ಈ ಜಗತ್ತಿನ ಒಳಿತಿಗಾಗಿ ಗೋಮಾತೆಯ ಸಂರಕ್ಷಣೆಯ ಹಾದಿಯನ್ನು ತೋರಿದ ಶ್ರೀಗುರುಗಳ ಕೃಪಾದೃಷ್ಟಿಯಿಂದಲೇ ನಮ್ಮ ಬದುಕು ಪಾವನವಾಗಿದೆ . ಸುಸಂಸ್ಕೃತ ಸಮಾಜದ ನಿರ್ಮಾಣಕ್ಕಾಗಿಯೇ ಶ್ರೀಸಂಸ್ಥಾನದವರು ಅನೇಕ ಅನುಷ್ಠಾನಗಳ, ಯೋಜನೆಗಳ ಅವಕಾಶಗಳನ್ನು ನಮಗೆ ಒದಗಿಸಿದ್ದಾರೆ . ಎಲ್ಲರಿಗೂ ಸುಲಭವಾಗಿ ಸರಳವಾಗಿ ಶ್ರೀಮಠದ ಸೇವೆ ಮಾಡುವ ಭಾಗ್ಯವನ್ನೂ ಕರುಣಿಸಿರುವ ಶ್ರೀಗುರುಗಳ ಕೃಪೆ ಎಂದರೆ ಅದು ಸಾಗರದಂತೆ ಅನಂತ. ಬದುಕಿನ ದುರಿತ ಪರ್ವತಗಳನ್ನು ದೂರ ಮಾಡಲು ಗುರುಕೃಪೆಗೆ ಮಾತ್ರ ಸಾಧ್ಯ ” ಎಂದವರು ಉಪ್ಪಿನಂಗಡಿ ಮಂಡಲ ಪಂಜ ವಲಯದ ಗೋಪಾಲಕೃಷ್ಣ ಭಟ್ ಉಂಡಿಲ ಇವರ ಪತ್ನಿ ಪೂರ್ಣಿಮಾ.ಮುಳ್ಳೇರಿಯ ಮಂಡಲ ಎಡಪ್ಪಾಡಿ ಮೂಲದ ಯೆಯ್ಯೂರು ವೆಂಕಟೇಶ್ವರ ಭಟ್ ಶಾರದಾ ದಂಪತಿಗಳ ಪುತ್ರಿಯಾದ ಇವರು ಒಂದು ವರ್ಷದ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.ಸುಮಾರು ಎರಡು ದಶಕಗಳಿಂದ ಶ್ರೀಮಠದ ಸಂಪರ್ಕದಲ್ಲಿರುವ ಪೂರ್ಣಿಮಾ ಪತಿಯ ಪ್ರೇರಣೆ ಹಾಗೂ ಸ್ವ ಇಚ್ಛೆಯಿಂದ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾದವರು. ” ಗೋಮಾತೆಯ ಸೇವೆಗೆ ಅನೇಕ ಮಂದಿ ಕೈ ಜೋಡಿಸಿದ್ದಾರೆ. ಈ ಯೋಜನೆಗೆ ಸಹಕಾರ ನೀಡಿದವರಿಗೂ ಮುಂದೆ ಬದುಕಿನಲ್ಲಿ ಏಳಿಗೆಯಾದ ಅನುಭವಗಳನ್ನು ಗಮನಿಸಿದ್ದೇನೆ. ಮಾತೃತ್ವಮ್ ಯೋಜನೆಯ ಬಗ್ಗೆ ಅನೇಕ ಗೋಬಂಧುಗಳು ಉತ್ತಮ ಅಭಿಪ್ರಾಯ ತಳೆದಿದ್ದಾರೆ ” ಎನ್ನುವ ಇವರು ತಮ್ಮ ಮನೆಯಲ್ಲೂ ಹಸುಗಳನ್ನು ಸಾಕುತ್ತಿದ್ದಾರೆ.” ಮನೆಯಲ್ಲಿ ಶಾಂತಿ, ಮನದಲ್ಲಿ ನೆಮ್ಮದಿ ನೆಲೆಸಬೇಕಾದರೆ ಶ್ರೀಗುರು ಸೇವೆ, ಗೋಮಾತೆಯ ಸೇವೆ ಮಾಡಬೇಕು. ಬದುಕೆಂಬ ಪಯಣದಲ್ಲಿ ತೊಡಕಾಗಿ ಬರುವ ಕಷ್ಟಗಳು ಶ್ರೀ ಗುರುಸ್ಮರಣೆ ಮಾತ್ರದಿಂದಲೇ ದೂರವಾಗಿವೆ. ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಮನೆಯವರ ಮತ್ತು ಇಬ್ಬರು ಮಕ್ಕಳ ಸಂಪೂರ್ಣ ಬೆಂಬಲವಿದೆ ” ಎನ್ನುವ ಪೂರ್ಣಿಮಾಗೆ ಇನ್ನಷ್ಟು ಹೆಚ್ಚು ಸಮಯವನ್ನು ಶ್ರೀಮಠದ ಸೇವೆ, ಗೋಸೇವೆಗಳಿಗೆ ಮೀಸಲಾಗಿರಿಸುವ ಅಭಿಲಾಷೆಯಿದೆ.
ಪ್ರಸನ್ನಾ ವಿ ಚೆಕ್ಕೆಮನೆ