” ನಿರಂತರ ಶ್ರೀಗುರು ಸ್ಮರಣೆಯಿಂದ ಕಷ್ಟಗಳು ದೂರ ” : ಛಾಯಾಮೂರ್ತಿ ಹೊಸನಗರ

ಮಾತೃತ್ವಮ್

” ಬಾಲ್ಯದಿಂದಲೇ ಹಸುಗಳ ಮೇಲೆ ತುಂಬ ಮಮತೆ. ಮನೆಯಲ್ಲಿ ಹಸುಗಳನ್ನು ಸಾಕುತ್ತಿದ್ದೆವು. ಜೊತೆಗೆ ಮೊದಲಿನಿಂದಲೂ ಶ್ರೀಮಠದ ಸೇವೆಯಲ್ಲಿ ಆಸಕ್ತಿ ಹೊಂದಿದವರು ನಾವು.ಹಾಗಾಗಿಯೇ ಶ್ರೀಗುರುಗಳ ನಿರ್ದೇಶಾನುಸಾರವಾಗಿ ದೊರಕಿದ ವಿವಿಧ ರೀತಿಯ ಗೋಸೇವೆಯಲ್ಲಿ ಕೈ ಜೋಡಿಸಿದ್ದೇವೆ. ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡ ಮೇಲೆ ಬದುಕಿನಲ್ಲಿ ಕ್ಷೇಮಾಭಿವೃದ್ಧಿಯ ಪಥ ತೆರೆದುಕೊಂಡಿದೆ ” ಎಂದು ನುಡಿದವರು ರಾಮಚಂದ್ರಾಪುರ ಮಂಡಲ ಹೊಸನಗರ ವಲಯದ ಹೆದ್ಲಿ ನಿವಾಸಿಗಳಾಗಿರುವ ರಾಮಮೂರ್ತಿ ಅವರ ಪತ್ನಿ ಛಾಯಾ ಆರ್. ಮೂರ್ತಿ.

ಹೆದ್ಲಿ ಭಾಸ್ಕರ ಭಟ್, ಸರಸ್ವತಿ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

” ನಿರಂತರ ಶ್ರೀಗುರು ಸ್ಮರಣೆಯಿಂದ ಬದುಕಿನ ಅನೇಕ ಸಂಕಷ್ಟಗಳಿಂದ ಪಾರಾಗಿದ್ದೇವೆ. ಒಂದು ಬಾರಿ ನಾವು ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿ ಮೂರು ಸುತ್ತು ಉರುಳಿತು. ಭಯದಿಂದ ಶ್ರೀಗುರು ಸ್ಮರಣೆ ಮಾಡುತ್ತಾ ಕಣ್ಮುಚ್ಚಿ ಕುಳಿತೆ. ಬ್ಯಾಗ್ ನಲ್ಲಿ ಮಂತ್ರಾಕ್ಷತೆಯೂ ಇತ್ತು.ಬಹುಶಃ ಅದರ ಪರಿಣಾಮ ಇರಬಹುದು. ಸಣ್ಣಪುಟ್ಟ ಗಾಯಗಳೊಂದಿಗೆ ನಾವು ಸಂಪೂರ್ಣವಾಗಿ ಪ್ರಾಣಾಪಾಯದಿಂದ ಪಾರಾಗಿದ್ದೆವು. ಇದು ಶ್ರೀಗುರುಗಳ ಅನುಗ್ರಹ ಎಂಬ ಬಲವಾದ ನಂಬಿಕೆ ನನ್ನದು ” ಎನ್ನುವ ಛಾಯಾಮೂರ್ತಿ ಆರು ವರ್ಷಗಳ ಕಾಲ ಹೊಸನಗರ ವಲಯದ ಮಾತೃ ಪ್ರಧಾನೆಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಮಂಡಲ ಮುಷ್ಟಿ ಭಿಕ್ಷಾ ಪ್ರಧಾನೆ ಹಾಗೂ ಹೊಸನಗರ ವಲಯಾಧ್ಯಕ್ಷೆಯೂ ಆಗಿರುವ ಇವರು ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾಗಿ ಬಾಗಿನವನ್ನೂ ಪಡೆದವರು.

” ಪೂರ್ವ ಜನ್ಮದ ಸುಕೃತದಿಂದ ನಮಗೆ ಈ ಗುರುಗಳು ದೊರಕಿದ್ದಾರೆ. ನಮ್ಮ ಮನದ ಭಾವನೆಗಳನ್ನು ಅರಿತುಕೊಂಡು ನಮ್ಮನ್ನು ಅನುಗ್ರಹಿಸುವ ಶ್ರೀಗುರುಗಳ ಕೃಪೆಯೊಂದಿದ್ದರೆ ಕೊನೆ ತನಕವೂ ಶ್ರೀಮಠದ, ಗೋಮಾತೆಯ ಸೇವೆ ಮಾಡಲು ಸಾಧ್ಯವಿದೆ ” ಎನ್ನುವ ಛಾಯಾಮೂರ್ತಿಯವರ ಪತಿ ರಾಮಮೂರ್ತಿಯವರು ಸುಮಾರು ಇಪ್ಪತ್ತು ವರ್ಷಗಳಿಂದ ಗುರಿಕ್ಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

” ಗೋಮಾತೆಯ ಸೇವೆಗೆ ಅನೇಕ ಮಂದಿ ಕೈ ಜೋಡಿಸಿದ್ದಾರೆ. ಶ್ರೀಗುರುಗಳ ಕೃಪೆಯಿಂದ ಬಹಳ ಬೇಗನೆ ಗುರಿ ತಲುಪಿದೆ. ಇನ್ನು ಮುಂದೆಯೂ ಗೋಮಾತೆಯ ಸೇವೆಯನ್ನು ಮುಂದುವರಿಸುವ ಅಭಿಲಾಷೆಯಿದೆ. ಮಂಗಲ ಗೋಯಾತ್ರೆ, ವಿಶ್ವಗೋಸಮ್ಮೇಳನ, ಗೋಪ್ರಾಣ ಬಿಕ್ಷಾ ಮೊದಲಾದವುಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಅನುಭವವಿದೆ ನನಗೆ. ಮಕ್ಕಳಿಬ್ಬರೂ ನನ್ನ ಗೋಸೇವೆಗೆ ಕೈ ಜೋಡಿಸಿದ್ದಾರೆ ಮಾತ್ರವಲ್ಲ ಪ್ರತೀ ತಿಂಗಳು ಮಹಾನಂದಿ ಗೋಶಾಲೆಗೂ ಕಾಣಿಕೆ ನೀಡುತ್ತಿದ್ದಾರೆ ” ಎಂದು ಸಂತಸದಿಂದ ನುಡಿಯುವ ಛಾಯಾಮೂರ್ತಿಯವರಿಗೆ ನಿರಂತರವಾಗಿ ಶ್ರೀಮಠದ ಸೇವೆಯಲ್ಲಿ ಮುಂದುವರಿಯುವ ಹಂಬಲವಿದೆ.

ಪ್ರಸನ್ನಾ ವಿ ಚೆಕ್ಕೆಮನೆ

Author Details


Srimukha

Leave a Reply

Your email address will not be published. Required fields are marked *