” ಮಾತೆಯರ ಸ್ವಾವಲಂಬಿ ಬದುಕಿಗಾಗಿ ಶ್ರೀಗುರುಗಳು ತೋರಿದ ಹಾದಿಯಲ್ಲಿ ಮುನ್ನಡೆದವಳು ನಾನು. ಮುಳ್ಳೇರಿಯ ಮಂಡಲದ ಬದಿಯಡ್ಕದಲ್ಲಿರುವ ‘ ಮಹಿಳೋದಯ ‘ ಸಂಸ್ಥೆಯಂತೆ ನಮ್ಮ ಮಂಗಳೂರು ಮಂಡಲದಲ್ಲೂ ಒಂದು ಸಂಸ್ಥೆಯನ್ನು ಸ್ಥಾಪಿಸಬೇಕೆಂಬ ಅಭಿಲಾಷೆಯಿದ್ದರೂ ಅನೇಕ ಕಾರಣಗಳಿಂದಾಗಿ ಆ ಯೋಜನೆ ಫಲಿಸಲಿಲ್ಲ. ಆದರೆ ನಾನು ಮಾತ್ರ ಉಪ್ಪಿನಕಾಯಿ, ಸೆಂಡಿಗೆ, ಹಪ್ಪಳಗಳನ್ನು ತಯಾರಿಸಿ ಮಾರಾಟ ಮಾಡಿ ಶ್ರೀಗಳು ತೋರಿದ ಆದರ್ಶದ ಪಥದಲ್ಲಿ ಮುನ್ನಡೆಯುತ್ತಿದ್ದೇನೆ. ಇದು ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ ” ಎಂದವರು ಮಂಗಳೂರು ಮಂಡಲ ಕನ್ಯಾನ ವಲಯದ ಅಡ್ವಾಯಿ ಸುಬ್ಬಣ್ಣ ಭಟ್ ಅವರ ಪತ್ನಿ ಸವಿತಾ ಭಟ್.
ಉರಿಮಜಲು ಗೋಪಾಲಕೃಷ್ಣ ಭಟ್ , ಗೌರಮ್ಮ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿಯನ್ನು ತಲುಪಿದ ಮಾಸದ ಮಾತೆಯಾಗಿದ್ದಾರೆ.
” ಹಿರಿಯ ಗುರುಗಳ ಕಾಲದಿಂದಲೇ ಶ್ರೀಮಠದ ಸಂಪರ್ಕವಿತ್ತು. ಆದರೆ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲಾರಂಭಿಸಿದ್ದು ನಮ್ಮ ಈಗಿನ ಗುರುಗಳು ಪೀಠವೇರಿದ ಮೇಲೆ. ಅಡುಗೆ ವಿಷಯದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ನನಗೆ ಕೆಕ್ಕಾರು ಚಾತುರ್ಮಾಸ್ಯದ ಸಂದರ್ಭದಲ್ಲಿ ವಿವಿಧ ಬಗೆಯ ತಂಬುಳಿಗಳನ್ನು ತಯಾರಿಸುವ ಅವಕಾಶ ಒದಗಿಬಂತು ” ಎನ್ನುವ ಇವರು ಮಾತೃತ್ವಮ್ ಯೋಜನೆಯ ಗುರಿ ತಲುಪುವ ಮೊತ್ತವನ್ನು ಈ ಇಳಿ ವಯಸ್ಸಿನಲ್ಲೂ ತಮ್ಮ ಸ್ವ ಉದ್ಯೋಗದ ಮೂಲಕವೇ ಭರಿಸಿಕೊಂಡು ಇತರ ಮಾತೆಯರಿಗೆ ಮಾದರಿಯಾಗಿದ್ದಾರೆ.
” ಬದುಕಿನಲ್ಲಿ ಶ್ರೀಗುರುಗಳ ಕೃಪೆ ಇರುವುದರಿಂದಲೇ ನಾನು ಮಾತೃತ್ವಮ್ ಯೋಜನೆಯ ಗುರಿ ತಲುಪುವಂತಾಯಿತು. ಶ್ರೀಗುರುಗಳ ವಿಶೇಷ ಕೃಪೆ ಒದಗಿ ಬಂದ ಕೆಲವು ಘಟನೆಗಳು ಜೀವನದಲ್ಲಿ ನಡೆದಿವೆ ” ಎನ್ನುವ ಸವಿತಾ ಭಟ್ ಮಾಣಿಮಠದಲ್ಲಿ ನಡೆದ ಒಂದು ಘಟನೆಯನ್ನು ಈ ರೀತಿಯಾಗಿ ನೆನಪಿಸಿಕೊಂಡಿದ್ದಾರೆ.
