ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ವಿವಿವಿ ಆನ್‍ಲೈನ್ ತರಬೇತಿ

ವಿದ್ಯಾಲಯ

ಗೋಕರ್ಣ: ಸಿಇಟಿ, ನೀಟ್, ಕೆವಿಪಿವೈ, ಎನ್‍ಇಎಸ್‍ಟಿ, ಜೆಇಇ ಮತ್ತಿತರ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗಾಗಿ ಶ್ರೀರಾಮಚಂದ್ರಾಪುರ ಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ಆನ್‍ಲೈನ್ ತರಗತಿಗಳನ್ನು ಆರಂಭಿಸಲಾಗುತ್ತಿದೆ.
ಸಮಾಜದ ಕಟ್ಟಕಡೆಯವರಿಗೆ ಕೂಡಾ ಗುಣಮಟ್ಟದ ತರಬೇತಿ ದೊರಕಬೇಕು ಎಂಬ ಉದ್ದೇಶದಿಂದ ಆರಂಭಿಸಲಾದ ತರಬೇತಿ ಈ ತಿಂಗಳ 18ರಂದು ಉದ್ಘಾಟನೆಗೊಳ್ಳಲಿದೆ. ಪ್ರಥಮ ಪಿಯುಸಿ ವಿಜ್ಞಾನ ವಿಷಯದಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ತರಬೇತಿ ಮುಕ್ತವಾಗಿರುತ್ತದೆ. ರಾಜ್ಯದ ಗ್ರಾಮೀಣ ವಿದ್ಯಾರ್ಥಿಗಳು ಎಂಬಿಬಿಎಸ್, ಐಐಟಿ, ಎನ್‍ಐಟಿ, ಐಐಎಸ್‍ಇಎಆರ್, ಎನ್‍ಐಎಸ್‍ಇಎಆರ್, ಎನ್‍ಎಟಿಎ, ಎಂಜಿನಿಯರಿಂಗ್ ಕೋರ್ಸ್‍ಗಳಿಗೆ ಸೇರಲು ತೀವ್ರ ಪೈಪೋಟಿ ಎದುರಿಸಬೇಕಾಗಿರುವ ಹಿನ್ನೆಲೆಯಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ ಎಂದು ವಿವಿವಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ನಾರಾಯಣ ಭಟ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಉದಾಹರಣೆಗೆ ರಾಜ್ಯದಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸಾಮಾನ್ಯವರ್ಗಕ್ಕೆ ಮುಕ್ತವಾಗಿರುವ ಸೀಟುಗಳ ಸಂಖ್ಯೆ ಸುಮಾರು 1500 ಮಾತ್ರ. ಇದಕ್ಕೆ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳು ಆಕಾಂಕ್ಷಿಗಳಾಗಿರುತ್ತಾರೆ. ದುಬಾರಿ ಶುಲ್ಕ ನೀಡಿ ತರಬೇತಿ ಪಡೆಯಲು ಚೈತನ್ಯವಿಲ್ಲದ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಬಾರದು ಎಂಬ ಶ್ರೀ ರಾಘವೇಶ್ವರ ಭಾರತೀಸ್ವಾಮೀಜಿಯವರ ಆಶಯಕ್ಕೆ ಅನುಸಾರವಾಗಿ ಈ ತರಬೇತಿ ಆಯೋಜಿಸಲಾಗಿದೆ ಎಂದು ವಿವರಿಸಿದ್ದಾರೆ.
ಎರಡು ವರ್ಷಗಳ ತರಬೇತಿಯಲ್ಲಿ ಎಲ್ಲ ವಿಷಯಗಳ ತಜ್ಞರ ಮಾರ್ಗದರ್ಶನ, ಪ್ರತಿ ವಿಷಯದಲ್ಲಿ 35ಕ್ಕೂ ಹೆಚ್ಚು ಪ್ರಶ್ನೆಪತ್ರಿಕೆಗಳ ಮೂಲಕ ಅಭ್ಯಾಸ, ಸಂಭಾವ್ಯ ಪ್ರಶ್ನೆಗಳ ವಿಶ್ಲೇಷಣೆ, ವಿದ್ಯಾರ್ಥಿಗಳನ್ನು ಪಠ್ಯದ ಒತ್ತಡದಿಂದ ಮುಕ್ತವಾಗುವಂತೆ ವಿವಿಧ ಕಾರ್ಯಚಟುವಟಿಕೆಗಳು, ಸಾಧಕರಿಂದ ಮಾರ್ಗದರ್ಶನ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಅನುಭವ ಹಂಚಿಕೆ ಮತ್ತಿತರ ವೈವಿಧ್ಯಮಯ ಚಟುವಟಿಕೆಗಳಿರುತ್ತವೆ.
ತಾಂತ್ರಿಕ ಕಾರಣಗಳಿಂದಾಗಿ ಸೀಮಿತ ವಿದ್ಯಾರ್ಥಿಗಳಿಗೆ ಅವಕಾಶವಿದ್ದು, ಆಸಕ್ತರು ಸಂಯೋಜಕ ಡಾ.ಗುರುಮೂರ್ತಿ (9846101519- Mgm111264@gmail.com) ಅವರನ್ನು ಸಂಪರ್ಕಿಸಬಹುದು.

Author Details


Srimukha

Leave a Reply

Your email address will not be published. Required fields are marked *