” ಬದುಕಿನ ಶ್ರೇಷ್ಠತೆ ಗೋಸೇವೆಯಲ್ಲಿದೆ ಎಂದು ತಿಳಿದಿದ್ದು ಶ್ರೀಗುರುಗಳ ಮೂಲಕ ” : ಸುಮನಾ ಗಣೇಶ ಹೆಗಡೆ ಕೆಕ್ಕಾರು

ಮಾತೃತ್ವಮ್

 

” ಶ್ರೀಮಠದ ಸಂಪರ್ಕಕ್ಕೆ ಬಂದ ಆರಂಭದಲ್ಲಿ ಮಠಕ್ಕೆ ಹೋದಾಗಲೆಲ್ಲ ತುಳಸೀಹಾರ ಕಟ್ಟುತ್ತಿದ್ದೆ. ನಂತರ ಇತರ ಕಾರ್ಯಗಳಲ್ಲಿ ಕೈಜೋಡಿಸತೊಡಗಿದೆ. ಶ್ರೀಗುರು ಸೇವೆಯಲ್ಲಿ ನಿರತವಾದಾಗ ದೊರಕುವ ಆತ್ಮತೃಪ್ತಿಯ ಆನಂದವನ್ನು ಅರಿತ ಮೇಲೆ ಮನಸ್ಸು ಸದಾ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಹಾತೊರೆಯತೊಡಗಿತು. ಶ್ರೀಗುರುಗಳ ಪ್ರವಚನಗಳನ್ನು ಸದಾ ಕೇಳುವುದರಿಂದ ಗೋಮಾತೆಯ ಶ್ರೇಷ್ಠತೆ ಅರ್ಥವಾಗಿದೆ. ಮನೆಯಲ್ಲಿಯೂ ಭಾರತೀಯ ಗೋತಳಿಗಳನ್ನೇ ಸಾಕುತ್ತಿದ್ದೇವೆ ” ಎಂದವರು ಕುಮಟಾ ಮಂಡಲ ಕೆಕ್ಕಾರು ವಲಯದ ಗಣೇಶ ಹೆಗಡೆಯವರ ಪತ್ನಿ ಸುಮನಾ ಹೆಗಡೆ.

 

ಮುಗುವ ಚೀನ್ ಕೋಡು ಪರಮೇಶ್ವರ ಭಟ್, ಗಣಪಿ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

 

” ಶ್ರೀಗುರುಗಳ, ದೇವರ ಅನುಗ್ರಹದಿಂದ ಬದುಕಿನಲ್ಲಿ ನೆಮ್ಮದಿ ಶಾಂತಿ ನೆಲೆಸಿದೆ.‌ ಕಂಡ ಕನಸುಗಳೆಲ್ಲ‌ ನನಸಾಗಿವೆ.‌ ನನ್ನ ಕೋರಿಕೆಯನ್ನು ಮನ್ನಿಸಿ ಶ್ರೀಗುರುಗಳೇ ನಮ್ಮ ಮನೆಗೆ ಚಿತ್ತೈಸಿದ್ದಾರೆ. ಇದಕ್ಕಿಂತ ಮಿಗಿಲಾಗಿ ಯಾವ ಸೌಭಾಗ್ಯವಿದೆ. ಹೆಚ್ಚು ಓಡಾಡಲು ಸಾಧ್ಯವಿಲ್ಲದ ಮಾವನವರಿಗೆ ಮನೆಯಲ್ಲಿಯೇ ಶ್ರೀಗುರುಗಳ ದರ್ಶನ ಭಾಗ್ಯ ದೊರಕಿದ್ದು ಪೂರ್ವ ಜನ್ಮದ ಸುಕೃತದಿಂದ ಎಂದೇ ನಮ್ಮ ಭಾವನೆ. ಈಗಲೂ ಆ ಘಟನೆ ಒಂದು ಪವಾಡದಂತೆನಿಸುತ್ತಿದೆ ” ಎನ್ನುವ ಸುಮನಾ ಅವರಿಗೆ ಮಾತೃತ್ವಮ್ ಯೋಜನೆಯ ಗುರಿ ತಲುಪಲು ಅನೇಕ ಮಂದಿ ಸಹಕಾರ ನೀಡಿದ್ದಾರೆ.

 

ಅಧ್ಯಾಪಕರಾದ ಪತಿ ಗಣೇಶ ಹೆಗಡೆಯವರ ಸಂಪೂರ್ಣ ಸಹಕಾರದಿಂದ ಕೆಕ್ಕಾರು ವಲಯದ ಮಾತೃ ವಿಭಾಗವನ್ನು ಸಂಘಟಿತಗೊಳಿಸಿ ಹಬ್ಬ ಹರಿದಿನಗಳಲ್ಲಿ ಕುಂಕುಮಾರ್ಚನೆ, ಸ್ತೋತ್ರ ಪಠಣ ಹಾಗೂ ಹಬ್ಬದ ವಿಶೇಷ ವ್ರತಾಚರಣೆಯ ಮಹತ್ವದ ಅರಿವನ್ನು ಮೂಡಿಸುತ್ತಾ ಮಠದ ಸೇವೆಯಲ್ಲಿ ನಿರತರಾಗಿರುವ ಇವರು ಮನೆಯ ಹಿರಿಯರ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಾ ತಮ್ಮ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮಾಸದ ಮಾತೆ.

 

” ಶ್ರೀಮಠದ ಸೇವೆ ನಮ್ಮ ಬದುಕಿನ ಒಂದು ಭಾಗವಾಗಿ ಬಿಟ್ಟಿದೆ.‌ ಮನದಲ್ಲಿ ಮೂಡಿದ ಎಷ್ಟೋ ಸಮಸ್ಯೆಗಳಿಗೆ ಶ್ರೀಗುರು ಸ್ಮರಣೆ ಮಾತ್ರದಿಂದಲೇ ಪರಿಹಾರ ದೊರಕಿದೆ. ಧರ್ಮದ ಹಾದಿಯಲ್ಲಿ ಮುನ್ನಡೆಸುವ ಇಂತಹ ಗುರುಗಳನ್ನು ಪಡೆದ ನಾವೇ ಧನ್ಯರು ” ಎನ್ನುವ ಇವರಿಗೆ ಜೀವನದ ಕೊನೆತನಕವೂ ಶ್ರೀಮಠದ ಸೇವೆಯನ್ನು ಮುಂದುವರಿಸಿಕೊಂಡು ಹೋಗುವ ಅವಕಾಶ ಒದಗಿಸಿಕೊಡು ಎಂಬುದೇ ಪ್ರಾರ್ಥನೆ.

 

ಪ್ರಸನ್ನಾ ವಿ ಚೆಕ್ಕೆಮನೆ

Author Details


Srimukha

Leave a Reply

Your email address will not be published. Required fields are marked *