” ಗೋವು ನಮ್ಮ ಜೀವನಾಧಾರ. ಗೋವಿಲ್ಲದಿದ್ದರೆ ನಾವಿಲ್ಲ. ಆದರೆ ಇಂದಿನ ನಗರದ ಜೀವನದ ಒತ್ತಡದ ನಡುವೆ ಗೋ ಸೇವೆ ಮಾಡಬೇಕೆಂಬ ಅಭಿಲಾಷೆ ಇದ್ದರೂ ಅದೆಷ್ಟೋ ಮಂದಿಗೆ ಅದು ಸಾಧ್ಯವಾಗುವುದಿಲ್ಲ. ಶ್ರೀಗುರುಗಳ ಮಾತೃತ್ವಮ್ ಯೋಜನೆಯ ಮೂಲಕ ಆ ಅಭಿಲಾಷೆ ಈಗ ಕೈಗೊಡಿದೆ. ಇದರಿಂದ ಬದುಕಿನಲ್ಲಿ ತುಂಬಾ ಬದಲಾವಣೆಗಳಾಗಿವೆ. ಮನಸ್ಸಿಗೆ ನೆಮ್ಮದಿ ದೊರಕಿದೆ ” ಎನ್ನುವವರು ತೀರ್ಥಹಳ್ಳಿ ತಾಲೂಕಿನ ಗನವಳ್ಳಿ ಮನೆತನದ ಸುಳೋಗೊಡು ಜಿ ಎಲ್ ಶ್ರೀನಿವಾಸಮೂರ್ತಿ, ಮೂಕಾಂಬಿಕಾ ದಂಪತಿಗಳ ಪುತ್ರಿಯಾದ ಗಾಯತ್ರಿ ಭಾಗ್ವತ್. ಮೂಲತಃ ಕುಮಟಾ ತಾಲೂಕು ಚಂದಾವರ ಸೀಮೆಯ ಪ್ರಸ್ತುತ ಬೆಂಗಳೂರು ಉತ್ತರಮಂಡಲದ ಮಹಾಲಕ್ಷ್ಮಿ ವಲಯದ ಬಸವೇಶ್ವರ ನಗರ ನಿವಾಸಿಗಳಾಗಿರುವ ಹಲ್ಸ್ಮಾವ್ ಶಾಂತರಾಮ ಭಾಗ್ವತ್ ಇವರ ಪತ್ನಿಯಾದ ಗಾಯತ್ರಿ ಪ್ರಸ್ತುತ ಬೆಂಗಳೂರು ಉತ್ತರಮಂಡಲದ ಮಾತೃ ಪ್ರಧಾನೆಯಾಗಿದ್ದಾರೆ.
ಅನೇಕ ವರ್ಷಗಳಿಂದ ಶ್ರೀಮಠದ ಸಂಪರ್ಕದಲ್ಲಿರುವ ಇವರು ೨೦೧೭ರಲ್ಲಿ ಶ್ರೀಮಠದ ಪದಾಧಿಕಾರಿಯಾಗಿ ಸೇವೆ ಸಲ್ಲಿಸಲು ಆರಂಭಿಸಿದರು. ವಲಯ ಬಿಂದು ಸಿಂಧು ಪದಾಧಿಕಾರಿಯಾಗಿ ಆಯ್ಕೆಯಾದ ಇವರು ಮುಂದೆ ವಲಯ ಮಾತೃ ಪ್ರಧಾನೆಯಾಗಿಯೂ ಶಿಷ್ಯ ಮಾಧ್ಯಮ ಪ್ರಧಾನೆಯಾಗಿಯೂ ಸೇವೆ ಸಲ್ಲಿಸುವ ಸದವಕಾಶವನ್ನು ಪಡೆದುಕೊಂಡವರು . ಕಳೆದ ಅವಧಿಯಲ್ಲಿ ಬೆಂಗಳೂರು ಉತ್ತರ ಮಂಡಲದ ಮಾತೃ ಪ್ರಧಾನೆಯಾಗಿ ಸೇವೆ ಮಾಡುವ ಅವಕಾಶವನ್ನು ಪಡೆದುಕೊಂಡ ಅವರು ಈ ಅವಧಿಯಲ್ಲಿಯೂ ಅದೇ ಸೇವೆಯಲ್ಲಿ ಮುಂದುವರಿಯುತ್ತಿದ್ದಾರೆ.
ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷಭಾಗಿನಿಯಾದ ಇವರು ಮುಂದೆ ಮಾತೃತ್ವಮ್ ಯೋಜನೆ , ಕಾರ್ಯಗತವಾದಾಗ ಆ ಮೂಲಕವೂ ಗೋಸೇವೆ ಮಾಡಲು ಅಣಿಯಾದರು. ಮನೆಯವರ ಪ್ರೋತ್ಸಾಹ, ಆತ್ಮೀಯರ ಸಹಕಾರಗಳಿಂದಾಗಿ ಮಾತೃತ್ವಮ್ ಯೋಜನೆಯಲ್ಲಿಯೂ ನಿರಂತರವಾದ ಸೇವೆ ಇವರದ್ದು.
ರಸಾಯನಶಾಸ್ತ್ರದಲ್ಲಿ ಎಂ ಎಸ್ ಸಿ ಪದವೀಧರೆಯಾದ ಇವರು ಬಯೋಕಾನ್ ಸಂಸ್ಥೆಯಲ್ಲಿ ವಿಜ್ಞಾನಿಯಾಗಿಯೂ ಸೇವೆ ಸಲ್ಲಿಸಿದವರು. ಕೆಲವು ಕಾಲ ಉಪನ್ಯಾಸಕಿಯಾಗಿಯೂ ಉದ್ಯೋಗದಲ್ಲಿದ್ದ ಇವರು ಪ್ರಸ್ತುತ ಗೃಹಿಣಿಯಾಗಿ ಶ್ರೀಮಠದ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
” ಶ್ರೀ ಮಠದ ಸೇವೆಯಲ್ಲಿ ತೊಡಗಿಸಿಕೊಂಡ ಮೇಲೆ ನಮ್ಮ ಆತ್ಮೀಯರ ಬಳಗ ವೃದ್ಧಿಯಾಗಿದೆ. ತುಂಬಾ ಜನರ ಸಂಪರ್ಕವಾಗಿದೆ. ಗೋ ಸೇವೆ ಮಾಡಬೇಕೆಂಬ ಹಂಬಲಕ್ಕೆ ಸದವಕಾಶ ದೊರಕಿದ್ದು ಶ್ರೀ ಗುರುಗಳ ಮಾತೃತ್ವಮ್ ಯೋಜನೆಯಿಂದ. ಅನೇಕ ಮಂದಿ ಆತ್ಮೀಯರು ಈ ಯೋಜನೆಗೆ ಕೈಜೋಡಿಸಿದ್ದಾರೆ. ಇತರ ಸಮಾಜದವರು ಸಹಾ ದೇಶಿಯ ಗೋವುಗಳ ಸಂರಕ್ಷಣಾ ಯೋಜನೆಯಲ್ಲಿ ಶ್ರದ್ಧಾಭಾವದಿಂದ ಸಹಕಾರ ನೀಡಿದ್ದಾರೆ. ಶ್ರೀಮಠದ ಸೇವೆಯಿಂದ ಬದುಕಿನಲ್ಲಿ ಬಹಳಷ್ಟು ನೆಮ್ಮದಿ ದೊರಕಿದೆ, ಶಾಂತಿಯಿದೆ ” ಎನ್ನುವ ಇವರ ಸೇವೆಗಳಿಗೆ ಪತಿ ಶಾಂತರಾಮ್ ಭಾಗ್ವತ್ ಹಾಗೂ ಪುತ್ರ ಹೇಮಂತ್ ಭಾಗ್ವತ್ ಅವರ ಸಂಪೂರ್ಣ ಸಹಕಾರವಿದೆ.
