ಗೋಮಾತೆಯ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಶೈಲಾ ಶ್ರೀಕಾಂತ್ ಹೆಗಡೆ

ಮಾತೃತ್ವಮ್

” ಮೂವತ್ತಮೂರು ಕೋಟಿ ದೇವತೆಗಳ ನಿವಾಸ ಸ್ಥಾನವಾದ ಗೋಮಾತೆಯ ಒಡಲು ಪುಣ್ಯದ ಕಡಲು. ನಮ್ಮ ತಾಯಿಯ ರಕ್ಷಣೆಯನ್ನು ಯಾವ ರೀತಿಯಲ್ಲಿ ಮಾಡುತ್ತೇವೆಯೋ ಅದೇ ರೀತಿಯಲ್ಲಿ ಗೋಮಾತೆಯ ಸಂರಕ್ಷಣೆಯ ಜವಾಬ್ದಾರಿಯನ್ನು ನಾವು ವಹಿಸಬೇಕು, ಆಗಲೇ ಸಮಾಜದಲ್ಲಿ ಗೋಸಂರಕ್ಷಣಾ ಯೋಜನೆಗಳು ಸಫಲವಾಗಬಹುದು. ಇದಕ್ಕಾಗಿ ನಮ್ಮ ಸಂಸ್ಥಾನದವರ ಮಾರ್ಗದರ್ಶನದಂತೆ ಮುಂದೆ ಸಾಗಿದರೆ ಮುಂದೊಂದು ದಿನ ಗೋಮಾತೆ ವಿಶ್ವ ವಂದ್ಯೆಯಾಗಬಹುದು ” ಗೋವು ಹಾಗೂ ತಮ್ಮ ನಡುವಿನ ಭಾವನಾತ್ಮಕ ಸಂಬಂಧದ ಬಗ್ಗೆ ತಿಳಿಸುತ್ತಾ ತಮ್ಮ ಮನದ ಅನಿಸಿಕೆಗಳನ್ನು ಈ ರೀತಿಯಾಗಿ ಬಿಚ್ಚಿಟ್ಟವರು ಬೆಂಗಳೂರು ಉತ್ತರ ಮಂಡಲದ ಯಲಹಂಕ ವಲಯದ ಶೈಲಾ ಶ್ರೀಕಾಂತ್ ಹೆಗಡೆ.

ಹೊನ್ನಾವರ ತಾಲೂಕಿನ ಉಪ್ಲೆಯ ಪರಮೇಶ್ವರ ಭಟ್ ಹಾಗೂ ಸೀತಾಬಾಯಿ ದಂಪತಿಗಳ ಪುತ್ರಿಯಾದ ಶೈಲಾ ಮೂಲತಃ ಕರ್ಕಿಯ ಪ್ರಸ್ತುತ ಬೆಂಗಳೂರು ನಿವಾಸಿಯಾಗಿರುವ ಶ್ರೀಕಾಂತ್ ಹೆಗಡೆಯವರ ಪತ್ನಿ.

” ಶ್ರೀಗುರುಗಳ ಸೇವೆಯಲ್ಲಿ ತೊಡಗಿಸಿಕೊಳ್ಳುವುದೆಂದರೆ ಪೂರ್ವ ಜನ್ಮದ ಸೌಭಾಗ್ಯ ಎಂದು ಭಾವಿಸುತ್ತಿದ್ದೇನೆ. ಮನದ ನೋವುಗಳ ಶಮನಕ್ಕೆ ಪರಮೌಷಧವೂ ಗುರು, ಗೋಸೇವೆ ಎಂಬುದು ನನ್ನ ಅನುಭವದ ಮಾತುಗಳು. ಶ್ರೀಗುರುಗಳ ಪ್ರೇರಣೆಯಿಂದ ಗೋಸೇವೆಯಲ್ಲಿ ತೊಡಗಿಸಿಕೊಂಡೆ.‌ ಮನೆಯವರು, ಪರಿಚಿತರು, ನೆಂಟರು, ಸ್ನೇಹಿತರು ಹೀಗೆ ಅನೇಕ ಮಂದಿ ಗೋಮಾತೆಯ ಸೇವೆಗೆ ಕೈ ಜೋಡಿಸಿದ್ದಾರೆ. ಬದುಕಿನ ಏರಿಳಿತಗಳಲ್ಲಿ ರಕ್ಷಣೆಯಾಗಿ ನಿಂತಿದ್ದು ಶ್ರೀಗುರು ಕೃಪೆ. ತವರು ಮನೆಯವರು ಗುರುಭಕ್ತರಾದ ಕಾರಣ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಅವರ ಸಂಪೂರ್ಣ ಸಹಕಾರವಿದೆ ” ಎನ್ನುವ ಶೈಲಾ ತಮ್ಮ ತಾಯಿಗೆ ತೀವ್ರ ಅನಾರೋಗ್ಯವಾದ ಸಂದರ್ಭದಲ್ಲಿ ಶ್ರೀಗುರು ಚರಣಕ್ಕೆ ಸಂಪೂರ್ಣ ಶರಣಾಗಿ ಪ್ರಾರ್ಥಿಸಿದಾಗ ಪವಾಡದಂತೆ ಅವರ ಅನಾರೋಗ್ಯ ಸಂಪೂರ್ಣ ಗುಣವಾದ ವಿಚಾರವನ್ನು ಬಹಳ ಭಕ್ತಿಭಾವದಿಂದ ಸ್ಮರಿಸಿಕೊಳ್ಳುತ್ತಾರೆ.

