ಗೋಸ್ವರ್ಗ: ರೈತರು ಸ್ಪರ್ಶದ ಮೂಲಕವೇ ಫಲವತ್ತೆಯನ್ನು ಅಳೆಯುತ್ತಿದ್ದರು. ರಾಸಾಯನಿಕಗಳಿಂದ ಮಣ್ಣಿನ ಅಗತ್ಯ ಗುಣಗಳು ನಾಶವಾಗುತ್ತಿದೆ. ಸಾವಯವ ಕೃಷಿಯನ್ನು ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಗೋಆಧಾರಿತ ಕೃಷಿ ಸಹಕಾರಿ ಯಾಗಿದೆ. ಕೈಗಾರಿಕೀಕರಣಗಳಿಂದ ಕೃಷಿ ಕಾರ್ಯಗಳು ಕಡಿಮೆಯಾಗುತ್ತಿದೆ. ಪಕೃತಿ ವಿಕೋಪಗಳನ್ನು ತಡೆಯುವ ನಿಟ್ಟಿನಲ್ಲಿ ಮಣ್ಣಿನ ಫಲವತ್ತತೆಯನ್ನು ಕಾಪಾಡಬೇಕಾಗಿದೆ. ಆಧ್ಯಾತ್ಮಿಕ ಕೃಷಿಯ ಜತೆಗೆ ಎಲ್ಲಾ ವಿಜ್ಞಾನಿಗಳು ಕೈಜೋಡಿಸಬೇಕು ಎಂದು ಡಾ. ಎ. ಬಿ. ಪಾಟೀಲ್ ಹೇಳಿದರು.
ವಿಶ್ವಮಣ್ಣಿನ ದಿನಾಚರಣೆ ಅಂಗವಾಗಿ ಶ್ರೀ ರಾಮಚಂದ್ರಾಪುರ ಮಠ, ಬಾಗಲಕೋಟೆ ತೋಟಗಾರಿಕೆ ವಿವಿ ಮತ್ತು ಶಿರಸಿ ಕೃಷಿ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ನಡೆದ ಗೋಷ್ಠಿಯಲ್ಲಿ ಗೋ ಆಧಾರಿತ ಸಾವಯವ ಕೃಷಿ ಬಗ್ಗೆ ಮಾತನಾಡಿದರು.
ಮಣ್ಣಿನ ರಕ್ಷಣೆಯೇ ಮನುಕುಲದ ರಕ್ಷಣೆ ವಿಷಯದಲ್ಲಿ ಡಾ. ಎಸ್ ಎಸ್ ಪ್ರಕಾಶ್ ಅವರು ಮಾತನಾಡಿ ಸಜೀವ ಮಣ್ಣಿನ ನಾಶವಾದರೆ ಪುನರ್ ಪಡೆಯಲು ಸಾಧ್ಯವಿಲ್ಲ. ಮಣ್ಣಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮನುಷ್ಯ ವಿಫಲನಾಗುತ್ತಿದ್ದಾನೆ. ಬೆಳೆ ಪರಿವರ್ತನೆಯ ಮೂಲಕ ಮಣ್ಣಿನ ಜೀವಾಣುಗಳನ್ನು ಉತ್ತಮವಾಗಿಡಬಹುದು. ರೈತರು ಕೃಷಿಯಲ್ಲಿ ತೊಡಗಿಕೊಳ್ಳುವ ಮೊದಲು ಮಣ್ಣಿನ ಗುಣಲಕ್ಷಣ ತಿಳಿದುಕೊಳ್ಳಬೇಕು. ಆರೋಗ್ಯ ಪೂರ್ಣವಾದ ಮಣ್ಣಿನಿಂದ ಮಾತ್ರ ಉತ್ತಮ ಆಹಾರ ಸಿಗಲು ಸಾಧ್ಯ ಎಂದರು.
ಮಣ್ಣಿನ ದಿನಾಚರಣೆಯ ಉದ್ದೇಶ ಮತ್ತು ಮಹತ್ವ ವಿಚಾರದಲ್ಲಿ ಡಾ. ಸಿ. ಎ. ಶ್ರೀನಿವಾಸ್ ಮೂರ್ತಿ ಮಾತನಾಡಿ ಮಣ್ಣಿನ ಬಗ್ಗೆ ಕಾಳಜಿ ವಹಿಸಿ ಜೀವನವನ್ನೇ ಮಣ್ಣಿನ ಸಂರಕ್ಷಣೆಗೆ ಮೀಸಲು ಮಾಡಿದ ಭೂಮಿ ಭೋಲ್ ಅದುಲ್ಯ ದೇಜ್ ಅವರ ಜನ್ಮ ದಿನಾಚರಣೆಯನ್ನು ವಿಶ್ವ ಮಣ್ಣಿನ ದಿನಾಚರಣೆಯಾಗಿ ಮಾಡಲಾಗುತ್ತಿದೆ. ೨೦೧೨ರಿಂದ ಆರಂಭವಾದ ಮಣ್ಣಿನ ದಿನಾಚರಣೆಯ ಮೂಲಕ ಎಲ್ಲರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಮಣ್ಣನ್ನು ಕಾರ್ಖಾನೆಗಳಲ್ಲಿ ತಯಾರಿಕೆ ಸಾಧ್ಯವಿಲ್ಲದ ಕಾರಣ ಮಣ್ಣಿನ ರಕ್ಷಣೆ ಪ್ರತಿಯೊಬ್ಬನ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಶಿರಸಿ ತೋಟಗಾರಿಕಾ ಮಹಾವಿದ್ಯಾಲಯ ಡೀನ್ ಡಾ. ಎನ್. ಕೆ. ಹೆಗಡೆ ಅಧ್ಯಕ್ಷತೆಯನ್ನು ವಹಿಸಿದ್ದರು. ಶಿರಸಿ ತೋಟಗಾರಿಕಾ ಮಹಾ ವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ. ಶಿವಾನಂದ ಹೊಂಗಲ್ ಕಾರ್ಯಕ್ರಮ ನಿರೂಪಿಸಿದರು.