ಬದುಕಿನ ಪಥ ಬದಲಾಗಿದ್ದು ಶ್ರೀಗುರುಗಳ ಮಾರ್ಗದರ್ಶನದಿಂದ ” : ಗೀತಾ ಮಂಜುನಾಥ ಹೆಗಡೆ ,ಕೆರೆಮನೆ

ಮಾತೃತ್ವಮ್

 

” ಸುಮಾರು ಹದಿನೇಳು ವರ್ಷಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಆಧುನಿಕ ಬದುಕಿನಿಂದ ಧಾರ್ಮಿಕ, ಸೌಹಾರ್ದಯುತ ನೆಮ್ಮದಿಯ ಬದುಕಿನ ಪಥ ತೆರೆದುಕೊಂಡಿದ್ದು ಶ್ರೀಗುರು ಸೇವೆಯಿಂದ. ಜೀವನದ ಶೈಲಿ, ರೀತಿ ನೀತಿಗಳು,ಸಂಸ್ಕಾರಗಳು ಸಂಪೂರ್ಣ ಬದಲಾಗಿದ್ದು ಶ್ರೀಗುರುಗಳ ಆಶೀರ್ವಚನಗಳ ಪ್ರೇರಣೆಯಿಂದ ” ಎಂದು ಶ್ರದ್ಧೆಯಿಂದ ನುಡಿಯುವವರು ಹೊನ್ನಾವರ ಮಂಡಲ ಅಪ್ಸರಕೊಂಡ ವಲಯದ ಗುಣವಂತೆ ಕೆರೆಮನೆಯ ಮಂಜುನಾಥ ಹೆಗಡೆಯವರ ಪತ್ನಿ ಗೀತಾ ಎಂ.ಹೆಗಡೆ.

ಸಿದ್ಧಾಪುರ ತಾಲೂಕಿನ ಕ್ಯಾದಗಿ ಗಜಾನನ ಹೆಗಡೆ, ಸೀತಮ್ಮ ದಂಪತಿಗಳ ಪುತ್ರಿಯಾದ ಗೀತಾ ಸ್ವಯಂ ಇಚ್ಛೆಯಿಂದ ಮಾಸದ ಮಾತೆಯಾಗಿ ಸೇವೆ ಮಾಡಲು ಮುಂದೆ ಬಂದವರು.

” ಶ್ರೀಗುರುಗಳು ಭಟ್ಕಳಕ್ಕೆ ಬಂದಿದ್ದಾಗ ಮೊದಲ ಬಾರಿಗೆ ದರ್ಶನ ಭಾಗ್ಯ ಲಭಿಸಿತು. ಅಂದಿನಿಂದಲೇ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಮನೆಯಲ್ಲಿ ವಿದೇಶೀ ತಳಿಯ ಹಸುಗಳನ್ನು ಹಿಂದೆ ಸಾಕುತ್ತಿದ್ದೆವು, ಶ್ರೀಮಠದ ಸಂಪರ್ಕವಾದ ನಂತರ ಶ್ರೀರಾಮಾಯಣ ಮಹಾಸತ್ರ, ವಿಶ್ವ ಗೋಸಮ್ಮೇಳನಗಳಲ್ಲಿ ಭಾಗವಹಿಸಲು ಹೊಸನಗರದ ಶ್ರೀರಾಮಚಂದ್ರಾಪುರ ಮಠಕ್ಕೆ ಹೋದಾಗ ದೇಶೀಯ ಹಸುಗಳ ಮಹತ್ವದ ಅರಿವಾಯಿತು. ಅಂದಿನಿಂದಲೇ ದೇಶೀಯ ಹಸುಗಳು ನಮ್ಮ ಹಟ್ಟಿಯನ್ನು ಅಲಂಕರಿಸಿದವು. ಶ್ರೀಗುರುಗಳ ಪ್ರೇರಣೆಯಿಂದಲೇ ಭಾರತೀಯ ತಳಿಯ ಹಸುಗಳನ್ನು ಸಾಕಲಾರಂಭಿಸಿದ್ದು. ಈಗಲೂ ಐದು ಹಸುಗಳನ್ನು ಸಾಕುತ್ತಿದ್ದೇವೆ, ಮನೆಯಲ್ಲಿ ಗೋವುಗಳನ್ನು ಸಾಕುವುದರಿಂದಾಗಿ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಯಾವುದೇ ತೊಂದರೆಯೂ ಆಗಿಲ್ಲ ” ಎನ್ನುವ ಇವರು ಗೇರುಸೊಪ್ಪೆಯ ಮಾತೃಪ್ರಧಾನೆಯಾಗಿ ಸೇವೆ ಸಲ್ಲಿಸಿದವರು. ಹೊನ್ನಾವರ ಮಂಡಲದ ರಚನೆಯಾದಾಗ ಅದರ ಮಾತೃಪ್ರಧಾನೆಯೂ ಆದರು.‌ ಪ್ರಸ್ತುತ ಮಂಡಲ ಬಿಂದು ಸಿಂಧು ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಮಾತೃ ಪ್ರಧಾನೆಯಾಗಿರುವ ಸಂದರ್ಭದಲ್ಲಿ ಮಾತೆಯರನ್ನು ಸಂಘಟನಾತ್ಮಕವಾಗಿ ಜಾಗೃತ ಗೊಳಿಸುವ ಅನೇಕ ಕಾರ್ಯಗಳನ್ನು ಕೈಗೊಂಡವರು.

” ಮಾತೃತ್ವಮ್ ಯೋಜನೆಯ ಗುರಿ ತಲುಪಲು ಅನೇಕ ಮಂದಿ ಬಹಳ ಖುಷಿಯಿಂದ ಕೈ ಜೋಡಿಸಿದರು . ಮಕ್ಕಳ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವವೇ ಮೊದಲಾದ ದಿನಗಳಂದು ಗೋಮಾತೆಗಾಗಿ ಕಾಣಿಕೆ ನೀಡಲು ಕೆಲವರು ಮುಂದೆ ಬಂದರೆ ಇನ್ನು ಕೆಲವು ಮಂದಿ ತಮ್ಮ ಮನೋಸಂಕಲ್ಪಗಳು ಈಡೇರಿದ ಸಂದರ್ಭಗಳಲ್ಲೂ ಗೋಮಾತೆಯ ಸೇವೆಯಲ್ಲಿ ಭಾಗಿಯಾದರು ” ಎನ್ನುವ ಗೀತಾ ಮಂಜುನಾಥ ಅವರ ಗೋಸೇವೆಗೆ ಮನೆಯವರೆಲ್ಲರ ಸಂಪೂರ್ಣ ಸಹಕಾರವಿದೆ.

ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡ ಮೇಲೆ ಅನೇಕ ಮಂದಿ ಶಿಷ್ಯಬಂಧುಗಳ ಪರಿಚಯವಾಯಿತು. ಅನೇಕ ಸಂದರ್ಭಗಳಲ್ಲಿ ಈ ಬಾಂಧವ್ಯದ ಸದುಪಯೋಗವನ್ನು ಪಡೆದ ಅನುಭವವಿದೆ ಎನ್ನುವ ಗೀತಾ ಮಂಜುನಾಥ ಹೆಗಡೆಯವರಿಗೆ ಗೋಸೇವೆಯಲ್ಲಿ ನೆಮ್ಮದಿ, ಧನ್ಯತೆ ದೊರಕಿದೆ.

 

Leave a Reply

Your email address will not be published. Required fields are marked *