ಕಲಿಕೆ ಜ್ಞಾನಮಯ, ಆನಂದಮಯವಾದರೆ ವಿದ್ಯೆ ಸಾರ್ಥಕ: ರಾಘವೇಶ್ವರ ಶ್ರೀ

ವಿದ್ಯಾಲಯ

ಗೋಕರ್ಣ: ಕಲಿಕೆ ಜ್ಞಾನಮಯ ಮತ್ತು ಆನಂದಮಯವಾಗಿದ್ದಾಗ ಮಾತ್ರ ವಿದ್ಯೆ ಸಾರ್ಥಕವಾಗುತ್ತದೆ ಎಂದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ಆಯೋಜಿಸಿದ್ದ ‘ಆತಂಕದ ಪರಿಸ್ಥಿತಿಯಲ್ಲಿ ಧನಾತ್ಮಕವಾಗಿ ಯೋಚಿಸಲು ಸರಳ ಸೂತ್ರಗಳು’ ಎಂಬ ಅಂತರ್ಜಾಲ ವಿಚಾರ ಸಂಕಿರಣದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಇಂದಿನ ಶಿಕ್ಷೆ ಜ್ಞಾನ ಮತ್ತು ಭೀತಿಯಿಂದ ಕೂಡಿದೆ. ಈ ಪರಿಸ್ಥಿತಿ ಬದಲಾಗಬೇಕು. ವಿದ್ಯಾರ್ಥಿಗಳು ಇಷ್ಟಪಟ್ಟು ಪರೀಕ್ಷೆಯನ್ನು ಸ್ವೀಕಾರ ಮಾಡುವಂತಿರಬೇಕು; ಮಗು ಖುಷಿ ಖುಷಿಯಾಗಿದ್ದಷ್ಟೂ ವಿದ್ಯೆ ಆಳಕ್ಕೆ ಹೋಗುತ್ತದೆ. ಇಂಥ ವಾತಾವರಣ ಕೊಡುವ ಪ್ರಯತ್ನವೇ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಕಲ್ಪನೆ ಎಂದು ಹೇಳಿದರು.
ಭಗವಂತನಲ್ಲಿ ವಿಶ್ವಾಸ ಅಗತ್ಯ. ಶರಣಾಗತಿ ಭಾವ ಒತ್ತಡ, ಭೀತಿಯನ್ನು ದೂರ ಮಾಡುತ್ತದೆ. ದೇವರ ಮೇಲೆ ವಿಶ್ವಾಸವಿಡುವ ಮಾರ್ಗವನ್ನು ನಮ್ಮ ಸಂಪ್ರದಾಯ ನಮಗೆ ನೀಡಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಬೋಧಿಸಿದಂತೆ ಕರ್ಮಣ್ಯೇ ವಾದಿಕಾರಸ್ಥೇ ಎನ್ನುವ ಮನೋಪ್ರವೃತ್ತಿ ಅಗತ್ಯ. ಉತ್ತಮವಾಗಿ ಕಲಿಯುವುದಷ್ಟೇ ನಮಗೆ ಸೇರಿದ್ದು ಎಂಬ ಭಾವನೆ ಮನಸ್ಸಿಗೆ ಬಂದಲ್ಲಿ ಆತಂಕಕ್ಕೀಡಾಗುವ ಪರಿಸ್ಥಿತಿಯೇ ಉದ್ಭವಿಸುವುದಿಲ್ಲ. ನಮ್ಮ ವಿವಿವಿ, ವಿದ್ಯಾರ್ಥಿಗಳಲ್ಲಿ ಇಂಥ ಮನೋಭಾವ ಬೆಳೆಸುವಲ್ಲಿ ಶ್ರಮಿಸುತ್ತದೆ ಎಂದರು.
ಮಹಾಪುರುಷರ ಜೀವನ ಚರಿತ್ರೆಗಳ ಅಧ್ಯಯನ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಪೂರಕ. ಮಹಾಪುರುಷರು ಯಾವ ರೀತಿ ಸಂಕಷ್ಟಗಳನ್ನು ಎದುರಿಸಿದರು ಎನ್ನುವನ್ನು ಅಧ್ಯಯನ ಮಾಡಿದರೆ ನಮ್ಮ ಸಂಭಾವ್ಯ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಆಗ ಮಗುವಿನಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ. ಅವರ ಬದುಕು ಮಗುವಿಗೆ ಸ್ಫೂರ್ತಿಯಾಗಬೇಕು. ಈ ಅಂಶಗಳು ವಿದ್ಯೆಯಲ್ಲಿ ಸೇರಿಕೊಳ್ಳಬೇಕು ಎಂದು ಒತ್ತಿ ಹೇಳಿದರು.
ಕೇವಲ ಪುಸ್ತಕದ ಹುಳುಗಳಾಗದೇ ಒಂದಲ್ಲ ಒಂದು ಕಲೆಯಲ್ಲಿ ನಾವು ತೊಡಗಿಸಿಕೊಂಡಾಗ ಅದು ನಮಗೆ ಚಿತ್ತವಿಶ್ರಾಂತಿ ನೀಡುತ್ತದೆ. ಕಲೆಗಳೇ ಇಲ್ಲದದಿದ್ದರೆ ಬದುಕು ರಕ್ತದ ಕಲೆಗಳಾಗುತ್ತಿದ್ದವು. ಕಲೆಗಳು ಮಾನಸಿಕ ಸ್ವಾಸ್ಥ್ಯಕ್ಕೆ ಪೂರಕ. ಶರೀರಕ್ಕೆ ಆಹಾರ ಅಗತ್ಯವಾದಂತೆ ಮನಸ್ಸಿಗೆ ವಿಶ್ರಾಂತಿಯೂ ಅಗತ್ಯ; ಸಾತ್ವಿಕ ಆಹಾರವೂ ಮುಖ್ಯ. ಇದು ಮನಸ್ಸಿಗೆ ಶಾಂತಿ, ಸಮಾಧಾನ, ಪ್ರೀತಿಯನ್ನು ನೀಡುತ್ತದೆ. ಏಕೆಂದರೆ ನಮ್ಮ ಆಹಾರದ ಸೂಕ್ಷ್ಮಾಂಶ ನಮ್ಮ ಮನಸ್ಸಾಗುತ್ತದೆ. ಷಡ್ರಸಗಳೂ ಒಂದೊಂದು ಭಾವವನ್ನು ಬೆಳೆಸುತ್ತವೆ. ರಾಜಸ ಆಹಾರ ಸೇವಿಸಿದಾಗ ಆತಂಕ, ಉದ್ವೇಗ ಹೆಚ್ಚುತ್ತದೆ ಎಂದು ವಿಶ್ಲೇಷಿಸಿದರು.


