ಮೋಹದ ಕ್ಷಯ ಮೋಕ್ಷಕ್ಕೆ ಕಾರಣ: ರಾಘವೇಶ್ವರ ಶ್ರೀ

ಮಠ

 

ಗೋಕರ್ಣ: ಮೋಹದ ಕ್ಷಯವೇ ಮೋಕ್ಷಕ್ಕೆ ಕಾರಣ. ಮೋಕ್ಷ ಬೇಕಾದರೆ ಮೋಹ ಕ್ಷಯವಾಗಬೇಕು. ದಾನ ಮಾಡುವಾಗ ಆ ದ್ರವ್ಯದ ಮೇಲಿನ ಮೋಹ ಕಳೆದುಕೊಂಡು ಸತ್ಕಾರ್ಯಕ್ಕೆ ಅರ್ಪಿಸುವುದು ಸರ್ವಶ್ರೇಷ್ಠ ದಾನ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಸೋಮವಾರ ನಡೆದ ಹತ್ತನೇ ದಾನ ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ದಾನ ಮಾಡುವಾಗ ಆ ದ್ರವ್ಯದ ಮೇಲಿನ ಮೋಹ ಕಳೆದುಕೊಂಡು ಸತ್ಕಾರ್ಯಕ್ಕೆ ಅರ್ಪಿಸುತ್ತೇವೆ. ಇದು ಸರ್ವಶ್ರೇಷ್ಠ. ರಾಗ ಮತ್ತು ವಿರಾಗ ಎಂಬ ಎರಡು ಪದಗಳಿವೆ. ರಾಗ ಎನ್ನುವುದು ಅಂಟು. ವಿರಾಗ ಎನ್ನುವುದು ವೈರಾಗ್ಯ. ದ್ರವ್ಯದ ಮೇಲಿನ ವಿರಾಗದಿಂದ ಮಾತ್ರ ದಾನಬುದ್ಧಿ ಸಾಧ್ಯ ಎಂದು ವಿವರಿಸಿದರು.

ಅಂತೆಯೇ ದಾನಗಳಲ್ಲೂ ಸಾತ್ವಿಕ ದಾನ, ರಾಜಸ ದಾನ, ತಾಮಸ ದಾನಗಳೆಂಬ ವಿಧಾನಗಳಿವೆ. ಸತ್ಪಾತ್ರರಿಗೆ ದಾನ ಮಾಡಿ ಸಂತೋಷಪಡುವುದು ಸಾತ್ವಿಕ ದಾನ ಎನಿಸಿಕೊಳ್ಳುತ್ತದೆ. ಇದು ದಾನಗಳಲ್ಲಿ ಸರ್ವಶ್ರೇಷ್ಠ ಎಂದರು.

ಈ ಕ್ಷಣದವರೆಗೆ ನಮ್ಮದಾದ ವಸ್ತುವಿನ ಮೇಲಿನ ಸ್ವಾಮಿತ್ವವನ್ನು ಬಿಟ್ಟು ಮತ್ತೊಬ್ಬರಿಗೆ ನೀಡುವಂಥದ್ದು ದಾನ ಎಂಬ ಉಲ್ಲೇಖ ಪುರಾಣಗಳಲ್ಲಿದೆ. ನಮ್ಮದು ಎಂಬ ಮೋಹದ ಭಾವಬಂಧವನ್ನು ತ್ಯಾಗ ಮಾಡಿ, ಅವರ ಸುಪರ್ದಿಗೆ ಒಪ್ಪಿಸಿ, ಆತ ಅನುಭವಿಸುವುದನ್ನು ನೋಡಿ ಸಂತೋಷಪಡಬೇಕು ಎಂದು ಹೇಳಿದರು.

ದಾನ ಮಾಡುವ ಮನಸ್ಸು ಹೊಂದಿರುವವರು ಸರ್ವಶ್ರೇಷ್ಠ ವರ್ಗ. ಎರಡನೇ ವರ್ಗ ತನಗೆ ಯಾರದೂ ಬೇಡ; ತನ್ನದನ್ನು ಯಾರಿಗೂ ನೀಡುವುದಿಲ್ಲ ಎನ್ನುವವರು ಮಧ್ಯಮ ವರ್ಗ. ಮೂರನೇ ವರ್ಗ ಮತ್ತೊಬ್ಬರ ವಸ್ತುವನ್ನು ವಿಕ್ರಯಿಸಿ ನಮ್ಮ ಸ್ವಾಮ್ಯಕ್ಕೆ ಪಡೆಯುವುದು. ಚೌರ್ಯದ ಮೂಲಕ ವಸ್ತುವಿನ ಸ್ವಾಮ್ಯ ಪಡೆಯುವುದು ಮತ್ತೊಂದು ವರ್ಗ. ಇದು ಅತ್ಯಂತ ನೀಚ ಪ್ರವೃತ್ತಿ. ಇದು ಅನೇಕ ವ್ಯಾಜ್ಯಗಳಿಗೆ ಕಾರಣವಾಗುತ್ತದೆ ಎಂದು ವಿಶ್ಲೇಷಿಸಿದರು.

ಜೀವನದ ಕೊನೆಯ ದಿನ ಯಮ ಪಾಶ ಬೀಸಿದಾಗ ಎಲ್ಲವನ್ನೂ ಕಳಚಿಕೊಂಡು ಇಹಲೋಕ ತ್ಯಜಿಸಬೇಕಾಗುತ್ತದೆ. ಇದಕ್ಕಾಗಿ ಬದುಕಿನಲ್ಲಿ ಒಂದೊಂದೇ ದ್ರವ್ಯಗಳ ಮೇಲಿನ ಮೋಹವನ್ನು ತ್ಯಜಿಸುತ್ತಾ ಬರಬೇಕು. ಆದ್ದರಿಂದಲೇ ಭಾರತೀಯ ಪರಂಪರೆಯಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ಅದು ಸನ್ಯಾಸಕ್ಕೆ ತೀರಾ ಹತ್ತಿರವಾದದ್ದು ಎಂದು ಬಣ್ಣಿಸಿದರು.

