ಗೋಕರ್ಣ: ಶ್ರೀಮಠದ ಸಮಸ್ತ ಪರಿವಾರ ಜೇನು ಗೂಡಿನಂತೆ. ಶ್ರೀಪೀಠ ರಾಣಿ ಹುಳದಂತೆ. ನಾವೆಲ್ಲ ಸೇರಿ ಜೇನು ಮಾತ್ರವಲ್ಲ; ಇಡೀ ಸಮಾಜಕ್ಕೆ ಅಮೃತವನ್ನೇ ಉಣಬಡಿಸೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ನುಡಿದರು.
ಅಶೋಕೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಭಾನುವಾರ ಸಂಪನ್ನಗೊಂಡ ಗುರುಕುಲ ಚಾತುರ್ಮಾಸ್ಯದ ಕಾರ್ಯಕರ್ತರ ಸಮ್ಮಿಲನದಲ್ಲಿ ಪರಮಪೂಜ್ಯರು ಆಶೀರ್ವಚನ ನೀಡಿದರು. ಕಾರ್ಯಕರ್ತರಲ್ಲಿ ಮಹಾಕಾಳಿಯ ಕೃಪೆ ಹಾಗೂ ಶಕ್ತಿಯ ಸಂಚಯನವಾಗಲಿ. ದೊಡ್ಡ ಸೇವೆಗೆ ಆಂಜನೇಯನ ಶಕ್ತಿ ಹಾಗೂ ವಿನಮ್ರತೆ ಎಲ್ಲ ಕಾರ್ಯಕರ್ತರಲ್ಲಿ ಬರಲಿ ಎಂದು ಆಶಿಸಿದರು.
ಬಿಂದು ಬಿಂದು ಸೇರಿ ಸಿಂಧು ನಿರ್ಮಾಣವಾಗುವಂತೆ ಬೃಹತ್ ಕಾರ್ಯಗಳು ಕಾರ್ಯಕರ್ತರ ಶ್ರಮದಿಂದ ಆಗುತ್ತದೆ. ಗುರುಸೇವೆ ಆತ್ಮೋನ್ನತಿಗೆ ಅವಕಾಶ. ಸೇವೆಯ ಭಾಗ್ಯ ಎಲ್ಲರಿಗೂ ದುರ್ಲಭ. ಇಂದು ಶ್ರೀಮಠದ ಕಾರ್ಯಕರ್ತರ ಮಹಾಸೈನ್ಯವೇ ಬೆಳೆದಿದೆ. ಸತ್ಪುರುಷರಾಗಿ, ಶ್ರೀಮಠದ ಶಿಷ್ಯರಾಗಿ, ಮಠ ನಮ್ಮದು ಎಂಬ ಭಾವನೆಯ ಕಾರ್ಯಕರ್ತರಾಗಬೇಕು. ಇದೆಲ್ಲವನ್ನೂ ಮೀರಿ ತರಬೇತಿ ಪಡೆಯುವ ನಿಟ್ಟಿನಲ್ಲಿ ಎಲ್ಲ ಕಾರ್ಯಕರ್ತರು ಗಮನ ಹರಿಸಬೇಕು ಎಂದು ಸೂಚಿಸಿದರು.
ಹೆಚ್ಚಿನ ಯೋಗ್ಯತೆ ಸಂಪಾದಿಸಲು ತರಬೇತಿ ಅಗತ್ಯ. ಎಷ್ಟೇ ಉತ್ತಮ ಭತ್ತವಾದರೂ ಅದನ್ನು ಸಂಸ್ಕರಿಸಿ ಅಕ್ಕಿ ಮಾಡಿ, ಅನ್ನ ಮಾಡುವಂತೆ ಕಾರ್ಯಕರ್ತರಿಗೂ ಸಂಸ್ಕಾರಗಳನ್ನು ನೀಡಬೇಕು. ನಮ್ಮ ಕಾರ್ಯಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹೇಗೆ ಮಾಡಬೇಕು ಎನ್ನುವುದನ್ನು ತರಬೇತಿ ಮೂಲಕ ಪಡೆಯಬೇಕು. ಆಗ ಪರಿಪೂರ್ಣತೆ ಬರುತ್ತದೆ ಎಂದು ಹೇಳಿದರು.
ಕಾರ್ಯಕರ್ತರಿಗೆ ಯಾವುದೇ ಕಷ್ಟ ಬಂದಾಗಲೂ ಪರಿಹರಿಸಲು ಶ್ರೀಪೀಠ ನಿಮ್ಮ ಬೆಂಬಲಕ್ಕಿದೆ ಎಂದು ಅಭಯ ನೀಡಿದರು.
ಪ್ರತಿಯೊಬ್ಬ ಕಾರ್ಯಕರ್ತರ ಸೇವೆ ಶ್ರೀಪೀಠಕ್ಕೆ, ಶ್ರೀರಾಮನಿಗೆ ಅದೇ ದಿನವೇ ಸಮರ್ಪಣೆಯಾಗುತ್ತದೆ. ಇಂದಿನ ಸಮ್ಮಿಲನ ಶ್ರೀಪೀಠದಿಂದ ನಿಮಗೆ ಸಲ್ಲುವ ಸ್ವೀಕೃತಿ ಎಂದು ಬಣ್ಣಿಸಿದರು. ಶಕ್ತಿ ಸ್ವರೂಪಿಣಿ ಮಹಾಕಾಳಿ, ಕಾರ್ಯಕರ್ತರಿಗೆ ಪರಮಾದರ್ಶವಾದ ಆಂಜನೇಯ ಶ್ರೀಮಠದ ಕಾರ್ಯಕರ್ತರಿಗೆ ಶಕ್ತಿ ತುಂಬಲಿ ಎಂದು ಆಶಿಸಿದರು.
