ಈತನ ಕೈಗಳಲ್ಲಿ ಮೂಡಿದ ಚಿತ್ರಗಳು ನೋಡುಗರ ಚಿತ್ತದಲ್ಲಿ ಬೆರಗು ಮೂಡಿಸುತ್ತದೆ. ಯಾವ ಚಿತ್ರಕಲಾ ಶಾಲೆಯಲ್ಲಿಯೂ ಅಭ್ಯಾಸ ಮಾಡಿಲ್ಲವಾದರೂ ನುರಿತ ಕಲಾವಿದನಂತೆ ಚಿತ್ರಗಳಲ್ಲಿ ಜೀವಂತಿಕೆ ಮೂಡಿಸುವ ಯುವ ಕಲಾವಿದ ಇನ್ನೊಂದೆಡೆಯಲ್ಲಿ ಯಶಸ್ವೀ ಉದ್ಯಮಿಯೂ ಹೌದು, ವಿದ್ಯಾರ್ಥಿಯೂ ಹೌದು. ಅವರೇ ಕಾಸರಗೋಡು ಜಿಲ್ಲೆಯ ಗೋಪಾಲಕೃಷ್ಣ ಭಟ್ ಮತ್ತು ಸವಿತಲಕ್ಷ್ಮೀ ಅವರ ಸುಪುತ್ರ ಪ್ರದೀಪ ಎಂ.ಜಿ.
*ಸೌರಶಕ್ತಿಯನ್ನು ಸಮಾಜಕ್ಕೆ ಪರಿಚಯಿಸುತ್ತಿರುವ ಉದ್ಯಮಿ*
ಎಸ್. ಎಸ್. ಎಲ್.ಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ತಮಗೆ ಆಸಕ್ತಿ ಇರುವ ಶಿಕ್ಷಣ ಕ್ಷೇತ್ರವಾದ ಎಲೆಕ್ಟ್ರಾನಿಕ್ಸ್ ಡಿಪ್ಲೊಮಾವನ್ನು 2017 ರಲ್ಲಿ ಪೂರ್ಣಗೊಳಿಸಿ ಪ್ರದೀಪ ಅವರು ಅಂದಿನ ಪರಿಸ್ಥಿತಿಗೆ ಅನುಗುಣವಾಗಿ 19ನೇ ವಯಸ್ಸಿನಲ್ಲಿಯೇ ಉದ್ಯೋಗದತ್ತ ಮುಖ ಮಾಡಿದರು. ಉದ್ಯೋಗ ಅರಸಿ ಬೆಂಗಳೂರು ಸೇರಿ ಮೂರು ವರ್ಷಗಳ ಕಾಲ ರೇ ಗ್ಲೋ ಟೆಕ್ನೋಲಜೀಸ್ ಪ್ರೈ. ಲಿ. ಎನ್ನುವ ಕಂಪೆನಿಯಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದರು.
ಕೋವಿಡ್-19 ರ ಲಾಕ್ಡೌನ್ ಸಮಯದಲ್ಲಿ ಸ್ವಗ್ರಾಮಕ್ಕೆ ಮರಳಿದ ಪ್ರದೀಪ್, ಸೆಪ್ಟೆಂಬರ್ 2020ರಲ್ಲಿ ಸ್ವಂತ ಉದ್ಯಮವನ್ನು ಪ್ರಾರಂಭಿಸಿದರು. ಈ ಹಿಂದೆ ಉದ್ಯೋಗದಲ್ಲಿದ್ದಾಗ ನಿರ್ವಹಿಸಿದ solar installation ಅನುಭವ ಅವರನ್ನು ಯಶಸ್ವೀ ಉದ್ಯಮಿಯನ್ನಾಗಿಸುವಲ್ಲಿ ಮಹತ್ತರ ಪಾತ್ರ ವಹಿಸಿತು ಎಂದರೆ ತಪ್ಪಾಗಲಾರದು.
ಪೆರ್ಲಂಪಾಡಿ, ನೀರ್ಚಾಲ್, ಮಾನ್ಯ, ಪೆರ್ಲ, ಪುಣಚ, ಕಾರವಾರ, ಪುತ್ತೂರು, ಸುರತ್ಕಲ್, ಧಾರವಾಡ, ಕಲಬುರ್ಗಿ, ಚಿತ್ರದುರ್ಗ, ಹೊಸಪೇಟೆ, ಬೆಳ್ಳಾರೆ, ಕುಶಾಲನಗರ, ಮೈಸೂರು, ಬಾದಾಮಿ, ಹೀಗೆ ಕೇರಳ ಕರ್ನಾಟಕ ರಾಜ್ಯಗಳ ವಿವಿಧೆಡೆಗಳಲ್ಲಿ 75ಕ್ಕೂ ಹೆಚ್ಚು ಕಡೆ solar instalation ಮಾಡಿ ಯಶಸ್ವಿಯಾಗಿದ್ದಾರೆ. ಅಲ್ಲದೇ ತಮಿಳುನಾಡು, ಗುಜರಾತ್ ರಾಜ್ಯಗಳ ಹೆದ್ದಾರಿಗಳಲ್ಲಿ ಸೋಲಾರ್ ದೀಪಗಳ ಅಳವಡಿಕೆಯನ್ನೂ ಮಾಡಿದ್ದಾರೆ.
