ಗೋ ಆಧರಿತ ಪದ್ಧತಿಯಿಂದಷ್ಟೇ ಕೃಷಿ ಪುನರುತ್ಥಾನ – ಕೃಷಿತಜ್ಞ ಎಸ್.ಎ.ಪಾಟೀಲ

ಗೋಶಾಲಾ

ಗೋಸ್ವರ್ಗ (ಸಿದ್ದಾಪುರ): ದೇಶದಲ್ಲಿ ಕೃಷಿಯ ಪುನರುತ್ಥಾನಕ್ಕೆ ಗೋ ಆಧರಿತ ಕೃಷಿ ಅಗತ್ಯ. ಇದಕ್ಕೆ ಮಾನಸಿಕವಾಗಿ ವಿಜ್ಞಾನಿಗಳಲ್ಲೇ ಪರಿವರ್ತನೆ ಬರಬೇಕು ಎಂದು ನವದೆಹಲಿಯ ರಾಷ್ಟ್ರೀಯ ಕೃಷಿ ಸಂಶೋಧನಾ ಸಂಸ್ಥೆಯ ಮಾಜಿ ಮುಖ್ಯಸ್ಥ ಡಾ.ಎಸ್.ಎ.ಪಾಟೀಲ್ ಅಭಿಪ್ರಾಯಪಟ್ಟರು.

ವಿಶ್ವಮಣ್ಣಿನ ದಿನಾಚರಣೆ ಅಂಗವಾಗಿ ಶ್ರೀ ರಾಮಚಂದ್ರಾಪುರ ಮಠ, ಬಾಗಲಕೋಟೆ ತೋಟಗಾರಿಕೆ ವಿವಿ ಮತ್ತು ಶಿರಸಿ ಕೃಷಿ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಮಣ್ಣಿನಲ್ಲೂ ವೈವಿಧ್ಯವಿದೆ. ಸೂಕ್ಷ್ಮಾಣು ಜೀವಿ, ಸಸ್ಯಸಂಕುಲ, ಗೋವು ಹಾಗೂ ಮನುಷ್ಯನಿಗೆ ನಿಕಟ ಸಂಬಂಧವಿದೆ. ವಿಶ್ವವಿದ್ಯಾನಿಲಯಗಳ ಜತೆ ಮಠಗಳು ಹಾಗೂ ಸಂಘ ಸಂಸ್ಥೆಗಳು ಇದರಲ್ಲಿ ಕೈಜೋಡಿಸಬೇಕು. ಗಡ್ಡೆಗೆಣಸು ತಿಂದವರ ಆಯುಷ್ಯ ಹೆಚ್ಚು; ಮಣ್ಣಿನ ಮೇಲೆ ಬೆಳೆದದ್ದನ್ನು ಸೇವಿಸಿದವರಿಗೆ ಆರೋಗ್ಯ ಕಡಿಮೆಯಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ.

ಗೋಮಯದಲ್ಲಿ ಅಪಾರ ಪ್ರಮಾಣದ ಪೆನ್ಸುಲಿನ್ ಇದೆ. ಪಂಚಗವ್ಯದ ಬಗ್ಗೆ ನಡೆಸಿದ ಮೂರು ಸಂಶೋಧನೆಗಳಿಗೆ ರಾಷ್ಟ್ರೀಯ ಗೋ ಅನುಸಂಧಾನ ಪರಿಷತ್‌ಗೆ ಪೇಟೆಂಟ್ ದೊರಕಿದೆ. ಇದರಲ್ಲಿ ಕ್ಯಾನ್ಸರ್ ಚಿಕಿತ್ಸೆಯೂ ಸೇರಿದೆ. ರಾಮಚಂದ್ರಾಪುರ ಮಠ ಇದಕ್ಕಿಂತಲೂ ಉನ್ನತ ಸಂಶೋಧನೆಗಳನ್ನು ನಡೆಸಲು ಮುಂದಾಗಿದ್ದು, ಇದರಲ್ಲಿ ಕೈಜೋಡಿಸುವುದಾಗಿ ಪಾಟೀಲ್ ಹೇಳಿದರು.