ಮಠದ ಭಕ್ತರ ಪೈಕಿ 300ಕ್ಕೂ ಹೆಚ್ಚು ಮಂದಿ ವಿಶ್ವವಿದ್ಯಾಪೀಠಕ್ಕೆ ಒಂದು ಲಕ್ಷ ರೂಪಾಯಿಗಿಂತಲೂ ಹೆಚ್ಚು ಮೊತ್ತವನ್ನು ಸಮರ್ಪಿಸಿದ್ದಾರೆ. ಆದರೆ ಯಾವುದೇ ಪ್ರತಿಫಲಾಪೇಕ್ಷೆ ಅಥವಾ ಹೆಸರು, ಕೀರ್ತಿಯ ನಿರೀಕ್ಷೆಯಿಂದ ದಾನ ಮಾಡಿಲ್ಲ. ಹೆಸರಿಗೆ, ಬೇರೆ ಬೇರೆ ಉದ್ದೇಶಗಳಿಗೆ ದಾನ ಮಾಡುವವರಿದ್ದಾರೆ. ಆದರೆ ಶ್ರೀಮಠದ ಶಿಷ್ಯರು ಸ್ವಯಂಸ್ಫೂರ್ತಿಯಿಂದ, ಸತ್ಕಾರ್ಯಕ್ಕೆ ದಾನ ಮಾಡುತ್ತಿದ್ದಾರೆ ಇದು ಶ್ಲಾಘನೀಯ ಎಂದರು.

ಸರ್ಕಾರ ತೆರಿಗೆ ವಸೂಲಿ ಮಾಡಲು ಹರಸಾಹಸ ಮಾಡುತ್ತಿದೆ. ಆದರೂ ನಿರೀಕ್ಷಿತ ಮೊತ್ತ ವಸೂಲಿಯಾಗುವುದಿಲ್ಲ. ಆದರೆ ಶ್ರೀಮಠದ ವ್ಯವಸ್ಥೆಯಲ್ಲಿ ಪರಿಶುದ್ಧ ಮನಸ್ಸಿನಿಂದ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೇ ದಾನ ಮಾಡುವವರಿದ್ದಾರೆ. ಆದರೆ ಸಮಾಜದಲ್ಲಿ ಇತರರಿಗೆ ದಾನಕ್ಕೆ ಪ್ರೇರಣೆ ದೊರಕಿ, ಅವರ ಬದುಕು ಸಾರ್ಥಕವಾಗಲಿ ಎಂಬ ಉದ್ದೇಶದಿಂದ ಇಂಥ ದಾನ ಮಾನ ಕಾರ್ಯಕ್ರಮವನ್ನು ಶ್ರೀಮಠ ಹಮ್ಮಿಕೊಂಡಿದೆ ಎಂದು ವಿವರಿಸಿದರು.

ಮಾಜಿ ಅಡ್ವೊಕೇಟ್ ಜನರಲ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರ್ನಹಳ್ಳಿ ಮಾತನಾಡಿ, ಬ್ರಾಹ್ಮಣರಾಗಿ ನಮ್ಮ ಕರ್ತವ್ಯಗಳೇನು ಎಂಬ ಬಗ್ಗೆ ನಾವು ಚಿಂತನೆ ಮಾಡಬೇಕು. ಸರಿ ತಪ್ಪುಗಳ ವಿವೇಚನಾ ಶಕ್ತಿಗಾಗಿ ನಾವು ಗಾಯತ್ರಿ ಜಪ ನಿರಂತರವಾಗಿ ಮಾಡಬೇಕು ಎಂದು ಸಲಹೆ ಮಾಡಿದರು.

ಸನಾತನ ಧರ್ಮ ಅನುಸರಿಸುವವರಿಗೆ ಅಡ್ಡಿ ಆತಂಕಗಳು ಸಾವಿರಾರು; ಆದರೆ ಸಂತೋಷದ ವಿಚಾರವೆಂದರೆ ರಾಘವೇಶ್ವರ ಶ್ರೀಗಳು ಇಂಥ ಎಲ್ಲ ಅಡ್ಡಿ ಆತಂಕಗಳನ್ನು ಸಮರ್ಥವಾಗಿ ಎದುರಿಸಿ, ಪುಟವಿಟ್ಟ ಚಿನ್ನವಾಗಿ ಪ್ರಖರವಾಗಿ ಹೊಳೆಯುತ್ತಿದ್ದಾರೆ. ಸನಾತನ ವಿದ್ಯೆಯನ್ನು ಮುಂದಿನ ಪೀಳಿಗೆಗೂ ಉಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಈ ಬಗೆಯ ಋಷಿಪರಂಪರೆ ಉಳಿಸುವ ಬೃಹತ್ ಸಂಕಲ್ಪವನ್ನು ರಾಘವೇಶ್ವರ ಶ್ರೀಗಳು ಕೈಗೊಂಡಿದ್ದು, ಇಡೀ ಸಮಾಜ ಇದಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ವಿದ್ವಾನ್ ಉಮಾಕಾಂತ ಭಟ್, ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಗೋವಿಂದ ನಾಯಕ್ ಮತ್ತಿತರ ಗಣ್ಯರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮಾಗಧ ವಧೆ ಯಕ್ಷಗಾನ ಪ್ರದರ್ಶನ ನಡೆಯಿತು.

Author Details


Srimukha

Leave a Reply

Your email address will not be published. Required fields are marked *