*ಮತ್ತೆ ಚಿಗುರಿದ ಬಾಲ್ಯದ ಹವ್ಯಾಸ*
ಶಾಲಾ ದಿನಗಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತರಾಗಿದ್ದ ಪ್ರದೀಪ ಅವರಿಗೆ ನಂತರದ ದಿನಗಳಲ್ಲಿ ಚಿತ್ರಕಲೆಯ ಬಗ್ಗೆ ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ಲಾಕ್ ಡೌನ್ ಸಮಯ ಇಂತಹ ಒಂದು ಸದವಕಾಶವನ್ನು ಒದಗಿಸಿತು ಎನ್ನುವ ಪ್ರದೀಪ ವಿದ್ಯಾರ್ಥಿವಾಹಿನಿಯ ವಾಟ್ಸಾಪ್ ಗ್ರೂಪಿನಲ್ಲಿ ಪ್ರಕಟವಾಗುತ್ತಿದ್ದ ವಿದ್ಯಾರ್ಥಿಗಳ ಚಿತ್ರಗಳನ್ನು ನೋಡಿ ತಮ್ಮ ಚಿತ್ರಗಳನ್ನು ಹಂಚಿಕೊಳ್ಳಲು ಆರಂಭಿಸಿದರು. ಅಲ್ಲದೇ ಚಿತ್ರಕಲೆಗಾಗಿ deepart_99 ಎನ್ನುವ instagram ಪುಟವನ್ನು ಆರಂಭಿಸಿ ತಾವು ರಚಿಸಿದ 100 ಕ್ಕೂ ಹೆಚ್ಚುವಿಭಿನ್ನ ಚಿತ್ರಗಳನ್ನು ಅಲ್ಲಿ ಪ್ರಕಟಿಸಿದ್ದಾರೆ.
*ಮತ್ತೆ ವಿದ್ಯಾಭ್ಯಾಸದತ್ತ ಚಿತ್ತ*
ಅಂದಿನ ಪರಿಸ್ಥಿತಿಯಲ್ಲಿ ಡಿಪ್ಲೊಮಾ ಮಾಡಿ ವಿದ್ಯಾಭ್ಯಾಸವನ್ನು ನಿಲ್ಲಿಸಿದ್ದ ಪ್ರದೀಪರಿಗೆ ವಿದ್ಯಾಭ್ಯಾಸ ಮುಂದುವರಿಸುವ ಹೆಬ್ಬಯಕೆ ಊರಿಗೆ ಮರಳಿದ ನಂತರ ಮತ್ತೆ ಜಾಗೃತವಾಯಿತು. ಎಂ.ಬಿ.ಎ. ಮಾಡುವ ಉದ್ದೇಶವನ್ನು ಹೊಂದಿರುವ ಪ್ರದೀಪ ಅದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು ಮುಂದಿನ ಶೈಕ್ಷಣಿಕ ವರ್ಷದಿಂದ ದೂರ ಶಿಕ್ಷಣದ ಮೂಲಕ ವಿದ್ಯಾಭ್ಯಾಸವನ್ನು ಮುಂದುವರಿಸಲಿದ್ದಾರೆ. ಅಲ್ಲದೇ ಚಿತ್ರಕಲೆ ಮತ್ತು ಸೌರಶಕ್ತಿಯ ಉದ್ಯಮದಲ್ಲಿಯೂ ಇನ್ನಷ್ಟು ಸಾಧನೆ ಮಾಡಬೇಕೆಂಬ ಮಹದಾಸೆಯನ್ನು ಹೊಂದಿದ್ದಾರೆ. ಪ್ರದೀಪ ಅವರ ಆಶೋತ್ತರಗಳೆಲ್ಲ ಈಡೇರಲಿ, ಎಲ್ಲಾ ರಂಗದಲ್ಲೂ ಯಶಸ್ಸು ಅವರನ್ನು ಅರಸಿ ಬರಲಿ ಎಂಬುದೇ ನಮ್ಮ ಹಾರೈಕೆ.