ಬ್ರಿಟಿಷ್ ಅಥವಾ ಅಮೆರಿಕ ಮೂಲದಿಂದ ಬಂದ ಸಂಶೋಧನೆಗಿಂತ ನಮ್ಮ ಪ್ರಾಚೀನ ಪದ್ಧತಿಯಲ್ಲಿದ್ದ ಸುಸ್ಥಿರತೆ ಕಾಪಾಡುವ ಸಲುವಾಗಿ ಮಣ್ಣು ಹಾಗೂ ಗೋವನ್ನು ಜೋಡಿಸಿರುವುದು ವಿಶ್ವದಲ್ಲೇ ವಿಶಿಷ್ಟ. ನಳಂದಾ, ತಕ್ಷಶಿಲೆಗೆ ವಿದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದಂತೆ, ಗೋವಿನ ಬಗ್ಗೆ ಅಧ್ಯಯನ ನಡೆಸಲು ರಾಮಚಂದ್ರಾಪುರಮಠಕ್ಕೆ ವಿದೇಶಿಯರು ಬರುವ ದಿನಗಳು ದೂರವಿಲ್ಲ ಎಂದರು.

ಮನುಷ್ಯ ಮಾನವನಾದದ್ದು ಒಕ್ಕಲುತನದಿಂದ. ಪ್ರಾಚೀನ ಕಾಲದಿಂದ ನಾಗರಿಕತೆಯ ಬೆಳವಣಿಗೆಯಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ. ಗೋವಿನಲ್ಲಿ ಎಲ್ಲ ಸೂಕ್ಷ್ಮಾಣು ಜೀವಿಗಳು ಅಡಗಿವೆ. ಒಕ್ಕಲುತನದ ಮೂಲವೇ ಗೋವು ಎನ್ನುವುದು ನಮ್ಮ ಪುರಾತನ ಸಂಸ್ಕೃತಿಯ ಜೀವಾಳವಾಗಿತ್ತು. ಇದರ ಮಹತ್ವವನ್ನು ಪುನಃಸ್ಥಾಪಿಸುವ ನಿಟ್ಟಿನಲ್ಲಿ ಶ್ರೀಮಠ ಮುಂದಾಗಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.

ಸಿಂಧೂ ನದಿ ಸಂಸ್ಕೃತಿಯಿಂದ ಹಿಡಿದು ಭವ್ಯ ಇತಿಹಾಸ ಇದ್ದರೂ, ಕೃಷಿವಿಜ್ಞಾನದ ಬಗ್ಗೆ ಭಾರತದ ವಿಜ್ಞಾನಿಗಳು ಬರೆದ ಕೃತಿಗಳಿಲ್ಲದಿರುವುದು ವಿಪರ್ಯಾಸ ಎಂದರು.

ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀಸ್ವಾಮೀಜಿ ವಿಡಿಯೊ ಸಂದೇಶ ನೀಡಿ “ಘರ್ ಕೀ ಮಾತಾ, ಘರ‍್ತೇ ಮಾತಾ, ಗೋಮಾತೆಯ ಸಂಬಂಧ ಸುಮಧುರವಾಗಿರುವ ವರೆಗೂ ದೇಶ ಸುಭಿಕ್ಷವಾಗಿತ್ತು. ಭೂತಾಯಿಗೆ ವಿಷ ಉಣಬಯಸಿದ ಪರಿಣಾಮವನ್ನು ಇಂದು ಮನುಕುಲ ಎದುರಿಸುತ್ತಿದೆ. ಇದನ್ನು ತಡೆಯುವ ಪ್ರಯತ್ನಕ್ಕೆ ಶ್ರೀಮಠ ಮುಂದಾಗಿದೆ” ಎಂದು ಹೇಳಿದರು.

ಭೂಮಿಗೆ ಸಲ್ಲಬೇಕಾದ ಗೌರವ ನೀಡದ ಫಲವಾಗಿ ಮಣ್ಣು ಸತ್ವ ಕಳೆದುಕೊಳ್ಳುತ್ತಿದೆ. ಫಲವಾಗಿ ಮನುಕುಲವೂ ಸತ್ವ ಕಳೆದುಕೊಳ್ಳುತ್ತಿದೆ. ಮಣ್ಣಿನ ಫಲವತ್ತತೆ ರಕ್ಷಣೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಾಲ್ಕು ರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ಶ್ರೀಮಠ ಆಯೋಜಿಸುತ್ತಿದೆ ಎಂದು ವಿವರಿಸಿದರು.

ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಅಧ್ಯಕ್ಷತೆ ವಹಿಸಿದ್ದರು. ಹೆತ್ತತಾಯಿ, ಭೂತಾಯಿ ಹಾಗೂ ಗೋಮಾತೆಯನ್ನು ರಕ್ಷಿಸಬೇಕಾದ್ದು ಕರ್ತವ್ಯ ಎಂದರು.