ಮಕ್ಕಳಲ್ಲಿ ಓದಿನ ಬಗ್ಗೆ ಆಸಕ್ತಿ ಮೂಡಿಸುವಂಥ ಕೌಶಲವನ್ನು ಪೋಷಕರು ಮತ್ತು ಶಿಕ್ಷಕರು ಬೆಳೆಸಿಕೊಳ್ಳಬೇಕು. ವಿವಿವಿ ಇಂಥ ಒಂದು ಪ್ರಯತ್ನ. ಶಿಶುಕೇಂದ್ರಿತ, ವಿದ್ಯಾರ್ಥಿ ಕೇಂದ್ರಿತ ಪ್ರಯತ್ನ. ಮಗುವಿನ ಸ್ಥಾನದಲ್ಲಿ ನಿಂತು ಯೋಚಿಸಿ ಅವರಿಗೆ ಹಿತವಾದ್ದನ್ನು ನೀಡುವುದು ಇಲ್ಲಿನ ಪರಿಕಲ್ಪನೆ ಎಂದು ವಿವರಿಸಿದರು.
ಮುಖ್ಯ ಭಾಷಣ ಮಾಡಿದ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ಮಾನಸಿಕ ತಜ್ಞ ವೈದ್ಯೆ ಡಾ.ಸ್ನೇಹಾ, ಅನಿಶ್ಚಿತ ಕಾಲಘಟ್ಟದಲ್ಲಿ, ಸುತ್ತಮುತ್ತಲಿನ ವಾತಾವರಣದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಹಲವು ಋಣಾತ್ಮಕ ಯೋಚನೆಗಳು ಬರುವ ಸಾಧ್ಯತೆ ಇದೆ. ಮನುಷ್ಯ ಸಹಜವಾಗಿಯೇ ಸುಭದ್ರ ಜೀವನ ಬಯಸುತ್ತಾನೆ. ಆದರೆ ಅನಿಶ್ಚಿತ ವಾತಾವರಣ ನಿರ್ಮಾಣವಾದಾಗ ಋಣಾತ್ಮಕ ಯೋಚನೆಗಳು ಹೆಚ್ಚಿ, ಒತ್ತಡ, ಆತಂಕ ಹೆಚ್ಚಬಹುದು. ಇದು ಮಕ್ಕಳ ಮೇಲೆ ಭಾವನಾತ್ಮಕ ಪರಿಣಾಮ ಬೀರಬಹುದು.
ಅನಿಶ್ಚಿತತೆ ನಿರಂತರ. ಅನಿಶ್ಚಿತತೆಯನ್ನು ಯಾರೂ ನಿಯಂತ್ರಿಸಲಾಗದು. ಇದು ಸಹಜ ಹಾಗೂ ಇದರಿಂದ ತಪ್ಪಿಸಿಕೊಳ್ಳಲು ಅಸಾಧ್ಯ. ನನ್ನ ವೈಯಕ್ತಿಕ ಮಟ್ಟದಲ್ಲಿ ಏನನ್ನು ನಿಯಂತ್ರಿಸಬಹುದು ಎನ್ನುವುದು ಪ್ರಮುಖವಾಗುತ್ತದೆ. ನಮ್ಮ ನಿಯಂತ್ರಣದಲ್ಲಿಲ್ಲದ ಅಂಶಗಳನ್ನು ನಿಯಂತ್ರಿಸುವ ಪ್ರಯತ್ನ ಮಾಡಿದಾಗ ಒತ್ತಡ ಹೆಚ್ಚುತ್ತದೆ. ಅದರ ಬದಲಾಗಿ ನಿಯಂತ್ರಿಸಬಹುದಾದ ಅಂಶಗಳ ಬಗ್ಗೆ ಗಮನ ಹರಿಸಿದಲ್ಲಿ ಸಮಾಧಾನದಿಂದ ಇರಬಹುದು ಎಂದು ಅಭಿಪ್ರಾಯಪಟ್ಟರು.