” ನನ್ನ ‘ ಚುಟುಕಿನ ಚೀಲ ‘ಎಂಬ ಚುಟುಕುಗಳ ಸಂಗ್ರಹದ ಕೃತಿಯನ್ನು ಶ್ರೀಗುರುಗಳ ಮೂಲಕವೇ ಲೋಕಾರ್ಪಣೆಗೊಳಿಸಿದ ದಿನ ನನ್ನ ಸ್ವ ಉದ್ಯೋಗದ ಉತ್ಪನ್ನಗಳ ಮಳಿಗೆಯನ್ನು ಅಲ್ಲಿ ಇರಿಸಿದ್ದೆ. ಅವುಗಳ ಜೊತೆಗೆ ಅಂದು ಬಿಡುಗಡೆಯಾದ ಪುಸ್ತಕವೂ ಇತ್ತು. ಸ್ವಲ್ಪ ಹೊತ್ತಿನಲ್ಲಿ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿತು. ಕೂಡಲೇ ಕೈಗೆ ಸಿಕ್ಕಿದ ವಸ್ತುಗಳನ್ನು ಅವಸರವಸರವಾಗಿ ನಮ್ಮ ವಾಹನದಲ್ಲಿ ತುಂಬಿ ಅಲ್ಲಿಂದ ಹೊರಟೆವು. ಮುಸಲಧಾರೆಯಂತೆ ಸುರಿಯುವ ಮಳೆಯಲ್ಲಿ ಯಾವೆಲ್ಲ ವಸ್ತುಗಳನ್ನು ವಾಹನದಲ್ಲಿ ಇರಿಸಿದ್ದೇವೆ ಎಂದು ಗಮನಿಸುವುದು ಸಹಾ ಸುಲಭವಾಗಿರಲಿಲ್ಲ. ಮನೆಗೆ ಬಂದು ನೋಡಿದಾಗ ಆ ದಿನ ಬಿಡುಗಡೆಯಾದ ನನ್ನ ಪುಸ್ತಕದ ಕಟ್ಟು ಕಾರಿನಲ್ಲಿ ಇರಲಿಲ್ಲ. ಮಾಡು ಇಲ್ಲದ ನನ್ನ ಮಳಿಗೆಯಲ್ಲಿ ಇರಿಸಿದ ಪುಸ್ತಕದ ಕಟ್ಟುಗಳು ಈ ಧಾರಾಕಾರವಾದ ಮಳೆಯಲ್ಲಿ ಏನಾಗಿರಬಹುದು ಎಂದು ಊಹಿಸಲೂ ಸಾಧ್ಯವಾಗದೆ ಮನದ ತಲ್ಲಣವನ್ನು ಮರೆಮಾಚಿ ಶ್ರೀಗುರು ಸ್ಮರಣೆಯಲ್ಲಿ ನಿರತಳಾದೆ. ಮರುದಿನ ಮತ್ತೆ ಮಾಣಿಮಠಕ್ಕೆ ತೆರಳಿ ಅಲ್ಲಿರುವವರಲ್ಲಿ ಪುಸ್ತಕದ ಬಗ್ಗೆ ವಿಚಾರಿಸಿದರೆ ಯಾರಿಗೂ ಆ ವಿಚಾರ ಗೊತ್ತಿರಲಿಲ್ಲ. ಮಳೆ ಸುರಿದು ನೀರು ನಿಂತಿರುವ ಜಾಗದಲ್ಲಿ ಪುಸ್ತಕ ಇರಲು ಸಾಧ್ಯವೇ ಎಂದು ಯೋಚಿಸುತ್ತಾ ಹಿಂದಿನ ದಿನ ಮಳಿಗೆ ಇರಿಸಿದಲ್ಲಿ ಹೋಗಿ ನೋಡಿದರೆ ಅಚ್ಚರಿ ಕಾದಿತ್ತು. ಸುತ್ತಲೂ ಮಳೆ ನೀರು ತುಂಬಿದ್ದರೂ ನನಗೆ ಮಳಿಗೆಯಲ್ಲಿ ವಸ್ತುಗಳನ್ನು ಇರಿಸಲು ನೀಡಿದ ಬೆಂಚ್ ಒಂದರ ಕೆಳಗೆ ಮರದ ಹಲಗೆಯೊಂದನ್ನು ಎತ್ತರವಾಗಿ ಇರಿಸಿ ಅದರಲ್ಲಿ ನನ್ನ ಪುಸ್ತಕದ ಪೆಟ್ಟಿಗೆ ಭದ್ರವಾಗಿ ಇರಿಸಲಾಗಿತ್ತು. ಕೆಳಗಿನಿಂದಲೂ, ಮೇಲಿನಿಂದಲೂ ನೀರು ಸೋಕದಂತೆ ಅಷ್ಟು ಜೋಪಾನವಾಗಿ ಪುಸ್ತಕದ ಪೆಟ್ಟಿಗೆಯನ್ನು ಸಂರಕ್ಷಿಸಿದ್ದು ಯಾರು ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿರಲಿಲ್ಲ. ಇದಲ್ಲವೇ ಶ್ರೀಗುರುಗಳ ಪವಾಡ ” ಎನ್ನುವ ಇವರು ಹೊಸನಗರದಲ್ಲಿ ನಡೆದ ಶ್ರೀರಾಮಾಯಣ ಮಹಾಸತ್ರದ ಸಂದರ್ಭದಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದವರು.
ಆ ಸಂದರ್ಭದಲ್ಲಿ ಅಪರಿಚಿತ ಮಾತೆಯೊಬ್ಬರು ತುಂಬಾ ವಿಶ್ವಾಸದಿಂದ ಶ್ರೀಗುರುಗಳಿಗೆ ಸಮರ್ಪಣೆ ಮಾಡಲು ತಮ್ಮ ಒಡವೆಗಳನ್ನು ನೀಡಿದ ಘಟನೆ ಅವಿಸ್ಮರಣೀಯ ಎನ್ನುತ್ತಾ ತಾನೇ ಸ್ವಯಂ ಅಲ್ಲಿ ಇದ್ದರೂ ನನ್ನ ಮೂಲಕವೇ ಸಮರ್ಪಣೆ ಮಾಡಿದ ಆ ಮಾತೆ ಯಾರೆಂದು ನನಗೆ ಈಗಲೂ ತಿಳಿದಿಲ್ಲ ‘ ಎನ್ನುವ ಸವಿತಾ ಭಟ್ ಸಾಹಿತ್ಯ ಕ್ಷೇತ್ರದಲ್ಲೂ ಸಾಧನೆ ಮಾಡಿ ಅನೇಕ ಕೃತಿಗಳನ್ನು ಪ್ರಕಟಿಸಿದವರು.
ಪ್ರಸನ್ನಾ ವಿ ಚೆಕ್ಕೆಮನೆ