ನಿಮ್ಮ ನಿಯಂತ್ರಣದಲ್ಲಿದ್ದರೆ ಕ್ರೋಧವೂ ದೋಷವಲ್ಲ- ರಾಘವೇಶ್ವರ ಶ್ರೀ

ಮಠ

 

ಗೋಕರ್ಣ: ಕ್ರೋಧದ ನಿಯಂತ್ರಣದಲ್ಲಿ ನೀವಿದ್ದಾಗ ಕ್ರೋಧ ದೋಷ. ನಿಮ್ಮ ನಿಯಂತ್ರಣದಲ್ಲಿ ಕೋಪ ಇದ್ದಾಗ ಅದು ಗುಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ವಿಶ್ಲೇಷಿಸಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿ, ಕೋಪ ಇರುವುದು ಆತ್ಮರಕ್ಷಣೆಗೆ; ಆದರೆ ಅದು ಇನ್ನೊಬ್ಬರಿಗೆ ಹಾನಿಯನ್ನು ಉಂಟು ಮಾಡಬಾರದು. ನಮ್ಮ ನಿಯಂತ್ರಣದಲ್ಲಿರುವ ಕೋಪ ಪ್ರತಿಯೊಬ್ಬರಿಗೂ ಬೇಕು ಎಂದು ಮಾರ್ಮಿಕವಾಗಿ ನುಡಿದರು.

ರಾಮ ಸ್ಥಾನಕ್ರೋಧ- ಜಿತಕ್ರೋಧ ಎಂಬ ಉಲ್ಲೇಖ ರಾಮಾಯಣದಲ್ಲಿದೆ. ಅಂದರೆ ರಾಮ ಕ್ರೋಧವನ್ನು ಗೆದ್ದವನು. ಕ್ರೋಧ ನಮ್ಮ ವಶದಲ್ಲಿರಬೇಕು. ಆದ್ದರಿಂದ ಕ್ರೋಧವನ್ನು ಹತ್ತಿಕ್ಕುವುದು ಸಮಸ್ಯೆಗೆ ಪರಿಹಾರವಲ್ಲ. ಕ್ರೋಧವನ್ನು ನಮ್ಮ ನಿಯಂತ್ರಣದಲ್ಲಿದ್ದರೆ ಅದು ದೋಷವಲ್ಲ; ಗುಣ ಎಂದು ವಿಶ್ಲೇಷಿಸಿದರು. ಯಾರ ಬಗ್ಗೆ, ಯಾವಾಗ ಸಿಟ್ಟು ಮಾಡಬೇಕು ಎಂಬ ವಿವೇಚನೆ ಬೇಕು. ಅಗತ್ಯ ಬಿದ್ದಾಗ ಮಾತ್ರವೇ ಸಿಟ್ಟು ಮಾಡಬೇಕು ಎಂದು ಕಿವಿಮಾತು ಹೇಳಿದರು.

ಉಕ್ಕಿಬರುವ ಕೋಪವನ್ನು ಯಾರು ನಿಗ್ರಹಿಸುತ್ತಾರೆಯೋ, ಕೋಪವೆಂಬ ಬೆಂಕಿಗೆ ತಾಳ್ಮೆಯ ನೀರನ್ನು ಯಾರು ಸುರಿಸುತ್ತಾರೆಯೋ ಅವರು ನಿಜವಾದ ಪುಣ್ಯಾತ್ಮರು ಎಂದು ಹನುಮಂತ ವಿವರಿಸಿದ್ದಾನೆ. ಸಿಟ್ಟು ಬಂದಾಗ ಎಂಥ ಕಾರ್ಯವನ್ನೂ ಮಾಡುತ್ತಾನೆ. ಸಿಟ್ಟಿಗಿಂತ ಕ್ಷಮೆ ದೊಡ್ಡದು ಎಂದು ಆಂಜನೇಯ ಬಣ್ಣಿಸಿದ್ದಾನೆ. ಹಾವು ಪೊರೆ ಕಳಚಿಕೊಳ್ಳುವಂತೆ ನಾವು ಸಿಟ್ಟನ್ನು ಬಿಡಬೇಕು ಎಂದು ಸಲಹೆ ಮಾಡಿದರು.

ರಾವಣನ ನಿಜವಾದ ವೈರಿ ಕಾಮನೇ ಹೊರತು ರಾಮನಲ್ಲ. ಪ್ರತಿಯೊಬ್ಬರ ಬದುಕಿನಲ್ಲೂ ನಮ್ಮ ಒಳಗಿರುವ ಈ ಅರಿಷಡ್ವರ್ಗಗಳೇ ವೈರಿಗಳು. ರಾವಣನ ಸಾವಿಗೆ ಮುಖ್ಯ ಕಾರಣ ರಾಮನಲ್ಲ; ಕಾಮ. ನಮ್ಮ ಬದುಕಿನ ಎಲ್ಲ ಸಮಸ್ಯೆಗಳಿಗೆ ಈ ವೈರಿಗಳೇ ಕಾರಣ. ಶಾಸ್ತ್ರಗಳು ಕ್ರೋಧವನ್ನು ದೋಷ ಎಂದು ಸ್ಪಷ್ಟವಾಗಿ ವಿವರಿಸಿವೆ ಎಂದು ವಿಶ್ಲೇಷಿಸಿದರು.