” ಮಾತೃತ್ವಮ್ ಯೋಜನೆಗೆ ಸಹಕಾರ ನೀಡಿದ ವ್ಯಕ್ತಿಯೊಬ್ಬರಿಗೆ ಅವರ ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯುಂಟಾದಾಗ ಅದು ಗೋಮಾತೆಯ ಅನುಗ್ರಹ ಎಂದು ಭಾವಿಸಿ ಪ್ರತಿ ತಿಂಗಳು ಅವರು ಗೋಮಾತೆಗೆ ಕಾಣಿಕೆ ನೀಡುತ್ತಿದ್ದಾರೆ. ಅವರಿಗೆ ಮಾತ್ರವಲ್ಲ ಅನೇಕ ಮಂದಿಗೆ ಗೋಮಾತೆಯ ಅನುಗ್ರಹದಿಂದ ಬದುಕಿನಲ್ಲಿ ಒಳಿತಾಗಿದೆ. ಗೋಮಾತೆಯ ಕೃಪೆಯಿಂದ ಬದುಕಿನಲ್ಲಿ ಶ್ರೇಯಸ್ಸಾಗಿದೆ ಎಂದು ಹೇಳುವುದು ಕೇಳುವಾಗಲೇ ಖುಷಿಯಾಗುತ್ತಿದೆ. ಅವರ ಶ್ರದ್ಧೆಯ ಭಕ್ತಿಯ ಭಾವಕ್ಕೆ ದೊರಕಿದ ಅನುಗ್ರಹ ಅದು ಎಂದು ಭಾವಿಸುತ್ತಿದ್ದೇನೆ. ಇನ್ನಷ್ಟು ಮಂದಿಯನ್ನು ಸಂಪರ್ಕ ಮಾಡಿ ಮಾತೃತ್ವಮ್ ಯೋಜನೆಯ ಬಗ್ಗೆ ಅವರಿಗೆ ಮನವರಿಕೆ ಮಾಡಿ ನಗರದಲ್ಲಿಯೂ ದೇಶಿಯ ಹಸುಗಳ ಸೇವೆ ಮಾಡುವ ಅವಕಾಶವಿದೆ ಎಂಬುದನ್ನು ತಿಳಿಸುವ ಅಭಿಲಾಷೆಯಿದೆ. ಗೋವಿನ ಸೇವೆಯಿಂದ ಬದುಕಿಗೆ ದೊರೆಯುವ ನೆಮ್ಮದಿ, ಶಾಂತಿಯ ಅರಿವಾದರೆ ಖಂಡಿತ ಪ್ರತಿಯೊಬ್ಬರೂ ಗೋ ಸೇವೆಗೆ ಕೈಜೋಡಿಸುತ್ತಾರೆ ಎಂದು ನನ್ನ ಅನಿಸಿಕೆ ” ಎಂದು ನುಡಿಯುವ ಗಾಯತ್ರಿ ಭಾಗ್ವತ್ ಅವರಿಗೆ ಶ್ರೀಮಠದ ಸೇವೆ ಹಾಗೂ ಗೋಸೇವೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶ ದೊರಕಿದ್ದು ಪೂರ್ವ ಜನ್ಮದ ಸುಕೃತ ಎಂಬ ಭಾವವಿದೆ.
‘ ನನ್ನ ಗೋ ಸೇವೆ ನಿತ್ಯ ನಿರಂತರ. ವಿಶ್ವ ಜನನಿ ಗೋಮಾತೆಯ ಸೇವೆಯನ್ನು ಪ್ರತಿಯೊಬ್ಬರು ಮಾಡಬೇಕು ‘ ಎನ್ನುವ ಅವರಿಗೆ ಆಧ್ಯಾತ್ಮ ಕ್ಷೇತ್ರದಲ್ಲಿಯೂ ತುಂಬಾ ಆಸಕ್ತಿಯಿದೆ. ಶ್ರೀಮಠದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶಗಳನ್ನು ಸದುಪಯೋಗಪಡಿಸುವ ಅವರು ಮಾತೃತ್ವಮ್ ಯೋಜನೆಯನ್ನು ಸಮಾಜದ ಇನ್ನಷ್ಟು ಮಂದಿಗೆ ಪಸರಿಸುವ ಹಂಬಲವನ್ನು ಹೊಂದಿದ್ದಾರೆ. ಆವರ ಯೋಜನೆ ಸಫಲವಾಗಲಿ, ಆವರ ಅಭಿಲಾಷೆಯಂತೆಯೇ ಅವರ ಗೋಸೇವೆ
ನಿತ್ಯ ನಿರಂತರವಾಗಿ ಮುಂದುವರಿಯಲಿ.
ಪ್ರಸನ್ನಾ ವಿ. ಚೆಕ್ಕೆಮನೆ