ಮಾಲೂರು: ಮುಂದಿನ ಪೀಳಿಗೆಗಾಗಿ ಗೋವಿಗಳನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಾತೆಯರೆಲ್ಲರೂ ಗೋಸೇವೆಗೆ ಮುಂದಾದಾಗ ಎಲ್ಲಾ ಗೋಶಾಲೆಗಳು ಸಮೃದ್ಧತೆಯಿಂದ ಕೂಡಿರುತ್ತದೆ ಎಂದು ಮಾತೃತ್ವಮ್ ನ ಕೇಂದ್ರ ಕಾರ್ಯದರ್ಶಿ ನಾಗರತ್ನ ಜಿ. ಶರ್ಮ ಹೇಳಿದರು.
ಅವರು ಮಾಲೂರು ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮಕ್ಕೆ ಗೋವಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮಾತೃತ್ವಮ್ ಸಂಘಟನೆಯ ಮಾಸದ ಮಾತೆಯರು ಆಗಮಿಸಿ ಮೇವು ಸಮರ್ಪಣೆ ಮಾಡಿದ ಬಳಿಕ ಮಾತನಾಡಿದರು.
ಗೋಆಶ್ರಮ ಸಮಿತಿ ಅಧ್ಯಕ್ಷ ಡಾ. ಶ್ಯಾಮಪ್ರಸಾದ ಮಾತನಾಡಿ ಬದುಕಿನಲ್ಲಿ ಸೇವೆ ನಿರಂತರವಾಗಿರಬೇಕು. ಮಾತೃತ್ವ ಇರುವಲ್ಲಿ ಅರ್ಪಣೆಯ ಭಾವವಿರುತ್ತದೆ. ಗೋವು ಸತೃಪ್ತವಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಬೆಂಗಳೂರು ಪ್ರಾಂತ್ಯದಲ್ಲಿ ಪ್ರತೀ ತಿಂಗಳು ಗೋವಿಗಾಗಿ ಸಂಗ್ರಹದಲ್ಲಿ ತೊಡಗಿಸಿಕೊಂಡಿರುವ ಮಾತೆಯರು ಗೋಆಶ್ರಮಕ್ಕೆ ಬೇಟಿ ನೀಡಿ, ಭಜನೆ, ಗೋಪೂಜೆಯಲ್ಲಿ ಭಾಗವಹಿಸಿ ಸುಮಾರು 12000 ಕೆಜಿ(240ಚೀಲ) ನವಧಾನ್ಯ ಹಿಂಡಿಯನ್ನು ಗೋವಿನ ಮೇವಿಗಾಗಿ ಉಚಿತವಾಗಿ ನೀಡಿದರು.
ಬೆಂಗಳೂರು ಉತ್ತರ ನಗರ ಮಾತೃತ್ವಮ್ ಅಧ್ಯಕ್ಷೆ ವೀಣಾ ಗೋಪಾಲಕೃಷ್ಣ ಹಾಗೂ ಬೆಂಗಳೂರು ದಕ್ಷಿಣ ನಗರ ಅಧ್ಯಕ್ಷೆ ಶಾರದಾ ದತ್ತಾತ್ರೇಯ ಹೆಗಡೆ ನೇತೃತ್ವದಲ್ಲಿ ಭಜನೆ ನಡೆಯಿತು. ವೇದಮೂರ್ತಿ ಗೋಪಾಲಕೃಷ್ಣ ಕಾಕತ್ಕರ್ ನೇತೃತ್ವದಲ್ಲಿ ಅಪ್ಪೂರಾವ್ ಸುಮಂಗಲ ದಂಪತಿಗಳು ಗೋಪೂಜೆ ನೆರವೇರಿಸಿದರು.
ಸಂಘಟನಾ ಕಾರ್ಯದರ್ಶಿ ಶೈಲಜಾ ಪೋಳ್ಯ, ಕೋಶಾಧ್ಯಕ್ಷೆ ಜಯಶೀಲಾ ಶ್ರೀನಿವಾಸ, ಬೆಂಗಳೂರು ಪ್ರಾಂತ್ಯ ಅಧ್ಯಕ್ಷ ಹೇಮಾ ಶ್ರೀನಿವಾಸ ಇವರುಗಳ ಸಮ್ಮುಖದಲ್ಲಿ ಮಾತೃತ್ವಮ್ ವತಿಯಿಂದ ನೀಡಲಾದ ಹಿಂಡಿಯನ್ನು ಗೋಆಶ್ರಮ ಸಮಿತಿ ಅಧ್ಯಕ್ಷ ಡಾ. ಶ್ಯಾಮಪ್ರಸಾದ ಹಾಗೂ ಕಾರ್ಯದರ್ಶಿ ಶ್ರೀಕಾಂತ ಹೆಗಡೆ ಯಲಹಂಕ ಸ್ವೀಕರಿಸಿದರು.
ನಂತರ ಮನೋರಂಜಕ ಆಟೋಟಗಳು ನಡೆದವು. ಗೋಆಶ್ರಮದ ವತಿಯಿಂದ ಪ್ರಸಾದ ಭೋಜನ ನೀಡಲಾಯಿತು. ಗೋಆಶ್ರಮದ ಗೋವುಗಳ ಜೊತೆ ಒಡನಾಡಿದ ಮಾತೆಯರು ಸಂಭ್ರಮದಿಂದ ಪಾಲ್ಗೊಂಡರು. ಗೋಆಶ್ರಮದ ವ್ಯವಸ್ಥಾಪಕ ರಾಮಚಂದ್ರ ಅಜ್ಜಕಾನ, ಕೃಷ್ಣ ಭಟ್, ಲಕ್ಷ್ಮೀಶ, ಅನಂತ ಹೆಗಡೆ ಉಪಸ್ಥಿತರಿದ್ದರು.