ಚಂಡಾಲ ಎನ್ನುವುದರ ಅಕ್ಷರಶಃ ಅರ್ಥ ಅತ್ಯಂತ ಕೋಪಿಷ್ಟ ಎಂಬ ಅರ್ಥ. ನಮ್ಮಲ್ಲಿ ಸಿಟ್ಟು ಹೆಚ್ಚಾದಷ್ಟೂ ನಾವೂ ಚಂಡಾಲರಾಗುತ್ತಾರೆ. ಕೋಪಕ್ಕೆ ತನ್ನ ಬದುಕನ್ನು ಒಪ್ಪಿಸಿದವನು ನಿಜವಾದ ಅರ್ಥದಲ್ಲಿ ಚಾಂಡಾಲ. ಅಧರ್ಮ, ಮಿಥ್ಯೆ, ದಂಬ, ಮಾಯ, ಕ್ರೋಧದಂಥ ವಂಶವಾಹಿ ಕಲಿಪುರುಷನ ಪೂರ್ವಜರಲ್ಲೇ ಇರುವುದರಿಂದ ಕಲಿಯ ಆಳ್ವಿಕೆಯಲ್ಲಿ ಇಂಥದ್ದು ಅಧಿಕವಾಗಿರುವುದನ್ನು ನಾವು ಕಾಣಬಹುದು ಎಂದು ಹೇಳಿದರು.

ಮಹಾಪುರುಷರೂ ಕ್ರೋಧಕ್ಕೆ ಒಳಗಾದ ನಿದರ್ಶನಗಳಿವೆ ಎಂದು ರಾಮಾಯಣದಲ್ಲಿ ರಾಮ ಕೋಪಗೊಂಡ ಸಂದರ್ಭಗಳನ್ನು ವಿವರಿಸಿದರು. ಖರ, ದೂಷಣರ ಸಂಹಾರದಲ್ಲಿ ರಾಮ ರಣಪಂಡಿತನಾದ ಎಂಬ ಉಲ್ಲೇಖ ರಾಮಾಯಣದಲ್ಲಿದೆ. ಸುತ್ತಮುತ್ತಲಿದ್ದ ರಕ್ಕಸ ಸೇನೆಯನ್ನು ಕಂಡು ರಾಕ್ಷಸ ಸಂಹಾರಕ್ಕಾಗಿ ಕ್ರೋಧವನ್ನು ಆವಾಹನೆ ಮಾಡಿಕೊಂಡ. ಕ್ರುದ್ಧನಾದ ರಾಮನನ್ನು ನೋಡಿದರೂ ಭಯವಾಗುವಂಥ ಭಯಂಕರ ರೂಪ ತಳೆದ ಎಂದು ವಿವರಿಸಿದರು.

ಅಂತೆಯೇ ಸಮುದ್ರ ರಾಜ ದಾರಿ ಕೊಡದಿದ್ದಾಗ ಅಂಥ ಭಯಂಕರ ಕೋಪ ರಾಮನಲ್ಲಿ ಕಂಡುಬಂದಿತ್ತು. ಸಮುದ್ರದ ಮೇಲೆ ಮೊದಲು ಯುದ್ಧ ಮಾಡಿ ನಂತರ ರಾವಣನನ್ನು ಎದುರಿಸೋಣ ಎಂದು ಲಕ್ಷ್ಮಣದಲ್ಲಿ ಹೇಳಿದ್ದ. ಸಮುದ್ರವನ್ನು ನಾಳೆ ದೂಳಾಗಿ ಮಾಡುತ್ತೇನೆ ಎಂದು ಘರ್ಜಿಸಿದ್ದ. ಅಂತೆಯೇ ರಾಮ- ರಾವಣರ ಯುದ್ಧದ ಕೊನೆಯ ಹಂತದಲ್ಲೂ ಕಣ್ಣಿನಿಂದ ರಾವಣನನ್ನು ಸುಟ್ಟು ಬಿಡುವಂತೆ ರಾಮ ನೋಡಿದ. ಅಂಥ ಕ್ರೋಧ ರಾಮನದ್ದಾಗಿತ್ತು ಎಂದು ವರ್ಣಿಸಿದರು.

ಅಖಿಲ ಭಾರತ ಹವ್ಯಕ ಮಹಾಸಭಾ ವತಿಯಿಂದ ಶ್ರೀ ಗುರುಭಿಕ್ಷಾ ಸೇವೆ ನಡೆಯಿತು. ಮುಕ್ರಿ ಸಮಾಜದ ವತಿಯಿಂದ ಪಾದಪೂಜೆ ಹಮ್ಮಿಕೊಳ್ಳಲಾಗಿತ್ತು. ನಿವೃತ್ತ ಸಿಪಿಐ ಆರ್.ಎನ್.ಮುಕ್ರಿಯವರು ಶ್ರೀಗಳಿಂದ ಆಶೀರ್ವಾದ ಪಡೆದರು. ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 625 ಅಂಕ ಪಡೆದ ಐದು ಮಂದಿ ವಿದ್ಯಾರ್ಥಿಗಳಿಗೆ ಅವರಷ್ಟೇ ಎತ್ತರದ ಪ್ರಮಾಣಪತ್ರ ಮತ್ತು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ, ಮಂಜುನಾಥ ಸುವರ್ಣಗದ್ದೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಧಾರ್ಮಿಕ ಕಾರ್ಯಕ್ರಮದಲ್ಲಿ ರುದ್ರಹವನ, ರಾಮತಾರಕ ಹವನ, ಚಂಡೀಪಾರಾಯಣ, ನವಚಂಡಿ ಹವನ, ಗಣಪತಿ ಹವನ ನಡೆಯಿತು.

Author Details


Srimukha

Leave a Reply

Your email address will not be published. Required fields are marked *