೃಷ್ಣ ಮೀನಗದ್ದೆ ಮತ್ತಿತರರು ಉಪಸ್ಥಿತರಿದ್ದರು.