ನೈಜ ಕಾರ್ಯಕರ್ತ ಪ್ರತಿಫಲ ಅಪೇಕ್ಷಿಸಬಾರದು; ಅಪೇಕ್ಷಿಸಿದವರಿಗೆ ಅಲ್ಪ ಫಲ ದೊರಕಿದರೆ, ಬಯಸದೇ ಇರುವವರಿಗೆ ಸೂಕ್ತ ಸಮಯದಲ್ಲಿ ಶ್ರೀರಾಮನೇ ಅದನ್ನು ಅನುಗ್ರಹಿಸುತ್ತಾನೆ ಎಂದರು.
ಕೃತಕರ್ಮರು, ಕೃತ ಪ್ರಯತ್ನರು ಸಮ್ಮಾನಕ್ಕೆ ಅರ್ಹರು. ಅಜೇಯ ಲಂಕೆಯನ್ನು ಗೆಲ್ಲಲು ವಾನರ ವೀರರು ಕಾರಣ. ಅವರು ಯುದ್ಧದಲ್ಲಿ ರಕ್ತ ಹರಿಸಿದ್ದಾರೆ. ಪ್ರಾಣ ತೆತ್ತಿದ್ದಾರೆ. ಆದರೂ ಬೆನ್ನು ತೋರಿಸಿದವರಲ್ಲ. ಸಂತೋಷದಿಂದ ಯುದ್ಧ ಮಾಡಿದ್ದಾರೆ. ರಾವಣನ ವಿರುದ್ಧ ರೋಷಾವೇಶದಿಂದ ಯುದ್ಧ ಮಾಡಿದ್ದಾರೆ. ಸೇವೆ, ತ್ಯಾಗ, ಬಲಿದಾನದ ಸಾಕಾರಮೂರ್ತಿಗಳಾದ ವಾನರ ವೀರರನ್ನು ಸತ್ಕರಿಸುವಂತೆ ರಾಮ, ವಿಭೀಷಣನಿಗೆ ಸೂಚನೆ ನೀಡಿದ್ದ. ಇದನ್ನೇ ಮಾದರಿಯನ್ನಾಗಿಟ್ಟುಕೊಂಡು ಇಂದಿನ ಸಮ್ಮಿಲನ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಕರ್ತವ್ಯ ಅಥವಾ ಪ್ರಯತ್ನವಷ್ಟೇ ನಮ್ಮದು; ಫಲ ದೇವರಿಗೆ ಬಿಟ್ಟದ್ದು. ಕಾರ್ಯಕರ್ತರ ಸೇವೆ, ಪ್ರಯತ್ನ, ತ್ಯಾಗ, ಸಮರ್ಪಣೆಯಿಂದಾಗಿ ಇಡೀ ಸಮಾಜವೇ ಚಾತುರ್ಮಾಸ್ಯದಲ್ಲಿ ಭಾಗವಹಿಸಿದೆ. ಕಾರ್ಯಕರ್ತರ ಸೇವೆ ಗುರುತಿಸುವ ಜತೆಗೆ ಕಾರ್ಯಕರ್ತರ ಸಮಗ್ರ ದಾಖಲಾತಿ ಅಗತ್ಯ. ಇದು ಇತಿಹಾಸದ ಪುಟದಲ್ಲಿ ದಾಖಲಾಗುವಂಥದ್ದು ಎಂದು ಹೇಳಿದರು.
ಮುಂದಿನ ಪೀಳಿಗೆಯ ಸಲುವಾಗಿ ಶ್ರೀಮಠದ ಕಾರ್ಯಕರ್ತರ ದಾಖಲಾತಿ ನಡೆಯುತ್ತಿದೆ. ಕಾರ್ಯಕರ್ತರ ಸೇವಾಕೈಂಕರ್ಯಕ್ಕೆ ನಿರ್ದಿಷ್ಟ ಚೌಕಟ್ಟು ನೀಡುವುದು ಇದರ ಉದ್ದೇಶ. ಕಾರ್ಯಕ್ರಮಗಳಿಗಷ್ಟೇ ಅಲ್ಲದೇ ಪ್ರಕಲ್ಪಗಳಿಗೂ ಕಾರ್ಯಕರ್ತರೇ ಆಧಾರ. ಶ್ರೀಮಠದ ಕಾರ್ಯಕರ್ತರ ಪಡೆ ಒಂದು ಜೇನುಗೂಡು ಇದ್ದಂತೆ.
ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಾಂತ್ ಹೆಗಡೆ ದಂಪತಿ ಸಭಾಪೂಜೆ ನೆರವೇರಿಸಿದರು. ಕಾರ್ಯಕರ್ತರಿಗೆ ಶಕ್ತಿ, ರಕ್ಷೆ ಕೋರಿ ಆಂಜನೇಯ ಹವನ ನಡೆಯಿತು.