ಸಂಗೀತೋತ್ಸವಕ್ಕೆ ಅದ್ದೂರಿ ಚಾಲನೆ: ವಿಷ್ಣುಗುಪ್ತ ವಿವಿಯಲ್ಲಿ ನಾದವೈಭವ

ವಿದ್ಯಾಲಯ

ಗೋಕರ್ಣ: ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆವರಣದಲ್ಲಿ ಬುಧವಾರ ಎರಡು ದಿನಗಳ ಸಂಗೀತೋತ್ಸವಕ್ಕೆ ಖ್ಯಾತ ಸಂಗೀತ ವಿದುಷಿ ವಿ.ಕಾಂಚನ ರೋಹಿಣಿ ಸುಬ್ಬರತ್ನಂ ಚಾಲನೆ ನೀಡಿದರು.
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಿದ್ದರು. ವಿದ್ಯಾರ್ಥಿಗಳಿಗೆ ತಾವು ಇಚ್ಛಿಸಿದ ಪಾರಂಪರಿಕ ಸಂಗೀತ ವಿದ್ಯೆ, ಕಲೆಯನ್ನು ಪ್ರಾತ್ಯಕ್ಷಿಕೆ ಮೂಲಕ ಕಲಿಯಲು ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಆಯೋಜಿಸಿದ್ದ ಈ ಸಂಗೀತೋತ್ಸವದಲ್ಲಿ ಕರ್ನಾಟಕ ಸಂಗೀತ ಕ್ಷೇತ್ರದ ದಿಗ್ಗಜರಿಂದ ಗುರುಕುಲದ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನಡೆಯಿತು.
ವಿದ್ಯಾವಿಶ್ವ ಸಭಾಂಗಣದಲ್ಲಿ ದಿನವಿಡೀ ನಡೆದ ಸಂಗೀತೋತ್ಸವದ ಮೊದಲ ದಿನ ಕರ್ನಾಟಕ ಸಂಗೀತ ಕ್ಷೇತ್ರದ ಮೇರು ಕಲಾವಿದರಿಂದ ವಾದ್ಯ ಸಂಗೀತಗಳ ಪ್ರಾತ್ಯಕ್ಷಿಕೆ, ನಾಡಿನ ಖ್ಯಾತ ಕಲಾವಿದರಿಂದ ಗಾಯನ ಮತ್ತು ವಾದನಗಳ ಪ್ರಸ್ತುತಿ ಹಾಗೂ ವಿದ್ಯಾರ್ಥಿಗಳ ಜತೆ ಸಂವಾದ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿವಿವಿ ಪಾರಂಪರಿಕ ಶಿಕ್ಷಣ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮ ಅವರು, ಇದು ಕಲಾ ಸರಸ್ವತಿಯ ಆರಾಧನೆಯ ಹೊಚ್ಚ ಹೊಸ ಹೆಜ್ಜೆಗೆ ಮುನ್ನುಡಿಯಾಗಲಿದೆ ಎಂದು ಅಭಿಪ್ರಾಯಪಟ್ಟರು. ಸಂಗೀತ ವಿಭಾಗದ ಮುಖ್ಯಸ್ಥ ರಘುನಂದನ ಬೇರ್ಕಡವು ಸ್ವಾಗತಿಸಿದರು.
