ದಿನೇದಿನೇ ಸಂಗೀತದ ಶಿಖರ ಸಾಧನೆಯ ಮೆಟ್ಟಿಲೇರುತ್ತಿರುವ ಶ್ರೀರಂಜಿನಿ , ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಚಿದಾನಂದ ಮತ್ತು ಗಾಯತ್ರಿ ಹೆಚ್.ಸಿ ಅವರ ಸುಪುತ್ರಿ . ಬಾಲ್ಯದಿಂದಲೇ ಸಂಗೀತದ ಕಡೆ ತನ್ನ ಚಿತ್ತವನಿತ್ತು ಅಜ್ಜಿ, ತಂದೆ ಮತ್ತು ತಾಯಿಯಿಂದ ಸಂಗೀತ ಸಂಸ್ಕಾರವನ್ನು ಪಡೆದು ಒಂದನೇ ತರಗತಿಯಿಂದ 10ನೇ ತರಗತಿವರೆಗೆ ಶಾಲಾ ಮಟ್ಟದ ಹಾಡು, ನೃತ್ಯ, ಅಭಿನಯ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ಹಲವಾರು ಬಹುಮಾನಗಳನ್ನು ಗಳಿಸಿದ್ದಾರೆ.
ನಂತರ ವಿದುಷಿ ವಸುಧಾ ಶರ್ಮ ಸಾಗರ ಇವರಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿಯಲು ಆರಂಭಿಸಿ ಜೂನಿಯರ್, ಸೀನಿಯರ್, ವಿದ್ವತ್ ಪರೀಕ್ಷೆಗಳನ್ನು ಉತ್ತೀರ್ಣಗೊಂಡು ವಿದ್ವತ್ತಿನಲ್ಲಿ ರಾಂಕ್ ಪಡೆದಿದ್ದಾರೆ.
ಅಖಿಲ ಭಾರತೀಯ ಗಾಂಧರ್ವ ಮಹಾವಿದ್ಯಾಲಯ ಮಂಡಲ್ , ಮುಂಬೈ ಇವರು ನಡೆಸುವ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ವಿಭಾಗದ ವಿಶಾರದ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
Senior grade instrument and vocal ಪರೀಕ್ಷೆಗಳಲ್ಲಿಯೂ ಪ್ರಥಮ ರಾಂಕ್ ಗಳಿಸಿದ್ದಾರೆ.
ರಾಜ್ಯಾದ್ಯಂತ 20ಕ್ಕೂ ಹೆಚ್ಚು ಗಮಕ ಕಾರ್ಯಕ್ರಮ, ಹಾಗೂ 15ಕ್ಕೂ ಹೆಚ್ಚು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮ ನೀಡಿರುವ ಇವರು ಶ್ರೀಸಂಸ್ಥಾನದವರು ನಡೆಸಿಕೊಡುತ್ತಿದ್ದ ರಾಮಪದವೆಂಬ ವಿಶಿಷ್ಟ ಕಾರ್ಯಕ್ರಮದಲ್ಲಿಯೂ ಹಾಡಿದ್ದಾರೆ. ವಿದುಷಿ ವಸುಧಾ ಶರ್ಮರ ಜೊತೆಯಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಸಹಗಾಯನ ; ಪ್ರತಿ ವರ್ಷ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆಯುವ ರಾಮನವಮಿ ರಾಮೋತ್ಸವ ಭಜನೆ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದಾರೆ.
ಇವರ ಗಮನಾರ್ಹ ಸಾಧನೆಯನ್ನು ಗಮನಿಸಿ ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳಿಂದ ಎರಡು ಬಾರಿ ಪ್ರತಿಭಾ ಪುರಸ್ಕಾರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಸಾಗರ ಯುವ ಪ್ರಶಸ್ತಿ, ಕರ್ನಾಟಕ ಸಂಗೀತ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, scholarship classical music ಮುಂತಾದವು ಇವರನ್ನು ಅರಸಿ ಬಂದಿವೆ.
ಗುರುಗಳ ಆಶೀರ್ವಾದದಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಬೇಕೆಂಬುದು ಮುಖ್ಯ ಗುರಿ. ಜೊತೆಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಸಂಸ್ಕೃತ ಶ್ಲೋಕಗಳನ್ನು ನನ್ನ ಗುರುಗಳಾದ ವಿದುಷಿ ವಸುಧಾ ಶರ್ಮ ಇವರು ಬಂದಿಷ್ ಗಳಾಗಿ ಅಳವಡಿಸಿದ್ದಾರೆ .ಇದು ಬಹು ಮುಖ್ಯ ಹಾಗೂ ಬಹು ಉಪಯೋಗಿ ಕೆಲಸ. ಆದ್ದರಿಂದ ಇದನ್ನು ನಂತರದಲ್ಲಿ ಇನ್ನೂ ಹೆಚ್ಚು ಬಳಕೆಗೆ ಬರುವಂತೆ ಮಾಡುವುದು ನನ್ನ ಇನ್ನೊಂದು ಕನಸು ಎನ್ನುತ್ತಾರೆ ಶ್ರೀ ರಂಜನಿ.
ಪ್ರಸ್ತುತ ಮೈಸೂರಿನಲ್ಲಿ ಎಂ. ಮ್ಯೂಸಿಕ್ ಅಭ್ಯಾಸ ಮಾಡುತ್ತಿರುವ ಇವರಿಂದ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂಬ ಆಶಯ ನಮ್ಮದು.