ಅನಿಶ್ಚಿತತೆಯನ್ನು ಧನಾತ್ಮಕವಾಗಿ ಸ್ವೀಕರಿಸಿ, ಇದು ಉತ್ತಮ ಭವಿಷ್ಯಕ್ಕೆ ಮುನ್ನುಡಿ ಎಂಬ ಯೋಚನೆ ಮಾಡಬೇಕು. ಋಣಾತ್ಮಕ ಯೋಚನೆಗಳನ್ನು ಆರಂಭದಲ್ಲೇ ಹತ್ತಿಕ್ಕದಿದ್ದರೆ, ಅದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ದೈಹಿಕ ವ್ಯಾಯಾಮ, ಪೌಷ್ಟಿಕ ಆಹಾರ ಸೇವನೆ, ಒಳ್ಳೆಯ ಸಂಬಂಧ ಬೆಳೆಸಿಕೊಳ್ಳುವುದು, ಭಾವನೆಗಳನ್ನು ಬಿಚ್ಚು ಮನಸ್ಸಿನಿಂದ ಹಂಚಿಕೊಳ್ಳುವುದು, ಉತ್ತಮ ನಿದ್ದೆ, ಮನಸ್ಸಿಗೆ ಸಂತೋಷ ನೀಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ನಿರೀಕ್ಷೆಗಳನ್ನು ಪರಿಷ್ಕರಿಸಿಕೊಳ್ಳುವುದು, ಮತ್ತೊಬ್ಬರ ಜತೆ ಹೋಲಿಕೆ ಮಾಡಿಕೊಳ್ಳದಿರುವುದು ಮುಖ್ಯ ಎಂದು ಸಲಹೆ ನೀಡಿದರು.
ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು, ಪರೀಕ್ಷೆಯನ್ನು ಸ್ನೇಹಿತರಾಗಿ ಸ್ವೀಕರಿಸುವ ಮನೋಭಾವ, ಕಠಿಣ ಪರಿಶ್ರಮ, ನಿಮ್ಮ ಸಾಮಥ್ರ್ಯದ ಬಗ್ಗೆ ಕೀಳರಿಮೆ ಬಿಡುವುದು, ಎಲ್ಲವನ್ನೂ ಮುಂದೂಡುವ ಮನೋಭಾವ ತ್ಯಜಿಸುವುದು, ವ್ಯವಸ್ಥಿತವಾಗಿ ಅಧ್ಯಯನ ಮಾಡುವುದು, ಪರೀಕ್ಷೆಯನ್ನು ಧನಾತ್ಮಕ ಮನೋಭಾವದಿಂದ ಎದುರಿಸುವುದು ಅಗತ್ಯ ಎಂದು ಕಿವಿಮಾತು ಹೇಳಿದರು.
ಪೋಷಕರು ಕೂಡಾ ಮಕ್ಕಳ ಜತೆ ಸ್ನೇಹಿತರಂತೆ ಇರುವುದು, ಮಕ್ಕಳ ಸ್ವಾತಂತ್ರ್ಯವನ್ನು ಗೌರವಿಸುವುದು, ಮಕ್ಕಳನ್ನು ಉತ್ತೇಜಿಸುವುದು, ಮಕ್ಕಳ ಸ್ಥಾನದಲ್ಲಿ ನಿಂತು ಅವರ ಮನಸ್ಸು ಅರಿತುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದರು.
ವಿದ್ಯಾ ಪರಿಷತ್ ಅಧ್ಯಕ್ಷ ಎಂ.ವಿ.ಹೆಗಡೆ, ಉಪಾಧ್ಯಕ್ಷ ಮರುವಳ ನಾರಾಯಣ ಭಟ್, ಆಡಳಿತಾಧಿಕಾರಿ ಸುರೇಂದ್ರ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ರಘುನಂದನ್ ಬೇರ್ಕಡವು ಪ್ರಾರ್ಥಿಸಿದರು. ವಿವಿ ವಿದ್ಯಾ ಪರಿಷತ್ ಕಾರ್ಯದರ್ಶಿ ನೀಲಕಂಠ ಯಾಜಿ ಸ್ವಾಗತಿಸಿದರು. ಪ್ರಾಚಾರ್ಯ ಗುರುಮೂರ್ತಿ ಮೇಣ ನಿರೂಪಿಸಿದರು.

Leave a Reply

Your email address will not be published. Required fields are marked *