” ಬದುಕಿನ ಪ್ರತೀ ಹೆಜ್ಜೆ ಹೆಜ್ಜೆಯಲ್ಲಿಯೂ ಶ್ರೀಗುರುಗಳ ಅನುಗ್ರಹದ ಭರವಸೆ ನಮ್ಮ ಜೊತೆಗೆ ಇದೆ ಎಂಬುದು ನಮ್ಮ ಅನುಭವಕ್ಕೆ ಬಂದಿದೆ. ಯಾವುದೇ ಕಾರ್ಯ ಆರಂಭಿಸುವಾಗಲೂ ಮಂತ್ರಾಕ್ಷತೆ ಸ್ವೀಕರಿಸಿಯೇ ಆರಂಭಿಸುವವರು ನಾವು. ಎಲ್ಲಿಯಾದರೂ ಪ್ರಯಾಣ ಮಾಡುವಾಗಲೂ ಶ್ರೀಗುರುಗಳ ಮಂತ್ರಾಕ್ಷತೆಯನ್ನು ಕೊಂಡೊಯ್ಯುತ್ತೇವೆ. ಮನಸ್ಸಿಗೆ ಧೈರ್ಯ, ಭರವಸೆ ನೀಡುವ ಶಕ್ತಿ ಮಂತ್ರಾಕ್ಷತೆಗಿದೆ. ಇದೇ ಅಭ್ಯಾಸ ಮಗನಿಗೂ ಇದೆ. ಶ್ರೀಮಠಕ್ಕೆ ಹೋಗಲಾರಂಭಿಸಿದ ಮೇಲೆ ಅವನ ಸ್ವಭಾವದಲ್ಲಿ ತುಂಬಾ ಬದಲಾವಣೆಯಾಗಿದೆ. ಧಾರ್ಮಿಕ ಕಾರ್ಯಗಳಲ್ಲಿ ಅವನಿಗೂ ಆಸಕ್ತಿ ಮೂಡಲಾರಂಭಿಸಿದೆ. ಎರಡು ಮೂರು ಬಾರಿ ಶ್ರೀ ಗುರುಭಿಕ್ಷಾ ಸೇವೆ ನಡೆಸುವ ಸೌಭಾಗ್ಯ ನಮಗೆ ಒದಗಿ ಬಂದಿದೆ. ಮಾಲೂರು ಗೋಶಾಲೆಯ ಕಾರ್ಯದರ್ಶಿಯಾಗಿರುವ ಪತಿಯ ಸಂಪೂರ್ಣ ಸಹಕಾರದಿಂದ ಗೋಸೇವೆ ಮಾಡಲು ಸಾಧ್ಯವಾಗುತ್ತಿದೆ ” ಎನ್ನುವ ಶೈಲಾ ಅವರಿಗೆ ಬಿಡುವಿನ ವೇಳೆಗಳಲ್ಲಿ ಸಂಪೂರ್ಣವಾಗಿ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಹಂಬಲವಿದೆ.

Author Details


Srimukha

Leave a Reply

Your email address will not be published. Required fields are marked *