” ಹಸುವನ್ನು ತಾಯಿಯಂತೆ ಕಾಣುವ ಸಂಸ್ಕೃತಿ ನಮ್ಮದು. ನಾವು ಸಾಕುವ ಹಸುಗಳಿಗೂ ತಾಯಿಯದೇ ಅಂತಃಕರಣವಿದೆ. ಮನೆಯ ಸದಸ್ಯರ ಬಗ್ಗೆ ಗೋಮಾತೆಗೂ ತುಂಬಾ ಕಾಳಜಿಯಿದೆ. ಮನೆಯವರ ಅನಾರೋಗ್ಯದ ಸಂದರ್ಭದಲ್ಲಿ ಹಟ್ಟಿಯಲ್ಲಿರುವ ಹಸುಗಳೂ ಮನದಲ್ಲೇ ರೋಧಿಸುವುದು ಅವುಗಳ ಒಡನಾಟದಲ್ಲಿರುವವರಿಗೆ ಬೇಗನೆ ತಿಳಿಯಬಹುದು. ದೇಶೀಯ ತಳಿಯ ಹಸುಗಳು ಇದಕ್ಕೆ ನಿದರ್ಶನಗಳು. ಅದಕ್ಕಾಗಿಯೇ ಗೋಮಾತೆ ಎಂದರೆ ಮಾತೃಶಕ್ತಿಯ ಸ್ವರೂಪ ಎಂಬ ಭಾವನೆ ನನ್ನದು ” ಎಂದವರು ಕುಮಟಾ ಮಂಡಲ ಗುಡೇಅಂಗಡಿ ವಲಯದ ವಿನಯಾ ಶ್ರೀಧರ ಹೆಗಡೆ.
ಶಿರಸಿ ಕಾನಮಕ್ಕಿಯ ಅನಂತ ಹೆಗಡೆ ಸುಶೀಲಾ ಹೆಗಡೆ ದಂಪತಿಗಳ ಪುತ್ರಿಯಾದ ವಿನಯಾ ಮಾತೃತ್ವಮ್ ಯೋಜನೆಯ ಒಂದು ವರ್ಷದ ಮೊತ್ತವನ್ನು ಸ್ವಯಂ ಭರಿಸಿ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.
” ಶ್ರೀರಾಮಾಯಣ ಮಹಾಸತ್ರ, ವಿಶ್ವಗೋಸಮ್ಮೇಳನಗಳಲ್ಲಿ ಭಾಗವಹಿಸಿದ ನಾನು ಸುಮಾರು ಎರಡು ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ . ನಮ್ಮ ಮಾವನವರ ಕಾಲದಿಂದಲೂ ನಮ್ಮ ಮನೆಯವರಿಗೆ ಶ್ರೀಮಠದ ಸಂಪರ್ಕವಿದೆ. ಶ್ರೀಗುರುಗಳ ಆಶೀರ್ವಚನದ ಪ್ರೇರಣೆ , ಗೋಮಾತೆಯ ಮೇಲೆ ಪೂಜ್ಯ ಭಾವನೆ ಹಾಗೂ ವಿಶೇಷ ಮಮತೆಯಿರುವ ಕಾರಣ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾದೆ. ಸಮಾಜದಲ್ಲಿ ಮಾತೃತ್ವಮ್ ಯೋಜನೆಯ ಬಗ್ಗೆ ಸದಭಿಪ್ರಾಯವಿದೆ. ದೇಶೀಯ ಹಸುಗಳ ಮಹತ್ವವನ್ನು ಸಮಾಜಕ್ಕೆ ಪಸರಿಸಲು ಮಾತೃತ್ವಮ್ ಯೋಜನೆ ಅತ್ಯುತ್ತಮ ಮಾಧ್ಯಮವಾಗಿದೆ ” ಎನ್ನುವ ಇವರಿಗೆ ಸಮಾಜ ಸೇವೆಯಲ್ಲೂ ಆಸಕ್ತಿಯಿದೆ.
ಶ್ರೀಮಠದ ಸೇವೆಯಲ್ಲಿ ಆತ್ಮ ತೃಪ್ತಿ, ಸಂತಸ ಕಾಣುವ ಇವರ ಪತಿ ಡಾ.ಶ್ರೀಧರ ಹೆಗಡೆ ನಿವೃತ್ತ ಪ್ರಾಂಶುಪಾಲರು . ಪ್ರಸ್ತುತ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಪತ್ನಿಯ ಗೋಸೇವೆಗೆ ಸದಾ ಬೆಂಬಲಿಗರಾಗಿ ಪ್ರೋತ್ಸಾಹಿಸುವವರು.
ಲಯನ್ಸ್ ಕ್ಲಬ್ ಮುಖಾಂತರವೂ ಗೋಸೇವೆಯಲ್ಲಿ ತೊಡಗಿಸಿಕೊಂಡ ಇವರು ಅಶೋಕೆಯಲ್ಲಿ ಕುಟೀರವೊಂದನ್ನು ಕಟ್ಟಿಸಲು ಸಂಪೂರ್ಣ ಸಹಕಾರ ನೀಡಿದ್ದಾರೆ.
” ಮಕ್ಕಳಿಬ್ಬರಿಗೂ ಶ್ರೀಮಠದ ಸೇವೆಯಲ್ಲಿ ಆಸಕ್ತಿಯಿದೆ. ಗೋಮಾತೆಯ ಬಗ್ಗೆಯೂ ಪೂಜ್ಯ ಭಾವನೆಯಿದೆ ” ಎನ್ನುವ ವಿನಯಾ ಹೆಗಡೆಯವರಿಗೆ ಶ್ರೀಮಠದ ಸೇವೆಯಲ್ಲಿ, ಗೋಸೇವೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಬೇಕೆಂಬುದೇ ಜೀವನದ ಸಂಕಲ್ಪ.
ಪ್ರಸನ್ನಾ ವಿ ಚೆಕ್ಕೆಮನೆ