ಶ್ರೀಮಠದ ಸಂಶೋಧನಾ ಖಂಡದ ಶ್ರೀಸಂಯೋಜಕ ಗುರುರಾಜ ಪಡೀಲು ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಮಠದ ವತಿಯಿಂದ ಸ್ವಸ್ಥ ಮಣ್ಣು, ಶುದ್ಧ ಆಹಾರ, ಉತ್ತಮ ಆರೋಗ್ಯದ ನಿಟ್ಟಿನಲ್ಲಿ ಸಂಶೋಧನೆ ನಡೆಸಲು ಗೋಸ್ವರ್ಗದಲ್ಲಿ ಸಂಶೋಧನಾ ಕೇಂದ್ರ ನಿರ್ಮಾಣವಾಗುತ್ತಿದೆ ಎಂದು ವಿವರಿಸಿದರು.

ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ.ನಾಯಕ್, ಕರ್ನಾಟಕ ಉಪಮುಖ್ಯಮಂತ್ರಿಗಳ ಹಾಗೂ ಕೃಷಿ ಸಚಿವಾಲಯದ ವಿಶೇಷ ಕರ್ತವ್ಯಾಧಿಕಾರಿ, ಡಾ.ಎ.ಬಿ.ಪಾಟೀಲ್, ಇಂಫಾಲದ ಕೇಂದ್ರೀಯ ಕೃಷಿ ವಿವಿ ನಿವೃತ್ತ ಸಂಶೋಧನಾ ನಿದೇರ್ಶಕ ಡಾ.ಶ್ರೀನಿವಾಸಮೂರ್ತಿ, ಮಂಡ್ಯ ಸರ್ಕಾರಿ ಕೃಷಿ ಕಾಲೇಜಿನ ಮಣ್ಣು ಮತ್ತು ಕೃಷಿ ರಸಾಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಎಸ್.ಪ್ರಕಾಶ್, ಶಿರಸಿ ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ಎನ್.ಕೆ.ಹೆಗಡೆ ಉಪಸ್ಥಿತರಿದ್ದರು. ಹರ್ಷ ಭಟ್ ದಂಪತಿ ಸಭಾಪೂಜೆ ನೆರವೇರಿಸಿದರು. ಎನ್.ಕೆ.ಹೆಗಡೆ ವಂದಿಸಿದರು.

ಕೃಷಿ ಪರಿಕರ, ಸಾವಯವ ಉತ್ಪನ್ನ, ಕೃಷಿ ಉತ್ಪನ್ನ, ಗವ್ಯೋತ್ಪನ್ನಗಳ ಪ್ರದರ್ಶನ ಮೇಳ, ಮೃತ್ತಿಕೆಯಿಂದ ಗೋ ತುಲಾಭಾರ, ಗೋಪೂಜೆ, ವಿವಿಧ ಆಯಾಮಗಳಲ್ಲಿ ಕೃಷಿ ವಿವಿಗಳ ಸಂಶೋಧನಾ ವಿದ್ಯಾರ್ಥಿಗಳು ಕೈಗೊಂಡ ಸಂಶೋಧನೆಯ ಪೋಸ್ಟರ್ ಪ್ರದರ್ಶನ ವಿಚಾರ ಸಂಕಿರಣದ ಪ್ರಮುಖ ಆಕರ್ಷಣೆಗಳಾಗಿದ್ದವು. ಮಣ್ಣಿಗೆ ಜೀವಾಮೃತ ನೀಡುವ ಮೂಲಕ ವಿಶಿಷ್ಟವಾಗಿ ಸಮಾರಂಭ ಉದ್ಘಾಟಿಸಲಾಯಿತು. ಇದೇ ಸಂದರ್ಭದಲ್ಲಿ ಉಚಿತ ಗೋಚಿಕಿತ್ಸಾ ಶಿಬಿರ ಹಾಗೂ ಖನಿಜಾಂಶ ವಿತರಣೆ, ೪೦ ಪ್ರಜಾತಿಯ ಮಣ್ಣಿನ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು. ಡಾ.ಶಿವಾನಂದ ಹೊಂಗಲ್ ಅತಿಥಿಗಳನ್ನು ಪರಿಚಯಿಸಿದರು. ಡಿ.ಎಸ್.ಹೆಗಡೆ ನಿರೂಪಿಸಿದರು.

Author Details


Srimukha

Leave a Reply

Your email address will not be published. Required fields are marked *