” ನಂಬಿ ಕೆಟ್ಟವರಿಲ್ಲವೋ ಶ್ರೀಚರಣಗಳ….” : ಇಂದಿರಾ ಶ್ಯಾನುಬಾಗ್ , ಶಿರಸಿ

ಮಾತೃತ್ವಮ್

 

” ಬದುಕಿನ ಹಾದಿಯಲ್ಲಿ ಕತ್ತಲು ಕವಿದಂತೆ ಅತಿ ಕಠಿಣ ಕಷ್ಟ ಬಂದಾಗಲೂ ಶ್ರೀಚರಣಗಳ ಮೇಲಿನ ಭರವಸೆ ಕಳೆದುಕೊಳ್ಳ ಬೇಡಿ, ವಿಧಿ ಲಿಖಿತವನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ, ಆದರೆ ಶ್ರೀ ಗುರುಚರಣಗಳನ್ನು ಆಶ್ರಯಿಸಿದವರಿಗೆ ಮನಸ್ಸಿನ ಮಾಯೆಯ ಪೊರೆಯನ್ನು ಸರಿಸಿ ,ಭಗವಂತನ ದಿವ್ಯಾನುಗ್ರಹ ಪಡೆಯುವ ಹಾದಿ ತೋರುವ ಸದ್ಗುರುಗಳು ಸಾಂತ್ವನದ ಭರವಸೆಯನ್ನು ಅನುಗ್ರಹಿಸುತ್ತಾರೆ. ಇದು ನಮ್ಮ ಬದುಕಿನ ಅನುಭವದ ನುಡಿಗಳು ” ಎಂದು ಶರಣಾಗತ ಭಾವದಿಂದ ‌ನುಡಿಯುವವರು ಸಿದ್ದಾಪುರ ಮಂಡಲದ ಅಂಬಾಗಿರಿ ವಲಯದ ಲಕ್ಷ್ಮಣ ಶ್ಯಾನುಬಾಗ್ ಅವರ ಪತ್ನಿ ಇಂದಿರಾ ಶ್ಯಾನುಬಾಗ್.

೨೦೦೯ರಿಂದ ಶ್ರೀಮಠದ ನಿಕಟ ಸಂಪರ್ಕಕ್ಕೆ ಬಂದ ಮೇಲೆ ನಿರಂತರವಾಗಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಈ ದಂಪತಿಗಳು ಶ್ರೀಗುರುಗಳಿಂದ ನಿರ್ದೇಶಿತವಾದ ಪ್ರತಿಯೊಂದು ಯೋಜನೆಯಲ್ಲೂ ತಮಗೆ ಸಾಧ್ಯವಾದ ರೀತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಗೇರುಸೊಪ್ಪಾದ ಸುಬ್ರಾಯ ಭಟ್ ಹಾಗೂ ತಾರಾ ಭಟ್ ಅವರ ಪುತ್ರಿಯಾದ ಇಂದಿರಾ ಅವರು ಅಂಬಾಗಿರಿ ವಲಯದ ಮುಷ್ಟಿ ಭಿಕ್ಷಾ ಪ್ರಧಾನೆಯಾಗಿ ಸೇವೆ ಸಲ್ಲಿಸುತ್ತಿದ್ದರೆ , ಪತಿ ಲಕ್ಷ್ಮಣ ಶ್ಯಾನುಬಾಗ್ ಅಂಬಾಗಿರಿ ವಲಯದ ಕೋಶಾಧಿಕಾರಿಯಾಗಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

” ಬದುಕಿನ ಬೆಳಕೊಂದು ಮರೆಯಾದಂತಾಗಿ ಕತ್ತಲಾವರಿಸಿದಾಗ ಸಂಪೂರ್ಣ ಕುಸಿದು ಹೋದ ನನಗೆ ಸಾಂತ್ವನದ ಭರವಸೆಯ ಬೆಳಕು ನೀಡಿ ಶ್ರೀಗುರು ಸೇವೆಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ಅವಕಾಶ ನೀಡಿ ಹರಸಿದವರು ಶ್ರೀ ಸಂಸ್ಥಾನದವರು. ಶ್ರೀ ಗುರುಸೇವೆಯಲ್ಲಿ ನೆಮ್ಮದಿಯಿದೆ. ಗೋ ಸೇವೆಯಲ್ಲಿ ಶಾಂತಿ ದೊರಕಿದೆ, ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ ಗುರಿಯನ್ನು ತಲುಪಿದ್ದೇನೆ. ದೇಶೀಯ ಹಸುಗಳ ಸಂರಕ್ಷಣಾ ಯೋಜನೆಗೆ ಅನೇಕ ಮಂದಿ ಸಹಕರಿಸಿದ್ದಾರೆ. ಶ್ರೀಗುರುಗಳ ಎಲ್ಲಾ ಯೋಜನೆಗಳಲ್ಲೂ ಪಾಲ್ಗೊಳ್ಳುವ ಅಭಿಲಾಷೆ ಇದೆ, ಅಭಯಾಕ್ಷರ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಅನುಭವವಿದೆ, ನಮ್ಮಿಬ್ಬರ ನಿವೃತ್ತ ಜೀವನವನ್ನು ಶ್ರೀಮಠದ, ಗೋಮಾತೆಯ ಸೇವೆಗೆ ಮೀಸಲಾಗಿರಿಸಿದ್ದೇವೆ. ಇಲ್ಲಿ ದೊರಕುವ ಆನಂದ ಅಪರಿಮಿತ ” ಎನ್ನುವ ಇಂದಿರಾ ಶ್ಯಾನುಬಾಗ್ ಅವರಿಗೆ ಶ್ರೀಚರಣಗಳ ಭದ್ರ ಭರವಸೆಯೇ ಬದುಕಿನ ಶಾಂತಿಯ ತಾಣ.

Author Details


Srimukha

Leave a Reply

Your email address will not be published. Required fields are marked *