ಔಪಚಾರಿಕ ಉದ್ಘಾಟನೆ ಬಳಿಕ ವಿದುಷಿ ಕಾಂಚನ ರೋಹಿಣಿ ಸುಬ್ಬರತ್ನಂ ನಿರ್ದೇಶನದಲ್ಲಿ ಇಡೀ ದಿನ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. ವಿದುಷಿ ಕಾಂಚನ ಶ್ರೀರಂಜಿನಿ ಮತ್ತು ಶ್ರುತಿರಂಜಿನಿ (ಕಾಂಚನ ಸಹೋದರಿಯರು) ಅವರ ಗಾಯನ ಸಂಗೀತ ಕಲಿಕಾರ್ಥಿಗಳಿಗೆ ನಾದವೈಭವದ ವಿವಿಧ ಮಜಲುಗಳ ಪರಿಚಯ ಮಾಡಿಕೊಟ್ಟಿತು. ವಿದ್ವಾನ್ ಕೆ.ಯು. ಜಯಚಂದ್ರ ರಾವ್ ಅವರಿಂದ ಮೃದಂಗ ವಾದನ, ವಿದ್ವಾನ್ ಗಿರಿಧರ ಉಡುಪ ಅವರ ಘಟಂ, ವಿದ್ವಾನ್ ನಿತೀಶ್ ಅಮ್ಮಣ್ಣಾಯ ಅವರ ಕೊಳಲು ವಾದನ, ವಿದ್ವಾನ್ ಕಾರ್ತಿಕ್ ಕೃಷ್ಣ ಅವರಿಂದ ತಬಲಾ, ವಿದ್ವಾನ್ ಕಾರ್ತಿಕ್ ವೈದಾತ್ರಿಯವರ ಖಂಜಿರ, ಮೋಚಿಂಗ್, ರಿದಂ ಪ್ಯಾಡ್, ಕೆ.ಜಿ.ಋತ ಅವರ ಪಿಟೀಲು ವಾದನ, ಶ್ರೀ ರಬಿನಂದನ್ ಅವರ ಕೊನ್ನಕ್ಕೋಲು ವಾದನ ಹೀಗೆ ಶಾಸ್ತ್ರೀಯ ಸಂಗೀತದ ವಿವಿಧ ಮಜಲುಗಳನ್ನು ವಿದ್ಯಾರ್ಥಿಗಳು ಆಸ್ವಾದಿಸಿದರು.
ಸಂಗೀತೋತ್ಸವದ ಎರಡನೇ ದಿನವಾದ 21ರಂದು ಗುರುವಾರ ಹಿಂದೂಸ್ತಾನಿ ಸಂಗೀತದ ವೈವಿಧ್ಯಮಯ ಪ್ರಕಾರಗಳು ಪ್ರಸ್ತುತಗೊಳ್ಳಲಿವೆ. ಪಂಡಿತ ಪರಮೇಶ್ವರ ಹೆಗಡೆ, ಡಾ.ಅಶೋಕ ಹುಗ್ಗಣ್ಣವರ್, ವಿದ್ವಾನ್ ವಿಶ್ವೇಶ್ವರ ಭಟ್ ಖರ್ವ, ವಿದ್ವಾನ್ ಶ್ರೀಧರ ಹೆಗಡೆ ಅವರ ಗಾಯನ, ಪ್ರೊ.ರಾಮಚಂದ್ರ ವಿ.ಹೆಗಡೆ ಹಳ್ಳದಕೈ ಅವರಿಂದ ರುದ್ರವೀಣಾ, ಗೋಪಾಲಕೃಷ್ಣ ಹೆಗಡೆ ಮತ್ತು ಡಾ.ಉದಯ ಕುಲಕರ್ಣಿಯವರಿಂದ ತಬಲಾ ವಾದನ, ರಾಮಕೃಷ್ಣ ಹೆಗಡೆಯವರ ಸಿತಾರ್, ಸುಧೀರ್ ಹೆಗಡೆವರ ಬಾನ್ಸುರಿ, ಪ್ರಜ್ಞಾನ ಲೀಲಾಶುಕ ಉಪಾಧ್ಯಾಯ (ಸೂರಿ) ಅವರಿಂದ ಹಾರ್ಮೋನಿಯಂ ವಾದನ ಸಂಗೀತ ರಸಿಕರಿಗೆ ರಸದೌರಣ ಒದಗಿಸಲಿವೆ.

Author Details


Srimukha

Leave a Reply

Your email address will not be published. Required fields are marked *