” ಅಮೃತದಂತಹ ಹಾಲನ್ನು ನೀಡುವ ಗೋಮಾತೆಯನ್ನು ಮಾತೃ ಸ್ಥಾನದಲ್ಲಿ ಪೂಜಿಸುವ ಸಂಸ್ಕೃತಿ ನಮ್ಮದು. ಪ್ರತಿದಿನವೂ ಗೋಸೇವೆ ಮಾಡಿದರೆ ನಮ್ಮ ನಿತ್ಯ ಸಂಕಷ್ಟಗಳು ಪರಿಹಾರವಾಗಿ ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ಆತ್ಮಸಂತೋಷ ಅರಳುತ್ತದೆ ” ಎಂದವರು ಕುಮಟಾ ಮಂಡಲ ಮೂರೂರು – ಕಲ್ಲಬ್ಬೆ ವಲಯದ ಮಕ್ಕಿಮನೆ ಗಣಪತಿ ಹೆಗಡೆಯವರ ಪತ್ನಿ ಲತಾ ಜಿ. ಹೆಗಡೆ.
ವಾಲ್ಗಳ್ಳಿಯ ಗಜಾನನ ಶ್ಯಾನುಬಾಗ್ , ಗಿರಿಜಾ ಶ್ಯಾನುಬಾಗ್ ದಂಪತಿಗಳ ಪುತ್ರಿಯಾದ ಲತಾ ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.
” ಹಸುಗಳೆಂದರೆ ಮೊದಲಿನಿಂದಲೂ ತುಂಬಾ ಪ್ರೀತಿ. ಅವರ ಸೇವೆಗೆ ಮೊದಲ ಆದ್ಯತೆ ನನ್ನದು . ಹಟ್ಟಿ ತುಂಬಾ ಹಸುಗಳಿದ್ದರೆ ಮನಸ್ಸಿಗೆ ಖುಷಿ. ಅವರ ಸೇವೆಯಿಂದ ದೊರಕುವ ಸಂತೃಪ್ತಿ ಹಿರಿದು ” ಎನ್ನುವ ಇವರು ಮನೆಯಲ್ಲಿ ಸುಮಾರು ಎಂಟು ಹತ್ತು ಹಸುಗಳನ್ನು ಸಾಕುತ್ತಿದ್ದಾರೆ.
ಹಿರಿಯರ ಕಾಲದಿಂದಲೂ ಶ್ರೀಮಠದ ಸಂಪರ್ಕದಲ್ಲಿದ್ದ ಲತಾ ಗಣಪತಿ ಹೆಗಡೆಯವರಿಗೆ ಈಗಲೂ ಶ್ರೀಮಠದ ಸೇವೆಯಲ್ಲಿ ಕೈ ಜೋಡಿಸುವುದೆಂದರೆ ಆನಂದ. ಮಠಕ್ಕೆ ಹೋದರೆ ತವರುಮನೆಗೆ ಹೋದಷ್ಟೇ ಆತ್ಮೀಯ ಅನುಭೂತಿ ದೊರಕುತ್ತದೆ ಎಂಬ ಭಾವ ಇವರದ್ದು.
” ಸ್ವಯಂ ಪ್ರೇರಣೆಯಿಂದ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾದೆ. ಭಾರತೀಯ ಗೋತಳಿಗಳ ಸಂರಕ್ಷಣೆಯ ಈ ವಿಶಿಷ್ಟ ಯೋಜನೆಯ ಬಗ್ಗೆ ಅನೇಕ ಮಂದಿಗೆ ತಿಳಿಸಿದೆ. ಕೇಳಿದವರೆಲ್ಲ ಸಂತಸದಿಂದಲೇ ಗೋಮಾತೆಯ ಸೇವೆಗೆ ಕೈ ಜೋಡಿಸಿದ್ದಾರೆ . ಗೋ ಉತ್ಪನ್ನಗಳ ಬಗ್ಗೆಯೂ ಆಸಕ್ತಿ ವ್ಯಕ್ತಪಡಿಸಿದ್ದಾರೆ ” ಎನ್ನುವ ಲತಾ ಗಣಪತಿ ಹೆಗಡೆಯವರಿಗೆ ಗೋಸೇವೆ, ಶ್ರೀಮಠದ ಸೇವೆಯಲ್ಲಿ ಸದಾ ತೊಡಗಿಸಿಕೊಂಡಿರ ಬೇಕೆನ್ನುವುದೇ ಹಂಬಲ.
ಪ್ರಸನ್ನಾ ವಿ ಚೆಕ್ಕೆಮನೆ