ಚದುರಂಗದ ಭರವಸೆಯ ಪ್ರತಿಭೆ ಇಶಾ ಶರ್ಮಾ

ಅಂಕುರ

11 ನೇ ವಯಸ್ಸಿನಲ್ಲಿಯೇ ಚೆಸ್ ಆಟಕ್ಕೆ ಪಾದಾರ್ಪಣೆ ಈ ಪ್ರತಿಭೆ ಕೆಲಕಾಲ ವಿದ್ಯಾಭ್ಯಾಸವನ್ನೂ ನಿಲ್ಲಿಸಬೇಕಾಯಿತು. ಚದುರಂಗದಲ್ಲಿ ಏನಾದರೂ ಸಾಧಿಸಬೇಕೆಂಬ ಆಕೆಯ ಕನಸಿಗೆ ಪೋಷಕರ ಬೆಂಬಲವೂ ದೊರೆಯಿತು. ಇದೀಗ ತನ್ನ ಅವಿರತ ಪರಿಶ್ರಮದಿಂದ ಕರ್ನಾಟಕದ ಪ್ರಥಮ ಮಹಿಳಾ ಅಂತಾರಾಷ್ಟ್ರೀಯ ಮಾಸ್ಟರ್ ಆಗಿ ಗುರುತಿಸಿಕೊಂಡಿದ್ದಾರೆ!

ಇವರು ಇಶಾ ಶರ್ಮಾ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯ ಡಾ. ಶ್ರೀಹರಿ ಹಾಗೂ ಡಾ.ವಿದ್ಯಾ ದಂಪತಿ ಪುತ್ರಿ. ಉಜಿರೆಯ ಎಸ್‌ಡಿಎಂ ಪದವಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಇಶಾ, ಈಗಾಗಲೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನಸೆಳೆದಿದ್ದಾಳೆ.

“2011 ರಲ್ಲಿ ಮಂಗಳೂರಿನಲ್ಲಿ ನಡೆದ ಟೂರ್ನಿಯಲ್ಲಿ ಇಶಾ ಅತ್ಯುತ್ತಮ ರೇಟಿಂಗ್ ಪಡೆದಳು. ಈಕೆಯ ಆಸಕ್ತಿಯನ್ನು ಗಮನಿಸಿ ಹಿರಿಯ ಆಟಗಾರರು ಉತ್ತಮ ಭವಿಷ್ಯವಿದೆ ಎಂದರು. ಇದರಿಂದಾಗಿ ನಾವು ಮಗಳಿಗೆ ಉತ್ತಮ ತರಬೇತಿ ಕೊಡಿಸಿದೆವು” ಎನ್ನುತ್ತಾರೆ ಡಾ.ವಿದ್ಯಾ.

ಪ್ರಾರಂಭದಲ್ಲಿ ಇಶಾ ಮಂಗಳೂರಿನ ಚೆಸ್ ಅಕಾಡೆಮಿಯಲ್ಲಿ ಹಿರಿಯ ‍ಚೆಸ್ ಆಟಗಾರ ಅರವಿಂದ ಶಾಸ್ತ್ರಿ, ಶಿವಾನಂದ ಮತ್ತು ರಾಘವೇಂದ್ರ ಅವರಿಂದ ತರಬೇತಿ ಪಡೆದಳು. ನಂತರ ಕೆಲಕಾಲ ಅರವಿಂದ ಶಾಸ್ತ್ರಿ ಸ್ವತಃ ಬೆಳ್ತಂಗಡಿಗೆ ತೆರಳಿ ಹೆಚ್ಚಿನ ತರಬೇತಿ ನೀಡಿದರು.

“ಚೆಸ್ ಬಗ್ಗೆ ನನಗಿರುವ ಆಸಕ್ತಿಯೇ ಸಾಧನೆಯ ಹಿಂದಿರುವ ಗುಟ್ಟು” ಎನ್ನುತ್ತಾಳೆ ಇಶಾ.

ಹತ್ತಾರು ಪ್ರಶಸ್ತಿ:
ಈವರೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಅನೇಕ ಪ್ರಶಸ್ತಿ ಗೆದ್ದಿರುವ ಇಶಾ, 2015 ರಲ್ಲಿ ಮಹಿಳಾ ಕೆಡೆಟ್ ಮಾಸ್ಟರ್ ಪಟ್ಟಕ್ಕೇರಿದ್ದರು. ಏಷ್ಯನ್ ಕಿರಿಯರ ರ್ಯಾಪಿಡ್ ಟೂರ್ನಿಯಲ್ಲಿ ಚಿನ್ನ ಗೆದ್ದಿದ್ದ ಅವರಿಗೆ ಶ್ರೇಷ್ಠ ಮಹಿಳಾ ಆಟಗಾರ್ತಿ ಪ್ರಶಸ್ತಿಯೂ ಸಿಕ್ಕಿತ್ತು. 2014 ರ ರಾಷ್ಟ್ರೀಯ ಶಾಲಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದಿದ್ದ ಇಶಾ, ರಾಷ್ಟ್ರೀಯ ಅಂಡರ್-೧೯ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.

2019 ರಲ್ಲಿ ಹಂಗೇರಿಯಲ್ಲಿ ನಡೆದ ಚೆಸ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಕರ್ನಾಟಕದ ಮೊದಲ‌ ಮಹಿಳಾ ಅಂತಾರಾಷ್ಟ್ರೀಯ ಮಾಸ್ಟರ್ (ಡಬ್ಲ್ಯುಐಎಂ) ಆಗಿ ಸಾಧನೆಗೈದಿದ್ದಾರೆ. ಈಕೆಯ ಸಾಧನೆಗೆ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಶ್ರೀಗಳು ವಿಶೇಷ ಪುರಸ್ಕಾರ ಅನುಗ್ರಹಿಸಿ ಆಶೀರ್ವದಿಸಿದ್ದಾರೆ.

“ಏಷ್ಯನ್ ಜೂನಿಯರ್ ರ್ಯಾಪಿಡ್ ಟೂರ್ನಿಯಲ್ಲಿ ಗೆದ್ದ ಚಿನ್ನಕ್ಕಿಂತ ರಾಷ್ಟ್ರೀಯ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ತೋರಿದ ಪ್ರದರ್ಶನ ಚದುರಂಗ ಪಯಣದಲ್ಲಿ ಮರೆಯಲಾಗದ ಅವಿಸ್ಮರಣೀಯ ಕ್ಷಣ” ಎಂದು ಇಶಾ ಹೇಳುತ್ತಾರೆ.

ಮಗಳಿಗಾಗಿ ವೃತ್ತಿ ತೊರೆದ ತಾಯಿ!:
ತನ್ನ ಮಗಳನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಇಶಾ ತಾಯಿ ವಿದ್ಯಾ ತಮ್ಮ ವೃತ್ತಿಯನ್ನು ತೊರೆದು, ಮಗಳಿಗೆ ಉತ್ತಮ ಶಿಕ್ಷಣ ಮತ್ತು ತರಬೇತಿ ಕೊಡಿಸುತ್ತಾ ಹಲವಾರು ಚೆಸ್ ಪಂದ್ಯಾವಳಿಗಳಿಗೆ ತಾವೇ ಸ್ವತಃ ಕರೆದೊಯ್ಯುತ್ತಿದ್ದಾರೆ.

Leave a Reply

Your email address will not be published. Required fields are marked *